ಬುಧವಾರ, ಜೂನ್ 16, 2021
26 °C

ಆಪ್ತರ ಸರಣಿ ಸಭೆ: ಬಿಎಸ್‌ವೈ ನಿಗೂಢ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕು ಎನ್ನುವ ಕೂಗು ಮತ್ತಷ್ಟು ಬಲ ಪಡೆದಿದ್ದು, ಅವರ ಆಪ್ತರು ಗುರುವಾರವೂ ಸರಣಿ ಸಭೆಗಳನ್ನು ನಡೆಸಿದರು.`ಹುಬ್ಬಳ್ಳಿ ಕಾರ್ಯಕ್ರಮದ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು~ ಎಂದು ಯಡಿಯೂರಪ್ಪ ಆಪ್ತರು ಹೇಳಿಕೊಂಡರೂ ಹಿಂದಿನ ನಿಜವಾದ ಉದ್ದೇಶ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರುವುದೇ ಆಗಿದೆ ಎಂದು ಮೂಲಗಳು ದೃಢಪಡಿಸಿವೆ.ಹೈಕೋರ್ಟ್ ಎಫ್‌ಐಆರ್ ರದ್ದು ಮಾಡಿದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಯಡಿಯೂರಪ್ಪ ಅವರ ಅಭಿಮಾನಿಗಳು ಮತ್ತು ಶಾಸಕರು ಅವರ ಮನೆಗೆ ಭೇಟಿ ನೀಡಿ ಅಭಿನಂದಿಸುವ ದೃಶ್ಯ ಕಂಡುಬಂತು.ಯಡಿಯೂರಪ್ಪ ಅವರು ರೇಸ್‌ಕೋರ್ಸ್ ರಸ್ತೆ ಮನೆಯಲ್ಲಿ ಬೆಳಿಗ್ಗೆ ಎರಡು- ಮೂರು ಸುತ್ತು ಹಾಗೂ ಸಂಜೆ ಒಮ್ಮೆ ಡಾಲರ್ಸ್‌ ಕಾಲೊನಿ ಮನೆಯಲ್ಲಿ ಆಪ್ತರ ಜತೆ ಮಾತುಕತೆ ನಡೆಸಿದರು.ಹುಬ್ಬಳ್ಳಿಯಲ್ಲಿ ಇದೇ 11 ರಂದು ನಡೆಯುವ ಕಾರ್ಯಕ್ರಮವನ್ನು ವಿಜಯೋತ್ಸವದ ರೀತಿಯಲ್ಲಿ ಆಚರಿಸಬೇಕು. ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಆ ವೇಳೆಗೆ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳದಿದ್ದರೆ ಶಾಸಕರ ನಿಯೋಗವನ್ನು ಇದೇ 12ರಂದು ದೆಹಲಿಗೆ ಕರೆದೊಯ್ಯಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ನಿಯೋಗದಲ್ಲಿ ತೆರಳಲು ಎಲ್ಲ ಶಾಸಕರಿಗೂ ಆಹ್ವಾನ ನೀಡಲಿದ್ದಾರೆ. ಎಲ್ಲರನ್ನೂ ವರಿಷ್ಠರ ಮುಂದೆ ಹಾಜರುಪಡಿಸಿ, ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕು ಎನ್ನುವ ಬೇಡಿಕೆ ಮಂಡಿಸಲಿದ್ದಾರೆ ಎಂದು ಗೊತ್ತಾಗಿದೆ.ಆದರೆ, ಯಡಿಯೂರಪ್ಪ ಮಾತನಾಡಿ, `ನನ್ನನ್ನು ಈಗಲೇ ಮುಖ್ಯಮಂತ್ರಿ ಮಾಡಿ ಎನ್ನುವುದು ಸರಿಯಲ್ಲ. ಇದರಿಂದ ಪಕ್ಷದಲ್ಲಿ ಗೊಂದಲ ಆಗುತ್ತದೆ. ಶಾಸಕರು, ಅಭಿಮಾನಿಗಳು ಶಾಂತವಾಗಿರಬೇಕು. ವರಿಷ್ಠರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ~ ಎಂದು ಸೂಚಿಸಿದರು. `ಹೈಕೋರ್ಟ್ ತೀರ್ಪಿನಿಂದ ಸಮಾಧಾನ ಆಗಿದೆ. ಇನ್ನು ಮುಂದೆ ನೆಮ್ಮದಿಯಿಂದ ರಾಜ್ಯ ಪ್ರವಾಸ ಮಾಡುತ್ತೇನೆ. ಪಕ್ಷ ಕಟ್ಟುವ ಕಡೆಗೆ ಗಮನ ನೀಡುತ್ತೇನೆ~ ಎಂದು ವಿವರಿಸಿದರು.ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಬಿ.ಪಿ.ಹರೀಶ್, ಬೇಳೂರು ಗೋಪಾಲಕೃಷ್ಣ ಮತ್ತಿತರರು ಪ್ರತ್ಯೇಕವಾಗಿ ಸುದ್ದಿಗಾರರ ಜತೆ ಮಾತನಾಡಿ, `ಯಡಿಯೂರಪ್ಪ ಆರೋಪ ಮುಕ್ತರಾಗಿದ್ದಾರೆ. ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕು~ ಎಂದು ಒತ್ತಾಯಿಸಿದರು. ಸಚಿವರಾದ ಜಗದೀಶ ಶೆಟ್ಟರ್, ವಿ.ಸೋಮಣ್ಣ, ರೇವೂನಾಯಕ ಬೆಳಮಗಿ, ಶೋಭಾ ಕರಂದ್ಲಾಜೆ ಭೆಯಲ್ಲಿ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.