ಆನೆ ಉತ್ಸವ ನಗರದಲ್ಲಿ ನಡೆಯಲಿ

7

ಆನೆ ಉತ್ಸವ ನಗರದಲ್ಲಿ ನಡೆಯಲಿ

Published:
Updated:

ಶಿವಮೊಗ್ಗ: ಅರಣ್ಯ ಇಲಾಖೆಯು ವನ್ಯಜೀವಿ ಸಪ್ತಾಹದ ಅಂಗವಾಗಿ ಸಕ್ರೆಬೈಲಿನಲ್ಲಿ ಪ್ರತಿವರ್ಷ ನಡೆಸುತ್ತಿರುವ ಆನೆಗಳ ದಿನಾಚರಣೆಯನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅನುಕೂಲವಾಗುವಂತೆ ಶಿವಮೊಗ್ಗ ನಗರದ ಪ್ರಮುಖ ಸ್ಥಳವೊಂದರಲ್ಲಿ ಆಯೋಜಿಸುವುದು ಸೂಕ್ತ ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ  ಸಲಹೆನೀಡಿದರು.ಅರಣ್ಯ ಇಲಾಖೆ ವನ್ಯಜೀವಿ ವಿಭಾಗ, ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಹಾಗೂ ನಗರಸಭೆ  ಸಂಯುಕ್ತವಾಗಿ 58ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಭಾನುವಾರ ಸಕ್ರೆಬೈಲಿನ ಆನೆಗಳ ಬಿಡಾರದಲ್ಲಿ ಹಮ್ಮಿಕೊಂಡಿದ್ದ ಆನೆಗಳ ದಿನಾಚರಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.ಮನೋರಂಜನೆ ನೀಡಬಹುದಾದ ವಿಶೇಷ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರಿಗೆ ಆನೆಗಳ ಕೌತುಕಮಯ ಚಟುವಟಿಕೆ ಹಾಗೂ ಸ್ಪರ್ಧೆಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿದಂತಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಮಾತನಾಡಿ, ಮನುಷ್ಯ ಪ್ರಾಣಿಗಳ ಸ್ವಚ್ಛಂದ ಬದುಕಿಗೆ ಯಾವುದೇ ರೀತಿಯ ಅಡಚಣೆ ಉಂಟುಮಾಡದಂತೆ ಸ್ವತಂತ್ರವಾಗಿ ಜೀವಿಸಲು ಅವಕಾಶ ಮಾಡಿಕೊಡಬೇಕಾದ ಅಗತ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಕಿಮ್ಮನೆ ರತ್ನಾಕರ್  ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ವನ್ಯಪ್ರಾಣಿಗಳನ್ನು ಕೇವಲ ಪಠ್ಯಪುಸ್ತಕಗಳಲ್ಲಿ ನೋಡುವಂತಾಗಿದೆ. ಆದ್ದರಿಂದ ಇಂತಹ ರಂಜನೀಯ ಕಾರ್ಯಕ್ರಮಗಳನ್ನು ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಆಯೋಜಿಸಬೇಕು ಎಂದು ಸಲಹೆ ಮಾಡಿದರು.ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ನಗರಸಭಾಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ತಾ.ಪಂ. ಅಧ್ಯಕ್ಷೆ ರಜಿನಾ ಖಾತೂನ್, ಗ್ರಾ.ಪಂ.ಅಧ್ಯಕ್ಷ ನೂರ್ ಅಹ್ಮದ್,  ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಮಹಾಲಕ್ಷ್ಮೀ ನೇರಳೆ, ಸೇವಾದಳಲ ಅಧ್ಯಕ್ಷ ವೈ.ಎಚ್. ನಾಗರಾಜ್, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಸಂಜಯ್‌ಬಿಜ್ಜೂರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮನ್ ಗುಪ್ತ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್ ಸ್ವಾಗತಿಸಿದರು.  ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಟಿ.ಜೆ. ರವಿಕುಮಾರ್ ವಂದಿಸಿದರು.ಇದೇ ಸಂದರ್ಭದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ವಿವಿಧ  ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry