ಆಫ್ಘನ್ ರೂಪಾಂತರಕ್ಕೆ ಭಾರತದ ಸಾಫ್ಟ್ ಪವರ್ ಮುಖ್ಯ: ನ್ಯಾನ್ಸಿ ಪೊವೆಲ್

ಮಂಗಳವಾರ, ಜೂಲೈ 23, 2019
27 °C

ಆಫ್ಘನ್ ರೂಪಾಂತರಕ್ಕೆ ಭಾರತದ ಸಾಫ್ಟ್ ಪವರ್ ಮುಖ್ಯ: ನ್ಯಾನ್ಸಿ ಪೊವೆಲ್

Published:
Updated:

ಏಪ್ರಿಲ್ ತಿಂಗಳಲ್ಲಿ ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡ ನ್ಯಾನ್ಸಿ ಪೊವೆಲ್ (65) ಅಮೆರಿಕ ವಿದೇಶಾಂಗ ಇಲಾಖೆಯಲ್ಲಿ 34 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿಭಾಯಿಸಿದ ನುರಿತ ರಾಜತಂತ್ರಜ್ಞೆ.  ಅವರಿಗೆ ಭಾರತ ಹೊಸದಲ್ಲ. 1992ರಿಂದ 1995ರವರೆಗೆ ಭಾರತದಲ್ಲಿ ಕೊಲ್ಕೊತ್ತದಲ್ಲಿನ ಅಮೆರಿಕ ದೂತಾವಾಸದಲ್ಲಿ ಹಾಗೂ ನವದೆಹಲಿಯ ಅಮೆರಿಕ ರಾಯಭಾರ ಕಚೇರಿಯಲ್ಲಿ ರಾಜತಂತ್ರಜ್ಞೆಯಾಗಿ ಕಾರ್ಯ ನಿರ್ವಹಿಸಿದ್ದರು. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನೇಪಾಳಗಳಲ್ಲೂ ಅಮೆರಿಕ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದವರು ಅವರು. ರಾಜತಾಂತ್ರಿಕ ಕಾರ್ಯ ನಿಮಿತ್ತ  ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ  `ಪ್ರಜಾವಾಣಿ~ ಜೊತೆ ನಡೆಸಿದ ಮಾತುಕತೆ ಇಲ್ಲಿದೆ. ಲಾಲ್‌ಬಾಗ್‌ನಲ್ಲಿ ವಾಯುವಿಹಾರದಿಂದ ಹಿಡಿದು ಆಫ್ಘಾನಿಸ್ತಾನದಲ್ಲಿ ಪ್ರಜಾಸತ್ತೆ ನಿರ್ಮಾಣಕ್ಕೆ ಭಾರತದ`ಸಾಫ್ಟ್ ಪವರ್~ ಬೀರಬಹುದಾದ ಪ್ರಭಾವದವರೆಗೆ ಅವರು ಮಾತನಾಡಿದ ವಿವರಗಳು ಇಲ್ಲಿವೆ.

ಪ್ರಜಾವಾಣಿ: ತಾವು ಭಾರತಕ್ಕೆ ಅಮೆರಿಕದ ಮೊದಲ ಮಹಿಳಾ ರಾಯಭಾರಿ. ಕಾಕತಾಳೀಯವಾಗಿ ಅಮೆರಿಕಕ್ಕೆ ಭಾರತದ ರಾಯಭಾರಿಯೂ ಮಹಿಳೆ (ನಿರುಪಮಾ ರಾವ್). ಜೊತೆಗೆ ಅಮೆರಿಕಕ್ಕೆ ನಮ್ಮ ನೆರೆಯ ಪಾಕಿಸ್ತಾನದ ರಾಯಭಾರಿಯೂ ಮಹಿಳೆಯೆ (ಶೆರಿ ರೆಹಮಾನ್). ಮಹಿಳಾ ರಾಯಭಾರಿಗಳು ರಾಜತಾಂತ್ರಿಕತೆಗೆ ಹೊಸ ಆಯಾಮ ತರಬಹುದೆನಿಸುತ್ತದೆಯೆ?ನ್ಯಾನ್ಸಿ ಪೊವೆಲ್: ನಾನು ನನ್ನ ಬಗೆಗಿಂತ ಹೆಚ್ಚಾಗಿ  ಈ ಇಬ್ಬರು ಮಹಿಳೆಯರ ಬಗ್ಗೆ ಹೇಳಲು ಇಷ್ಟಪಡುತ್ತೇನೆ. ಅವರಿಬ್ಬರನ್ನೂ ವಾಷಿಂಗ್ಟನ್‌ನಲ್ಲಿ ನೋಡಲು ನನಗೆ ಸಂತಸವಾಗುತ್ತದೆ.  ನಾನು ಭಾರತಕ್ಕೆ ಬರುವ ಮೊದಲು ನಿರುಪಮಾ ರಾವ್ ಜೊತೆ ಬಹಳ ಸಲ ಭೇಟಿಯಾಗುವ ಅವಕಾಶ ಲಭಿಸಿತ್ತು. `ಭಾರತ -ಅಮೆರಿಕ ಕಾರ್ಯತಂತ್ರ ಸಂವಾದ~ ಆರಂಭವಾಗುವ ಮೊದಲು ಬಾಂಧವ್ಯಗಳ ಬಲವರ್ಧನೆಗೆ ನಾವು ಜಂಟಿ ಕಾರ್ಯಕ್ರಮ ನಡೆಸಿದ್ದೆವು. ಹೊಸ ವಿಚಾರಗಳ ಕುರಿತಂತೆ ಅವರ ಆಸಕ್ತಿ ವಿಶೇಷ. ಸದಾ `ಟ್ವೀಟ್~ ಮಾಡುತ್ತಾ ಅಮೆರಿಕದ ನೆಲದಲ್ಲಿ  ಕ್ಲಿಷ್ಟ ಕಾರ್ಯಗಳನ್ನು ನಿರ್ವಹಿಸುವ  ನಿರುಪಮಾ ರಾವ್ ಸಾಮಾಜಿಕ ಮಾಧ್ಯಮಗಳ ವಿಚಾರದಲ್ಲಿ ಒಂದು ದೊಡ್ಡ ಅಚ್ಚರಿ. ಈ ಇಬ್ಬರೂ  ರೂಢಿಗತ ಸ್ತ್ರೀ ಮಾದರಿಗಳಲ್ಲ (ಸ್ಟೀರಿಯೊಟೈಪ್ಸ್). ಸರ್ಕಾರಿ ಸೇವೆಗಳಲ್ಲಿ ಯಶಸ್ವಿಯಾಗಬಹುದು ಎಂಬ ಬಗ್ಗೆ ಯುವ ಮಹಿಳೆಯರಿಗೆ ದೊಡ್ಡ ಮಾದರಿಗಳಾಗುವಂತಹವರು ಇವರು. ರಾಜತಾಂತ್ರಿಕ ನೆಲೆಯಲ್ಲಿ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಅದು ಮುಖ್ಯವಾದುದು.ಫೆಬ್ರುವರಿ ತಿಂಗಳಲ್ಲಿ ನಡೆದ ಭಾರತ - ಅಮೆರಿಕ ಕಾರ್ಯತಂತ್ರ ಮಾತುಕತೆಗಳು ಮಹಿಳಾ ಸಬಲೀಕರಣದ ವಿಚಾರಗಳನ್ನೂ ಒಳಗೊಂಡಿದೆ. ಈ ವಿಚಾರವನ್ನು ಹೇಗೆ ಮುಂದುವರಿಸುವಿರಿ?

ನಾವು ಬಹಳಷ್ಟು ಕಾರ್ಯಕ್ರಮಗಳ ಬಗ್ಗೆ ಕೆಲಸ ಮಾಡುತ್ತಿದ್ದೇವೆ.  ವಿಶೇಷವಾಗಿ ಮಹಿಳೆಯರ ಆರೋಗ್ಯ ಹಾಗೂ ಮಗುವಿನ ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸಲಾಗುತ್ತಿದೆ. ವಿಶ್ವದ ಪ್ರತಿ ಮಗುವೂ ಐದನೇ ಹುಟ್ಟುಹಬ್ಬ ಆಚರಿಸಲು ಬದುಕಿರಬೇಕೆಂಬುದು ಮುಖ್ಯ. ಈ ದಿಸೆಯಲ್ಲಿ ಅಮೆರಿಕ ಆರಂಭಿಸಿರುವ ವಿಶ್ವದಾದ್ಯಂತದ ಪ್ರಯತ್ನಗಳಿಗೆ,ಇಥಿಯೋಪಿಯಾದ ಜೊತೆಗೆ ಭಾರತ ದೊಡ್ಡ ಪಾಲುದಾರ ರಾಷ್ಟ್ರವಾಗಿದೆ .ಇದಕ್ಕಾಗಿ ಭಾರತದಲ್ಲಿನ ಎನ್‌ಜಿಓ ಗಳು, ಸರ್ಕಾರಿ ಸಂಸ್ಥೆಗಳಿಂದ ಸೃಜನಾತ್ಮಕ ಸಲಹೆಗಳನ್ನು ಪಡೆದುಕೊಂಡು ಅವನ್ನು  ಕಾರ್ಯಕ್ರಮಗಳಾಗಿ ಪರಿವರ್ತಿಸುವ  ಆಶಯ ಹೊಂದಲಾಗಿದೆ. ಮೂರು ಆಫ್ರಿಕನ್ ರಾಷ್ಟ್ರಗಳಲ್ಲಿ ಆರೋಗ್ಯ ಹಾಗೂ ಮಹಿಳಾ ವಿಚಾರಗಳಿಗೆ ಸಂಬಂಧಿಸಿದಂತೆ ಅಮೆರಿಕ ಹಾಗೂ ಭಾರತ ಒಟ್ಟಾಗಿ  ಕೆಲಸ ನಿರ್ವಹಿಸುತ್ತಿವೆ.ಆಫ್ಘಾನಿಸ್ತಾನದಲ್ಲಿನ ಮಹಿಳಾ ಸಣ್ಣ ಉದ್ದಿಮೆದಾರರಿಗೆ ನೆರವು ನೀಡುವುದೂ ಮುಖ್ಯ ವಿಚಾರ. ಇದಕ್ಕಾಗಿ ಭಾರತದ `ಸೇವಾ~ (ಗುಜರಾತ್‌ನ ಇಳಾ ಭಟ್ ಸ್ಥಾಪಿಸಿದ ಸೆಲ್ಫ್ ಎಂಪ್ಲಾಯ್ಡ ವಿಮೆನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ)ದ ಪರಿಣತಿಯನ್ನು ಬಳಸಿಕೊಳ್ಳಬಹುದು. ಅತ್ಯಂತ ಯಶಸ್ವಿಯಾಗಿರುವ ಈ ಮಾದರಿಯನ್ನು  ಅಲ್ಲಿನ ಸರ್ಕಾರ ಹಾಗೂ ಮಹಿಳಾ ಸಂಘಟನೆಗಳ ಗಮನಕ್ಕೆ ತರಲಾಗುವುದು. ನಾನು ಹಿಂದೆ ಟೀಚರ್ ಆಗ್ದ್ದಿದವಳು. ಶಿಕ್ಷಣದ ವಿಚಾರಗಳ ಬಗ್ಗೆ ನನಗೆ ಯಾವಾಗಲೂ ಆಸಕ್ತಿ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬಾಂಧವ್ಯಗಳನ್ನು ರೂಪಿಸುವುದರ ಬಗ್ಗೆ ನಾವು ಗಮನ ಹರಿಸಿದ್ದೇವೆ.  ಭಾರತಕ್ಕೆ ಅಂತರರಾಷ್ಟ್ರೀಯ ಕಾಲೇಜುಗಳು ಹಾಗೂ ಹೊಸ ವಿಶ್ವವಿದ್ಯಾಲಯಗಳ ಆಗಮನಕ್ಕೆ ಅವಕಾಶ ಕಲ್ಪಿಸುವ ದಿಸೆಯಲ್ಲಿ ಪ್ರಯತ್ನಗಳಾಗಬೇಕಿದೆ. ಅಮೆರಿಕದಲ್ಲಿರುವ ಒಂದು ಲಕ್ಷ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ನನಗೆ ಭಾರಿ ಹೆಮ್ಮೆ.  ಆದರೆ  ಹೆಚ್ಚು ಅಮೆರಿಕನ್ ವಿದ್ಯಾರ್ಥಿಗಳು ಭಾರತದಲ್ಲೂ ಇರಬೇಕೆಂದು ನಾನು ಬಯಸುತ್ತೇನೆ.ಇದಕ್ಕಾಗಿ ಹೇಗೆ ಕಾರ್ಯಕ್ರಮಗಳನ್ನು ಸೃಷ್ಟಿಸಬಹುದು? ಎಂಬುದನ್ನು ಗಮನಿಸಬೇಕಿದೆ. ಹೊಸ ಉದ್ಯೋಗಗಳಿಗೆ ಬೇಕಾಗುವ ಕೌಶಲಗಳನ್ನು ಬೆಳೆಸುವ ಅಗತ್ಯಗಳ ಬಗ್ಗೆ ಬೆಂಗಳೂರಿನ ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಆರೋಗ್ಯ ಕ್ಷೇತ್ರದ್ಲ್ಲಲೂ ನಮ್ಮ ಸಹಭಾಗಿತ್ವ ಹೆಚ್ಚಿದೆ. ದುರದೃಷ್ಟವಶಾತ್ ಡಯಾಬಿಟಿಸ್, ಹೃದಯ  ಕಾಯಿಲೆಗಳ ವಿರುದ್ಧ ಎರಡೂ ರಾಷ್ಟ್ರಗಳು ಗಮನ ಹರಿಸಬೇಕಿವೆ. ಬಹುಶಃ ಶ್ರೀಮಂತರಾಗುತ್ತಾ ಹೋದಂತೆ ನಮ್ಮ ದೇಹಗಳ ಬೊಜ್ಜೂ ಬೆಳೆಯುತ್ತದೆ. ಅದರ ನಿರ್ವಹಣೆಯೂ ದೊಡ್ಡ ವಿಚಾರವಾಗುತ್ತದೆ. ನನ್ನ ರಾಜತಾಂತ್ರಿಕ ಕೆರಿಯರ್‌ನಲ್ಲಿ ನನಗೆ ಈಗಿರುವ ಸಮಯ ಬಹಳ ಕಡಿಮೆ.ಸರ್ವವ್ಯಾಪಿ ಇನ್‌ಫ್ಲುಯೆಂಜಾ ನಿರ್ವಹಣೆಯಲ್ಲಿ ನನ್ನ ರಾಜತಾಂತ್ರಿಕ ಪ್ರಯತ್ನವನ್ನು ನಾನು ಮುಂದುವರಿಸಿದ್ದೇನೆ. ಈ ಅಪಾಯ ಸದ್ಯದ ವಾಸ್ತವ. ಭಾರತ - ಅಮೆರಿಕ ನಡುವೆ  ಜನರ ಸಂಚಾರ ಹೆಚ್ಚಾಗಿರುವುದರಿಂದ ಈ ಅಪಾಯದ ನಿರ್ವಹಣೆ ಮುಖ್ಯ. ಎಚ್‌ಐವಿ ಕುರಿತಂತೆ ಭಾರತ - ಅಮೆರಿಕದ ಸಹಭಾಗಿತ್ವ ಯಶಸ್ವಿಯಾಗಿ ಮುಂದುವರೆದಿದೆ

 

ಅಮೆರಿಕನ್ ವಿಶ್ವವಿದ್ಯಾಲಯಗಳನ್ನು ಭಾರತಕ್ಕೆ ತರುವ ವಿಚಾರದ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅನೇಕ ಬಾರಿ ಮಾತನಾಡಿದ್ದಾರೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಇದು ಒಳ್ಳೆಯ ವಿಚಾರ. ಯೂನಿವರ್ಸಿಟಿಗಳು ಹಾಗೂ ಕಾಲೇಜುಗಳ ಮಟ್ಟದಲ್ಲಿ ಈ ಬಗ್ಗೆ ಪ್ರಯತ್ನಗಳಾಗಬೇಕಿವೆ. ಕೆಲವು ಸಂಸ್ಥೆಗಳು ಈಗಾಗಲೇ ಈ ಕುರಿತ ಪ್ರಸ್ತಾವಗಳನ್ನು ಹೊಂದಿದ್ದರೂ ಅನುಷ್ಠಾನಗೊಳಿಸುವಲ್ಲಿ ಕಷ್ಟ ಎದುರಿಸುತ್ತಿವೆ. ಅಮೆರಿಕದ ಅನೇಕ ವಿಶ್ವವಿದ್ಯಾಲಯಗಳೂ ಈ ಬಗ್ಗೆ ಆಸಕ್ತಿ ತಳೆದಿವೆ. ಅನೇಕ ಚಿಕ್ಕ ಚಿಕ್ಕ  ಶೈಕ್ಷಣಿಕ ಕಾರ್ಯಕ್ರಮಗಳು, ಪ್ರೊಫೆಸರ್ - ವಿದ್ಯಾರ್ಥಿಗಳ ನಡುವಿನ ವೈಯಕ್ತಿಕ ಮಟ್ಟದ ಸಂಬಂಧಗಳು ಅನೌಪಚಾರಿಕ ನೆಲೆಗಳಲ್ಲಿ ರಾಷ್ಟ್ರದಾದ್ಯಂತ ಇವೆ. ಇವನ್ನು ಔಪಚಾರಿಕಗೊಳಿಸುವ ನಿಟ್ಟಿನಲ್ಲಿ ಕೆಲಸಗಳಾಗಬೇಕಿದೆ. ನಿಮ್ಮಲ್ಲಿ ಈಗಾಗಲೇ ಒಳ್ಳೆಯ ಶೈಕ್ಷಣಿಕ ಸಂಸ್ಥೆಗಳಿವೆ. ಆದರೆ ಇಂತಹ ಸಂಸ್ಥೆಗಳಲ್ಲಿ ಎಲ್ಲರಿಗೂ ಸೀಟುಗಳು ಸಿಗುವುದಿಲ್ಲ. ದೆಹಲಿಯ ವೃತ್ತಪತ್ರಿಕೆಗಳಲ್ಲಿ  ಇದು ದಿನನಿತ್ಯದ ಸುದ್ದಿಯಾಗುತ್ತಿದೆ. ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಲು ಯತ್ನಿಸಬೇಕಿದೆ. ಇತ್ತೀಚೆಗೆ ಪ್ರಕಟಿಸಲಾದ ಒಬಾಮಾ - ಸಿಂಗ್ ಉಪಕ್ರಮದ ಅನ್ವಯ ಸಂಶೋಧನೆ ಹಾಗೂ ತರಬೇತಿಗಳಿಗೆ ಸಂಬಂಧಿಸಿದಂತೆ ಮೊಂಟಾನಾ ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಪಾಲುದಾರಿಕೆ ಪಡೆದುಕೊಂಡಿವೆ. ಹಾಗೆಯೇ ಕಾರ್ನೆಲ್ ವಿಶ್ವವಿದ್ಯಾಲಯ ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜೊತೆ ಪಾಲುದಾರಿಕೆ ಪಡೆದುಕೊಂಡಿದೆ.

 

`ನನ್ನ ಭಾಷೆ ಹಿಂದೂಸ್ತಾನಿ~
2011ರ ಏಪ್ರಿಲ್‌ನಲ್ಲಿ ಟಿಮ್ ರೋಮರ್ ರಾಜಿನಾಮೆಯ ನಂತರ ಭಾರತಕ್ಕೆ ಅಮೆರಿಕದ ರಾಯಭಾರಿ ಹುದ್ದೆ ತಿಂಗಳುಗಟ್ಟಲೆ ಖಾಲಿ ಇತ್ತು. ಈ ಹುದ್ದೆಗೆ ರಾಜಕೀಯ `ಹೆವಿವೆಯ್ಟ~ ಒಬ್ಬರು ನೇಮಕಗೊಳ್ಳಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸಿದ್ಧವಾಗುತ್ತಿರುವ ಅಮೆರಿಕದಿಂದ ರಾಜಕೀಯ ವ್ಯಕ್ತಿಯ ನೇಮಕ ಕಷ್ಟವಿತ್ತು. ಹೀಗಾಗಿಯೇ ವಿದೇಶಾಂಗ ಇಲಾಖೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತಿಯ ಅಂಚಿನಲ್ಲಿದ್ದ ನ್ಯಾನ್ಸಿ ಪೊವೆಲ್‌ಗೆ ಈ ಅವಕಾಶ ಒದಗಿ ಬಂತು ಎನ್ನಲಾಗುತ್ತದೆ.     

 

ಜನತೆ, ಆರ್ಥಿಕತೆ, ರಕ್ಷಣೆ - ಹೀಗೆ ವಿವಿಧ ನೆಲೆಗಳಲ್ಲಿ ಭಾರತ -ಅಮೆರಿಕದ ಬಾಂಧವ್ಯ ಬೆಸೆಯುವ ಕ್ಲಿಷ್ಟ ರಾಜತಾಂತ್ರಿಕತೆಯ ಮಧ್ಯೆಯೂ ಛಾಯಾಗ್ರಹಣದ ಮೋಹ ನ್ಯಾನ್ಸಿ ಪೊವೆಲ್ ಅವರ ವ್ಯಕ್ತಿತ್ವಕ್ಕೆ ವಿಶೇಷ ಜೀವಂತಿಕೆಯ ಬೆಳಕು ನೀಡುವಂತಹದ್ದು. ರಾಜತಾಂತ್ರಿಕ ಗಾಂಭೀರ್ಯದ ನಡುವೆಯೂ ಹಗುರಾಗುವ ಹಾಸ್ಯದ ಝಲಕು ಅವರ ವ್ಯಕ್ತಿತ್ವದಲ್ಲಿರುವುದು ವಿಶೇಷ. ಮನ ಹಗುರಾಗಿಸುವ ಸಂವೇದನೆ, ವ್ಯಾಮೋಹಗಳು ಅವರ ವ್ಯಕ್ತಿತ್ವದ ಭಾಗ. ಈ ಮಾತುಕತೆಗಳ ತುಣುಕು ನೋಡಿ...ನೀವು ರಾಜತಾಂತ್ರಿಕ ಹುದ್ದೆಗೆ ಬರುವ ಮೊದಲು ಸಮಾಜ ವಿಜ್ಞಾನ ಶಿಕ್ಷಕಿಯಾಗಿದ್ದವರು. ಹಿಂದಿ, ಉರ್ದು ಓದಿದವರು ನೀವು. ನಿಮ್ಮ  ಹಿಂದಿ ಜ್ಞಾನ ಮಟ್ಟ ಹೇಗಿದೆ?

ನಾನು ಚಿಕ್ಕ ಊರೊಂದರಲ್ಲಿ ಶಿಕ್ಷಕಿಯಾಗಿದ್ದೆ. ಹಿಂದಿ, ಉರ್ದು ಕಲಿತದ್ದು ವಿದೇಶಾಂಗ ಇಲಾಖೆ ಸೇರಿದ ನಂತರ . ಮೊದಲು ಕಲಿತದ್ದು ನೇಪಾಳಿ. ಹೀಗಾಗಿ ನಾನು ನನ್ನ ಭಾಷೆಯನ್ನು `ಹಿಂದೂಸ್ತಾನಿ~ ಎನ್ನುತ್ತೇನೆ.  ಈ ಮೂರು ಭಾಷೆಗಳ  ಸಂಯೋಜನೆ ಗೊಂದಲ ಮೂಡಿಸುವುದೂ ಉಂಟು. ದುಕಾನವಾಲಾಗಳು, ಟ್ಯಾಕ್ಸಿ ಚಾಲಕರು, ