ಆನ್‌ಲೈನ್ ಕೌನ್ಸೆಲಿಂಗ್: ತಪ್ಪಲಿದೆ ಅಲೆದಾಟ

7

ಆನ್‌ಲೈನ್ ಕೌನ್ಸೆಲಿಂಗ್: ತಪ್ಪಲಿದೆ ಅಲೆದಾಟ

Published:
Updated:
ಆನ್‌ಲೈನ್ ಕೌನ್ಸೆಲಿಂಗ್: ತಪ್ಪಲಿದೆ ಅಲೆದಾಟ

ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್ ಕೌನ್ಸೆಲಿಂಗ್ ಪದ್ಧತಿ ಜಾರಿಗೆ ಬಂದಿರುವುದರಿಂದ ವಿದ್ಯಾರ್ಥಿಗಳು, ಪೋಷಕರು ಪದೇ ಪದೇ ಕೌನ್ಸೆಲಿಂಗ್ ಕೇಂದ್ರಗಳಿಗೆ ಅಲೆಯುವುದು ತಪ್ಪಲಿದೆ.ಆನ್‌ಲೈನ್ ಕೌನ್ಸೆಲಿಂಗ್ ವಿದ್ಯಾರ್ಥಿ ಸ್ನೇಹಿಯಾಗಿದ್ದು, ಮನೆಯಲ್ಲಿ ಕುಳಿತು ತಾವು ಬಯಸುವ ಕೋರ್ಸ್‌ನ ಸೀಟು ಆಯ್ಕೆ ಮಾಡಿಕೊಳ್ಳಬಹುದು. ಕೌನ್ಸೆಲಿಂಗ್ ಆರಂಭಕ್ಕೂ ಮುನ್ನ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ. ಆಗ ಮಾತ್ರ ವಿದ್ಯಾರ್ಥಿಗಳು ಸಹಾಯವಾಣಿ ಕೇಂದ್ರಗಳಿಗೆ ಭೇಟಿ ನೀಡಬೇಕಾಗುತ್ತದೆ.ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಇದೇ 25ರಿಂದ ಆರಂಭವಾಗಲಿದೆ. ನಗರದ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಸೇರಿದಂತೆ ರಾಜ್ಯದ ವಿವಿಧೆಡೆ 13 ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. 25ರಿಂದ ಆರಂಭವಾಗುವ ಪರಿಶೀಲನಾ ಕಾರ್ಯ ಜುಲೈ 11ಕ್ಕೆ ಮುಕ್ತಾಯವಾಗಲಿದೆ.ಆಯ್ಕೆ ಗುರುತಿಸುವಿಕೆ: ಮೂಲ ದಾಖಲಾತಿಗಳ ಪರಿಶೀಲನೆ ಪ್ರಕ್ರಿಯೆ ಮುಕ್ತಾಯವಾದ ಬೆನ್ನಲ್ಲೇ ಅಂದರೆ ಜುಲೈ 12ರಿಂದ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ತಮಗೆ ಬೇಕಾದ ಕಾಲೇಜು, ಕೋರ್ಸ್, ವಿಭಾಗವನ್ನು ಆದ್ಯತೆ ಮೇಲೆ ಗುರುತಿಸಬೇಕು. ಈ ರೀತಿ ಗುರುತಿಸಲು ಜುಲೈ 18ರವರೆಗೂ ಅವಕಾಶ ಇದೆ.ಜುಲೈ 19ರಿಂದ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಪೂರ್ವಾಭ್ಯಾಸ ಪ್ರಕ್ರಿಯೆ ನಡೆಯಲಿದೆ. ಮೊದಲ ಬಾರಿಗೆ ಆನ್‌ಲೈನ್ ಪದ್ಧತಿ ಜಾರಿಯಾಗಿದೆ. ವಿದ್ಯಾರ್ಥಿಗಳಿಗೆ ಹೇಗೆ ಸೀಟು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಗೊತ್ತಾಗಲಿ ಎಂಬ ದೃಷ್ಟಿಯಿಂದ `ಅಣಕು~ ಹಂಚಿಕೆಗೆ ಅವಕಾಶ ನೀಡಲಾಗಿದೆ.ಸೀಟು ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತದೆ, ಪ್ರವೇಶ ಬಯಸುವ ಕಾಲೇಜು, ಕೋರ್ಸ್‌ನ ಆದ್ಯತೆಗಳನ್ನು ಗುರುತಿಸುವುದು ಹೇಗೆ ಎಂಬುದು ವಿದ್ಯಾರ್ಥಿಗಳಿಗೆ ಗೊತ್ತಾಗಲಿ ಎಂಬ ಕಾರಣಕ್ಕೆ ಅಣಕು ಹಂಚಿಕೆ ಪ್ರಕ್ರಿಯೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ವಿ.ರಶ್ಮಿ ತಿಳಿಸಿದರು.ಈ ಸುತ್ತಿನಲ್ಲಿ ಗುರುತಿಸುವ   ಕೋರ್ಸ್, ಕಾಲೇಜಿನ ಆದ್ಯತೆಯಲ್ಲಿ ಬದಲಾವಣೆ ಮಾಡಲು ಜುಲೈ 21ರಿಂದ ಅವಕಾಶ ಇರುತ್ತದೆ. ನಿಜವಾದ ಸೀಟು ಹಂಚಿಕೆ ಪ್ರಕ್ರಿಯೆ ಜುಲೈ 23ರಿಂದ ನಡೆಯಲಿದೆ. ಸೀಟು ಖಾತರಿಯಾಗಿರುವುದನ್ನು ಜುಲೈ 25ರಂದು ಪ್ರಕಟಿಸಲಾಗುತ್ತದೆ. ಜುಲೈ ಅಂತ್ಯಕ್ಕೆ ಮೊದಲ ಸುತ್ತಿನ ಕೌನ್ಸೆಲಿಂಗ್ ಮುಕ್ತಾಯವಾಗಲಿದೆ. ಆಗಸ್ಟ್ ಮೊದಲ ವಾರ ಎರಡನೇ ಸುತ್ತಿನ ಕೌನ್ಸೆಲಿಂಗ್ ಆರಂಭವಾಗಲಿದೆ.ಸೀಟು ಹಂಚಿಕೆ ಪಟ್ಟಿ: ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳ ಸೀಟು ಹಂಚಿಕೆ ಪಟ್ಟಿ ಇನ್ನೂ ಲಭ್ಯವಾಗಿಲ್ಲ. ಜುಲೈ 5ರ ಒಳಗೆ ಸೀಟು ಹಂಚಿಕೆ ಪಟ್ಟಿ ನೀಡುವಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ಭಾರತೀಯ ವೈದ್ಯಕೀಯ ಮಂಡಳಿಗೆ ಮನವಿ ಮಾಡಲಾಗಿದೆ. ಒಮ್ಮೆಗೆ ಸೀಟು ಹಂಚಿಕೆ ಪಟ್ಟಿ ದೊರೆತರೆ ಕೌನ್ಸೆಲಿಂಗ್‌ಗೆ ಅನುಕೂಲವಾಗುತ್ತದೆ ಎಂದು ರಶ್ಮಿ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry