ಆನೆ ದಾಳಿ: ಬತ್ತದ ಬಣವೆ ನಾಶ

7

ಆನೆ ದಾಳಿ: ಬತ್ತದ ಬಣವೆ ನಾಶ

Published:
Updated:

ಯಲ್ಲಾಪುರ: ತಾಲ್ಲೂಕಿನ ಕಣ್ಣಿಗೇರಿ ಗ್ರಾಮದ ಅನೇಕ ಗದ್ದೆಗಳಿಗೆ  ಆನೆಗಳ ಹಿಂಡು ದಾಳಿ ಮಾಡಿ ಬತ್ತದ ಬಣವೆ ಸೇರಿದಂತೆ ಬೆಳೆದು ನಿಂತ ಬತ್ತವನ್ನು ನಾಶಮಾಡಿವೆ.ಕಣ್ಣಿಗೇರಿಯ ಬೆಳಗೇರಿ ನಿವಾಸಿ ರಾಮಕೃಷ್ಣ ಲೊಕಪ್ಪ ಮರಾಠೆ ಎಂಬುವವರ ಬತ್ತದ ಬಣಿವೆಗೆ ಬುಧವಾರ ರಾತ್ರಿ ಲಗ್ಗೆ ಹಾಕಿರುವ 9 ಆನೆಗಳ ಹಿಂಡು ಮಧ್ಯರಾತ್ರಿವರೆಗೂ ಸುಮಾರು 30 ಚೀಲ ಬತ್ತವಾಗುವ ಬಣವೆಯನ್ನು ಸಂಪೂರ್ಣ ನಾಶ ಪಡಿಸಿವೆ. ನಂತರ ಸ್ವಲ್ಪ ದೂರದ ದ್ಯಾಮಾ ಗಣೇಶ ಮರಾಠೆ ಮತ್ತು ದಾಮು ಮರಾಟೆ ಎಂಬುವವರ ಬೆಳೆದು ನಿಂತ ಬತ್ತದ ಗದ್ದೆಗಳಿಗೆ ನುಗ್ಗಿ  ನಾಶ ಮಾಡಿವೆ.ಬಣವೆಗೆ ದಾಳಿ ಮಾಡಿರುವ ಸಂದರ್ಭದಲ್ಲಿ ಗ್ರಾಮಸ್ಥರು ಜಾಗಟೆ, ಶಂಖ ಬಾರಿಸಿ, ಭಾರಿ ಸದ್ದಿನ ಸಿಡಿಮದ್ದು ಸಿಡಿಸಿ ಆನೆಗಳನ್ನು ಓಡಿಸುವ ಪ್ರಯತ್ನ ಮಾಡಿದ್ದರೂ ಸ್ಥಳ ಬಿಟ್ಟು ಕದಲದ ಆನೆಗಳ ಹಿಂಡು ಐದು ತಾಸಿಗೂ ಮೆಲ್ಪಟ್ಟು ಬಣವೆಯನ್ನು ಮೇಯ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರೈತರ ಹೊಲಗಳಿಗೆ ಆನೆಗಳು ದಾಳಿ ಮಾಡಿದಾಗ ಅರಣ್ಯ ಇಲಾಖೆಗೆ ಕೂಡಲೆ ಮಾಹಿತಿ ನೀಡಿದರೂ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿರುವ ಆನಗೋಡ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಟಿ.ಹೆಗಡೆ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಕೈಟ್ಕರ್ ಹಾಗೂ ಸಾಮಾಜಿಕ ಕಾರ್ಯಕರ್ತ ಸತ್ಯ ನಾರಾಯಣ ಹೆಗಡೆ, ಅರಣ್ಯ ಇಲಾಖೆ  ಈ ಕುರಿತು ನಿರ್ಲಕ್ಷ ತಾಳಿದೆ ಎಂದು ಆರೋಪಿಸಿದ್ದಾರೆ.  ಆನೆ ದಾಳಿ ಕುರಿತು ಅರಣ್ಯ ಇಲಾಖೆ ಈ ಕುರಿತು ಗಮನ ನೀಡಬೇಕು ಹಾಗೂ ಆನೆ ದಾಳಿಯಿಂದ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry