ಗುರುವಾರ , ಏಪ್ರಿಲ್ 15, 2021
20 °C

ಆನೆ ದಾಳಿಯಿಂದ ಬೆಳೆ ನಷ್ಟ: ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಜಪೇಟೆ: ಕಳೆದ ಹತ್ತು ದಿನಗಳಿಂದ ಹಲವು ಗ್ರಾಮಗಳಲ್ಲಿ ಸುಮಾರು 10 ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ನಿರಂತರವಾಗಿ ಕಾಫಿ, ಬಾಳೆ, ತೆಂಗಿನ ಗಿಡಗಳನ್ನು ನಾಶಪಡಿಸುತ್ತಿವೆ ಎಂದು ಆರೋಪಿಸಿ ಬುಧವಾರ ವಿವಿಧ ಗ್ರಾಮಗಳ ಗ್ರಾಮಸ್ಥರು ಇಲ್ಲಿನ ವಿಭಾಗ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿದರು.ಚೆಂಬೆಬೆಳ್ಳೂರು, ಮಲೆತಿರಿಕೆ ಬೆಟ್ಟ, ಮಗ್ಗುಲ, ಐಮಂಗಲ,  ಬಿಳುಗುಂದ ಗ್ರಾಮಗಳು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳ ದಾಳಿ ನಿರಂತರವಾಗಿದೆ. ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನಾಲ್ಕು ದಿನಗಳಿಂದ ಈ ವಿಭಾಗದ ಶಾಲಾ ಮಕ್ಕಳು ಆನೆ ದಾಳಿಯ ಬೆದರಿಕೆಯಿಂದ ಶಾಲೆಗೆ ತೆರಳುತ್ತಿಲ್ಲ.

 

ಐಮಂಗಲ ಗ್ರಾಮದ ಕೆ.ಕಸ್ತೂರಿ ಪೊನ್ನಪ್ಪ ಎಂಬುವವರಿಗೆ ಸೇರಿದ ಬಾಳೆ ತೋಟ ಹಾಗೂ ಕಾಫಿ ತೋಟವನ್ನು ನಾಶಪಡಿಸಿವೆ. ಇದೇ ರೀತಿಯಲ್ಲಿ ಮಗ್ಗುಲ, ಬಿಳುಗುಂದ ಗ್ರಾಮಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಲಕ್ಷಾಂತರ ಬೆಳೆ ನಾಶ ಪಡಿಸಿರುವುದಾಗಿ ವಿಭಾಗ ಅರಣ್ಯಾಧಿಕಾರಿಯೊಂದಿಗೆ ಬೆಳೆಗಾರರು ದೂರಿದರು.ಅರಣ್ಯ ಅಧಿಕಾರಿ ಕಚೇರಿಯನ್ನು ಮುತ್ತಿಗೆ ಹಾಕಿದ ಕೆಲವು ಬೆಳೆಗಾರರು ಆಕ್ರೋಶಗೊಂಡು ಇಲಾಖೆ ಆನೆಯನ್ನು ಕಾಡಿಗೆ ಅಟ್ಟಬೇಕು. ಇಲ್ಲವೇ ದಾಳಿ ಮಾಡುವ ಆನೆಗಳನ್ನು ಗುಂಡಿಕ್ಕಲು ಅನುಮತಿ ನೀಡಬೇಕು ಎಂದು ವಿಭಾಗ ಅರಣ್ಯ ಅಧಿಕಾರಿ ಪುಟ್ಟುಸ್ವಾಮಿಯವರನ್ನು ಆಕ್ರೋಶದಿಂದಲೇ ಆಗ್ರಹಿಸಿದರು.ಕಾಡಾನೆ ದಾಳಿಯಿಂದ ವಿವಿಧ ಗ್ರಾಮಸ್ಥರು ಜೀವ ಭಯದ ಬೆದರಿಕೆಯಲ್ಲಿ ಸಂಚರಿಸುವ ಪರಿಸ್ಥಿತಿ ಬಂದಿದೆ. ಶಾಲಾ ವಿದ್ಯಾರ್ಥಿಗಳು ಇದರಿಂದಾಗಿ ಶಾಲೆಗಳಿಗೆ ಗೈರು ಹಾಜರಾಗುವಂತಾಗಿದೆ. ಆನೆ ದಾಳಿಯಿಂದಾಗಿ ನಾಲ್ಕು ಗ್ರಾಮಗಳಲ್ಲಿ ಬೆಳೆಗಾರರಿಗೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು  ವಾಣಿಜ್ಯ ಬೆಳೆಗಳು ನಷ್ಟವಾಗಿವೆ. ಬೆಳೆಗಾರರಿಗೆ ಪರಿಹಾರ ದೊಂದಿಗೆ ಕಾಡಾನೆಯಿಂದ ಗ್ರಾಮಸ್ಥರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.ಅಧಿಕಾರಿಗಳ ಭರವಸೆ:

ಅರಣ್ಯ ಕಚೇರಿಯ ಮುತ್ತಿಗೆಯಲ್ಲಿ ಭಾಗವಹಿಸಿದ್ದ ಬೆಳೆಗಾರರು ಹಾಗೂ ಗ್ರಾಮಸ್ಥರೊಂದಿಗೆ ಆನೆ ದಾಳಿಯ ಕುರಿತು ವಿಚಾರ ವಿನಿಮಯ ಮಾಡಿದ ಪುಟ್ಟುಸ್ವಾಮಿ ಅವರು, ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡನ್ನು ಶುಕ್ರವಾರದಿಂದಲೇ ಕಾಡಿಗೆ ಅಟ್ಟುವ ಕಾರ್ಯಾಚರಣೆ ಕೈಗೊಳ್ಳ ಲಾಗುವುದು. ಕಾಡಾನೆ ಓಡಿಸುವ ತಜ್ಞರನ್ನು ಕರೆಸಲಾಗುವುದು. ಗುರುವಾರದಿಂದಲೇ ಇದಕ್ಕಾಗಿ ಪೂರ್ವ ಸಿದ್ಧತೆ ನಡೆಸಲಾಗುವುದು. ಆನೆಗಳನ್ನು ಕಾಡಿಗೆ ಅಟ್ಟುವ ಸಮಯದಲ್ಲಿ ಆ ವಿಭಾಗದ ಎಲ್ಲ ಗ್ರಾಮಗಳಲ್ಲಿರುವ ಶಾಲೆಗಳಿಗೆ ರಜೆ ಘೋಷಿಸಲಾಗುವುದು. ಆನೆ ಓಡಿಸಲು ಪಟಾಕಿ, ತಮಟೆಗಳನ್ನು  ತಜ್ಞರ ಸಲಹೆಯಂತೆ ಬಳಸಲಾಗುವುದು. ಗ್ರಾಮಸ್ಥರು, ಬೆಳೆಗಾರರು ಆನೆ ಓಡಿಸಲು ಪೂರ್ಣ ಸಹಕಾರ ನೀಡಬೇಕು~ ಎಂದು ಕೋರಿದರು.ಅರಣ್ಯ ಕಚೇರಿಗೆ ಮುತ್ತಿಗೆ ಸಂದರ್ಭದಲ್ಲಿ ಆರ್.ಎಂ.ಸಿ. ಉಪಾಧ್ಯಕ್ಷ ಶಶಿ ಸುಬ್ರಮಣಿ, ಎ.ಮೊಣ್ಣಯ್ಯ, ಕೆ.ಕಸ್ತೂರಿ ಪೊನ್ನಪ್ಪ, ಕೆ.ಬೋಪಣ್ಣ ಜಯ ಕರ್ನಾಟಕ ಸಂಘಟನೆಯ ನಗರ ಸಮಿತಿ ಅಧ್ಯಕ್ಷ ಎಂ.ಅನಿಲ್ ಅಯ್ಯಪ್ಪ ಸೇರಿದಂತೆ ಅಧಿಕ ಮಂದಿ ಗ್ರಾಮಸ್ಥರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.