ಶುಕ್ರವಾರ, ಮೇ 14, 2021
32 °C

ಆನೆ ದಾಳಿ: ಯುವಕ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ತಾಲ್ಲೂಕಿನ ಓರೋಹಳ್ಳಿ ಬಳಿ ಆನೆ ದಾಳಿಗೆ ಯುವಕನೊಬ್ಬ ಬಲಿಯಾಗಿ ಮತ್ತೊಬ್ಬ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.ಮೈಲಾಪುರ ಗ್ರಾಮದ ನಂಜೇಗೌಡ ಎಂಬವರ ಪುತ್ರ ಮಂಜುನಾಥ (22) ಮೃತಪಟ್ಟ ದುರ್ದೈವಿ. ದಿನಪತ್ರಿಕೆಯೊಂದರ ವಿತರಕರಾಗಿದ್ದ ಅವರು ಮಧ್ಯಾಹ್ನ  ಒಂದು ಗಂಟೆ ವೇಳೆ ಆನೆಗಳ ಛಾಯಾಚಿತ್ರ ಸೆರೆ ಹಿಡಿಯಲು ಹೋಗಿದ್ದರು. ಈ ವೇಳೆ ಆನೆಯೊಂದು ಓಡಿಸಿಕೊಂಡು ಬಂತು. ಜತೆಗಿದ್ದವರೊಂದಿಗೆ ಅವರು  ಓಡಿಬಂದು ಮರವೊಂದನ್ನು ಹತ್ತಲು ಯತ್ನಿಸಿದರು. ಆನೆ ಅವರನ್ನು ಸೊಂಡಿಲಿನಿಂದ ಎತ್ತಿ ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆಯ ಮೇಲೆ ಹಲವು ಬಾರಿ ತುಳಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ನಂಜೇಗೌಡ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರು. ಮಂಜುನಾಥ ಕೊನೆಯ ಪುತ್ರ.ಶನಿವಾರ ಮಾಲೂರು ಕಡೆಯಿಂದ ಹೊರಟಿದ್ದ 15 ಆನೆಗಳ ಹಿಂಡು ರಾತ್ರಿ ತಾಲ್ಲೂಕಿನ ಓರೋಹಳ್ಳಿ-ಇಂಜನಹಳ್ಳಿ ಗ್ರಾಮದ ಕೆರೆ ಅಂಗಳದಲ್ಲಿನ ನೀಲಗಿರಿ ತೋಪಿನಲ್ಲಿ ಬೀಡು ಬಿಟ್ಟಿದ್ದವು.ಇದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಬೆಳಿಗ್ಗೆಯಿಂದಲೇ ಆನೆಗಳನ್ನು ಓಡಿಸಲು ಪ್ರಯತ್ನಿಸಿದರೂ ಅವು ಅಲ್ಲಿಂದ ಕದಲಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಮಾಲೂರು ಮುಖಾಂತರ ತಮಿಳುನಾಡು ಕಡೆ ಓಡಿಸಲು ಕಾರ್ಯಾಚರಣೆ ಮುಂದುವರಿಸಿದ್ದಾರೆ.ಶವ ಪತ್ತೆ: ಹೆದ್ದಾರಿಯ ಚನ್ನಬೈರೇಗೌಡ ವೃತ್ತದ ಬಳಿ ವ್ಯಕ್ತಿ ಒಬ್ಬನ ಶವ ಭಾನುವಾರ ಪತ್ತೆಯಾಗಿದೆ.

ಸುಮಾರು 45 ವರ್ಷ ವಯಸ್ಸಿನ ಆ ವ್ಯಕ್ತಿ ಕೆಂಪು, ಬಿಳಿ ಮಿಶ್ರಿತ ಬಣ್ಣದ ತುಂಬು ತೋಳಿನ ಶರ್ಟ್, ಮಾಸಲು ಬಣ್ಣದ ಪ್ಯಾಂಟ್ ಧರಿಸಿದ್ದ. ಕಾಯಿಲೆಯಿಂದ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.