ಶುಕ್ರವಾರ, ನವೆಂಬರ್ 15, 2019
20 °C

ಆನೆ ಹಾವಳಿ: ರಸ್ತೆ ತಡೆ

Published:
Updated:

ಸಕಲೇಶಪುರ: ತಾಲ್ಲೂಕಿನಲ್ಲಿ ಕಾಡಾನೆಗಳ ದಾಳಿಯಿಂದ ಪದೇ ಪದೇ ಪ್ರಾಣ ಹಾನಿ ಸಂಭವಿಸುತ್ತಿದ್ದರೂ ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಬುಧವಾರ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.



ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ರಾಜ್ಯ ಹಾಗೂ ಕೇಂದ್ರದ ಅರಣ್ಯ ನೀತಿ ವಿರೋಧಿಸಿ ಪ್ರತಿಭಟಿಸಿದರು. ಕಾಡಾನೆಗಳು ವಾಸ ಮಾಡುವ ಪಶ್ಚಿಮಘಟ್ಟದ ದಟ್ಟ ಮಳೆಕಾಡುಗಳನ್ನು ನಾಶ ಮಾಡಿ ಕಿರು ಜಲವಿದ್ಯುತ್ ಯೋಜನೆಗಳನ್ನು ಮಾಡಲಾಗಿದೆ. ಇದರಿಂದ ಕಾಡಾನೆಗಳು ಆಹಾರ ಹಾಗೂ ನೆಲೆ ಹುಡುಕಿಕೊಂಡು ಗ್ರಾಮೀಣ ಪ್ರದೇಶದ ರೈತರ ಜಮೀನುಗಳಿಗೆ ದಾಳಿ ಇಡುತ್ತಿವೆ. ತಾಲ್ಲೂಕಿನ 130ಕ್ಕೂ ಹೆಚ್ಚು ಗ್ರಾಮಗಳಲ್ಲಿ ರೈತರು ಭತ್ತ ಬೆಳೆಯುವುದನ್ನು ನಿಲ್ಲಿಸಿದ್ದಾರೆ.



ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆದ ಬೆಳೆ ಆನೆ ದಾಳಿಗೆ ತುತ್ತಾಗುತ್ತಿರುವುದರಿಂದ ಮಲೆನಾಡಿನ ರೈತರ ಬದುಕು ತೀವ್ರ ಕಷ್ಟದಲ್ಲಿದೆ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹೇಳಿದರು.

ಆನೆ ದಾಳಿಯಿಂದ ಮೃತಪಟ್ಟವರ ಸಂಖ್ಯೆ 35ರ ಗಡಿ ದಾಟಿದೆ. ಆನೆ ದಾಳಿಯಿಂದ ಮೃತಪಟ್ಟ ವನಜಾಕ್ಷಿ ಕುಟುಂಬಕ್ಕೆ ಸರ್ಕಾರ ಕೂಡಲೆ 5 ಲಕ್ಷ ರೂಪಾಯಿ ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು.



ಪ್ರತಿಭಟನೆಯಲ್ಲಿ ಜಿಪಂ ಸದಸ್ಯರಾದ ಬೈರಮುಡಿ ಚಂದ್ರು, ಮಂಜಮ್ಮ, ಪುರಸಭಾ ಅಧ್ಯಕ್ಷ ಎಸ್.ಡಿ. ಆದರ್ಶ, ಮಾಜಿ ಅಧ್ಯಕ್ಷರಾದ ಮಲ್ನಾಡ್ ಜಾಕೀರ್, ಇಬ್ರಾಹಿಂ ಯಾದ್‌ಗಾರ್, ಎಪಿಎಂಸಿ ಅಧ್ಯಕ್ಷ ಉದಯ್, ತಾ.ಪಂ. ಸದಸ್ಯರು ಮಾಜಿ ಸದಸ್ಯ ಬೆಕ್ಕನಹಳ್ಳಿ ನಾಗರಾಜ್ ಮುಂತಾದವರು ಇದ್ದರು.

 

ಪ್ರತಿಕ್ರಿಯಿಸಿ (+)