ಆನೆ ದಾಳಿ ತಡೆಗೆ ರೈತರ ಆಗ್ರಹ

7

ಆನೆ ದಾಳಿ ತಡೆಗೆ ರೈತರ ಆಗ್ರಹ

Published:
Updated:

ಹಲಗೂರು: ಆನೆ ಹಾವಳಿ ತಡೆಯಲು ಯೋಜನೆ ರೂಪಿಸಬೇಕು ಮತ್ತು ಆನೆ ದಾಳಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಸವನಬೆಟ್ಟ ಮತ್ತು ಮುತ್ತತ್ತಿ ಅರಣ್ಯ ಪ್ರದೇಶದ ತಪ್ಪಲಿನ ಗ್ರಾಮಸ್ಥರು ಗಾಣಾಳು ಗ್ರಾಮದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಅರಣ್ಯ ಪ್ರದೇಶದ ತಪ್ಪಲು ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆನೆ ಹಿಂಡು ದಾಳಿಗೆ ಬೆಳೆದ ಬೆಳೆ ತುತ್ತಾಗುತ್ತಿದೆ. ಗಾಣಾಳು, ಕೆಂಚಬೋಯಿದೊಡ್ಡಿ, ಕರೀಗೌಡನದೊಡ್ಡಿ, ಕರಲಕಟ್ಟೆ, ಸೊಲಬ, ಡಾಲನಕಟ್ಟೆ ಇತರ ಗ್ರಾಮಗಳ ಜಮೀನುಗಳಿಗೆ ಆನೆ ಹಿಂಡು ದಾಳಿ ಸಾಮಾನ್ಯವಾಗಿದೆ.ಬಾಳೆ, ಕಬ್ಬು, ರಾಗಿ, ಹಿಪ್ಪುನೇರಳೆ, ಉರುಳಿ, ಬತ್ತದ ಬೆಳೆಗಳು ರೈತರ ಕೈ ಸೇರುವ ಮೊದಲೇ ಆನೆ ದಾಳಿಗೆ ಸಿಲುಕುತ್ತಿವೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ. ಬೆಳೆ ಕಳೆದುಕೊಂಡ ರೈತರಿಗೆ ಅರಣ್ಯ ಇಲಾಖೆ ಅವೈಜ್ಞಾನಿಕ ಪರಿಹಾರ ನೀಡುತ್ತದೆ.ಅದು ತುಂಬಾ ವಿಳಂಬವಾಗಿ ರೈತರ ಕೈ ಸೇರುತ್ತಿದೆ. ಆನೆ ಹಿಂಡು ನಾಡಿಗೆ ಬರದಂತೆ ತಡೆಯಲು ಕ್ರಮ ಕೈಗೊಳ್ಳಬೇಕು. ಬೆಳೆ ರಕ್ಷಿಸಲು ಆಧುನಿಕ ತಂತ್ರಜ್ಞಾನ ಅಳವಡಿಸಬೇಕು. ರಾತ್ರಿ ವೇಳೆ ಕಾವಲು ಸಿಬ್ಬಂದಿ ಹೆಚ್ಚಿಸಬೇಕು ಮತ್ತು ಬೆಳೆ ನಷ್ಟ ಅನುಭವಿಸಿದ  ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಸ್ಥಳಕ್ಕೆ ಭೇಟಿ ನೀಡಿದ ಎಸಿಎಫ್ ರಾಮಲಿಂಗೇಗೌಡ ಮತ್ತು ವಲಯಾಧಿಕಾರಿ ಜಾಫರ್‌ಅಹಮದ್ ಅವರು ಆನೆ ಓಡಿಸುವ ಅರಣ್ಯ ಸಿಬ್ಬಂದಿಯನ್ನು ಹೆಚ್ಚಿಸಲಾಗುವುದು. ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಶೀಘ್ರವಾಗಿ ಪರಿಶೀಲನೆ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದರು.ಮಾದೇಶ, ಮಹಾದೇವು, ಕುಮಾರ್, ತಿಮ್ಮೇಗೌಡ, ಶಿವಮಾದೇಗೌಡ ಇತರರು ಪ್ರತಿಭಟನಾ ನೇತೃತ್ವ ವಹಿಸಿದ್ದರು.ಕಾಡಾನೆ ಪಾಲಾದ ಬೆಳೆ: ಅನ್ನದಾತ ಕಂಗಾಲು

ಹಲಗೂರು: ಮುತ್ತತ್ತಿ ಮತ್ತು ಬಸವನಬೆಟ್ಟ ಅರಣ್ಯ ಪ್ರದೇಶದ ಆಸುಪಾಸು ಗ್ರಾಮಗಳ ಜಮೀನುಗಳಿಗೆ ಆನೆಗಳು ಮಂಗಳವಾರ ರಾತ್ರಿ ದಾಳಿ ನಡೆಸಿ ಬೆಳೆಗಳನ್ನು ಧ್ವಂಸ ಮಾಡಿವೆ. ಗಾಣಾಳು ಗ್ರಾಮದ ಹುಚ್ಚಮ್ಮ ಅವರ ಬತ್ತದ ಗದ್ದೆ, ಹುಲ್ಲಿನ ಮೆದೆ ಮತ್ತು ತೆಂಗಿನ ಮರಗಳನ್ನು ನಾಶ ಮಾಡಿವೆ. ತಿಮ್ಮೇಗೌಡ ಅವರ ಜಮೀನಿನಲ್ಲಿ ಬತ್ತದ ಬೆಳೆಯನ್ನು ತಿಂದು ಹಾಕಿವೆ.ಜಿ.ಎಸ್.ಮಾದೇಶ, ಮಹಾದೇವಮ್ಮ, ಬೂಡೇಗೌಡ, ಬೋಳೆಗೌಡ, ಶಿವಮಾದೇಗೌಡ ಅವರ ಜಮೀನುಗಳಲ್ಲಿ ಬೆಳೆಗಳನ್ನು ನಾಶಪಡಿಸಿವೆ. ಹಲಸಿನ ಮರ, ತೆಂಗಿನ ಮರಗಳನ್ನು ಮುರಿದು ಹಾಕಿವೆ. ಹುಲ್ಲಿನ ಮೆದೆಗಳನ್ನು ನೆಲಕ್ಕುರುಳಿಸಿವೆ. ಇತ್ತೀಚಿನ ದಿನಗಳಲ್ಲಿ ಆನೆ ಹಿಂಡು ದಾಳಿ ಹೆಚ್ಚಾಗಿದೆ.ಇದನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಬೆರಳೆಣಿಕೆ ಅರಣ್ಯ ಸಿಬ್ಬಂದಿಯಿಂದ ಆನೆ ದಾಳಿ ತಡೆಯಲು ಸಾಧ್ಯವಾಗುತ್ತಿಲ್ಲ. ರೈತರೆ ರಾತ್ರಿ ವೇಳೆ ಗಸ್ತು ತಿರುಗಿ ಆನೆ ಬರದಂತೆ ತಡೆಯಲು ಯತ್ನಿಸಿ, ಮನೆಗೆ ಮರಳಿದ ನಂತರ ಆನೆ ಹಿಂಡು ಜಮೀನುಗಳಿಗೆ ಲಗ್ಗೆ ಹಿಡುತ್ತಿವೆ. ಬೆಳೆದ ಬೆಳೆ ಆನೆ ಪಾಲಾಗುವುದರಿಂದ ರೈತರಿಗೆ ನಷ್ಟ ಹೆಚ್ಚಾಗುತ್ತಿದೆ. ಬೆಳೆ ಕಳೆದು ಕೊಂಡವರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry