ಸೋಮವಾರ, ಮಾರ್ಚ್ 1, 2021
29 °C

ಆನೆ ತುಳಿತಕ್ಕೆ ಸಾತ್ವಿಕ್ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೆ ತುಳಿತಕ್ಕೆ ಸಾತ್ವಿಕ್ ಬಲಿ

ಬೆಂಗಳೂರು/ಆನೇಕಲ್: ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಚಾರಣಕ್ಕೆ ತೆರಳಿದ್ದ ವೇಳೆ ಕಣ್ಮರೆಯಾಗಿದ್ದ ನಗರದ ಸಾಫ್ಟ್‌ವೇರ್ ಎಂಜಿನಿಯರ್ ಸಾತ್ವಿಕ್ ಶಾಸ್ತ್ರಿ (24) ಅವರು ಆನೆ ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದು, ಅರಣ್ಯದ `ಬೇಗೀಹಳ್ಳಿ ಬೀಟ್~ನ ಅಣ್ಣಯ್ಯನದೊಡ್ಡಿ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಅವರ ಶವ ಪತ್ತೆಯಾಗಿದೆ.

ಆನೆಯು ಸಾತ್ವಿಕ್ ಅವರ ಬಲಗಾಲು ಮತ್ತು ತೋಳುಗಳನ್ನು ತಿರುಚಿದ್ದು, ತಲೆ ಹಾಗೂ ದೇಹದ ಮೇಲೆ ತುಳಿದಿರುವ ಗುರುತು ಕಂಡುಬಂದಿವೆ. ಆಶೀಶ್ ಮತ್ತು ಅನುಪಮ್ ಎಂಬ ಸ್ನೇಹಿತರೊಂದಿಗೆ ಶನಿವಾರ (ಜು.14) ಮಧ್ಯಾಹ್ನ ಬನ್ನೇರುಘಟ್ಟ ಅರಣ್ಯಕ್ಕೆ ಚಾರಣ ಹೋಗಿದ್ದ ಸಾತ್ವಿಕ್ ಅದೇ ದಿನ ಸಂಜೆ ಕಣ್ಮರೆಯಾಗಿದ್ದರು. ಆಶೀಶ್ ಹಾಗೂ ಅನುಪಮ್ ಅವರು ಅರಣ್ಯ ಪ್ರದೇಶದಿಂದ ಭಾನುವಾರ ಬೆಳಿಗ್ಗೆ ಹೊರ ಬಂದು ಸ್ನೇಹಿತ ಕಾಣೆಯಾಗಿರುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಈ ವಿಷಯ ತಿಳಿದ ಸಿಬ್ಬಂದಿ, ಸ್ಥಳೀಯ ಗ್ರಾಮಸ್ಥರು ಹಾಗೂ ಪೊಲೀಸರ ಜತೆ ಸೇರಿ ದಟ್ಟ ಕಾಡಿನಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಶೋಧ ಕಾರ್ಯ ಆರಂಭಿಸಿದ್ದರು. ಇಡೀ ದಿನ ರಾಗಿಹಳ್ಳಿ ರಸ್ತೆಯ ದೇವಸ್ಥಾನದ ಬಂಡೆ, ಕಸವನಕುಂಟೆ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿದರೂ ಸಾತ್ವಿಕ್ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ ಕತ್ತಲಾಗಿದ್ದರಿಂದ ಸಿಬ್ಬಂದಿ ಶೋಧ ಕಾರ್ಯ ಸ್ಥಗಿತಗೊಳಿಸಿದ್ದರು.

ಪೊಲೀಸ್ ಮತ್ತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೋಮವಾರ ನಸುಕಿನಲ್ಲೇ ಸ್ಥಳಕ್ಕೆ ಆಗಮಿಸಿ, ಎರಡೂ ಇಲಾಖೆಗಳ ಸಿಬ್ಬಂದಿ, ಶ್ವಾನದಳ ಹಾಗೂ ಸ್ಥಳೀಯ ಗ್ರಾಮಸ್ಥರನ್ನು ಒಳಗೊಂಡ ಹತ್ತು ತಂಡಗಳನ್ನು ರಚಿಸಿದರು. ಎರಡು ಸಾವಿರ ಎಕರೆಗೂ ಹೆಚ್ಚು ವಿಸ್ತಾರವಾದ ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆಯಿಂದಲೇ ಹುಡುಕಾಟ ಆರಂಭಿಸಿದ ಸಿಬ್ಬಂದಿಗೆ ಮಾರ್ಗ ಮಧ್ಯೆ ಹಲವು ಬಾರಿ ಆನೆ ಹಿಂಡು ಎದುರಾಯಿತು. ಆ ಸಂದರ್ಭದಲ್ಲಿ ಸಿಬ್ಬಂದಿ ಪಟಾಕಿ ಸಿಡಿಸಿ ಹಿಂಡನ್ನು ಓಡಿಸಿದರು.

ಶೋಧ ಕಾರ್ಯ ಆರಂಭವಾಗಿ ಎರಡು ತಾಸು ಕಳೆದರೂ ಸಾತ್ವಿಕ್ ಬಗ್ಗೆ ಸುಳಿವು ಸಿಗದಿದ್ದರಿಂದ ಸಿಬ್ಬಂದಿಗೆ ದಿಕ್ಕು ತೋಚದಂತಾಗಿತ್ತು. ಬೆಳಿಗ್ಗೆ 10.30ರ ವೇಳೆಗೆ ಸ್ಥಳೀಯ ಗ್ರಾಮಗಳ ನೂರಕ್ಕೂ ಹೆಚ್ಚು ಜನ ಶೋಧನಾ ತಂಡಗಳ ಅಧಿಕಾರಿಗಳನ್ನು ಭೇಟಿಯಾಗಿ, ಅರಣ್ಯದಲ್ಲಿ ಹುಡುಕಾಟ ನಡೆಸಲು ತಮಗೂ ಅನುಮತಿ ನೀಡಬೇಕೆಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಸ್ಥಳೀಯರನ್ನು ಒಟ್ಟುಗೂಡಿಸಿಕೊಂಡು ಶೋಧ ಕಾರ್ಯ ಮುಂದುವರಿಸಿದರು.

ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಸಾತ್ವಿಕ್ ಕುಟುಂಬ ಸದಸ್ಯರು, ಶೋಧ ಕಾರ್ಯಕ್ಕೆ ಹೆಲಿಕಾಪ್ಟರ್ ಬಳಸುವಂತೆ ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿದರು. ಬನ್ನೇರುಘಟ್ಟ ಕಾಡು ಕುರುಚಲು ಅರಣ್ಯ ಪ್ರದೇಶವಾಗಿರುವುದರಿಂದ ಶೋಧ ತಂಡಗಳು ಪ್ರತಿ ಸ್ಥಳದಲ್ಲೂ ಹುಡುಕಾಟ ನಡೆಸುತ್ತಿವೆ. ಹಾಗಾಗಿ ಶೋಧ ಕಾರ್ಯಕ್ಕೆ ಹೆಲಿಕಾಪ್ಟರ್ ಅಗತ್ಯವಿಲ್ಲವೆಂದು ಹೇಳಿ ಸಮಾಧಾನಪಡಿಸಲು ಅಧಿಕಾರಿಗಳು ಯತ್ನಿಸಿದರು.

ಅಧಿಕಾರಿಗಳಿಗೆ ಮಧ್ಯಾಹ್ನ 12 ಗಂಟೆ ವೇಳೆಗೆ ಮೊಬೈಲ್ ಟ್ರ್ಯಾಕರ್ ಮುಖಾಂತರ ಸಾತ್ವಿಕ್‌ರವರ ಮೊಬೈಲ್‌ನ ಬಗ್ಗೆ ಸುಳಿವು ಸಿಕ್ಕಿತು. ಮುತ್ತುರಾಯಸ್ವಾಮಿ ಬಂಡೆಯಿಂದ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಅವರ ಮೊಬೈಲ್ ಇರುವ ಬಗ್ಗೆ ಮಾಹಿತಿ ದೊರೆಯಿತು. ಈ ಮಾಹಿತಿ ಆಧರಿಸಿ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದಾಗ ಅಣ್ಣಯ್ಯನದೊಡ್ಡಿ ಸಮೀಪದ ಮುಳ್ಳಿನ ಪೊದೆಯೊಂದರಲ್ಲಿ ಸಾತ್ವಿಕ್ ಶವ ಪತ್ತೆಯಾಯಿತು. ಆವರೆಗೂ, ಮಗ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಮರಳಬಹುದೆಂಬ ನಿರೀಕ್ಷೆಯಲ್ಲಿದ್ದ ಪೋಷಕರು ಸಾತ್ವಿಕ್‌ನ ಸಾವಿನ ಸುದ್ದಿ ತಿಳಿದು ಆಘಾತಗೊಂಡರು. ತಾಯಿ ಉಷಾಶಾಸ್ತ್ರಿ ಅವರು ದುಃಖ ತಡೆಯಲಾರದೆ ಕುಸಿದು ಬಿದ್ದರು.     

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.