ಗುರುವಾರ , ಅಕ್ಟೋಬರ್ 17, 2019
26 °C

ಆನ್‌ಲೈನ್‌ನಲ್ಲಿ ಕೋರ್ಸ್‌ಗಳ ಅಧ್ಯಯನ

Published:
Updated:

1991ರಲ್ಲಿ ಜಾಗತೀಕರಣಕ್ಕೆ ಹೆಬ್ಬಾಗಿಲು ತೆರೆದ ನಂತರ ಭಾರತಕ್ಕೆ ಬಹುರಾಷ್ಟ್ರೀಯ ಕಂಪೆನಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಗ್ಗೆ ಇಟ್ಟವು. ಜೊತೆಗೇ ದೇಶದ ಯುವ ಜನತೆಗೆ ಉದ್ಯೋಗಾವಕಾಶಗಳ ಗಣಿಯನ್ನೂ ತೆರೆದಿಟ್ಟವು. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪೂರೈಸಿದ್ದರೂ ಕೆಲಸ ಸಿಗದ ಕಾಲ ಮುಗಿದು, ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿ ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಇದ್ದವರು ಆಕರ್ಷಕ ಸಂಬಳ ಬರುವ ಕೆಲಸ ಗಿಟ್ಟಿಸಿಕೊಳ್ಳತೊಡಗಿದರು.ಪದವಿ ಮುಗಿಸಿದ ನಂತರ ಸ್ನಾತಕೋತ್ತರ ಪದವಿ ಓದಬೇಕೆಂಬ ಆಸೆ ಇದ್ದ ಅನೇಕರು ಇದೇ ಸಂದರ್ಭದಲ್ಲಿ ಉದ್ಯೋಗದತ್ತ ಮುಖ ಮಾಡಿದ್ದುಂಟು. ಅಂಥವರು ಸ್ನಾತಕೋತ್ತರ ಪದವಿ ಪೂರೈಸುವ ಆಸೆಗೆ ಎಳ್ಳು ನೀರು ಬಿಟ್ಟ ನಿದರ್ಶನಗಳು ಸಾಕಷ್ಟಿವೆ. ಪದವಿಯ ನಂತರ ಉದ್ಯೋಗ ಅರಸಿ ಹೋಗುವ ಪ್ರವೃತ್ತಿ ಇವತ್ತಿಗೂ ಇದೆ, ಆದರೆ ಉನ್ನತ ಶಿಕ್ಷಣದ ಆಸೆಯನ್ನು ಸುಡಬೇಕಾದ ಅನಿವಾರ್ಯತೆ ಮಾತ್ರ ಖಂಡಿತ ಇಲ್ಲ! ಅಂಚೆ ತೆರಪಿನ ಮೂಲಕ ಮಾತ್ರವಲ್ಲದೆ, ಆನ್‌ಲೈನ್ ಮೂಲಕವೂ ಈಗ ವಿವಿಧ ಕೋರ್ಸ್‌ಗಳನ್ನು ಅಧ್ಯಯನ ಮಾಡುವ ಅವಕಾಶಗಳು ತೆರೆದುಕೊಳ್ಳುತ್ತಿವೆ.ಬೆಂಗಳೂರು ಮೂಲದ `ಅವಾಗ್ಮಾ ಆನ್‌ಲೈನ್ ಸ್ಕೂಲ್~ ಕೂಡ ವಿವಿಧ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಅಂತರ್ಜಾಲದ ಮೂಲಕ ನೀಡುತ್ತಿದೆ. ಈ ಕುರಿತು `ಅವಾಗ್ಮಾ~ ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿತ್ತು.ಲಾಭ ಏನು?: ಅಂಚೆ ತೆರಪಿನ ಶಿಕ್ಷಣಕ್ಕೂ ಆನ್‌ಲೈನ್ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸಗಳಿಗೆ. ಮೇಲ್ನೋಟಕ್ಕೆ ಕಾಣುವಂತೆ ಸಾಕಷ್ಟು ಲಾಭಗಳೂ ಇವೆ. ಅಂಚೆಯ ಮೂಲಕ ನಿರ್ದಿಷ್ಟ ಕೋರ್ಸ್‌ನ ಪಠ್ಯಗಳನ್ನು ಪಡೆದುಕೊಂಡು, ಅದನ್ನು ಅಭ್ಯಾಸ ಮಾಡಿ ಪರೀಕ್ಷೆ ಬರೆಯುವುದು ದಶಕಗಳಿಂದ ನಡೆದುಕೊಂಡು ಬಂದಿರುವ ಕ್ರಮ. ಅಧ್ಯಯನ ಅವಶ್ಯಕತೆಗಳಿಗೆ ತಕ್ಕಂತೆ ದೂರ ಶಿಕ್ಷಣ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಆಗಾಗ ಉಪನ್ಯಾಸ ಏರ್ಪಡಿಸುವ ಪದ್ಧತಿಯೂ ಇದರಲ್ಲಿದೆ.ಆದರೆ ಆನ್‌ಲೈನ್ ಕೋರ್ಸ್‌ಗಳಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಇರುತ್ತದೆ. ಕೋರ್ಸ್‌ನ ಪಠ್ಯಕ್ರಮಕ್ಕೆ ಅಗತ್ಯವಿರುವ ಪುಸ್ತಕಗಳನ್ನೂ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಅಲ್ಲದೆ, ಕಾಲಕಾಲಕ್ಕೆ ಅಗತ್ಯ ಅಧ್ಯಯನ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ಇ-ಮೇಲ್ ಮೂಲಕ ಕಳುಹಿಸಲಾಗುತ್ತದೆ.`ನಮ್ಮ ಮೂಲಕ ಆನ್‌ಲೈನ್ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನೀಡಲಾಗುತ್ತದೆ. ಪಠ್ಯಕ್ರಮದಲ್ಲಿರುವ ವಿವಿಧ ವಿಷಯಗಳ ಕುರಿತು ನುರಿತ ಅಧ್ಯಾಪಕರಿಂದ ಆನ್‌ಲೈನ್ ಮೂಲಕ ಉಪನ್ಯಾಸ ನೀಡಲಾಗುತ್ತದೆ. ಈ ಉಪನ್ಯಾಸ ಪ್ರಸಾರವಾಗುವ ಸಮಯವನ್ನು ವಿದ್ಯಾರ್ಥಿಗಳಿಗೆ ಇ-ಮೇಲ್ ಮೂಲಕ ಮೊದಲೇ ತಿಳಿಸಲಾಗುತ್ತದೆ.ವಿದ್ಯಾರ್ಥಿ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಕಂಪ್ಯೂಟರ್ ಪರದೆಯ ಮೂಲಕ ಉಪನ್ಯಾಸ ಆಲಿಸಬಹುದು~ ಎನ್ನುತ್ತಾರೆ `ಅವಾಗ್ಮಾ ಆನ್‌ಲೈನ್ ಸ್ಕೂಲ್~ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆ.ಎಸ್. ಕಾರ್ತಿಕ್ ಅವರು.ಉಪನ್ಯಾಸಗಳನ್ನು ಇಂಟರ್ನೆಟ್ ಮೂಲಕ ನೇರಪ್ರಸಾರ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನುಮಾನಗಳನ್ನು ಉಪನ್ಯಾಸಕರ ಮುಂದಿಟ್ಟು ತಕ್ಷಣ ಬಗೆಹರಿಸಿಕೊಳ್ಳಬಹುದು. ಉಪನ್ಯಾಸಕರ ಜೊತೆ ನೇರವಾಗಿ ಸಂವಾದಿಸಲು ಅವಕಾಶ ಇದೆ.ನೇರ ಪ್ರಸಾರದ ಸಂದರ್ಭದಲ್ಲಿ ಉಪನ್ಯಾಸವನ್ನು ವೀಕ್ಷಿಸಲು ಸಾಧ್ಯವಾಗದಿದ್ದರೂ ವಿದ್ಯಾರ್ಥಿಗಳು ಚಿಂತಿಸುವ ಅಗತ್ಯವಿಲ್ಲ. ಪ್ರತಿಯೊಂದು ಉಪನ್ಯಾಸವೂ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಯಾವುದೇ ಉಪನ್ಯಾಸವನ್ನು ಬೇಕೆನಿಸಿದಾಗ ಕೇಳಬಹುದು ಎಂದು ಕಾರ್ತಿಕ್ ಹೇಳುತ್ತಾರೆ.ಅಣ್ಣಾಮಲೈ ವಿ.ವಿ. ಪ್ರಮಾಣಪತ್ರ:

ವಿವಿಧ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಪಠ್ಯಕ್ರಮವನ್ನು ಆನ್‌ಲೈನ್ ಶಿಕ್ಷಣದ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿರುವುದು `ಅವಾಗ್ಮಾ~ ಆಗಿದ್ದರೂ, ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿರುವುದು ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯ ನಿಗದಿ ಮಾಡುವ ಕೇಂದ್ರಗಳಲ್ಲಿ ಮಾತ್ರ.ಯಾವ ಪರೀಕ್ಷೆಯನ್ನೂ ಆನ್‌ಲೈನ್ ಮೂಲಕ ಬರೆಯಲು ಅವಕಾಶ ಇಲ್ಲ. ಹಾಗೆಯೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ದೊರೆಯುವುದು ಅಣ್ಣಾಮಲೈ ವಿ.ವಿ.ಯಿಂದ. ಕೆಲವು ಕೋರ್ಸ್‌ಗಳಿಗೆ ಥಾಪರ್ ವಿಶ್ವವಿದ್ಯಾಲಯದ ಜೊತೆಗೂ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಾರ್ತಿಕ್ ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗೆ ಅವಾಗ್ಮಾ ಅವರ (www.avagmah.org) ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

 

 

Post Comments (+)