ಭಾನುವಾರ, ಮೇ 22, 2022
29 °C

ಆಪರೇಷನ್ ಎಕ್ಸಲೆನ್ಸ್ ಲಂಡನ್ 2012ಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ‘ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಚೀನಾದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು ತೋರಿದ ಪ್ರದರ್ಶನವನ್ನು 2012ರ ಒಲಿಂಪಿಕ್‌ನಲ್ಲಿಯೂ ಪುನರಾವರ್ತಿಸಬೇಕು’ ಎಂದು ಕೇಂದ್ರ ಕ್ರೀಡಾ ಸಚಿವ ಅಜಯ ಮಕೆನ್ ಹೇಳಿದರು.ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಅಥ್ಲೀಟ್‌ಗಳಿಗೆ ತರಬೇತಿ ನೀಡಲು ಗುರುವಾರ ‘ಆಪರೇಷನ್ ಎಕ್ಸಲೆನ್ಸ್ ಲಂಡನ್ 2012’ ಎನ್ನುವ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಮನ್‌ವೆಲ್ತ್ ಹಾಗೂ ಏಷ್ಯಾ ಕ್ರೀಡಾಕೂಟದಲ್ಲಿ ಗಳಿಸಿದ ಪದಕಕ್ಕಿಂತಲೂ ಒಲಿಂಪಿಕ್‌ನಲ್ಲಿ ಭಾರತದ ಅಥ್ಲೀಟ್‌ಗಳು ಹೆಚ್ಚು ಪದಕ ಗೆಲ್ಲುವುದನ್ನು ನಿರೀಕ್ಷೆ ಮಾಡುತ್ತೇವೆ. ಅದಕ್ಕಾಗಿ ಅಥ್ಲೀಟ್‌ಗಳನ್ನು ಸಜ್ಜುಗೊಳಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಮಕೆನ್ ತಿಳಿಸಿದರು. ‘ಲಂಡನ್ ಒಲಿಂಪಿಕ್‌ನಲ್ಲಿ ಭಾರತದ ಅಥ್ಲೀಟ್‌ಗಳು ಹೆಚ್ಚು ಪದಕ ಗೆಲ್ಲಬೇಕು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ತರಬೇತಿ ನೀಡುತ್ತಿದೆ. ಈ ಕಾರ್ಯಕ್ರಮದಲ್ಲಿ ಅಥ್ಲೀಟ್‌ಗಳಿಗೆ ಅಗತ್ಯ ಸಲಹೆ, ಸೂಚನೆ ನೀಡಲಾಗುವುದು. ಅದಕ್ಕಾಗಿ ವಿದೇಶಿ ಕೋಚ್‌ಗಳ ನೆರವು ಪಡೆಯಲಾಗುತ್ತದೆ’ ಎಂದು ಮಕೆನ್ ವಿವರಿಸಿದರು. 

‘ಒಲಿಂಪಿಕ್ ವೇಳೆಗಾಗಲೇ ಅಥ್ಲೀಟ್‌ಗಳಿಗೆ ಉತ್ತಮ ತರಬೇತಿ ದೊರೆಯಬೇಕು. ಹೆಚ್ಚು ಪದಕಗಳನ್ನು ತಂದು ಕೊಡಬೇಕು ಎನ್ನುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗುವುದು. ತರಬೇತಿ ಕೇಂದ್ರ, ವಿಶೇಷವಾಗಿ ಶಿಸ್ತಿಗೆ ಆದ್ಯತೆ ನೀಡಲಾಗುವುದು ಎಂದ ಅವರು ವಿದೇಶಿ ಕೋಚ್ ಹಾಗೂ ರಾಷ್ಟ್ರೀಯ ಕೋಚ್‌ಗಳು ಸಹ ಅಥ್ಲೀಟ್‌ಗಳಿಗೆ ತರಬೇತಿ ನೀಡುತ್ತಾರೆ ಎಂದು ಹೇಳಿದರು. 

ಲಂಡನ್ ಒಲಿಂಪಿಕ್‌ನಲ್ಲಿ ಭಾರತದ ಅಥ್ಲೀಟ್‌ಗಳು ಹೆಚ್ಚು ಪದಕಗಳನ್ನು ಗೆಲ್ಲುವುದನ್ನು ನಿರೀಕ್ಷೆ ಮಾಡುತ್ತೇವೆ. ಅದಕ್ಕಾಗಿ ಅಗತ್ಯವಿರುವ ಎಲ್ಲಾ ನೆರವು ನೀಡಲು ಸರ್ಕಾರ ಬದ್ಧವಿದೆ. ಅಥ್ಲೀಟ್‌ಗಳಿಗೆ ತರಬೇತಿ ನೀಡಲು ಅಪೆಕ್ಸ್ ಸಮಿತಿ, ಸ್ಟೀರಿಂಗ್ ಸಮಿತಿಯ ಪರವಾನಗಿ ಪಡೆಯಲಾಗಿದ್ದು, ಅಥ್ಲೀಟ್‌ಗಳನ್ನು ಆಯ್ಕೆ ಮಾಡಿ ತರಬೇತಿಗೆ ಕಳುಹಿಸುವ ಜವಬ್ದಾರಿಯನ್ನು ಆ ಸಮಿತಿಗಳು ನಿಭಾಯಿಸಲಿವೆ. ಒಟ್ಟಿನಲ್ಲಿ ಈ ಸಲದ ಒಲಿಂಪಿಕ್‌ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ಭಾರತಕ್ಕೆ ಹೆಚ್ಚು ಪದಕಗಳು ಬರುವಂತಾಗಬೇಕು’ ಎಂದು ಮಕೆನ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.