ಆನ್‌ಲೈನ್ ಅವಾಂತರ: ಅರ್ಜಿ ಸಲ್ಲಿಕೆಗೆ ಪರದಾಟ

7

ಆನ್‌ಲೈನ್ ಅವಾಂತರ: ಅರ್ಜಿ ಸಲ್ಲಿಕೆಗೆ ಪರದಾಟ

Published:
Updated:

ಬೆಂಗಳೂರು: ಆನ್‌ಲೈನ್ ಅವಾಂತರದಿಂದಾಗಿ ಉಪನ್ಯಾಸಕರು ಮತ್ತು ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪರದಾಡುವಂತಾಗಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 1,764 ಉಪನ್ಯಾಸಕರು ಮತ್ತು ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ 3,500 ಶಿಕ್ಷಕರ ಹುದ್ದೆಗಳ ಭರ್ತಿಗೆ ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡುವ ಜವಾಬ್ದಾರಿ ಹೊತ್ತಿದ್ದು, ಇಲಾಖೆ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಕಳೆದ ತಿಂಗಳ ಮೂರನೇ ವಾರದಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಆದರೆ, ಆನ್‌ಲೈನ್ ಸಮಸ್ಯೆಯಿಂದಾಗಿ ಇದುವರೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಹಲವು ಅಭ್ಯರ್ಥಿಗಳು ದೂರಿದರು.`ಈ ಮುಂಚೆ ಆನ್‌ಲೈನ್‌ನಲ್ಲಿ ಅರ್ಜಿ `ಓಪನ್~ ಆಗುತ್ತಿತ್ತು. ಆದರೆ, ಭರ್ತಿ ಮಾಡಿದ ನಂತರ ಅಪ್‌ಲೋಡ್ ಆಗುತ್ತಿರಲಿಲ್ಲ. ಈಗ ಅರ್ಜಿಯೇ `ಓಪನ್~ ಆಗುತ್ತಿಲ್ಲ. ಇಡೀ ದಿನ ಪ್ರಯತ್ನ ಮಾಡಿದರೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ~ ಎಂದು ಉಪನ್ಯಾಸಕ ಹುದ್ದೆಯ ಆಕಾಂಕ್ಷಿಯಾಗಿರುವ ಶಿವಣ್ಣ ಆಕ್ರೋಶ ವ್ಯಕ್ತಪಡಿಸುತ್ತಾರೆ.ಅರ್ಜಿ ಸಲ್ಲಿಸಲು ಉಪನ್ಯಾಸಕರ ಹುದ್ದೆಗೆ ಇದೇ 15 ಮತ್ತು ಶಿಕ್ಷಕರ ಹುದ್ದೆಗೆ 16 ಕೊನೆಯ ದಿನ. ಅರ್ಜಿ ಅಪ್‌ಲೋಡ್ ಆದ ನಂತರ ಬ್ಯಾಂಕ್ ಚಲನ್ ಪ್ರತಿ ಲಭ್ಯವಾಗುತ್ತದೆ. ಅದನ್ನು ಬ್ಯಾಂಕಿಗೆ ತೆಗೆದುಕೊಂಡು ಹೋಗಿ ಶುಲ್ಕ ಪಾವತಿಸಬೇಕು.

 

ಇದಾದ ನಂತರ ಬ್ಯಾಂಕಿನವರು ನೀಡುವ ಚಲನ್ ನಂಬರ್ ಅನ್ನು ಮತ್ತೆ ಅರ್ಜಿಯಲ್ಲಿ ನಮೂದಿಸಬೇಕು. ಅರ್ಜಿ ಸಲ್ಲಿಸುವ ದೃಷ್ಟಿಯಿಂದ ಕೆಲಸಕ್ಕೆ ರಜೆ ಹಾಕಿ ದಿನವಿಡೀ ಪ್ರಯತ್ನ ಮಾಡಿದರೂ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಸಹಾಯವಾಣಿಗೆ ದೂರವಾಣಿ ಕರೆ ಮಾಡಿದರೆ ಯಾರೂ ಸ್ವೀಕರಿಸುವುದಿಲ್ಲ ಎಂದು ಮತ್ತೊಬ್ಬ ಆಕಾಂಕ್ಷಿ ಮಂಜುನಾಥ್ ಬೇಸರ ವ್ಯಕ್ತಪಡಿಸುತ್ತಾರೆ.ಸರ್ವರ್ ದೋಷದಿಂದಾಗಿ ಈ ರೀತಿ ಆಗಿದೆ. ಈಗಾಗಲೇ ಬಂದಿರುವ ಅರ್ಜಿಗಳನ್ನು ಬೇರೆ ಸರ್ವರ್‌ಗೆ ವರ್ಗಾಯಿಸಲಾಗುತ್ತಿದೆ. ಸೋಮವಾರದ ವೇಳೆಗೆ ಸಮಸ್ಯೆ ಬಗೆಹರಿಯಲಿದೆ ಎಂದು ಕೇಂದ್ರೀಕೃತ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ದಾಖಲೆಗಳ ಕಿರಿಕಿರಿ: ವಿವಿಧ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಮೊದಲೇ `ಗ್ರಾಮೀಣ ಅಭ್ಯರ್ಥಿ~, `ಕನ್ನಡ ಮಾಧ್ಯಮ ಅಭ್ಯರ್ಥಿ~, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇತ್ಯಾದಿಗಳನ್ನು ಪಡೆದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಆದರೆ, ಈಗ ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ `ಕನ್ನಡ ಮಾಧ್ಯಮ ಅಭ್ಯರ್ಥಿ~, `ಗ್ರಾಮೀಣ ಅಭ್ಯರ್ಥಿ~ ಪ್ರಮಾಣ ಪತ್ರಗಳನ್ನು ಪಡೆಯಲು ತೊಂದರೆಯಾಗಿದೆ. ರಜೆಯಲ್ಲಿ ಶಿಕ್ಷಕರು ಶಾಲೆಗೆ ಬರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರಮಾಣ ಪತ್ರ ಪಡೆಯಲು ಹೇಗೆ ಸಾಧ್ಯ ಎಂಬುದು ಅಭ್ಯರ್ಥಿಗಳ ಪ್ರಶ್ನೆ.ಇದೇ 30ಕ್ಕೆ ಶಾಲೆಗಳು ಪುನರಾರಂಭವಾಗಲಿದ್ದು, ಆ ನಂತರವೇ ಪ್ರಮಾಣ ಪತ್ರಗಳನ್ನು ಪಡೆಯಲು ಸಾಧ್ಯ. ಆದ್ದರಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಮೊದಲೇ ಪ್ರಮಾಣ ಪತ್ರಗಳನ್ನು ಪಡೆದಿರಬೇಕು ಎಂಬ ನಿಯಮ ಸಡಿಲಿಸಬೇಕು ಎಂಬುದು ಅಭ್ಯರ್ಥಿಗಳ ಆಗ್ರಹವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry