ಆನ್‌ಲೈನ್ ಪಡಿತರ ಚೀಟಿ

7

ಆನ್‌ಲೈನ್ ಪಡಿತರ ಚೀಟಿ

Published:
Updated:

ಬೆಂಗಳೂರು: ಕಂಪ್ಯೂಟರ್ ಮೌಸ್‌ನ ಗುಂಡಿಯನ್ನು ಒತ್ತಿ ಪಡಿತರ ಚೀಟಿ (ಎಪಿಎಲ್ ಕಾರ್ಡ್ ಮಾತ್ರ) ಪಡೆದುಕೊಳ್ಳುವ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ.

ನಕಲಿ ಕಾರ್ಡ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ಪಡಿತರ ಚೀಟಿ ವಿತರಿಸುವ ವ್ಯವಸ್ಥೆಯನ್ನು ಪರಿಚಯಿಸುವ ಕಾರ್ಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತೊಡಗಿದ್ದು, ಈ ವ್ಯವಸ್ಥೆ ಜಾರಿಗೆ ಬಂದ ನಂತರ ಪಡಿತರ ಚೀಟಿ ಪಡೆದುಕೊಳ್ಳಬಯಸುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿದಾರರು ವಿದ್ಯುತ್ ಸರಬರಾಜು ನಿಗಮದಿಂದ ಪಡೆದಿರುವ ಕಂದಾಯ ನೋಂದಣಿ (ಆರ್‌ಆರ್) ಸಂಖ್ಯೆಯನ್ನೂ ಅರ್ಜಿಯಲ್ಲಿ ನಮೂದಿಸಬೇಕು. ಆನ್‌ಲೈನ್ ಅರ್ಜಿಗಳು ಇಲಾಖೆಯ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ದೊರೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆರ್‌ಆರ್ ಸಂಖ್ಯೆ ಮತ್ತು ಅರ್ಜಿಯನ್ನು ಪರಿಶೀಲಿಸಿದ ನಂತರ ಅರ್ಜಿದಾರರು ಸಲ್ಲಿಸಿದ ಆರ್‌ಆರ್ ಸಂಖ್ಯೆಗೆ ಬೇರೆ ಯಾರೂ ಪಡಿತರ ಚೀಟಿ ಪಡೆದುಕೊಳ್ಳದೇ ಇದ್ದಲ್ಲಿ, ಆ ಅರ್ಜಿದಾರರಿಗೆ ಪಡಿತರ ಚೀಟಿ ನೀಡಲು ಇಲಾಖೆ ಕೂಡಲೇ ಅನುಮತಿ ನೀಡಲಿದೆ. ಪಡಿತರ ಚೀಟಿ ಅಂಚೆ ಮೂಲಕ ಅರ್ಜಿದಾರರ ಮನೆ ತಲುಪಲಿದೆ.ನಿರ್ದಿಷ್ಟ ಆರ್‌ಆರ್ ಸಂಖ್ಯೆಯೊಂದಕ್ಕೆ ಈಗಾಗಲೇ ಪಡಿತರ ಚೀಟಿ ವಿತರಣೆಯಾಗಿದ್ದು ಕಂಡುಬಂದಲ್ಲಿ, ಇಲಾಖೆಯು ಸೂಕ್ತ ತಪಾಸಣೆ ನಡೆಸಲಿದೆ. ಅರ್ಜಿಯಲ್ಲಿ ನೀಡಿರುವ ಮಾಹಿತಿ ನಿಜವಾಗಿದೆ ಎಂದು ಕಂಡುಬಂದಲ್ಲಿ ಪಡಿತರ ಚೀಟಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.ಇಲಾಖೆಯು ಸದ್ಯ ಆರ್‌ಆರ್ ಸಂಖ್ಯೆಗಳ ಮಾಹಿತಿ ಕೋಶವನ್ನು ಅಭಿವೃದ್ಧಿಪಡಿಸುತ್ತಿದ್ದು ಈಗಾಗಲೇ ಬಳಕೆಯಲ್ಲಿರುವ ಪಡಿತರ ಚೀಟಿಗಳನ್ನು ಪರಿಶೀಲಿಸಲಾಗುತ್ತಿದೆ. ಬೆಂಗಳೂರಿನ ರಾಷ್ಟ್ರೀಯ ಮಾಹಿತಿ ಕೇಂದ್ರ ಆನ್‌ಲೈನ್ ಅರ್ಜಿ ಸಲ್ಲಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry