ಆನೆ ಹಾವಳಿ ತಡೆಗೆ ಕ್ಷಿಪ್ರ ಕಾರ್ಯಪಡೆ

7
5 ಜಿಲ್ಲೆಗಳಲ್ಲಿ ಶೀಘ್ರ ಕಾರ್ಯಾರಂಭ

ಆನೆ ಹಾವಳಿ ತಡೆಗೆ ಕ್ಷಿಪ್ರ ಕಾರ್ಯಪಡೆ

Published:
Updated:

ಬೆಂಗಳೂರು: ಮನುಷ್ಯನ ವಾಸಸ್ಥಳಕ್ಕೆ ನುಗ್ಗಿ ಪುಂಡಾಟ ನಡೆಸುವ ಆನೆಗಳನ್ನು ಮರಳಿ ಕಾಡಿಗೆ ಅಟ್ಟಲು ಐದು ಜಿಲ್ಲಾ ಕೇಂದ್ರಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಆರಂಭವಾಗಲಿದೆ. ಆನೆಗಳ ಹಾವಳಿ ಹೆಚ್ಚಿರುವ ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇದು ಕಾರ್ಯ ಆರಂಭಿಸಲಿದೆ. ಈ ಪಡೆಗೆ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ.ಅಲ್ಲದೆ, ಆನೆ ಕಾರಿಡಾರ್‌ಗಳಲ್ಲಿ ವಿದ್ಯುತ್ ತಂತಿಯು ನೆಲದಿಂದ ಕನಿಷ್ಠ 20 ಅಡಿ ಎತ್ತರದಲ್ಲಿರುವಂತೆ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು ನಿಗಾವಹಿಸಲಿವೆ. ಇನ್ನು ಆರು ತಿಂಗಳಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ. ವಿದ್ಯುತ್ ಕಳ್ಳತನ ತಡೆಯಲು ಸಂಚಾರಿ ದಳಗಳನ್ನು ಸಜ್ಜುಗೊಳಿಸಲಾಗಿದೆ.ಆನೆಗಳ ಅಸಹಜ ಸಾವಿನ ಕುರಿತು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ (ಪಿಐಎಲ್) ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠಕ್ಕೆ ಸರ್ಕಾರ ಈ ವಿಷಯ ಸೋಮವಾರ ತಿಳಿಸಿದೆ.`ವಲಯ ಅರಣ್ಯ ಅಧಿಕಾರಿಗಳು (ಆರ್‌ಎಫ್‌ಒ) ಮತ್ತು ಅದಕ್ಕಿಂತ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಹಣಕಾಸು ವರ್ಷದ ಅಂತ್ಯದ ವೇಳೆ ಖಾಲಿ ಹುದ್ದೆಗಳು ಭರ್ತಿಯಾಗಿರುತ್ತವೆ. ಆನೆಗಳು ಮನುಷ್ಯನ ವಸತಿ ಪ್ರದೇಶಕ್ಕೆ ನುಗ್ಗದಂತೆ ತಡೆಯುವ ಕಾಲುವೆಗಳನ್ನು 2014ರ ಮುಂಗಾರು ಆರಂಭಕ್ಕೆ ಮುನ್ನವೇ ನಿರ್ಮಾಣ ಮಾಡಲಾಗುತ್ತದೆ' ಎಂದು ಸರ್ಕಾರದ ಪರವಾಗಿ ವಕೀಲ ರವೀಂದ್ರ ಜಿ. ಕೊಲ್ಲೆ ಪೀಠಕ್ಕೆ ತಿಳಿಸಿದರು.`ಆನೆಗಳು ದಾಳಿ ನಡೆಸಿದಾಗ, ಮನುಷ್ಯನ ಜೀವ ಮತ್ತು ಆಸ್ತಿ ಕಾಪಾಡಲು ಸಹಾಯವಾಣಿ ಮಾದರಿಯ ವ್ಯವಸ್ಥೆ ಬೇಕು' ಎಂದು ಪೀಠ ಹೇಳಿತು. `ಇಂಥದೊಂದು ವ್ಯವಸ್ಥೆ ಈಗಾಗಲೇ ಇದೆ. ದೂರವಾಣಿ ಕರೆ ಸ್ವೀಕರಿಸಿದ 12 ಗಂಟೆಗಳಲ್ಲಿ, ನಮ್ಮ ತಂಡ ಘಟನಾ ಸ್ಥಳದಲ್ಲಿರುತ್ತದೆ' ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಇದರಿಂದ ಸಮಾಧಾನಗೊಳ್ಳದ ಪೀಠ, `12 ಗಂಟೆ ಸಮಯ ತೆಗೆದುಕೊಂಡರೆ ಆನೆ ಇನ್ನೊಂದು ಕಡೆ ಹೋಗಿರುತ್ತದೆ. ಕರೆ ಸ್ವೀಕರಿಸಿದ ನಾಲ್ಕು ಗಂಟೆ ಒಳಗೆ ನಿಮ್ಮ ಸಿಬ್ಬಂದಿ ಅಲ್ಲಿರುವಂತೆ ಕ್ರಮ ಕೈಗೊಳ್ಳಿ' ಎಂದು ನಿರ್ದೇಶನ ನೀಡಿತು.ದಸರಾಕ್ಕೆ ಪಳಗಿದ ಆನೆಗಳು

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಯಾವ ಆನೆಗೂ ಹಿಂಸೆ ನೀಡುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಸರ್ಕಾರ, `ಜಂಬೂ ಸವಾರಿಗೆ ತರಬೇತಿ ಪಡೆದ 12ರಿಂದ 16 ಆನೆಗಳನ್ನು ವಿವಿಧ ಶಿಬಿರಗಳಿಂದ ಮೈಸೂರಿಗೆ ಕರೆತರಲಾಗುತ್ತದೆ. ಅವುಗಳಿಗೆ ಸಾಕಷ್ಟು ವಿಶ್ರಾಂತಿ, ಪೌಷ್ಟಿಕ ಆಹಾರ ನೀಡಲಾಗುತ್ತದೆ. ಇಲ್ಲಿ ವನ್ಯಜೀವಿಗಳಿಗೆ ಸಂಬಂಧಿಸಿದ ಯಾವುದೇ ಕಾನೂನು ಉಲ್ಲಂಘಿಸುತ್ತಿಲ್ಲ' ಎಂದು ಪೀಠಕ್ಕೆ ತಿಳಿಸಿತು.ಆನೆಯ ಮೇಲೆ ಅಂಬಾರಿ ಹೊರಿಸುವ ಸಂಪ್ರದಾಯವನ್ನು ಕೈಬಿಡಬೇಕು ಎಂದು ಆನೆ ಕಾರ್ಯಪಡೆ ಸದಸ್ಯರಾಗಿದ್ದ ಡಾ. ಸುಕುಮಾರನ್ ಪೀಠವನ್ನು ಕೋರಿದರು.ಇದರಿಂದ ಪ್ರಾಣಿಪ್ರಿಯರು ದಸರಾ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಬರಬಹುದು ಎಂದೂ ಅವರು ಸಲಹೆ ನೀಡಿದರು. ಇದನ್ನು ಪೀಠ ಮಾನ್ಯ ಮಾಡಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry