ಆನೆ ಬಂತೊಂದಾನೆ

7

ಆನೆ ಬಂತೊಂದಾನೆ

Published:
Updated:

ಕೊಡಗು ಜಿಲ್ಲೆಯ ಕುಶಾಲನಗರದ ಆನೆಕಾಡು ಬಳಿ ಆದಿವಾಸಿ ಜೇನುಕುರುಬರ ಗುಡಿಸಲುಗಳಿವೆ. ಇವುಗಳ ಪಕ್ಕದಲ್ಲಿ ಕೊಟ್ಟಿಗೆಯೊಂದಿದೆ. ಸಾಮಾನ್ಯವಾಗಿ ಕೊಟ್ಟಿಗೆ ಅಂದ ತಕ್ಷಣ ದನ-ಕರುಗಳ ವಾಸಸ್ಥಳ ಎನ್ನುವ ಅಭಿಪ್ರಾಯ ಮೂಡುತ್ತದೆ. ಆದರೆ, ಇಲ್ಲಿ ಆನೆಮರಿಯೊಂದನ್ನು ಕಟ್ಟಿ, ಸಾಕಲಾಗುತ್ತಿದೆ.ಮುದ್ದಾಗಿ, ಚೂಟಿಯಾಗಿ ಎಲ್ಲೆಡೆ ಓಡಾಡುವ ಈ ಮರಿಗೆ `ಶಿವ~ ಎಂದು ಹೆಸರಿಟ್ಟಿದ್ದಾರೆ. ಇದನ್ನು ಸಲಹುತ್ತಿರುವವರು ಹಾಡಿಯ ಯುವಕ ಚಂದ್ರು.  ಅರಣ್ಯ ಇಲಾಖೆಯ ಅಧಿಕಾರಿಗಳು ಇದರ ಆಹಾರ ವೆಚ್ಚದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.ಇದೇ ತಿಂಗಳು (2012 ಫೆಬ್ರುವರಿ) ತನ್ನ ಮೊದಲ ಜನ್ಮದಿನ ಆಚರಿಸಿಕೊಂಡಿರುವ `ಶಿವ~ ಈಗ ಮೂರುವರೆ ಅಡಿ ಎತ್ತರಕ್ಕೆ ಬೆಳೆದಿದ್ದಾನೆ. ಮೈ ತುಂಬಾ ಕೂದಲುಗಳಿವೆ, ಬೆಳೆದಂತೆ ಅವು ಉದುರಿಹೋಗಲಿವೆ. ಆತ ಬಹಳ ತುಂಟ ಸ್ವಭಾವದವ, ವಿಪರೀತ ಚೇಷ್ಟೆ. ತನ್ನ ಬಳಿ ಯಾರೇ ಸುಳಿದರೆ ಸಾಕು ಅವರತ್ತ ಸೊಂಡಿಲು ಚಾಚಿ, ದೊಡ್ಡದಾಗಿ ಉಸಿರು ಬಿಡುತ್ತಾನೆ, ಅವರನ್ನು ಹಿಂಬಾಲಿಸುತ್ತಾನೆ.

 

ಹತ್ತಿರಕ್ಕೆ ಬಂದರೆ ಪಕ್ಕನೆ ಓಡಲು ಶುರುವಿಟ್ಟುಕೊಳ್ಳುತ್ತಾನೆ. ಎಷ್ಟೇ ದೂರ ಹೋದರೂ ತನ್ನನ್ನು ಸಲಹುತ್ತಿರುವವರನ್ನು ಮಾತ್ರ ಬಿಟ್ಟಿರಲಾರ. ಕೆಲವೇ ಕ್ಷಣಗಳಲ್ಲಿ ಚಂದ್ರುವಿನ ಪಕ್ಕ ಹಾಜರ್.ಇಷ್ಟೊಂದು ಚಿನ್ನಾಟವಾಡುವ `ಶಿವ~ನಿಗೆ ನಿತ್ಯ ಬೆಳಿಗ್ಗೆ ಸ್ನಾನ ಬೇಕೇ ಬೇಕು. ಪಕ್ಕದಲ್ಲಿಯೇ ಕೆರೆಯೊಂದಿದೆ. ಅಲ್ಲಿಗೆ ಕರೆದುಕೊಂಡು ಹೋದರೂ ಸರಿ, ಇಲ್ಲದಿದ್ದರೆ ಇಲ್ಲೇ ಬಕೆಟ್‌ನಲ್ಲಿ ನೀರು ತಂದು ಸುರಿದರೂ ಸರಿ.

 

ಸ್ನಾನ ಇಲ್ಲದೆ ಇರಲಾರ! ಸ್ನಾನ ಎಂದ ಮೇಲೆ ಸೋಪು ಬೇಕಲ್ಲವೇ? `ಶಿವ~ ಬಳಸುವುದು ಯಾವುದು ಗೊತ್ತೇ? ಒಂದು ಕಾಲದಲ್ಲಿ ಸಿನಿಮಾ ತಾರೆಯರ ಸೋಪು ಎಂದೇ ಹೆಸರುವಾಸಿಯಾಗಿದ್ದ ಲಕ್ಸ್! `ಶಿವ~ನ ಮೈಗೆ ಉಜ್ಜುವ ಈ ಸಾಬೂನಿನ ಬಾಳಿಕೆ ಕೇವಲ ನಾಲ್ಕೈದು ದಿನಗಳು ಮಾತ್ರ.`ಶಿವ~ನ ಊಟೋಪಚಾರ ಕೂಡ ವಿಶಿಷ್ಟವಾದುದು. ದಿನಕ್ಕೆ ಏಳೆಂಟು ಲೀಟರ್ ಹಾಲು, ರಾಗಿ ಮುದ್ದೆ ಸೇವಿಸುತ್ತಾನೆ. ಬಿದಿರಿನ ಹುಲ್ಲು ಇವನಿಗೆ ಮೃಷ್ಟಾನ್ನ. ಬಾಯಾರಿಕೆಯಾದಾಗ ಯಜಮಾನನ ಮನೆಯ ಮುಂದೆ ಹೋಗಿ ನಿಲ್ಲುತ್ತಾನೆ. ಆ ಮನೆ ಮಹಿಳೆ ದೊಡ್ಡ ಪಾತ್ರೆಯಲ್ಲಿ ನೀರು ತುಂಬಿಸಿ ಇಡುತ್ತಾರೆ. ಇವನ ಜೊತೆ ಆಟವಾಡಲು ಕೋಳಿ, ಬೆಕ್ಕುಗಳಿವೆ. ಆದರೆ ಇಲ್ಲಿರುವ ಕರುವೊಂದು ತಪ್ಪಿಯೂ ಇವನತ್ತ ಸುಳಿಯದು. ದೂರದಿಂದಲೇ `ನಮಸ್ಕಾರ~ ಹೇಳಿ ಕಾಲ್ಕೀಳುತ್ತದೆ. ಇವನಿಗೆ ಚಳಿಯಿಂದ ರಕ್ಷಣೆ ಸಿಗಲೆಂದು ಕೊಟ್ಟಿಗೆಯಲ್ಲಿ ಬೆಂಕಿ ಹಾಕಲಾಗುತ್ತದೆ. ರಾತ್ರಿಯಿಡಿ ಇದು ಉರಿಯುತ್ತದೆ. `ಶಿವ~ನ ಜೊತೆ ಚಂದ್ರು ಕೂಡ ಅದೇ ಕೊಟ್ಟಿಗೆಯಲ್ಲಿ ತಲೆದಿಂಬಿಟ್ಟು ಮಲಗುತ್ತಾರೆ.ಗದ್ದೆಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆಯನ್ನು ತುಳಿದು ಹಾಕುವುದು, ನಗರಗಳಿಗೆ ನುಗ್ಗಿ ಮಾನವರನ್ನು ಎತ್ತಿ ಬಿಸಾಡಿ ಒಗೆಯುವ ಕಾಡಾನೆ ವಂಶದ ಕುಡಿಯೇ ಇದು ಎನ್ನುವಷ್ಟು ಆಶ್ಚರ್ಯ ಮೂಡಿಸುವಂತಿದೆ `ಶಿವ~ನ ನಡವಳಿಕೆ. ನೋಡಿದರೆ ಸಾಲದು, ಬೆನ್ನು, ಹಣೆ, ತಲೆ ಸವರಬೇಕು ಎನ್ನುವಷ್ಟು ಕಕ್ಕುಲತೆ ಹುಟ್ಟುತ್ತದೆ!  

