ಭಾನುವಾರ, ಜೂನ್ 13, 2021
29 °C
ಟೆಸ್ಟ್‌ ಆಡುವ ರಾಷ್ಟ್ರದ ಎದುರು ಚೊಚ್ಚಲ ಗೆಲುವು ಪಡೆದ ಹೆಮ್ಮೆ

ಆಫ್ಘನ್‌ ಐತಿಹಾಸಿಕ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫಟುಲ್ಲಾ, ಬಾಂಗ್ಲಾದೇಶ (ಪಿಟಿಐ): ಚೊಚ್ಚಲ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಆಡುತ್ತಿರುವ ಆಫ್ಘಾನಿಸ್ತಾನ ತಂಡ ಅನುಭವಿ ಬಾಂಗ್ಲಾದೇಶ ತಂಡವನ್ನು 32 ರನ್‌ಗಳಿಂದ ಮಣಿಸಿ ಐತಿಹಾಸಿಕ ಸಾಧನೆ ಮಾಡಿತು.ಖಾನ್‌ ಸಾಹೇಬ್‌ ಒಸ್ಮಾನ್‌ ಅಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆಫ್ಘನ್‌ ಮಹತ್ವದ ಟೂರ್ನಿಯೊಂದರಲ್ಲಿ ಮೊದಲ ಗೆಲುವು ಪಡೆಯಿತು. ಟೆಸ್ಟ್‌ ಆಡುವ ರಾಷ್ಟ್ರದ ಎದುರು ಆಫ್ಘನ್‌ ಪಡೆದ ಚೊಚ್ಚಲ ಜಯ ಇದು. ಆದ್ದರಿಂದ ಈ ತಂಡಕ್ಕೆ ಐತಿಹಾಸಿಕ ಸಾಧನೆಯ ಸಂಭ್ರಮ.ಟಾಸ್ ಗೆದ್ದ ಮಶ್ಫಿಕರ್ ರಹೀಮ್‌ ಸಾರಥ್ಯದ ಬಾಂಗ್ಲಾ ತಂಡ ಫೀಲ್ಡಿಂಗ್‌ ಆರಿಸಿಕೊಂಡಿತು. ಈ ಅವಕಾಶ ಬಳಸಿಕೊಂಡ ಆಫ್ಘನ್‌ ಅಸ್ಗರ್‌ ಸ್ಟಾನಿಜಿಯಾ (90, 103ಎಸೆತ, 6ಬೌಂಡರಿ, 3 ಸಿಕ್ಸರ್‌) ಜವಾಬ್ದಾರಿಯುತ ಆಟದ ನೆರವಿನಿಂದ 254 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿತು.ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಪರದಾಡಿದ ಬಾಂಗ್ಲಾ 47.5 ಓವರ್‌ಗಳಲ್ಲಿ 222 ರನ್‌ ಕಲೆ ಹಾಕುವಷ್ಟರಲ್ಲಿ ಆಲ್‌ ಔಟ್‌ ಆಯಿತು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಅನುಭವ ಇಲ್ಲದ ಆಫ್ಘನ್  ಶಿಸ್ತುಬದ್ಧ ಆಟ ತೋರಿ ಮೆಚ್ಚುಗೆಗೆ ಪಾತ್ರವಾಯಿತು. ಈ ತಂಡ ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನಕ್ಕೂ ಪ್ರಬಲ ಪೈಪೋಟಿ ಒಡ್ಡಿತ್ತು.ಅಸ್ಗರ್‌ ಅಮೋಘ ಆಟ:  ಆರಂಭಿಕ ಬ್ಯಾಟ್ಸ್‌ಮನ್‌ಗಳು ವಿಫಲರಾದರೂ, ಅಸ್ಗರ್‌ ಮತ್ತು ಮಂಗಲ್‌ ಅಮೋಘ ಆಟ ತೋರಿದ್ದರಿಂದ ಆಫ್ಘನ್‌ ತಂಡಕ್ಕೆ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು. ಈ ತಂಡ 2011ರಲ್ಲಿ ಐಸಿಸಿ ಮಾನ್ಯತೆ ಪಡೆದುಕೊಂಡಿತ್ತು.ಸಾಂಘಿಕ ಹೋರಾಟದ ಫಲ: ‘ತಂಡದ ಎಲ್ಲಾ ಆಟಗಾರರು ಸೇರಿ ಸಾಂಘಿಕ ಹೋರಾಟ ತೋರಿದ್ದರಿಂದ ಗೆಲುವು ಪಡೆಯಲು ಸಾಧ್ಯವಾಯಿತು’ ಎಂದು ಆಫ್ಘನ್‌ ತಂಡದ ನಾಯಕ ಮೊಹಮ್ಮದ್‌ ನಬಿ ಸಂತೋಷ ಹಂಚಿಕೊಂಡರು.‘ಆಫ್ಘನ್‌ ತಂಡ ಗೆಲ್ಲಬೇಕು ಎಂದು ನಮ್ಮ ರಾಷ್ಟ್ರದ ಸಾಕಷ್ಟು ಕ್ರಿಕೆಟ್‌ ಪ್ರೇಮಿಗಳು ಪ್ರಾರ್ಥಿಸಿದ್ದರು. ನಮಗೆ ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು’ ಎಂದೂ ಅವರು ನುಡಿದರು.ಸಂಕ್ಷಿಪ್ತ ಸ್ಕೋರು: ಆಫ್ಘಾನಿಸ್ತಾನ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 254. (ಕರೀಮ್‌ ಸಾಧಿಕ್‌ 12, ನಜಿಬುಲ್ಲಾ ಜದ್ರಾನ್‌ 21, ಅಸ್ಗರ್‌ ಸ್ಟಾನಿಜಿಯಾ ಔಟಾಗದೆ 90, ನಾರ್ವಜ್‌ ಮಂಡಲ್‌ 24, ಸಮಿಯುಲ್ಲಾ ಶೇನ್‌ವಾರಿ 81; ರುಬೆಲ್‌ ಹೊಸೇನ್‌ 61ಕ್ಕೆ1, ಅರಾಫರ್‌ ಸನ್ನಿ 44ಕ್ಕೆ2; ಮಾಮಿನಲ್‌ ಹಕ್‌ 38ಕ್ಕೆ1).

ಬಾಂಗ್ಲಾದೇಶ 47.5 ಓವರ್‌ಗಳಲ್ಲಿ 222 (ಮಾಮಿನಲ್‌ ಹಕ್‌ 50, ಮುಶ್ಫಿಕರ್ ರಹೀಮ್‌ 23, ನಾಸಿರ್‌ ಹೊಸೇನ್‌ 41, ನಯೀಮ್‌ ಇಸ್ಲಾಮ್‌ 35, ಜುಯಿರಾ ರೆಹಮಾನ್‌ 41, ರುಬೆಲ್‌ ಹೊಸೇನ್‌ 17; ಶಾಪೂರ್‌ ಜದ್ರನ್‌ 39ಕ್ಕೆ2, ಹಮೀದ್‌ ಹಸನ್‌ 26ಕ್ಕೆ2, ಮಿರ್ವಾಯಿಸ್‌ ಅಶ್ರಫ್‌ 51ಕ್ಕೆ1, ಮೊಹಮ್ಮದ್‌ ನಭಿ 44ಕ್ಕೆ3). ಫಲಿತಾಂಶ: ಆಫ್ಘಾನಿಸ್ತಾನಕ್ಕೆ 32 ರನ್‌ ಜಯ. ಪಂದ್ಯ ಶ್ರೇಷ್ಠ: ಸಮಿಯುಲ್ಲಾ ಶೇನ್‌ವಾರಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.