ಸೋಮವಾರ, ಮೇ 17, 2021
30 °C

ಆನೇಕಲ್: ಇಂದು ದ್ರೌಪತಮ್ಮ ಹಸಿಕರಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ಪಟ್ಟಣದ ಧರ್ಮರಾಯಸ್ವಾಮಿ ದ್ರೌಪತಮ್ಮ ಹಸಿಕರಗ ಮಹೋತ್ಸವ ಶುಕ್ರವಾರ ರಾತ್ರಿ ನಡೆಯಲಿದೆ. ಉತ್ಸವದ ಅಂಗವಾಗಿ ವಹ್ನಿ ಕುಲಸ್ಥರು ಪೂರ್ವಸಿದ್ದತೆಗಳನ್ನು ಮಾಡಿಕೊಂಡಿದ್ದು ಮಂಗಳವಾರ ರಾತ್ರಿ ದೇವಾಲಯದಲ್ಲಿ ಕುಡಿಕಟ್ಟುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿಲಾಯಿತು. ಈ ಬಾರಿಯೂ ಕರಗ ಹೊರಲಿರುವ ಚಂದ್ರಪ್ಪ ಅವರು ದೀಕ್ಷೆ ತೊಟ್ಟು ದೇವಾಲಯದ ವಿಗ್ರಹಗಳಿಗೆ ಪೂಜೆ ಸಲ್ಲಿಸಿದರು.ದೇವಾಲಯ ಮುಂಭಾಗದ ಸಂತೆಬೀದಿಯಲ್ಲಿ ವೀರವಸಂತರಾಯನ ಮೂರ್ತಿ ಪ್ರತಿಷ್ಟಾಪನೆಗಾಗಿ ಗುರುವಾರ ಸಿದ್ದತೆ ನಡೆದಿತ್ತು. ಶುಕ್ರವಾರ ರಾತ್ರಿ 2ಗಂಟೆ ವೇಳೆಗೆ ದೇವಾಲಯದಿಂದ ಹಸಿ ಕರಗ ಹೊರಬರುವುದು. ಪಟ್ಟಣದ ಶಂಕರಮಠದಲ್ಲಿ ಪೂಜೆ ಸಲ್ಲಿಸಿ ನಂತರ ವೀರವಸಂತರಾಯನ ಮೂರ್ತಿಯ ಬಳಿಗೆ ಬಂದು ಪಟ್ಟಣದ ವಿವಿಧ ಬೀದಿಗಳಲ್ಲಿ ಸಾಗಿ ಮುಂಜಾನೆ ದೇವಾಲಯ ಹಿಂತಿರುಗುವುದು.ಶನಿವಾರ (ಏ.07) ಅಂದು ಅರ್ಜುನ ತಪಸ್ಸು ಮರ ಏರುವುದು ಹಾಗೂ ನಾಲ್ಕು ಗಂಟೆಗೆ ರಥೋತ್ಸವ ನಡೆಯಲಿದೆ. ಭಾನುವಾರ(ಏ.08) ವೀರ ಅಭಿಮನ್ಯು ಪದ್ಮವ್ಯೆಹ ಭೇದಿಸುವುದು ಅಥವಾ ಕೋಟೆಜಗಳ ಕಾರ್ಯಕ್ರಮ ನಡೆಯಲಿದೆ. ಸೋಮವಾರ (ಏ.09) ರಾತ್ರಿ ಒಣ ಕರಗ ಮತ್ತು ಅಗ್ನಿಕುಂಡ ಪ್ರವೇಶ ನಡೆಯಲ್ಲಿದ್ದು ಅಂದು ವೀರ ವಂಸತರಾಯನ ಶಿರಚ್ಛೇದನ ಮಾಡಲಾಗುವುದು ನಂತರ ಕರಗವು ವಹ್ನಿ ಕುಲಸ್ಥರ ಮನೆಗಳ ಬಳಿಗೆ ಬಂದು ಮಡಿಲು ತುಂಬಿಸಿಕೊಳ್ಳುತ್ತದೆ ಎಂದು ವಹ್ನಿಕುಲ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ರಾಮಯ್ಯ ತಿಳಿಸಿದರು.ಏನಿದು ಕೋಟೆ ಜಗಳ: ಕರಗ ಮಹೋತ್ಸವದ ಸಂದರ್ಭದಲ್ಲಿ ಪಟ್ಟಣದಲ್ಲಿ ನಡೆಯುವ ಒಂದು ವಿಶೇಷ ಧಾರ್ಮಿಕ ಆಚರಣೆ ಕೋಟೆಜಗಳ. ಪಾಂಡವರು ಹಾಗೂ ಕೌರವರ ನಡು ವೆ ನಡೆದ ಕುರುಕ್ಷೇತ್ರ ಯುದ್ದದ ಸ್ಮರಣೆ. ಯುದ್ದದ ಅಂತ್ಯದಲ್ಲಿ ಪ್ರತ್ಯಕ್ಷವಾಗುವ ರಣಕಾಳಿ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸುವ ಸಂಕೇತ ಇದಾಗಿದೆ. ಕೌರವರು ರಚಿಸಿದ ಪದ್ಮವ್ಯೆಹವನ್ನು ವೀರ ಅಭಿಮನ್ಯ ಭೇದಿಸುವ ಕಲ್ಪನೆ ಸಹ ಈ ಆಚರಣೆಯಲ್ಲಿದೆ. ಮರದಿಂದ ಕೋಟೆಯಂತೆ ಕಟಕಟೆ ಕಟ್ಟಿ ಒಳಭಾಗದ 4 ಮೂಲೆಗಳಲ್ಲಿ ಯುವಕರನ್ನು ಶವಗಳಂತೆ ಮಲಗಿಸಿ ಮೈಮೇಲೆ ಬಿಳಿ ಪಂಚೆ ಹೊದಿಸಲಾಗಿರುತ್ತದೆ.ರಣಕಾಳಿ ವೇಷಧಾರಿ ಕೋಟೆಯ ಸುತ್ತ ಸುತ್ತುತ್ತಿರುತ್ತಾನೆ ಈ ಸಂದರ್ಭದಲ್ಲಿ ಮೇಕೆಯೊಂದನ್ನು ಬಲಿ ನೀಡಿ ನಂತರ ಅದರ ದೇಹವನ್ನು ಸೀಳಿ ಶ್ವಾಸಕೋಶವನ್ನು ವೇಷಧಾರಿ ಬಾಯಿಯಲ್ಲಿ ಕಚ್ಚಿಕೊಂಡು ಕೈಯಲ್ಲಿ ಪೊರಕೆ ಮತ್ತು ಮೊರ ಹಿಡಿದು ನೆರೆದ ಭಕ್ತರ ತಲೆಯ ಚಚ್ಚುತ್ತಾನೆ.

 

ಪೊರಕೆ ಮೊರದಲ್ಲಿ ಏಟು ತಿಂದರೆ ಒಳ್ಳೆಯದು ಎಂಬ ಭಾವನೆಯಿದ್ದು ಏಟು ತಿನ್ನಲೆಂದೇ ಸಾವಿರಾರು ಜನ ಸೇರುತ್ತಾರೆ. ಏಟಿಗೆ ಪ್ರತಿಯಾಗಿ ವೇಷಧಾರಿಯ ಜೊತೆಯಲ್ಲಿರುವ ಮಕರಂದನಿಗೆ ಹಣ ನೀಡುವ ಪದ್ದತಿಯಿದೆ. ಈ ಕೋಟೆ ಜಗಳ ಭಾನುವಾರ(ಏ.08) ಪಟ್ಟಣದ ಸಂತೆ ಮೈದಾನದಲ್ಲಿ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.