ಶಿವನ ಪಯಣ

ಹಾರಂಗಿ ಜಲಾಶಯದ ಹಿನ್ನೀರಿನ ಪ್ರದೇಶವಾದ ಯಡವಾರೆಯಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮರಿಯಾನೆಯೊಂದು ಪತ್ತೆಯಾಗಿತ್ತು. ಇದು ತನ್ನ ತಾಯಿಯಾನೆ ಹಾಗೂ ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ರೋಧಿಸುತ್ತಿತ್ತು.

 

ಅದೃಷ್ಟದಿಂದ ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದಿತು. ಅದನ್ನು ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು, ಅದರ ತಾಯಿಯಾನೆಯನ್ನು ಹುಡುಕುವಲ್ಲಿ ನಿರತರಾದರು.    ಕೆಲದಿನಗಳ ನಂತರ ಅದೇ ಪ್ರದೇಶದಲ್ಲಿ ಆನೆಯ ಹಿಂಡು ಕಾಣಿಸಿತು. ಅದರ ಬಳಿ ಈ ಮರಿಯಾನೆಯನ್ನು ಬಿಟ್ಟು ಬರಲಾಯಿತು. ಆದರೆ ಯಾವ ಆನೆಗಳೂ ಈ ಮರಿಯಾನೆಯನ್ನು ತಬ್ಬಿಕೊಳ್ಳಲಿಲ್ಲ. ಬದಲಾಗಿ, ಸೊಂಡಿಲಿನಿಂದ ತಿವಿದವು.

 

ಪುನಃ ಈ ಮರಿಯಾನೆಯನ್ನು ಅರಣ್ಯಾಧಿಕಾರಿಗಳು ತಮ್ಮ ಬಳಿ ಇರಿಸಿಕೊಂಡರು. ಕೆಲ ದಿನಗಳ ನಂತರ ಈ ಪ್ರದೇಶದಲ್ಲಿ ಹೆಣ್ಣಾನೆಯೊಂದರ ಶವ ಕಣ್ಣಿಗೆ ಬಿತ್ತು. ಅದರ ಮರಣೋತ್ತರ ಪರೀಕ್ಷೆ ಮಾಡಿದಾಗ, ಪ್ರಸವದ ಸಮಯದಲ್ಲಿ ಆದ ತೊಂದರೆಯಿಂದಾಗಿ ಗರ್ಭಕೋಶಕ್ಕೆ ಹಾನಿಯಾಗಿ ಸತ್ತಿದ್ದು ಗೊತ್ತಾಯಿತು. ಯಡವಾರೆಯಲ್ಲಿ ಸಿಕ್ಕಿದ್ದು ಅದರದೇ ಮರಿ ಎಂಬ ನಿರ್ಧಾರಕ್ಕೆ ಬಂದರು. ತಾಯಿ ಇಲ್ಲದೆ ತಬ್ಬಲಿಯಾಗಿದ್ದ ಮರಿಯಾನೆಯನ್ನು ಕುಶಾಲನಗರದ ಬಳಿಯಿರುವ ಆನೆಕಾಡು ಶಿಬಿರಕ್ಕೆ ತಂದು, ಇದನ್ನು ಸಾಕುವಂತೆ ಜೇನುಕುರುಬ ಕುಟುಂಬಕ್ಕೆ ಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry