ಆಪಲ್: ಹೊಸ ಸವಾಲು?

7

ಆಪಲ್: ಹೊಸ ಸವಾಲು?

Published:
Updated:
ಆಪಲ್: ಹೊಸ ಸವಾಲು?

ಕಳೆದ ವರ್ಷದ ಮೇ ತಿಂಗಳಲ್ಲಿ `ಆಪಲ್~, ಬಿಲ್‌ಗೇಟ್ಸ್ ಒಡೆತನದ ಮೈಕ್ರೊಸಾಫ್ಟ್ ಅನ್ನು ಹಿಂದಿಕ್ಕಿ ವಿಶ್ವದ ನಂ-1 `ಟೆಕ್~ ಕಂಪೆನಿ ಎಂಬ ಪಟ್ಟ ಅಲಂಕರಿಸಿತ್ತು. ಆಗ ವಾಲ್‌ಸ್ಟ್ರೀಟ್ ಜರ್ನಲ್ ಅದನ್ನು `ಒಂದು ಘಟ್ಟದ ಅಂತ್ಯ ಮತ್ತೊಂದು ಯುಗದ ಆರಂಭ~ ಎಂದು ಬಣ್ಣಿಸಿತ್ತು.ಅದಕ್ಕೂ ಮುಂಚೆ ಅಂದರೆ 1985ರಲ್ಲಿ ಸ್ಟೀವ್ ಜಾಬ್ಸ್ ಆ್ಯಪಲ್ ಕಂಪೆನಿಯಿಂದ ಹೊರನಡೆದಾಗ, ಇದೇ ಮೈಕ್ರೊಸಾಫ್ಟ್ ಸಂಸ್ಥೆ, ಅದನ್ನು `ಆ್ಯಪಲ್‌ನ ಸಾವು~ ಎಂದು ಬಣ್ಣಿಸಿತ್ತು. ಮತ್ತೊಂದು ಪ್ರಮುಖ ಕಂಪ್ಯೂಟರ್ ತಯಾರಿಕಾ ಕಂಪನಿ ಡೆಲ್ `ಆ್ಯಪಲ್ ತನ್ನ ಷೇರುದಾರರಿಗೆ ಹಣ ವಾಪಸ್ಸು ಮಾಡಿ ಗಣಕಯಂತ್ರವನ್ನು `ಶಟ್‌ಡೌನ್~ ಮಾಡಲಿ ಎಂದು ವ್ಯಂಗ್ಯವಾಡಿತ್ತು.ಆ್ಯಪಲ್‌ನ ಇತಿಹಾಸ ಈಗ ಕಣ್ಣೆದುರಿಗೇ ಇದೆ. ಜಗತ್ತಿನಾದ್ಯಂತ ಗ್ರಾಹಕ ಅತಿ ಹೆಚ್ಚು ವಿಶ್ವಾಸಾರ್ಹತೆ ಗಳಿಸಿಕೊಂಡಿರುವ ಬ್ರಾಂಡ್ `ಆ್ಯಪಲ್~. 21ನೇ ಶತಮಾನದ ಅತಿ ಹೆಚ್ಚು ಜನಮನ್ನಣೆ ಗಳಿಸಿದ `ಟೆಕ್ ಐಕಾನ್~.

 

ಜಗತ್ತಿನಾದ್ಯಂತ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ  ವಸ್ತು ಐಫೋನ್. ಜಾಗತಿಕ ಸ್ಮಾ ರ್ಟ್‌ಫೋನ್ ಮಾರುಕಟ್ಟೆಯಲ್ಲಿ ಐಫೋನ್ ಸೃಷ್ಟಿಸಿರುವ ಸಂಚಲನ ಊಹೆಗೂ ನಿಲುಕದ್ದು. ಐಫೋನ್, ಐಪೊಡ್, ಐಪ್ಯಾಡ್ ಮತ್ತು ಮ್ಯಾಕ್‌ಬುಕ್‌ನಂತಹ ವಿಶ್ವದರ್ಜೆಯ ಉತ್ಪನ್ನಗಳಿಂದ ವಿಶ್ವದಾದ್ಯಂತ ಮನೆಮಾತಾಗಿರುವ ಆ್ಯಪಲ್ ಕಂಪನಿಯ ಸದ್ಯದ ಮಾರುಕಟ್ಟೆಯ ಮೌಲ್ಯ 222 ಶತಕೋಟಿ ಡಾಲರ್ (್ಙ 9,99,000 ಕೋಟಿ)ಇದೆಲ್ಲಾ ಹೇಗೆ ಸಾಧ್ಯವಾಯಿತು. ಉತ್ತರ ಸ್ಟೀವ್ ಜಾಬ್ಸ್.  ಇಂದಿಗೆ 35ವರ್ಷಗಳ ಹಿಂದೆ (1976) ಸ್ವೀವ್ ಜಾಬ್ಸ್ ಎಂಬ 20 ವರ್ಷದ ತರುಣನೊಬ್ಬ ತನ್ನ  ಹೈಸ್ಕೂಲ್ ಸ್ನೇಹಿತನ ಜತೆ ಸೇರಿ ಮನೆಯ ಗ್ಯಾರೇಜ್‌ನಲ್ಲಿ `ಆ್ಯಪಲ್~ ಸಂಸ್ಥೆ ಹುಟ್ಟುಹಾಕಿದ.

ಆತನಿಗೊಂದು ಕನಸಿತ್ತು. ಇಂದಲ್ಲ ನಾಳೆ ಆ್ಯಪಲ್ ಕಂಪನಿಯನ್ನು ವಿಶ್ವದ ನಂ-1 ಕಂಪನಿಯನ್ನಾಗಿ ಮಾಡುತ್ತೇನೆ ಎನ್ನುವುದು. ಒಂದು ಹಂತದಲ್ಲಿ ತಾನು ಸ್ಥಾಪಿಸಿದ ಕಂಪೆನಿಯಿಂದಲೇ ಹೊರಹೋಗಬೇಕಾಗಿ ಬಂತು ಜಾಬ್ಸ್‌ಗೆ. ಆತ ಎದೆಗುಂದಲಿಲ್ಲ.ತಾನು ಪ್ರೀತಿಸಿದ ಕೆಲಸವನ್ನೇ ಮುಂದುವರೆಸಿದ. 1995ರಲ್ಲಿ ಮರಳಿ ಆ್ಯಪಲ್ ಸೇರಿದ ಜಾಬ್ಸ್, ಮುಂದಿನ 15 ವರ್ಷಗಳಲ್ಲಿ ಕಾರ್ಪೊರೇಟ್ ಜಗತ್ತಿನಲ್ಲಿ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಿದರು. ಈಗ ಅದೇ ಜಾಬ್ಸ್ ಆ್ಯಪಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ಜಾಬ್ಸ್ (56)  ರಾಜೀನಾಮೆ ನೀಡಿದ್ದಾರೆ.  ಸ್ಟೀವ್ ಜಾಬ್ಸ್ ಇಲ್ಲದ ಆ್ಯಪಲ್ ಕಂಪೆನಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುತ್ತಾರೆ ಅನೇಕರು. ಜಾಬ್ಸ್ ಅವರ ಅನುಪಸ್ಥಿತಿಯಲ್ಲಿ `ಆ್ಯಪಲ್~ ಹೊಸ ಸವಾಲುಗಳನ್ನು ಎದುರಿಸಬೇಕಾಗಿದೆ.ಕಾರ್ಪೊರೇಟ್ ಇತಿಹಾಸದಲ್ಲೇ ಸ್ಟೀವ್ ಜಾಬ್ಸ್ ಅವರನ್ನು ಅತ್ಯಂತ ಯಶಸ್ವಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎಂದು ಬಣ್ಣಿಸಲಾಗುತ್ತದೆ. ಅವರ ದೂರದೃಷ್ಟಿ ಮತ್ತು ವಿನ್ಯಾಸ ತಂತ್ರಜ್ಞಾನ ಆ್ಯಪಲ್ ಉತ್ಪನ್ನಗಳಿಗೆ ವಿಶ್ವದರ್ಜೆ ಮಾನ್ಯತೆ ತಂದುಕೊಟ್ಟಿತ್ತು. ಐಫೋನ್, ಐಪಾಡ್‌ಗೆ ಆರಾಧಕರು ಇರುವಂತೆ ಸ್ಟಿವ್ ಜಾಬ್ಸ್‌ಗೂ ಅಸಂಖ್ಯ ಅಭಿಮಾನಿಗಳಿದ್ದಾರೆ.ತಾನೆಂದೂ ಒಬ್ಬ ಕಾರ್ಯನಿರ್ವಾಹಕ ಅಧಿಕಾರಿ ಎಂದು ಭಾವಿಸದ ಜಾಬ್ಸ್, ತನ್ನೊಂದಿಗೆ ತಮ್ಮ ಸಹೋದ್ಯೋಗಿಗಳನ್ನೂ ಬೆಳೆಸಿದರು. 1997ರಲ್ಲಿ ಸ್ಟೀವ್ ಆ್ಯಪಲ್‌ನ `ಸಿಇಒ~ ಆಗಿ ಮರು ನೇಮಕಗೊಂಡ ಸಂದರ್ಭದಲ್ಲಿ ಹೇಳಿದ ಮಾತು ಗಮನೀಯ.`ಒಂದು ಕಾಲದಲ್ಲಿ ಉದ್ಯಮದ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿತ್ತು. ಈಗ ಗ್ರಾಹಕನ ಅಭಿರುಚಿ ಅದನ್ನು ಹಿಂದಿಕ್ಕಿದೆ~ ಇದನ್ನು ಗಮನದಲ್ಲಿಟ್ಟುಕೊಂಡು ನಾವು ಹೊಸ ಉತ್ಪನ್ನಗಳನ್ನು ವಿನ್ಯಾಸಗೊಳಿಸಬೇಕು~. ಐಫೋನ್ ಮತ್ತು ಅಲ್ಟ್ರಾಥಿನ್ ಲ್ಯಾಪ್‌ಟ್ಯಾಪ್‌ಗಳೇ ಸಾಕು ಅವರ ಈ ಮಾತಿಗೆ ಉದಾಹರಣೆ.ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ ಬಳಲುತ್ತಿರುವ ಜಾಬ್ಸ್, ಕಳೆದ ಜನವರಿ 17ರಿಂದ ವೈದ್ಯಕೀಯ ರಜೆಯ ಮೇಲಿದ್ದಾರೆ. ಅವರ ಆರೋಗ್ಯ ಸ್ಥಿತಿಯ ಮಾಹಿತಿಗಳನ್ನು ಗೋಪ್ಯವಾಗಿ ಇಡಲಾಗಿದೆ. ಜಾಬ್ಸ್ ಮೊನ್ನೆ `ಆ್ಯಪಲ್~ನ ನಿರ್ದೇಶಕ ಮಂಡಳಿಗೆ ಬರೆದಿರುವ ರಾಜೀನಾಮೆ ಪತ್ರ ನೋಡಿ. ಆ್ಯಪಲ್~ನ `ಸಿಇಒ~ ಆಗಿ ನನ್ನ ಕರ್ತವ್ಯಗಳನ್ನು ಪಾಲಿಸಲು ಮತ್ತು ಕಂಪೆನಿಯ ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಗದ ದಿನವೊಂದು ಬರುತ್ತದೆ ಎಂದು ನಾನು ಹೇಳುತ್ತಿದ್ದೆ.ದುರದೃಷ್ಟವಶಾತ್ ಆ ದಿನ ಈಗ ಬಂದುಬಿಟ್ಟಿದೆ. ಇದನ್ನು ನಾನೇ ಮೊದಲಾಗಿ ನಿಮಗೆ ತಿಳಿಸುತ್ತಿದ್ದೇನೆ. ನಾನು ಇನ್ನೂ ಸೇವೆ ಸಲ್ಲಿಸಲು ಸಮರ್ಥನಿದ್ದೇನೆ ಎಂದು ನೀವು ಸೂಚಿಸಿದರೆ, ನಿರ್ದೇಶಕ ಮಂಡಳಿಯ ಅಧ್ಯಕ್ಷನಾಗಿ ಮುಂದುವರೆಯಲು ಇಷ್ಟಪಡುತ್ತೇನೆ.  ನನ್ನ ಉತ್ತರಾಧಿಕಾರಿಯಾಗಿ ಟಿಮ್ ಕುಕ್ ಅವರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಬಲವಾಗಿ ಶಿಫಾರಸು ಮಾಡುತ್ತೇನೆ~.ಈ ಪತ್ರ ಪ್ರಕಟಗೊಂಡ ಕೆಲವೇ ಗಂಟೆಗಳ ಅವಧಿಯಲ್ಲಿ ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರತಿಕ್ರಿಯೆಯೊಂದು ಪ್ರಕಟವಾಗಿತ್ತು. `ಬದುಕಿರುವ ವ್ಯಕ್ತಿಗೆ ಆ್ಯಪಲ್ ನಿರ್ದೇಶಕ ಮಂಡಳಿ ಸಲ್ಲಿಸಬಹುದಾದ ಅಸಹಜ ಶ್ರದ್ಧಾಂಜಲಿ ಇದು. ಒಂದು ಹಂತದಲ್ಲಿ ಕಂಪೆನಿಯಿಂದ ಹೊರಗೆ ಹೋಗಿದ್ದ ಜಾಬ್ಸ್ ಅವರೇ ಈಗ ಅದೇ ಕಂಪೆನಿಗೆ ಚುನಾಯಿತ ಅಧ್ಯಕ್ಷರಾಗುತ್ತಿದ್ದಾರೆ~.`ಆ್ಯಪಲ್‌ನ ಅತ್ಯಂತ ಪ್ರಕಾಶಮಾನವಾದ ಮತ್ತು ಆವಿಷ್ಕಾರದ ದಿನಗಳು ಮುಂದೆ ಇವೆ ಎಂದು ನಾನು ನಂಬುತ್ತೇನೆ. ಹೊಸ ಜವಾಬ್ದಾರಿಯೊಂದಿಗೆ ಹೊಸ ಪ್ರಗತಿಯನ್ನೂ ನೋಡಲು ಬಯಸುತ್ತೇನೆ ಎಂದಿರುವ  ಜಾಬ್ಸ್, ನನ್ನ ಜೀವನದ ಅತ್ಯಮೂಲ್ಯ ಸ್ನೇಹಿತರನ್ನು ನಾನು ಆ್ಯಪಲ್‌ನಲ್ಲಿ ಗಳಿಸಿಕೊಂಡಿದ್ದೆ. ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಲು ಅವಕಾಶ ಲಭಿಸಿದ್ದಕ್ಕೆ ಕೃತಜ್ಞನಾಗಿದ್ದೇನೆ~ ಎಂದು ಹೇಳಿದ್ದಾರೆ. ಟಿಮ್ ಕುಕ್ ಹೊಸ `ಸಿಇಒ~

ಟಿಮ್ ಕುಕ್ ಅವರನ್ನು ಆ್ಯಪಲ್‌ನ ನೂತನ  `ಸಿಇಒ~ ಆಗಿ ನೇಮಕಗೊಂಡಿದ್ದಾರೆ. ಜಾಬ್ಸ್ ಅವರು ವೈದ್ಯಕೀಯ ರಜೆಗೆ ತೆರಳಿದ ಸಂದರ್ಭದಲ್ಲಿ ಕುಕ್ ಅವರೇ `ಸಿಇಒ~ ಹುದ್ದೆಯನ್ನು ನಿಭಾಯಿಸಿದ್ದರು. 50 ವರ್ಷದ ಕುಕ್ 1998ರಲ್ಲಿ ಆ್ಯಪಲ್ ಸಂಸ್ಥೆ ಸೇರಿದ್ದು, ಮುಖ್ಯ ನಿರ್ವಹಣಾ ಅಧಿಕಾರಿ (ಸಿಒಒ) ಸೇರಿದಂತೆ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆ್ಯಪಲ್ ಸೇರುವ ಮುನ್ನ ಅವರು 12 ವರ್ಷಗಳ ಕಾಲ `ಐಬಿಎಂ~ನಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry