ಆಪ್ತರ ಸಾವು ಮಗುವಿನ ನೋವು

7

ಆಪ್ತರ ಸಾವು ಮಗುವಿನ ನೋವು

Published:
Updated:
ಆಪ್ತರ ಸಾವು ಮಗುವಿನ ನೋವು

ಸಾವು ಎಂಬುದು ಬದುಕಿನ ಅವಿಭಾಜ್ಯ ಅಂಗ. ವ್ಯಕ್ತಿಯೊಬ್ಬರು ತೀರಿಕೊಂಡಾಗ, ಕುಟುಂಬದ ಎಲ್ಲ ಸದಸ್ಯರ ಮೇಲೂ ಅದು ಪರಿಣಾಮ ಬೀರುತ್ತದೆ. ಆದರೆ, ಸಣ್ಣ ಮಕ್ಕಳು ತಮ್ಮ ಹತ್ತಿರದ ವ್ಯಕ್ತಿ ಇಲ್ಲವಾದಾಗ ಪ್ರತಿಕ್ರಿಯಿಸುವ ರೀತಿ ವಿಭಿನ್ನವಾಗಿರುತ್ತದೆ. ಈ ಅಗಲಿಕೆ ಮಕ್ಕಳ ಮನಸ್ಸಿನ ಮೇಲೆ ತೀವ್ರವಾದ ಪರಿಣಾಮ ಬೀರಿ, ನಂತರದ ಅವರ ಬೆಳವಣಿಗೆಯಲ್ಲಿ ಹಾನಿ ಉಂಟು ಮಾಡಬಹುದು. ಮೊದಲೇ ದುಃಖದ ಕಡಲಲ್ಲಿ ಮುಳುಗಿರುವ ಕುಟುಂಬದ ಸದಸ್ಯರು, ಮಕ್ಕಳಿಗೆ ಸರಿಯಾದ ಸಾಂತ್ವನ ನೀಡುವ ಸ್ಥಿತಿಯಲ್ಲಿ ಇರುವುದಿಲ್ಲ. ಇದು ಕೂಡ ಮಕ್ಕಳ ಮನಸ್ಸಿಗೆ ಆಘಾತವನ್ನು ಉಂಟು ಮಾಡಬಹುದು.ಸಾವಿಗೆ ಮಗು ಪ್ರತಿಕ್ರಿಯಿಸುವ ರೀತಿ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.1. ತೀರಿಕೊಂಡ ವ್ಯಕ್ತಿಯೊಂದಿಗೆ ಮಗುವಿಗಿರುವ ಸಂಬಂಧ

ಪೋಷಕರ ಅಥವಾ ಸಹೋದರ/ ಸಹೋದರಿಯ ಸಾವು ದೂರದ ಸಂಬಂಧಿಯ ಸಾವಿಗಿಂತ ಹೆಚ್ಚಿನ ಪರಿಣಾಮ ಬೀರುತ್ತದೆ. ಆದರೆ ಸಂಬಂಧ ಏನೇ ಇರಲಿ, ಮರಣಿಸಿದ ವ್ಯಕ್ತಿ ಮಗುವಿಗೆ ಎಷ್ಟು ಆತ್ಮೀಯರಾಗಿದ್ದರು ಎನ್ನುವುದು ಮುಖ್ಯ. ಹಾಗೆಯೇ ಮಗುವಿನ ದೈನಂದಿನ ಚಟುವಟಿಕೆಗಳಲ್ಲಿ ಆ ವ್ಯಕ್ತಿ ಎಷ್ಟು ಸಕ್ರಿಯ  ಪಾತ್ರ ವಹಿಸುತ್ತಿದ್ದರು ಎನ್ನುವುದು ಕೂಡ ಪ್ರಮುಖವಾಗುತ್ತದೆ.

2. ಮಗುವಿನ ವಯಸ್ಸು

ಮೂರು ವರ್ಷದ ಕೆಳಗಿನ ಮಕ್ಕಳಿಗೆ ಕುಟುಂಬದವರು ದುಃಖಿತರಾಗಿದ್ದಾರೆ ಎಂದಷ್ಟೇ ಅರ್ಥವಾಗುತ್ತದೆ. ಆದರೆ ಸಾವು/ ಅಗಲಿಕೆಯ ಬಗ್ಗೆ ಹೆಚ್ಚು ತಿಳಿಯುವುದಿಲ್ಲ.

3ರಿಂದ 5 ವರ್ಷದ ಒಳಗಿನ ಮಕ್ಕಳು ಸಾವನ್ನು ತಾತ್ಕಾಲಿಕವಾದ ಘಟನೆ ಎಂದು ಅರ್ಥ ಮಾಡಿಕೊಳ್ಳುತ್ತಾರೆ. ಕೆಲವು ಸಲ ಸಾವಿಗೆ ಕಾರಣಗಳನ್ನು ಬೇರೆಯ ರೀತಿ ಯೋಚಿಸುತ್ತಾರೆ. ಉದಾಹರಣೆಗೆ ಅವೆುರಿಕದ ವಿಶ್ವ ವಾಣಿಜ್ಯ ಕೇಂದ್ರಕ್ಕೆ ಬಾಂಬ್ ಬಿದ್ದು ಸಾವಿರಾರು ಜನ ತೀರಿಕೊಂಡ ಘಟನೆಯನ್ನು ಈ ವಯಸ್ಸಿನ ಮಕ್ಕಳು, ಎತ್ತರದ ಕಟ್ಟಡಗಳಿಗೆ ಹೋದರೆ ಸಾವು ಬರುತ್ತದೆ ಎಂದು ಅರ್ಥ ಮಾಡಿಕೊಳ್ಳಬಹುದು.5ರಿಂದ 9 ಒಂಬತ್ತು ವರ್ಷದ ಮಕ್ಕಳು ಸಾವನ್ನು ದೊಡ್ಡವರ ಹಾಗೆ ಕೆಲವು ವಿಷಯಗಳಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಈ ಮಕ್ಕಳಿಗೆ ಅರ್ಥವಾಗುವ ಸಂಗತಿ ಎಂದರೆ, ಸಾವು ಎಲ್ಲ ಜೀವಂತ ಮನುಷ್ಯರು, ಪ್ರಾಣಿಗಳಿಗೂ ಬರುವಂಥಾದ್ದು, ಇದು ಶಾಶ್ವತವಾದ ಅಗಲಿಕೆ.10 ವರ್ಷ ಮೇಲ್ಪಟ್ಟ ಮಕ್ಕಳು ಸಾವು ಎನ್ನುವುದು ಬೇರೆಯವರ ಮೇಲೆ ಯಾವ ರೀತಿಯ ಭಾವನಾತ್ಮಕವಾದ ಪರಿಣಾಮ ಬೀರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬಲ್ಲರು.

3. ಸಾವಿನ ಸಂದರ್ಭ

ಸಾವು ಸಂಭವಿಸಿದ ಸಂದರ್ಭ ಕೂಡ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಆ ಕುಟುಂಬದಲ್ಲಿ ಇರುವ ಸಂಸ್ಕೃತಿ, ವಿಧಿವಿಧಾನಗಳು ಕೂಡ ಮುಖ್ಯ. ಸಾವು ಸಂಭವಿಸಿದ ರೀತಿ ಭಯಾನಕವಾಗಿದ್ದರೆ, ಮಗುವಿನಲ್ಲಿ ಹೆಚ್ಚಿನ ಭಾವನಾತ್ಮಕ ಸಮಸ್ಯೆಗಳು ಬರಬಹುದು. ಸಾವಿನಿಂದ ಕುಟುಂಬದ ಮೇಲಾಗುವ ಆರ್ಥಿಕ, ಸಾಮಾಜಿಕ ಸಮಸ್ಯೆಗಳು ಮಗುವಿನ ಮನಸ್ಸಿಗೆ ಆಘಾತ ನೀಡಬಹುದು.ಇಂತಹುದಕ್ಕೆ ಮಗು ಭಾವನಾತ್ಮಕವಾಗಿ ಏನನ್ನೂ ವ್ಯಕ್ತಪಡಿಸದೇ ಹೋಗಬಹುದು. ಆದರೆ ಅದರ ನಡವಳಿಕೆಯಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಚಿಕ್ಕ ಪುಟ್ಟ ಕಾರಣಗಳಿಗೆ ಕೋಪಗೊಳ್ಳುವುದು, ಚಿಕ್ಕ ಮಗುವಿನ ತರಹ ಹಟ ಮಾಡುವುದು, `ತಾನೇ ಇದಕ್ಕೆ ಕಾರಣವೇನೋ' ಎಂಬ ತಪ್ಪಿತಸ್ಥ ಭಾವನೆ ಹೊಂದುವುದು, ಮಂಕಾಗಿರುವುದು, ಶಾಲೆಯಲ್ಲಿ ಗಮನ ಕೊಡದೇ ಇರುವುದು ಇತ್ಯಾದಿ.ಮತ್ತೆ ಮತ್ತೆ ಅದೇ ಪ್ರಶ್ನೆಗಳನ್ನು ಮಕ್ಕಳು ಕೇಳಬಹುದು. ಇದು ಅವರಿಗೆ ಅರ್ಥವಾಗಿಲ್ಲ ಎಂದಲ್ಲ. ವಿಷಯವನ್ನು ನಂಬಲು ಅಸಾಧ್ಯವಾಗಿ ಅದು ಹಾಗೆ ಮಾಡಬಹುದು.

ಶೋಕದಲ್ಲಿರುವ ಮಗುವಿಗೆ ನೆರವಾಗಿ

ಮೊದಲು ಮಗುವಿನ ವಯಸ್ಸಿಗೆ ಅನುಗುಣವಾಗಿ, ಅದು ಪ್ರತಿಕ್ರಿಯಿಸುವ  ರೀತಿ ಹಿರಿಯರಿಗೆ ತಿಳಿದಿರಬೇಕು.ಸಾವಿಗೆ ಸಂಬಂಧಿಸಿದ ವಿಷಯಗಳನ್ನು ಮಕ್ಕಳ ಮುಂದೆ ಮಾತನಾಡದೇ ಮುಚ್ಚಿಡುವುದು ತಪ್ಪು.ಮುಕ್ತವಾಗಿ ಮಗುವಿಗೆ ಅರ್ಥವಾಗುವಷ್ಟು ಹೇಳಿ, ಮಗು ನಿಮ್ಮಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿ.ಎಷ್ಟೊಂದು ಸಲ ಮಗು ತಾನು ಸತ್ತ ವ್ಯಕ್ತಿಯನ್ನು ಮರೆತೇ ಬಿಡುತ್ತೇನೇನೋ ಎಂದು ಭಯ ಪಡುತ್ತದೆ. ಆ ಸಂದರ್ಭದಲ್ಲಿ ಆಗಾಗ್ಗೆ ಮಗುವಿನೊಂದಿಗೆ ತೀರಿಕೊಂಡ ವ್ಯಕ್ತಿ ಕಳೆದ ಸಂತಸದ ಕ್ಷಣಗಳನ್ನು ಮೆಲುಕು ಹಾಕಬೇಕು. ಆ ವ್ಯಕ್ತಿಯ ಭಾವಚಿತ್ರವನ್ನು ನೋಡುತ್ತಾ ಪ್ರಾರ್ಥನೆ ಮಾಡುವ ರೂಢಿಯನ್ನು ಮಾಡಿಸಬೇಕು.ಅಕಸ್ಮಾತ್ ಕೆಲವು ವಾರಗಳ ನಂತರವೂ ಮಗು ದುಃಖದಿಂದ ಇದ್ದು ಸರಿಯಾಗಿ ಊಟ, ನಿದ್ರೆ ಮಾಡದೇ ಇದ್ದರೆ, ಮನೋವೈದ್ಯರನ್ನು ಕಾಣುವುದು ಒಳಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry