ಆಪರೇಷನ್ ಡರ್ಟಿ ನಾಳೆ ಆರಂಭ

7

ಆಪರೇಷನ್ ಡರ್ಟಿ ನಾಳೆ ಆರಂಭ

Published:
Updated:

ಹುಬ್ಬಳ್ಳಿ: `ಮಹಾನಗರ ಪಾಲಿಕೆ ಮಹತ್ವಾಕಾಂಕ್ಷಿ ಯೋಜನೆಯಾದ `ಆಪರೇಷನ್ ಡರ್ಟಿ~ಯನ್ನು ಇದೇ 27ರಂದು ವಾರ್ಡ್ ನಂ. 34ರಿಂದ ಆರಂಭಿಸಲಾಗುತ್ತದೆ~ ಎಂದು ಮೇಯರ್ ಡಾ. ಪಾಂಡುರಂಗ ಪಾಟೀಲ ತಿಳಿಸಿದರು.ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಅವರೊಂದಿಗೆ ಶುಕ್ರವಾರ ಪತ್ರಿಕಾ ಗೋಷ್ಠಿ ನಡೆಸಿದ ಡಾ. ಪಾಟೀಲ ಈ ವಿಷಯ ಪ್ರಕಟಿಸಿದರು. `ಲೋಕಪ್ಪನ ಹಕ್ಕಲದ ವಿನಾಯಕ ಕಾಲೊನಿ ಉದ್ಯಾನದಲ್ಲಿ ಬೆಳಿಗ್ಗೆ 10ಕ್ಕೆ ಸಚಿವ ಜಗದೀಶ ಶೆಟ್ಟರ ಈ ಕಾರ್ಯಾಚರಣೆಗೆ ಚಾಲನೆ ನೀಡಲಿದ್ದಾರೆ. ಮುಂದಿನ ಒಂದು ತಿಂಗಳಲ್ಲಿ ಎಲ್ಲ ವಾರ್ಡ್‌ಗಳಿಗೆ ಈ ಯೋಜನೆ ವಿಸ್ತರಣೆಗೊಳ್ಳಲಿದೆ~ ಎಂದು ಅವರು ಹೇಳಿದರು.`ಪಾಲಿಕೆ ಹಿರಿಯ ಅಧಿಕಾರಿಗಳು ಈ ಯೋಜನೆಯ ಉಸ್ತುವಾರಿ ನೋಡಿಕೊಳ್ಳಲಿದ್ದು, ವೇಳಾಪಟ್ಟಿ ಹಾಕಿಕೊಂಡು ಕಾರ್ಯ ನಿರ್ವಹಿಸಲಾಗುತ್ತದೆ. ಮನೆ, ಮನೆಗೆ ಹೋಗಿ ಕಸ ಸಂಗ್ರಹಿಸುವುದು, ಸಂಗ್ರಹಿಸಿದ ಕಸವನ್ನು ಅವುಗಳ ಸ್ವರೂಪಕ್ಕೆ ತಕ್ಕಂತೆ ಬೇರ್ಪಡಿಸುವುದು, ಚರಂಡಿ ಹೂಳು ತೆಗೆಯುವುದು, ಬೀದಿ ನಾಯಿ ಮತ್ತು ಹಂದಿಗಳನ್ನು ನಿಯಂತ್ರಿಸುವುದು ಸೇರಿದಂತೆ ಹಲವು ಮಹತ್ವದ ಕೆಲಸಗಳು ಕಾರ್ಯಾಚರಣೆಯಲ್ಲಿ ಸೇರಿವೆ~ ಎಂದು ಅವರು ವಿವರಿಸಿದರು.`ಆಯಾ ವಾರ್ಡ್‌ಗಳ ತಗ್ಗು ಪ್ರದೇಶಗಳು, ಬಾಯಿ ತೆರೆದ ಒಳಚರಂಡಿ ಗುರುತಿಸಿ ಮುಚ್ಚಲಾಗುತ್ತದೆ. ನಿಂತ ನೀರನ್ನು ಹರಿಯುವಂತೆ ಮಾಡಲಾಗುತ್ತದೆ. ರಸ್ತೆಗಳ ಸ್ವಚ್ಛತೆಗೆ ಗಮನ ಹರಿಸಲಾಗುತ್ತದೆ. ಕುಡಿಯುವ ನೀರು ಪೋಲಾಗದಂತೆ ಎಚ್ಚರ ವಹಿಸಲಾಗುತ್ತದೆ. ಸಾರ್ವಜನಿಕರ ಖುಲ್ಲಾ ಜಾಗ ಮತ್ತು ಖಾಸಗಿ ನಿವೇಶನಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುತ್ತದೆ~ ಎಂದು ಮಾಹಿತಿ ನೀಡಿದರು.`ವಾರ್ಡ್ ವ್ಯಾಪ್ತಿಯಲ್ಲಿ ಬರುವ ಎಲ್ಲ ವ್ಯಾಪಾರಸ್ಥರಿಗೆ ತೆರೆದ ಚರಂಡಿ ಹಾಗೂ ರಸ್ತೆಗೆ ಹಾಕದಂತೆ ತಿಳಿಸಲಾಗುವುದು. ಪಾಲಿಕೆ ಸೂಚನೆಯನ್ನು ಪಾಲಿಸದ ವ್ಯಾಪಾರಸ್ಥರಿಗೆ ದಂಡ ವಿಧಿಸಲಾಗುವುದು. ಪ್ಲಾಸ್ಟಿಕ್ ಬಳಕೆ ಮೇಲೆ ನಿಯಂತ್ರಣ ಹೇರಲಾಗುವುದು~ ಎಂದು ಮೇಯರ್ ಹೇಳಿದರು.`ಕಾರ್ಯಾಚರಣೆ ಹೇಗೆ ನಡೆದಿದೆ ಎನ್ನುವುದನ್ನು ಪ್ರತಿದಿನ ಪರಿಶೀಲಿಸಲಾಗುತ್ತದೆ. ಮನೆಯಿಂದ ಆಚೆ ಕಸ ಹಾಕಿದವರಿಗೂ ದಂಡ ಹಾಕಲಾಗುವುದು. ಆಂದೋಲನದ ರೀತಿಯಲ್ಲಿ ನಡೆಯಲಿರುವ ಈ ಕಾರ್ಯಾಚರಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ~ ಎಂದು ಅವರು ಹೇಳಿದರು.`ನಗರದ ಪ್ರಮುಖ ರಸ್ತೆ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಉಗುಳುವ ಡಬ್ಬಿಗಳನ್ನು 15 ದಿನಗಳಲ್ಲೇ ಅಳವಡಿಕೆ ಮಾಡಲಾಗುತ್ತದೆ. ರಸ್ತೆ ಮೇಲೆ ಉಗುಳಿದರೆ ಕಾನೂನು ಕ್ರಮ ಜರುಗಿಸಲು ಉದ್ದೇಶಿಸಲಾಗಿದೆ. ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಕಸದ ಡಬ್ಬಿ ಇಡುವುದನ್ನು ಕಡ್ಡಾಯಗೊಳಿಸಲಾಗಿದೆ~ ಎಂದು ಆಯುಕ್ತ ತ್ರಿಲೋಕಚಂದ್ರ ತಿಳಿಸಿದರು.`ಅವಳಿನಗರದಲ್ಲಿ ನಿತ್ಯ 400 ಟನ್ ಕಸ ಸಂಗ್ರಹ ಆಗುತ್ತಿದ್ದು, ಅದರ ವೈಜ್ಞಾನಿಕ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ 200 ಮನೆಗೊಂದು ಕೈಗಾಡಿ ಕೊಡಲಾಗಿದ್ದು, ಸ್ವಚ್ಛತಾ ವ್ಯವಸ್ಥೆಗೆ ವಾರದಲ್ಲೇ ಹೊಸ ಟೆಂಡರ್ ಕರೆಯಲಾಗುತ್ತದೆ. ರಸ್ತೆಗೆ ಕಸ ಚೆಲ್ಲಿದರೆ ರೂ 100 ದಂಡ ವಿಧಿಸಲಾಗುತ್ತದೆ~ ಎಂದು ಅವರು ವಿವರಿಸಿದರು.`ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆಯಾಗುವ ಕಲ್ಯಾಣ ಮಂಟಪದಂತಹ ಸ್ಥಳಗಳಿಂದ ದೂರವಾಣಿ ಕರೆ ಮಾಡಿದರೆ ಪಾಲಿಕೆ ಸಿಬ್ಬಂದಿಯೇ ಹೋಗಿ ಸಂಗ್ರಹಿಸಿಕೊಂಡು ಬರಲಿದೆ~ ಎಂದು ಅವರು ತಿಳಿಸಿದರು. `ಪ್ಲಾಸ್ಟಿಕ್ ಬಳಕೆ ಮೇಲೆ ನಿಯಂತ್ರಣ ಹೇರಲು ಉದ್ದೇಶಿಸಲಾಗಿದ್ದು, ಯಾವುದೇ ಅಂಗಡಿಯಲ್ಲಿ ಇನ್ನುಮುಂದೆ ಕ್ಯಾರಿ ಬ್ಯಾಗ್‌ಗಳನ್ನು ಉಚಿತವಾಗಿ ನೀಡುವಂತಿಲ್ಲ.ಸಣ್ಣ ಕ್ಯಾರಿ ಬ್ಯಾಗ್‌ಗಳಿಗೆ ರೂ 2, ಮಧ್ಯಮ ಗಾತ್ರದ ಬ್ಯಾಗ್‌ಗಳಿಗೆ ರೂ 3 ಮತ್ತು ದೊಡ್ಡ ಕ್ಯಾರಿ ಬ್ಯಾಗ್‌ಗಳಿಗೆ ರೂ 5ರಂತೆ ದರ ಆಕರಿಸಬೇಕು~ ಎಂದು ಅವರು ಸೂಚಿಸಿದರು.ಉಪ ಮೇಯರ್ ಭಾರತಿ ಪಾಟೀಲ, ಪಾಲಿಕೆ ಸಭಾನಾಯಕ ಪ್ರಕಾಶ ಗೋಡಬೊಲೆ, ಸದಸ್ಯೆ ಸರೋಜಾ ಪಾಟೀಲ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.ಸುವರ್ಣ ಮಹೋತ್ಸವ: ನಾಳೆ ಸಭೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುವರ್ಣ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ಸವದ ಸ್ವರೂಪ ನಿರ್ಧರಿಸಲು ಇದೇ 27ರಂದು ಸಂಜೆ 5ಕ್ಕೆ ಆಯುಕ್ತರ ಕಚೇರಿ ಸಭಾಭವನದಲ್ಲಿ ಸಚಿವ ಜಗದೀಶ ಶೆಟ್ಟರ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಪಾಳಿಕೆ ಆಯುಕ್ತರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry