ಆನಂದ್‌ಗೆ ಅಭಿನಂದನೆಗಳ ಮಹಾಪೂರ

7

ಆನಂದ್‌ಗೆ ಅಭಿನಂದನೆಗಳ ಮಹಾಪೂರ

Published:
Updated:
ಆನಂದ್‌ಗೆ ಅಭಿನಂದನೆಗಳ ಮಹಾಪೂರ

ನವದೆಹಲಿ (ಪಿಟಿಐ/ ಐಎಎನ್‌ಎಸ್): ವಿಶ್ವನಾಥನ್ ಆನಂದ್ ಐದನೇ ಬಾರಿ ವಿಶ್ವ ಚಾಂಪಿಯನ್‌ಪಟ್ಟ ತಮ್ಮದಾಗಿಸಿಕೊಂಡದ್ದು ದೇಶದೆಲ್ಲೆಡೆ ಸಂಭ್ರಮಕ್ಕೆ ಕಾರಣವಾಗಿದೆ. ವಿಶ್ವ ಚಾಂಪಿಯನ್‌ಪಟ್ಟ ಧರಿಸುತ್ತಿದ್ದಂತೆಯೇ ಅವರತ್ತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕ್ರೀಡಾ ಸಚಿವ ಅಜಯ್ ಮಾಕನ್ ಒಳಗೊಂಡಂತೆ ಎಲ್ಲರೂ ಆನಂದ್ ಸಾಧನೆಯನ್ನು ಶ್ಲಾಘಿಸಿದ್ದಾರೆ. `ಈ ಸಾಧನೆಯ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದೀರಿ. ಈ ದೇಶದ ಯುವ ಜನತೆಗೆ ನೀವು ಸ್ಫೂರ್ತಿಯಾಗಿದ್ದೀರಿ~ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.`ದೇಶ ಹೆಮ್ಮೆ ಪಡುವಂತಹ ಸಾಧನೆಯನ್ನು ಆನಂದ್ ಮಾಡಿದ್ದಾರೆ. ಸತತ ನಾಲ್ಕು ಸಲ ವಿಶ್ವ ಚಾಂಪಿಯನ್ ಎನಿಸಿಕೊಂಡದ್ದು ಅಮೋಘ ಸಾಧನೆ~ ಎಂದು ಸೋನಿಯಾ ಗಾಂಧಿ ಬಣ್ಣಿಸಿದ್ದಾರೆ.`ಆನಂದ್ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಅವರು ಈ ದೇಶ ಕಂಡ ಶ್ರೇಷ್ಠ ಕ್ರೀಡಾಪಟು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ~ ಎಂದು ಕ್ರೀಡಾ ಸಚಿವ ಮಾಕನ್ ಹೇಳಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ `ವಿಶಿ~ ಸಾಧನೆಯನ್ನು ಶ್ಲಾಘಿಸಿದರು.`ರ‌್ಯಾಪಿಡ್ ಚೆಸ್‌ನಲ್ಲಿ ತಾನು ಕಿಂಗ್ ಎಂಬುದನ್ನು ಆನಂದ್ ಮತ್ತೆ ತೋರಿಸಿಕೊಟ್ಟಿದ್ದಾರೆ. ಅದರ ಜೊತೆಗೆ ಐದನೇ ವಿಶ್ವಚಾಂಪಿಯನ್‌ಷಿಪ್ ಕಿರೀಟ ಮುಡಿಗೇರಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ~ ಎಂದು ಐಒಎ ಹಂಗಾಮಿ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರ ಹೇಳಿದ್ದಾರೆ.ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಕೃಷ್ಣನ್ ಶಶಿಕಿರಣ್ ಮತ್ತು ಪರಿಮಾರ್ಜನ್ ನೇಗಿ ಒಳಗೊಂಡಂತೆ ಚೆಸ್ ಲೋಕದ ವಿವಿಧ ಮಂದಿ ಕೂಡಾ ಆನಂದ್ ಸಾಧನೆಯನ್ನು ಕೊಂಡಾಡಿದ್ದಾರೆ.`ಇದೊಂದು ಶ್ರೇಷ್ಠ ಗೆಲುವು. ನಾನು ಇದಕ್ಕಾಗಿ ಆನಂದ್ ಅವರನ್ನು ಅಭಿನಂದಿಸುವೆ~ ಎಂದ ನೇಗಿ, `ನನಗೆ ಆನಂದ್ ಸ್ಫೂರ್ತಿ. ಅವರು ವಿಶ್ವದ ಶ್ರೇಷ್ಠ ಆಟಗಾರ ಎಂಬುದು ಐದು ವರ್ಷ ವಯಸ್ಸಿನಲ್ಲೇ ನನಗೆ ತಿಳಿದಿತ್ತು. ಅವರು ಮಾಡಿರುವ ಸಾಧನೆ ನನಗೆ ಉತ್ತೇಜನ ನೀಡಿತು. ರ‌್ಯಾಪಿಡ್ ಚೆಸ್‌ನಲ್ಲಿ ಆನಂದ್ ವಿಶ್ವದ ಶ್ರೇಷ್ಠ ಆಟಗಾರ~ ಎಂದು ಹೇಳಿದ್ದಾರೆ.`ನಾನು ಭಾರತದ ಅತಿಕಿರಿಯ ಗ್ರ್ಯಾಂಡ್‌ಮಾಸ್ಟರ್ ಎನಿಸಿದಾಗ ಆನಂದ್ ದೂರವಾಣಿ ಕರೆ ಮಾಡಿ ನನ್ನನ್ನು ಅಭಿನಂದಿಸಿದ್ದರು. ಆ ಕ್ಷಣವನ್ನು ಮರೆಯಲಾರೆ~ ಎಂದು ನೆನಪಿಸಿದ್ದಾರೆ.ತಾನೊಬ್ಬ ಹೋರಾಟಗಾರ ಎಂಬುದನ್ನು ಆನಂದ್ ತೋರಿಸಿಕೊಟ್ಟಿದ್ದಾರೆ. ಏಳನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಅವರು ಮರುಹೋರಾಟ ನಡೆಸುವಲ್ಲಿ ಯಶಸ್ವಿಯಾದರು~ ಎಂದು ಶಶಿಕಿರಣ್ ನುಡಿದಿದ್ದಾರೆ.`ಜೀವನದ ಅತ್ಯಂತ ಹೆಮ್ಮೆಯ ಕ್ಷಣ~ (ನವದೆಹಲಿ ವರದಿ): ವಿಶ್ವನಾಥನ್ ಆನಂದ್ ಐದನೇ ಬಾರಿ ವಿಶ್ವ ಚೆಸ್ ಚಾಂಪಿಯನ್ ಎನಿಸಿದ್ದು ನಮ್ಮ ಜೀವನದ ಅತ್ಯಂತ ಹೆಮ್ಮೆಯ ಕ್ಷಣ ಎಂದು `ವಿಶಿ~ಯ ತಂದೆ ವಿಶ್ವನಾಥನ್ ಅಯ್ಯರ್ ಬಣ್ಣಿಸಿದ್ದಾರೆ.`ನನಗೆ ಅತಿಯಾದ ಸಂತಸವಾಗಿದೆ. ಚೆಸ್ ಲೋಕದ ದಿಗ್ಗಜರನ್ನೆಲ್ಲ ಆತ ಮಣಿಸಿದ್ದಾನೆ. ಇದೊಂದು ಅದ್ಭುತ ಸಾಧನೆ~ ಎಂದು ಪುತ್ರನ ಸಾಧನೆಯನ್ನು ಕೊಂಡಾಡಿದ್ದಾರೆ. ತಾಯಿ ಸುಶೀಲಾ ವಿಶ್ವನಾಥನ್ ಮತ್ತು ಪತ್ನಿ ಅರುಣಾ ಆನಂದ್ ಕೂಡಾ ಅತಿಯಾದ ಸಂತಸದಲ್ಲಿದ್ದರು.`ಅತ್ಯಂತ ಕಠಿಣ ಪಂದ್ಯ ಇದಾಗಿತ್ತು. ಅಂತಿಮ ಫಲಿತಾಂಶ ನಮ್ಮ ಪರವಾಗಿ ಬಂದದ್ದು ಸಂತಸ ಉಂಟುಮಾಡಿದೆ. ಅಲ್ಲಿ ಅತಿಯಾದ ಒತ್ತಡವಿತ್ತು. ಟೈ ಬ್ರೇಕರ್‌ನಲ್ಲಿ ಏನು ಬೇಕಾದರೂ ನಡೆಯಬಹುದು. ಮಾತ್ರವಲ್ಲ ಟೈ ಬ್ರೇಕರ್ ಪಂದ್ಯಗಳಿಗೆ ಮುಂಚಿತವಾಗಿ ಯೋಜನೆ ರೂಪಿಸಲು ಸಾಧ್ಯವಾಗುವುದಿಲ್ಲ~ ಎಂದು ಅರುಣಾ ನುಡಿದಿದ್ದಾರೆ.ಆನಂದ್ ಎದುರಾಳಿ ಗೆಲ್ಫಾಂಡ್ ಬಗ್ಗೆ ಪ್ರಶ್ನೆ ಎದುರಾದಾಗ ಅರುಣಾ, `ಅವರಿಬ್ಬರೂ ಒಳ್ಳೆಯ ಗೆಳೆಯರು ಮಾತ್ರವಲ್ಲ ದೀರ್ಘಕಾಲದಿಂದ ಎದುರಾಳಿಗಳೂ ಹೌದು. ಇಬ್ಬರೂ ಯಾವ ರೀತಿಯಲ್ಲಿ ತಯಾರಿ ನಡೆಸಿದ್ದಾರೆ ಎಂಬುದಕ್ಕೆ ಈ ಚಾಂಪಿಯನ್‌ಷಿಪ್ ಸಾಕ್ಷಿ~ ಎಂದು ಉತ್ತರಿಸಿದ್ದಾರೆ.`ಭಾರತ ರತ್ನ ನೀಡಿ~ (ಚೆನ್ನೈ ವರದಿ): ವಿಶ್ವನಾಥನ್ ಆನಂದ್‌ಗೆ `ಭಾರತ ರತ್ನ~ ನೀಡಬೇಕು ಎಂಬ ತನ್ನ ಕೋರಿಕೆಯನ್ನು ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಪುನರುಚ್ಚರಿಸಿದೆ. ಭಾರತದ ಗ್ರ್ಯಾಂಡ್‌ಮಾಸ್ಟರ್ ಐದನೇ ಬಾರಿ ವಿಶ್ವಚಾಂಪಿಯನ್ ಆದದ್ದು ಎಐಸಿಎಫ್ ಕೂಗಿಗೆ ಹೆಚ್ಚಿನ ಬಲ ನೀಡಿದೆ.`ವಿಶ್ವನಾಥನ್ ಆನಂದ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕೆಂದು ಈ ಸಂದರ್ಭದಲ್ಲಿ ನಾವು ಕೇಂದ್ರ ಸರ್ಕಾರವನ್ನು ಕೇಳಿಕೊಳ್ಳುತ್ತೇವೆ. ನಾವು ಈ ಮುನ್ನ ಕಳುಹಿಸಿದ್ದ ಕೋರಿಕೆಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಾನು ಚೆಸ್ ಲೋಕದ ದೊರೆ ಎಂಬುದನ್ನು ಆನಂದ್‌ಗೆ ಮತ್ತೊಮ್ಮೆ ಸಾಬೀತುಮಾಡಿದ್ದಾರೆ.ಅವರು ಈ ಅತ್ಯುನ್ನತ ಪ್ರಶಸ್ತಿಗೆ ಅರ್ಹರು~ ಎಂದು ಎಐಸಿಎಫ್ ಅಧ್ಯಕ್ಷ ಜೆಸಿಡಿ ಪ್ರಭಾಕರ್ ನುಡಿದಿದ್ದಾರೆ.

 `ಆನಂದ್‌ಗೆ ಭಾರತ ರತ್ನ ಗೌರವ ದೊರೆಯಲಿದೆ ಎಂಬ ವಿಶ್ವಾಸ ನಮ್ಮದು. ಅವರು ಮತ್ತೆ ವಿಶ್ವ ಚಾಂಪಿಯನ್ ಎನಿಸಿದ್ದು ನಮಗೆ ಇನ್ನಿಲ್ಲದ ಸಂತಸ ಉಂಟುಮಾಡಿದೆ~ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry