ಸೋಮವಾರ, ಮೇ 23, 2022
20 °C

ಆಪರೇಷನ್ ಕಮಲ ಕೊಳಕು ರಾಜಕಾರಣ - ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ‘ಆಡಳಿತಾರೂಢ ಬಿಜೆಪಿ ಸರ್ಕಾರ ಲೂಟಿ ಮಾಡಿದ ಕೋಟ್ಯಂತರ ರೂಪಾಯಿ ಹಣದಿಂದ ಮತ್ತೆ ‘ಆಪರೇಷನ್ ಕಮಲ’ದ ಮೂಲಕ ಪ್ರತಿಪಕ್ಷಗಳ ಶಾಸಕರನ್ನು ಸೆಳೆದುಕೊಳ್ಳುತ್ತಿದೆ’ ಎಂದು ಆರೋಪಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಇದು ಅತ್ಯಂತ ಕೊಳಕು ರಾಜಕಾರಣ’ ಎಂದು ಟೀಕಿಸಿದ್ದಾರೆ.

ಕೊಪ್ಪಳದ ಜೆಡಿಎಸ್ ಶಾಸಕ ಸಂಗಣ್ಣ ಕರಡಿ ಅವರನ್ನು ‘ಆಪರೇಷನ್ ಕಮಲ’ದ ಬಿಜೆಪಿ ಸೆಳೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಪ್ರತಿಪಕ್ಷಗಳನ್ನು ಹಣದ ಮೂಲಕ ಸೆಳೆಯುವುದು ಯಾವುದೇ ಸರ್ಕಾರಕ್ಕೆ ಶೋಭೆ ತರುವಂಥದ್ದಲ್ಲ. ಮುಂದೊಂದು ದಿನ ಅದೇ ಸರ್ಕಾರಕ್ಕೆ ತಿರುಗು ಬಾಣವಾದೀತು. ಯಾರೇ ಆಗಲಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಬೇಕು. ಬಿಜೆಪಿ ಮತ್ತೆ ‘ಆಪರೇಷನ್ ಕಮಲ’ದ ಮೂಲಕ ಜೆಡಿಎಸ್ ಶಾಸಕರನ್ನು ಸೆಳೆದಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಪ್ರಜಾಪ್ರಭುತ್ವ ಉಳಿಸಲು ಇಂತಹ ನೀಚ ರಾಜಕಾರಣಕ್ಕೆ ಕೈ ಹಾಕಬಾರದು. ದೇಶ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.

‘ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಸದಸ್ಯರ ಸಂಖ್ಯೆ ಕೇವಲ 110. ಆದರೆ, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಶಾಸಕರ ಸಂಖ್ಯೆ 114ರಷ್ಟಿತ್ತು. ಕಾಂಗ್ರೆಸ್-ಜೆಡಿಎಸ್ ಹಾಗೂ ಪಕ್ಷೇತರರೆಲ್ಲಾ ಸೇರಿದ್ದರೆ ನಾವೇ ಸರ್ಕಾರ ರಚಿಸಬಹುದಿತ್ತು.

ನಮ್ಮ ಪಕ್ಷದ ಹೈಕಮಾಂಡ್ ಸರ್ಕಾರ ರಚನೆಗೆ ಒಪ್ಪದಿದ್ದರಿಂದ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ನಿರ್ಧರಿಸಿದೆವು. ಆದರೆ, ಅದೇ ಆರು ಜನ ಪಕ್ಷೇತರ ಶಾಸಕರ ಬೆಂಬಲದಿಂದ ಸರ್ಕಾರ ರಚಿಸಿ ಅಧಿಕಾರ ಅನುಭವಿಸುತ್ತಿರುವ ಬಿಜೆಪಿ, ಇದೀಗ ಅಧಿಕಾರಕ್ಕೆ ಬರಲು ಕಾರಣರಾದ ಪಕ್ಷೇತರ ಶಾಸಕರನ್ನು ಏನು ಮಾಡಿದೆ? ಅವರ ಗತಿ ಏನು? ಹೀಗಾಗಿ, ಬಿಜೆಪಿ ವಿಶ್ವಾಸಕ್ಕೆ ಅರ್ಹವಾದುದಲ್ಲ’ ಎಂದು ಟೀಕಿಸಿದರು.

ಈ ಹಿಂದೆ ಜೆಡಿಎಸ್ ಕೂಡ ಕೆಲವು ಶಾಸಕರನ್ನು ಸೆಳೆದಿಲ್ಲವೇ ಎಂಬ ಪ್ರಶ್ನೆಗೆ, ‘ಜೆಡಿಎಸ್ ಮಾಡಿದ ಕೆಲಸವನ್ನು ನಾನು ಸಮರ್ಥನೆ ಮಾಡುತ್ತಿಲ್ಲ. ಕಾಂಗ್ರೆಸ್‌ನವರಾದ ನಾವೇ ಆ ಕೆಲಸ ಮಾಡಿದ್ದರೂ ಅದನ್ನು ನಾನು ಸಮರ್ಥಿಸುವುದಿಲ್ಲ. ಆರು ಮಂದಿ ಪಕ್ಷೇತರ ಶಾಸಕರು ಇಲ್ಲದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಆಗುತ್ತಿರಲಿಲ್ಲ. ಇದೀಗ ಅವರನ್ನೇ ಬೀದಿ ಪಾಲು ಮಾಡಲಾಗಿದೆ’ ಎಂದು ಸಿದ್ದರಾಮಯ್ಯ ಹರಿಹಾಯ್ದರು.

ಹಣ ಬಿಡುಗಡೆಯಾಗಿಲ್ಲ: ‘ಕೊಡಗು ಜಿಲ್ಲೆಗೆ ಕಳೆದ ವರ್ಷ ಪ್ರಕಟಿಸಿದ 25 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್‌ನಲ್ಲಿ ಇದುವರೆಗೆ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ರಸ್ತೆ ಅಭಿವೃದ್ಧಿಗೆ ಇನ್ನೂ ಟೆಂಡರ್ ಕರೆಯುವ ಪ್ರಯತ್ನ ನಡೆಯುತ್ತಿದೆ. ಹಣ ಬಿಡುಗಡೆಯಾಗದ ಕಾರಣ ಎಲ್ಲಿಯೂ ಕೆಲಸ ಪ್ರಾರಂಭವಾಗಿಲ್ಲ’ ಎಂದು ಆರೋಪಿಸಿದರು.

ವಿಶೇಷ ಪ್ಯಾಕೇಜ್‌ನಡಿ ಈಗಾಗಲೇ 10 ಕೋಟಿ ರೂಪಾಯಿ ಬಿಡುಗಡೆಯಾಗಿರುವ ಬಗ್ಗೆ ಗಮನಸೆಳೆದಾಗ, ‘ನಾನು ಕೂಡ ಹಣಕಾಸು ಸಚಿವನಾಗಿದ್ದವನು. ಹಣ ಬಿಡುಗಡೆಗೆ ಆದೇಶವಾಗಿರಬಹುದು. ಆದರೆ, ಹಣ ಬಿಡುಗಡೆಯಾಗಿಲ್ಲ’ ಎಂದು ತಮ್ಮ ಆರೋಪವನ್ನು ಸಮರ್ಥಿಸಿಕೊಂಡರು.

‘ಬಾಣೆ ಸಮಸ್ಯೆಯನ್ನು ಬಿಜೆಪಿಯವರಿಂದ ಬಗೆಹರಿಸಲು ಸಾಧ್ಯವಿಲ್ಲ. ಈ ಸಮಸ್ಯೆ ಬಗೆಹರಿಯಬೇಕಾದರೆ ನಾವೇ ಅಧಿಕಾರಕ್ಕೆ ಬರಬೇಕು’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಮಾಜಿ ಸಚಿವ ಎಂ.ಎಂ. ನಾಣಯ್ಯ, ವಿಧಾನ ಪರಿಷತ್ ಸದಸ್ಯ ಟಿ. ಜಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್, ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.