ಆನೆ ತುಳಿತಕ್ಕೆ ಗ್ರಂಥಮೇಲ್ವಿಚಾರಕ ಬಲಿ

7

ಆನೆ ತುಳಿತಕ್ಕೆ ಗ್ರಂಥಮೇಲ್ವಿಚಾರಕ ಬಲಿ

Published:
Updated:

ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕನಕಪುರ ತಾಲ್ಲೂಕಿನ ತಿಮ್ಮಾಬೋವಿ ದೊಡ್ಡಿಯ ಕಾಡಂಚಿನ ಪ್ರದೇಶದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆಯೊಂದು ದಾಳಿ ನಡೆಸಿ ಕೊಂದು ಹಾಕಿದೆ.ಮೃತ ವ್ಯಕ್ತಿಯನ್ನು ತಿಮ್ಮಾಬೋವಿ ದೊಡ್ಡಿಯ ತಿಮ್ಮರಾಯಪ್ಪ (30) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಬಿಎನ್‌ಎಮ್ ಕಾಲೇಜಿನಲ್ಲಿ ಗ್ರಂಥಾಲಯ ಮೇಲ್ವಿಚಾರಕರಾಗ್ದ್ದಿದರು. ತಿಮ್ಮರಾಯಪ್ಪ ಮಂಗಳವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಬೆಂಗಳೂರಿನಿಂದ ಗುಟ್ಕಳ್ಳಿ ಬಸ್‌ನಲ್ಲಿ ಬಂದು ತಿಮ್ಮಾಬೋವಿ ದೊಡ್ಡಿ ಗೇಟ್‌ನಲ್ಲಿ ಇಳಿದು ಗ್ರಾಮಕ್ಕೆ ನಡೆದು ಹೋಗುತ್ತಿದ್ದರು. ಆಗ ಕಾಡಾನೆ ಇವರ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.`ಬಸ್ ಬಂದುಹೋದರೂ ಮಗ ಮನೆಗೆ ಬರಲಿಲ್ಲವಲ್ಲಾ ಎಂದು ತಿಮ್ಮರಾಯಪ್ಪನ ತಂದೆ ಗೇಟ್‌ವರೆಗೂ ಬಂದು ನೋಡಿದಾಗ ಮಗನ ಸುಳಿವು ಕಾಣಲಿಲ್ಲ. ಗ್ರಾಮಸ್ಥರೊಂದಿಗೆ ರಸ್ತೆ ಬದಿಯ ಅಕ್ಕಪಕ್ಕದ ಹೊಲಗಳಲ್ಲಿ ಬ್ಯಾಟರಿ ಬೆಳಕಿನಲ್ಲಿ ಹುಡುಕಾಟ ನಡೆಸಿದಾಗ ತಿಮ್ಮರಾಯಪ್ಪ ಆನೆ ತುಳಿತಕ್ಕೆ ಸಿಲುಕಿ ಶವವಾಗಿದ್ದು ಕಂಡುಬಂದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.ವಲಯ ಅರಣ್ಯಾಧಿಕಾರಿ ವಿಜಯ್‌ಕುಮಾರ್ ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶವವನ್ನು ಸ್ಥಳದಿಂದ ತೆಗೆಯುವುದಿಲ್ಲ ಎಂದು ಹಟ ಹಿಡಿದರು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಸಮಾಧಾನ ಪಡಿಸಿದ ನಂತರ ಶವ ಪರೀಕ್ಷೆಗೆ ಅನುವು ಮಾಡಿಕೊಡಲಾಯಿತು.`ಶವ ಸಂಸ್ಕಾರಕ್ಕೆ 5 ಸಾವಿರ ರೂಪಾಯಿ ನೀಡಲಾಗುತ್ತದೆ. ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು' ಎಂದು ಪುಟ್ಟಸ್ವಾಮಿ ಭರವಸೆ ನೀಡಿದರು.ಮೃತ ತಿಮ್ಮರಾಯಪ್ಪ ಕೆಎಎಸ್, ಐಎಎಸ್ ಪರೀಕ್ಷೆ ಬರೆಯುವ ಸಿದ್ಧತೆಯಲ್ಲಿದ್ದರು ಎನ್ನಲಾಗಿದೆ.ಕುಟುಂಬಕ್ಕೆ ಆಧಾರವಾಗಿದ್ದ ಮಗ ಮೃತಪಟ್ಟಿದ್ದಾನೆ ಎಂದು ಕುಟುಂಬದ ಸದಸ್ಯರು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry