ಆನಂದಸಿಂಗ್‌ ಮ್ಯಾನೇಜರ್‌ ಸೆರೆ

7

ಆನಂದಸಿಂಗ್‌ ಮ್ಯಾನೇಜರ್‌ ಸೆರೆ

Published:
Updated:

ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ ಅದಿರು ಕಳ್ಳಸಾಗಣೆ ಮಾಡಿದ ಆರೋಪ ಎದುರಿಸುತ್ತಿರುವ ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರು ವಿದೇಶಕ್ಕೆ ಹೋಗಿದ್ದಾರೆ ಎನ್ನುವ ಬಗ್ಗೆ ಸಿಬಿಐ ಮಾಹಿತಿ ಕಲೆ ಹಾಕಿದೆ.

ಅವರನ್ನು ವಾಪಸ್‌ ಕರೆತರಲು ಇಂಟರ್‌ಪೋಲ್‌ ನೆರವು ಪಡೆಯುವ ಬಗ್ಗೆ ಅದು ಪರಿಶೀಲಿಸುತ್ತಿದೆ.ಈ ನಡುವೆ ಆನಂದ್ ಸಿಂಗ್ ಒಡೆತನದ ಎಸ್.ಬಿ.ಮಿನರಲ್ಸ್ ಮತ್ತು ವೈಷ್ಣವಿ ಮಿನರಲ್ಸ್ ಕಂಪೆನಿಗಳ ಮೂಲಕ ನಡೆದಿರುವ ಅದಿರು ಕಳ್ಳ ಸಾಗಣೆಯ ನೇರ ಉಸ್ತುವಾರಿ ಹೊತ್ತಿದ್ದ ಆರೋಪದ ಮೇಲೆ ಎಸ್. ಬಿ.ಮಿನರಲ್ಸ್ ವ್ಯವಸ್ಥಾಪಕ ಶಿವಕುಮಾರನನ್ನು ಸಿಬಿಐ ಸೋಮವಾರ ರಾತ್ರಿ ಬಂಧಿಸಿದೆ.ತನಿಖಾ ತಂಡದ ಕೋರಿಕೆಯಂತೆ ಆರೋಪಿಯನ್ನು ಸೆಪ್ಟೆಂಬರ್ 30ರವ ರೆಗೆ ಸಿಬಿಐ ವಶಕ್ಕೆ ನೀಡಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ಶ್ರೀಶಾನಂದ ಅವರು ಆದೇಶ ಹೊರಡಿಸಿದರು.ನಿರೀಕ್ಷಣಾ ಜಾಮೀನು ಕೋರಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಿರುವ ಅರ್ಜಿಯಲ್ಲಿ ಆನಂದ್ ಸಿಂಗ್

ಪರ ವಕೀಲರು, ತಮ್ಮ ಕಕ್ಷೀದಾರ ವಿದೇಶಕ್ಕೆ ಹೋಗಿರುವುದನ್ನು ಬಹಿರಂಗಪಡಿಸಿದ್ದಾರೆ. ಸಿಂಗಪುರದಲ್ಲಿನ ಆಸ್ಪತ್ರೆಯೊಂದರಲ್ಲಿ ಹೃದ್ರೋಗ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅರ್ಜಿಯಲ್ಲಿ ಮಾಹಿತಿ ನೀಡಿದ್ದಾರೆ.‘ಬಂಧನದ ಭಯ’: ಬೇಲೆಕೇರಿ ಅದಿರು ಕಳ್ಳಸಾಗಣೆ ಪ್ರಕರಣದಲ್ಲಿ ತಾವು ಭಾಗಿಯಾಗಿಲ್ಲ. ತಮ್ಮ ಕಂಪೆನಿಯ ಎಲ್ಲಾ ವ್ಯವಹಾರಗಳೂ ಕಾನೂನು ಬದ್ಧವಾಗಿಯೇ ನಡೆದಿವೆ. ಈ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಪೊಲೀಸರು ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿ ಸುತ್ತಿದ್ದಾರೆ. ತನಿಖೆಯ ಹೆಸರಿನಲ್ಲಿ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಆನಂದ್ ಸಿಂಗ್ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಭೀತಿ ವ್ಯಕ್ತಪಡಿಸಿದ್ದಾರೆ.ಸಿಬಿಐ ಕಚೇರಿಯಲ್ಲಿ ಕೊಂಡಯ್ಯ

ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಅವರು ಮಂಗಳವಾರ ಬೆಳಿಗ್ಗೆ ಸಿಬಿಐ ಡಿಐಜಿ ಆರ್.ಹಿತೇಂದ್ರ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದರು. ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಕೊಂಡಯ್ಯ, ‘ಹಿತೇಂದ್ರ ಅವರು ತುಂಬಾ ಹಿಂದಿನಿಂದಲೂ ನನಗೆ ಪರಿಚಿತರು. ಅಕ್ರಮ ಗಣಿಗಾರಿಕೆ ಕುರಿತು ತನಿಖೆ ಆರಂಭವಾಗಿದ್ದ ದಿನಗಳಲ್ಲಿ ನನ್ನ ಬಳಿ ಇದ್ದ ಕೆಲವು ಪ್ರಮುಖ ದಾಖಲೆಗಳನ್ನು ಸಿಬಿಐ ಅಧಿಕಾರಿಗಳಿಗೆ ನೀಡಿದ್ದೆ. ಆದರೆ, ಮಂಗಳವಾರದ ಭೇಟಿಗೆ ಯಾವುದೇ ಪ್ರಾಮುಖ್ಯ ಇರಲಿಲ್ಲ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry