ಗುರುವಾರ , ಜುಲೈ 29, 2021
21 °C

ಆನೆಯ ಸೊಂಡಿಲು

ಬಿ. ಎಸ್. ಶೈಲಜಾ Updated:

ಅಕ್ಷರ ಗಾತ್ರ : | |

ನೀಹಾರಿಕೆಗಳೆಂದರೆ ಆಗಸದ ಮೂಲೆಮೂಲೆಗಳಲ್ಲಿ ಕಾಣುವ ವರ್ಣಮಯ ಚಿತ್ರಗಳು. ಹೊಸ ಹೊಸ ನಕ್ಷತ್ರಗಳು ರಚನೆಯಾಗುವ ತಾಣಗಳೆಲ್ಲ ಸುಂದರ ದೃಶ್ಯಗಳಾಗಿವೆ. ಇವು ಸೃಷ್ಟಿಕರ್ತನ ಕುಂಚದ ವರ್ಣ ಚಿತ್ರಗಳು ಎಂದರೆ ತಪ್ಪಿಲ್ಲ. ಭಾರೀ ಗಾತ್ರದ ನೀಲಿ ನಕ್ಷತ್ರಗಳು ಉತ್ಸರ್ಜಿಸುವ ಕಣಗಳ ಪ್ರವಾಹ ಸುತ್ತಲಿನ ವಸ್ತುವನ್ನು ಒತ್ತರಿಸುತ್ತದೆ.ತನ್ಮೂಲಕ ಇನ್ನಷ್ಟು ನಕ್ಷತ್ರಗಳ ರಚನೆಗೆ ಕಾರಣವಾಗುತ್ತದೆ. ಅಲ್ಲದೆ ಅಲ್ಲೊಂದು ಇಲ್ಲೊಂದು ಕುಣಿಗಳನ್ನೂ ತೋಡಿಡುತ್ತದೆ. ಹೀಗೊಂದು ಕುಣಿಗಳ ಗುಂಪು  ಸಿಫಿಯುಸ್ (ಯುಧಿಷ್ಠಿರ) ನಕ್ಷತ್ರಪುಂಜದಲ್ಲಿದೆ. ಅದರಲ್ಲೊಂದು ಕುಣಿಯಲ್ಲಿ ಸಣ್ಣ ಗಾತ್ರದ ನಕ್ಷತ್ರಗಳು ಕಂಡು ಬಂದಿವೆ.ಇವು ಬೇರೆಲ್ಲೋ ರಚನೆಯಾಗಿ ಈ ಕುಳಿಯ ನೇರಕ್ಕೆ ಕಾಣುವುದು ಕಾಕತಾಳೀಯ - ಇದೆಂತಹ ಅದ್ಭುತ ಎನ್ನಬಹುದಲ್ಲವೇ? ಅದು ಹಾಗಲ್ಲ; ಇವುಗಳ ರಚನೆಯಾದೊಡನೆ ಹೊರ ಬಿದ್ದ ಪ್ರವಾಹ ಸಣ್ಣ ಪ್ರಮಾಣದ್ದಾದರೂ ಸುತ್ತಲಿನ ವಸ್ತುವನ್ನೆಲ್ಲಾ ದೂರಕ್ಕೆ ತಳ್ಳಿ ಬಿಟ್ಟಿದೆ. ಇದನ್ನು ನಕ್ಷತ್ರ ರೋಹಿತಗಳಿಂದ ಮತ್ತು ಕುಣಿಯ ಹೊರಗಿನ ವಸ್ತುವಿನ ಚಲನೆಯಿಂದ ಸಾಬೀತು ಪಡಿಸಬಹುದು. ಇಂತಹ ಕುಣಿಗಳಿಗೆ ‘ಗ್ಲಾಬ್ಯೂಲ್’ ಗಳೆಂದು ಹೆಸರಿದೆ.ಹೀಗೆ ರಚಿತವಾಗ ಎಲ್ಲ ನಕ್ಷತ್ರಗಳ ಗುಚ್ಛಕ್ಕೆ ಐಸಿ 1396 ಎಂಬ ಸಂಖ್ಯೆ ದೊರಕಿದೆ. (ಇಂತಹ ನಕ್ಷತ್ರಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ ಎಂದರ್ಥ) ಇದು ಸುಮಾರು 2400 ಜ್ಯೋತಿರ್ವರ್ಷ ದೂರದಲ್ಲಿದೆ. ಆನೆಯ ಸೊಂಡಿಲು ಎಂಬುದು ಅನ್ವರ್ಥನಾಮವಾಗಿದೆ.

 

ಸುಮಾರು 100,000 ವರ್ಷಗಳ ಹಿಂದೆ ನಕ್ಷತ್ರಗಳ ರಚನೆಯಾಗಿದೆ. ಇದು ಖಗೋಳ ವೈಜ್ಞಾನಿಕ ಮಾಪನದಲ್ಲಿ ತೀರಾ ಇತ್ತೀಚಿನದು ಎನ್ನಬಹುದು. ಅಲ್ಲೊಂದು ಇಲ್ಲೊಂದು ಕಾಣುವ ಗ್ಲಾಬ್ಯೂಲ್ ಗಳಲ್ಲಿ ಹೀಗೆ ನಕ್ಷತ್ರ ರಚನೆ ಆಗಿರಬಹುದು; ಸುತ್ತುವರೆದ ದೂಳಿನ ಕವಚ ದೂರ ಒತ್ತರಿಸಿದಾಗ ಅವೂ ಕಾಣುವುವು. ಬರಿಗಣ್ಣಿಗೆ ಕಾಣದ ಈ ಸುಂದರ ಚಿತ್ರಗಳು ದೊಡ್ಡ ದೂರದರ್ಶಕಗಳಿಗೂ ಸುಲಭವಾಗಿ ಕಾಣುವುದಿಲ್ಲ.ವಿಶೇಷ ಸೋಸುಕಗಳನ್ನು (ಫಿಲ್ಟರ್) ಬಳಸಿ ತೆಗೆದ ಚಿತ್ರಗಳಲ್ಲಿ ಮಾತ್ರ ಕಾಣುತ್ತವೆ. ಗ್ಲಾಬ್ಯೂಲ್‌ಗಳ ರಚನೆಯನ್ನು ಸೂಕ್ಷ್ಮ ವಿವರಗಳನ್ನು ತಿಳಿಯಲು ಬಳಸುವ ಈ ಸೋಸುಕಗಳಿಗೆ ‘ಎಚ್ ಆಲ್ಫಾ ಫಿಲ್ಟರ್’ ಎಂದೇ ಹೆಸರು. (ಹೈಡ್ರೋಜನ್‌ನ ರೋಹಿತದಲ್ಲಿಯ ಕೆಂಪು ರೇಖೆಯ ಸೂಚಿ) ಸಾವಿರಾರು  ಜ್ಯೋತಿರ್ವರ್ಷಗಳವರೆಗೆ ವಿಸ್ತರಿಸುವ ನಕ್ಷತ್ರ ಮಾರುತಗಳು ಸೋಜಿಗವೇ ಸರಿ.

 

ಕೇವಲ ಬೃಹತ್ ಗಾತ್ರದ ನೀಲಿ ನಕ್ಷತ್ರಗಳು ಮಾತ್ರ ಮಾರುತಗಳಿಗೆ ಕಾರಣವಾಗುವುವು ಎಂದು ಇದುವರೆಗೆ ಇದ್ದ  ಅಭಿಪ್ರಾಯವನ್ನು ಆನೆಯ ಸೊಂಡಿಲು ಪ್ರಶ್ನಿಸಿದೆ. ಅದನ್ನು ಸೃಷ್ಟಿಸಿರುವ ನಕ್ಷತ್ರಗಳು ಸೂರ್ಯನಂತಹವು; ಸಾಧಾರಣ ನಕ್ಷತ್ರಗಳು. ಸೂರ್ಯನೂ ಹೀಗೆಯೇ ತನ್ನ ಸುತ್ತಲಿನ ವಸ್ತುವನ್ನು ದೂರ ತಳ್ಳಿರಬೇಕು ಎಂಬುದನ್ನು ಈಗ ಪರಿಶೀಲಿಸಬೇಕು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.