ಆನೆ ದಾಳಿ: ಬಾರದ ಪರಿಹಾರ, ಪ್ರತಿಭಟನೆ

7

ಆನೆ ದಾಳಿ: ಬಾರದ ಪರಿಹಾರ, ಪ್ರತಿಭಟನೆ

Published:
Updated:
ಆನೆ ದಾಳಿ: ಬಾರದ ಪರಿಹಾರ, ಪ್ರತಿಭಟನೆ

ಹಾಸನ: ಆನೆ ದಾಳಿಗೆ ತುತ್ತಾದ ಯುವಕನಿಗೆ ಏಳು ತಿಂಗಳಾದರೂ ಪರಿಹಾರ ನೀಡದಿರುವ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ ಬಿಸಿಲೆ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಸಕಲೇಪುರ ತಾಲ್ಲೂಕಿನ ಬಿಸಿಲೆ ಗ್ರಾಮದ ಕೂಲಿ ಕಾರ್ಮಿಕ ಎಚ್.ಆರ್. ಕೀರ್ತಿಕುಮಾರ್ ಎಂಬುವವರ ಮೇಲೆ ಕಳೆದ ಏಪ್ರಿಲ್ 30ರಂದು ಕಾಡಾನೆ ದಾಳಿ ಮಾಡಿತ್ತು. ಅವರ ಪರವಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

`ಕೀರ್ತಿಕುಮಾರ್ ಅಂದು ಸಂಜೆ ತಮ್ಮ ಮಿತ್ರನ ಜತೆಗೂಡಿ ಬಿಸಿಲೆಯಿಂದ ಮನೆಯ ಕಡೆಗೆ ಬರುತ್ತಿದ್ದಾಗ ಹಟಾತ್ತನೆ ಕಾಡಾನೆ ಎದುರಾಗಿತ್ತು.ಇಬ್ಬರೂ ಓಡಲು ಪ್ರಯತ್ನಿಸಿದರೂ ಕೀರ್ತಿ ಮಾತ್ರ ಆನೆಯ ದಾಳಿಗೆ ಸಿಲುಕಿದರು. ಕಾಡಾನೆ ತನ್ನ ದವಡೆಯಿಂದ ಕೀರ್ತಿ ಕುಮಾರ್ ಅವರ ಬಲ ತೊಡೆಯನ್ನು ತಿವಿದಿತ್ತು. ಘಟನೆಯಲ್ಲಿ ಅವರ ತೊಡೆಯ ಎಲುಬು ಛಿದ್ರಛಿದ್ರ ವಾಗಿದೆ. ಘಟನೆ ನಡೆದು ಸಾಕಷ್ಟು ಸಮಯ ಆಗಿದ್ದರೂ ಈವರೆಗೆ ಅವರಿಗೆ ಪರಿಹಾರ ನೀಡಿಲ್ಲ~ ಎಂದು ಮಲೆನಾಡು ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಕಿಶೋರ್  ಕುಮಾರ್ ತಿಳಿಸಿದರು.`ಕೂಲಿ ಕಾರ್ಮಿಕರಾಗಿರುವ ಕೀರ್ತಿ ಕುಮಾರ್‌ಗೆ ತಂದೆ ಇಲ್ಲ. ವೃದ್ಧ ತಾಯಿಯನ್ನು ಇವರೇ ಸಾಕಬೇಕು. ಆದರೆ ಅವರು ಈಗ ನಡೆದಾಡುವ ಸ್ಥಿತಿಯಲ್ಲೂ ಇಲ್ಲ. ಊರವರೆಲ್ಲ ಸೇರಿ ಈವರೆಗೆ ಸಹಾಯ ಮಾಡುತ್ತ ಬಂದಿದ್ದಾರೆ. ಚಿಕಿತ್ಸೆಗಾಗಿ ಈವರೆಗೆ 2.5 ಲಕ್ಷ ರೂಪಾಯಿ ವೆಚ್ಚವಾಗಿದೆ.ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪರಿಣಾಮ ಆಗಿಲ್ಲ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿಯವರೆಗೂ ಫೈಲ್ ಹೋಗಿ ಮರಳಿ ಬಂದಿದೆ. ಕೀರ್ತಿ ಅವರು ಸಲ್ಲಿಸಿರುವ ಮೆಡಿಕಲ್ ಸರ್ಟಿಫಿಕೇಟ್ ಸರಿ ಇಲ್ಲ ಎಂಬ ಕಾರಣಕ್ಕೆ ಪರಿಹಾರ ಬಿಡುಗಡೆ ಮಾಡಿಲ್ಲ.ಅವರನ್ನು ಭೇಟಿಮಾಡಿರುವ ಸಚಿವರು, ಅಧಿಕಾರಿಗಳೆಲ್ಲರೂ ಶೀಘ್ರದಲ್ಲೇ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದರೂ ಪರಿಹಾರ ಇನ್ನೂ ಬಂದಿಲ್ಲ. ಕೂಡಲೇ ಕೀರ್ತಿ ಅವರ ಚಿಕಿತ್ಸಾ ವೆಚ್ಚ ಭರಿಸುವುದರ ಜತೆಗೆ ಹೆಚ್ಚಿನ ಪರಿಹಾರ ನೀಡಬೇಕು~ ಎಂದೂ ಪ್ರತಿಭಟನಾಕಾರರು ಆಗ್ರಹಿಸಿದರು.ಈಗಲೂ ಚಿಕಿತ್ಸೆ ಪಡೆಯುತ್ತಿರುವ ಕೀರ್ತಿ ಕುಮಾರ್ ಸಹ ಬಂದು ಪ್ರತಿಭಟನೆಯಲ್ಲಿ ಕುಳಿತಿದ್ದರು. ಕೀರ್ತಿ ಕುಮಾರ್ ಮಲ್ಲೇಶಗೌಡ, ಚಂದ್ರು, ಎಪಿಎಂಸಿ ಸದಸ್ಯರಾದ ಮಂಜು, ಸುರೇಶ್, ಮಧುಕರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry