ಸೋಮವಾರ, ಜೂಲೈ 6, 2020
28 °C

ಆಪರೇಷನ್ ಕಮಲಕ್ಕೆ ತೀವ್ರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಪರೇಷನ್ ಕಮಲಕ್ಕೆ ತೀವ್ರ ಆಕ್ರೋಶ

ಬೆಂಗಳೂರು: ಆಡಳಿತಾರೂಢ ಬಿಜೆಪಿ ‘ಆಪರೇಷನ್ ಕಮಲ’ದ ಮೂಲಕ ಪ್ರತಿಪಕ್ಷ ಸದಸ್ಯರನ್ನು ತನ್ನತ್ತ ಸೆಳೆಯುತ್ತಿರುವ ಸಂಗತಿ ಶುಕ್ರವಾರ ವಿಧಾನಮಂಡಲದ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತು. ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಧರಣಿ ಮತ್ತು ಸಭಾತ್ಯಾಗ ನಡೆಸಿದರು. ಪರಿಷತ್‌ನಲ್ಲಿ ಪ್ರತಿಪಕ್ಷಗಳ ಧರಣಿ ಮುಂದುವರಿದ ಹಿನ್ನೆಲೆಯಲ್ಲಿ ದಿನದ ಕಲಾಪವನ್ನೇ ಮುಂದೂಡಲಾಯಿತು.ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ, ಈ ಸರ್ಕಾರ ಆಪರೇಷನ್ ಕಮಲದ ಮೂಲಕ ಪ್ರತಿಪಕ್ಷಗಳ ಶಾಸಕರನ್ನು ತನ್ನತ್ತ ಸೆಳೆಯುವ ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಈ ಕುರಿತು ನಿಲುವಳಿ ಸೂಚನೆ (ನಿಯಮ 60ರಡಿ) ಮಂಡಿಸಲು ಅವಕಾಶ ನೀಡಿ ಎಂದು ಒತ್ತಾಯಿಸಿದರು.ಇದಕ್ಕೆ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಸಮ್ಮತಿ ನೀಡಲಿಲ್ಲ. ‘ಆಪರೇಷನ್ ಕಮಲ’ ಎಂದು ಹೇಳಿ ನಿಯಮ 60ರಡಿ ಚರ್ಚಿಸಲು ಹೇಗೆ ಬರುತ್ತದೆ? ಇದಕ್ಕೆ ನಿಯಮಗಳಲ್ಲಿ ಅವಕಾಶ ಇಲ್ಲ ಎಂದರು. ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ, ‘ಇದೊಂದು ತುರ್ತು ವಿಚಾರ. ಹಣದ ಆಸೆ ತೋರಿಸಿ ಪ್ರತಿಪಕ್ಷಗಳ ಶಾಸಕರ ಖರೀದಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಬಗ್ಗೆ ಚರ್ಚಿಸಬೇಕಾಗಿದೆ. ನಿನ್ನೆಯಷ್ಟೇ ಕರಡಿ ಸಂಗಣ್ಣ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಚರ್ಚೆಗೆ ಅವಕಾಶ ನೀಡಿ’ ಎಂದು ಸಲಹೆ ನೀಡಿದರು.ರೇವಣ್ಣ ಪ್ರಾಥಮಿಕ ಹಂತದ ವಿಷಯ ಮಂಡನೆ ಮಾಡಿ, ‘ಈ ಸರ್ಕಾರಕ್ಕೆ ಪೂರ್ಣ ಬಹುಮತ ಇರಲಿಲ್ಲ. ಗೆದ್ದಿದ್ದು ಕೇವಲ 110 ಸೀಟು. ನಂತರ ಪಕ್ಷೇತರ ಶಾಸಕರನ್ನು ಹೈಜಾಕ್ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಸ್ವಲ್ಪ ದಿನಗಳ ನಂತರ ಪಕ್ಷೇತರ ಶಾಸಕರನ್ನು ಹೊರಗಟ್ಟಿ, ಪ್ರತಿಪಕ್ಷ ಶಾಸಕರ ಖರೀದಿಗೆ ಕೈಹಾಕಿದೆ. ಹೀಗಾಗಿ ನಿಯಮ 60ರಡಿ ಚರ್ಚಿಸಲು ಅವಕಾಶ ನೀಡಿ’ ಎಂದು ಆಗ್ರಹಪಡಿಸಿದರು.ಹೀಗೆ ಹೇಳುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಸದಸ್ಯರಿಂದಲೂ ಪ್ರತಿರೋಧ ವ್ಯಕ್ತವಾಯಿತು. ಅರಣ್ಯ ಸಚಿವ ವಿಜಯಶಂಕರ್ ಮಾತನಾಡಿ ‘ನೀವು ಬಿಜೆಪಿ ಶಾಸಕರನ್ನು ಹೈಜಾಕ್ ಮಾಡಿದ್ದು ಮರೆತು ಹೋಯಿತೇ’ ಎಂದು ಚುಚ್ಚಿದರು. ಶಂಕರಲಿಂಗೇಗೌಡರನ್ನು ಕರೆದೊಯ್ದಿದ್ದು ಯಾರು ಎಂದು ಜೆಡಿಎಸ್‌ಗೆ ತಿರುಗೇಟು ನೀಡಿದರು. ಜೆಡಿಎಸ್‌ನ ಸಿ.ಎಸ್.ಪುಟ್ಟೇಗೌಡ, ಶಿವಲಿಂಗೇಗೌಡ ಕೂಡ ಪ್ರಾಥಮಿಕ ಹಂತದ ವಿಷಯ ಮಂಡನೆಗೆ ಅವಕಾಶ  ಕೋರಿದರು. ಇದಕ್ಕೆ ಸ್ಪೀಕರ್ ಅವಕಾಶ ನೀಡಲಿಲ್ಲ. ನಂತರ ಕಾನೂನು ಸಚಿವ ಸುರೇಶಕುಮಾರ್, ‘ಆಪರೇಷನ್ ಕಮಲ’ದ ವಿಚಾರ ನಿಯಮ 60ರಡಿ ಚರ್ಚಿಸಲು ಬರುವುದಿಲ್ಲ. ಹೀಗಾಗಿ ಅವಕಾಶ ನೀಡಬೇಡಿ ಎಂದರು.ಎರಡೂ ಕಡೆಯ ಅಭಿಪ್ರಾಯಗಳನ್ನು ಆಲಿಸಿದ ನಂತರ ಸ್ಪೀಕರ್ ಅಂತಿಮವಾಗಿ ನಿಯಮ 60ರಡಿ ಚರ್ಚಿಸಲು ಅವಕಾಶ ನಿರಾಕರಿಸಿದರು. ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣ ಕೋರ್ಟ್‌ನಲ್ಲಿ ಇರುವುದರಿಂದ ಚರ್ಚಿಸಲು ಸಾಧ್ಯ ಇಲ್ಲ ಎಂದು ರೂಲಿಂಗ್ ನೀಡಿದರು. ಸ್ಪೀಕರ್ ಆದೇಶದ ವಿರುದ್ಧ ಜೆಡಿಎಸ್ ಸದಸ್ಯರು ಅವರ ಪೀಠದ   ಕೆಳಗೆ ಧರಣಿ ನಡೆಸಿದರೆ, ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿ ಹೊರ ನಡೆದರು. ನಂತರ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿ ಪುನಃ ಸೇರಿದಾಗಲೂ ಜೆಡಿಎಸ್ ಸದಸ್ಯರು ಧರಣಿಯನ್ನು ಮುಂದುವರೆಸಿದರು.ನಿಯಮ 60ರಡಿ ಅಲ್ಲದಿದ್ದರೂ ಬೇರೆ ರೂಪದಲ್ಲಿಯಾದರೂ ಚರ್ಚೆಗೆ ಅವಕಾಶ ನೀಡಿ ಎಂದು ರೇವಣ್ಣ ಅವರು ಸ್ಪೀಕರ್‌ಗೆ ಮನವಿ ಮಾಡಿದರು. ಅದಕ್ಕೆ ಸ್ಪೀಕರ್ ಸಮ್ಮತಿಸಿ, ಬೇರೆ ರೂಪದಲ್ಲಿ ಕೋರಿಕೆ ಸಲ್ಲಿಸಿದರೆ ಅದನ್ನು ಪರಿಶೀಲಿಸುವ ಭರವಸೆ ನೀಡಿದರು. ನಂತರ ಜೆಡಿಎಸ್ ಸದಸ್ಯರು ಧರಣಿ ಕೈಬಿಟ್ಟರು. ಪರಿಷತ್‌ನಲ್ಲೂ ಗದ್ದಲ: ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಜೆಡಿಎಸ್‌ನ ವೈ.ಎಸ್,ವಿ.ದತ್ತ , ‘ಆಪರೇಷನ್ ಕಮಲ’ಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡನೆಗೆ ಮನವಿ ಮಾಡಿದರು.ಆದರೆ ಈ ವಿಷಯ ಸದನದ ನಿಯಮಗಳ ವ್ಯಾಪ್ತಿಯಲ್ಲಿಲ್ಲ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವಕಾಶ ನಿರಾಕರಿಸಿದರು. ತಕ್ಷಣ ಸಭಾಪತಿ ಪೀಠದ ಎದುರು ಧರಣಿ ಆರಂಭಿಸಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಗದ್ದಲ ಹೆಚ್ಚುತ್ತಿದ್ದಂತೆ ಸಭಾಪತಿ ಸದನವನ್ನು ಮುಂದೂಡಿದರು.ಮತ್ತೆ ಕಲಾಪ ಆರಂಭವಾದಾಗ, ವಿಷಯ ನಿಲುವಳಿ ಮಂಡನೆಗೆ ಸಮರ್ಪಕವಾಗಿದೆ ಎಂಬುದನ್ನು ನಿರೂಪಿಸುವಂತೆ ಶಂಕರಮೂರ್ತಿ ಸೂಚಿಸಿದರು. ಆಗ ಬಿಜೆಪಿ ಸದಸ್ಯರು ತಾಂತ್ರಿಕ ಲೋಪ ಎತ್ತಿದರು. ‘ದತ್ತ ನೀಡಿರುವ ನೋಟಿಸ್‌ನಲ್ಲಿ ನಿಯಮ 59 ಮತ್ತು 60 ಎರಡನ್ನೂ ಉಲ್ಲೇಖಿಸಿದ್ದಾರೆ. ಇದರಿಂದ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತಿಲ್ಲ’ ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಬಳಿಕ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಸಭಾಪತಿಯವರ ಮನವೊಲಿಕೆಗೆ ಮುಂದಾದರು. ಈ ಸಂದರ್ಭದಲ್ಲಿ ಅವರ ಮಾತಿಗೆ ಬಿಜೆಪಿ ಸದಸ್ಯರು ಅಡ್ಡಿಪಡಿಸಿದ್ದು ಕೋಲಾಹಲಕ್ಕೆ ಕಾರಣವಾಯಿತು. ತಕ್ಷಣ ಸದನವನ್ನು ಸೋಮವಾರಕ್ಕೆ ಮುಂದೂಡಿರುವುದಾಗಿ ಸಭಾಪತಿ ಪ್ರಕಟಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.