ಬುಧವಾರ, ಜೂನ್ 16, 2021
28 °C

ಆನೆ ನೋಡಿ ಆನೆ ಸೀಮೆಸುಣ್ಣದ ಆನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಖಲೆಗಾಗಿ ಮಂದಿ ಏನೆಲ್ಲಾ ಮಾಡುತ್ತಾರೆ. ಬಾಯಿಯಲ್ಲಿ ನೂರಾರು ಸ್ಟ್ರಾಗಳನ್ನು ಇಟ್ಟುಕೊಳ್ಳುವ, ಮೀಸೆಯಿಂದ ಕಾರನ್ನು ಎಳೆಯುವ, ಬಲ್ಬು ಒಡೆದು ಗಾಜನ್ನು ನುಂಗುವ- ಹೀಗೆ ಅನೇಕ ಸಾಹಸಗಳನ್ನು ಮಾಡುವ ಅಪರೂಪದ ವ್ಯಕ್ತಿಗಳಿದ್ದಾರೆ. ಆದರೆ ಇಲ್ಲೊಬ್ಬ ಕಲಾವಿದ ಒಂದು ಸೀಮೆಸುಣ್ಣದಿಂದ ಎಂಟು ಆನೆ ಆಕೃತಿಗಳನ್ನು ಮಾಡಿ ಅಚ್ಚರಿ ಮೂಡಿಸಿದ್ದಾರೆ.ವಿಭೂತಿಯಂತೆ ಪುಡಿಯಾಗುವ ಸೀಮೆಸುಣ್ಣದಿಂದ ಸುಂದರ ಆನೆಗಳ ಕಲಾಕೃತಿಗಳನ್ನು ಮೂಡಿಸುವುದೆಂದರೆ ಸಾಮಾನ್ಯ ವಿಷಯವಲ್ಲ. ಅದಕ್ಕೆ ತಾಳ್ಮೆ, ಸೂಕ್ಷ್ಮ ಕುಸುರಿ ಕೆಲಸ ಮಾಡುವ ಶ್ರಮ ಬೇಕು. ಇದನ್ನು ಕಲಾವಿದ ಮಾಡಿ ತೋರಿಸಿದ್ದಾರೆ.ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ಕಲಾ ಶಿಕ್ಷಕರಾಗಿರುವ ಎಸ್.ಶ್ರೀಧರ್ ಈ ಕಲಾಕೃತಿಗಳನ್ನು ರಚಿಸಿದವರು. ಬ್ಲೇಡ್ ಮತ್ತು ಗುಂಡುಸೂಜಿ ಬಳಸಿಕೊಂಡು ಸೀಮೆಸುಣ್ಣದಲ್ಲಿ ಆನೆ ಆಕೃತಿ ಮಾಡುತ್ತಾರೆ.ಈಗಾಗಲೇ 1050 ಆನೆ ಕಲಾಕೃತಿಗಳನ್ನು ರಚಿಸಿದ್ದಾರೆ. ನೀಲಿ, ಬಿಳಿ, ಕೆಂಪು, ಹಸಿರು, ಹಳದಿ ಹೀಗೆ ಬಣ್ಣ ಬಣ್ಣದ ಬಳಪಗಳಿಂದ ಮಾಡಿದ ಆನೆಗಳು ಕಣ್ಮನ ಸೆಳೆಯುತ್ತವೆ.ಜಲವರ್ಣದಿಂದ ರಚಿಸಿದ ವಿವಿಧ ದೇಶಗಳ ನೋಟುಗಳು ಹಾಗೂ ಸ್ಟಾಂಪ್‌ಗಳಿಗಾಗಿ 2007ರಲ್ಲಿ ಲಿಮ್ಕಾ ದಾಖಲೆಯನ್ನು ಬಾಚಿಕೊಂಡಿದ್ದಾರೆ. ಬಾಂಡ್‌ಶೀಟ್‌ಗಳ ಮೇಲೆ ವಿವಿಧ ದೇಶಗಳ ಒಂದು, ಐದು, ಹತ್ತು, ಐವತ್ತು, ನೂರೂ ರೂ. ಮೌಲ್ಯದ ನೋಟುಗಳನ್ನು ಸಿದ್ಧಪಡಿಸಿದ್ದರು.ಅಸಲಿ ನೋಟುಗಳನ್ನು ನಾಚಿಸುವಂತೆ ಕುಂಚದಲ್ಲಿ ಮೂಡಿದ ಇವರ ಚಿತ್ರಗಳು ಎಂಥವರನ್ನೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತವೆ.ಬೋರ್ಡ್ ಮೇಲೆ ಬರೆಯಲು ಬಳಸುವ ಸೀಮೆಸುಣ್ಣದಲ್ಲಿ ಆನೆಗಳ ಕಲಾಕೃತಿಗಳನ್ನು ರಚಿಸಲು ಮುಂದಾಗಿದ್ದಾರೆ. ಆರು ನಿಮಿಷಕ್ಕೆ ಬೆರಳ ತುದಿಯಲ್ಲಿ ಇಟ್ಟುಕೊಳ್ಳುವಷ್ಟು ಚಿಕ್ಕ ಗಾತ್ರದ ಆನೆಯನ್ನು ಮಾಡುತ್ತಾರೆ.21 ವರ್ಷಗಳಿಂದ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಶ್ರೀಧರ್ ಮೂರನೇ ತರಗತಿಯಲ್ಲಿ ಇರುವಾಗಲೇ ಚಿತ್ರ ಬಿಡಿಸುವ ಅಭ್ಯಾಸ ಬೆಳೆಸಿಕೊಂಡರು. ಅಂದಿನಿಂದ ಕಲಾಲೋಕಕ್ಕೆ ಸದಸ್ಯರಾಗಿ ಕೆಲಸ ನಿರ್ವಹಿಸಲು ಮುಂದಾದರು.ಇಂದು ಆನೆಗಳ ಸಂತತಿ ಕಡಿಮೆಯಾಗುತ್ತಿದೆ. ಅರಣ್ಯನಾಶದಿಂದ ಆನೆಗಳು ನಾಡಿನತ್ತ ಬರುತ್ತಿವೆ. ಇದರಿಂದ ಸ್ವಾರ್ಥ ಮನುಷ್ಯ ಅವುಗಳನ್ನು ಕೊಲ್ಲುವ ಮಟ್ಟಕ್ಕೆ ಹೋಗಿದ್ದಾನೆ.ಹಾಗಾಗಿ ಗಜಗಳ ಸಂತತಿಯನ್ನು ಮುಂದಿನ ಪೀಳಿಗೆಗೂ ಉಳಿಯಲಿ ಎಂಬ ಉದ್ದೇಶದಿಂದ `ಕಾಡನ್ನು ಉಳಿಸಿ ಆನೆಗಳನ್ನು ರಕ್ಷಿಸಿ~ ಎಂಬ ಧ್ಯೇಯದೊಂದಿಗೆ ಈ ಕಲೆಯನ್ನು ಅಭಿವ್ಯಕ್ತಗೊಳಿಸುತ್ತಿದ್ದೇನೆ ಎನ್ನುತ್ತಾರೆ ಶ್ರೀಧರ್.ಈ ಆನೆಗಳ ಕಲಾಕೃತಿಗಳಿಗಾಗಿ ಶ್ರೀಧರ್ ಮತ್ತೊಂದು ಲಿಮ್ಕಾ ದಾಖಲೆ ಮಾಡಬೇಕೆಂಬ ಹಂಬಲದಲ್ಲಿ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.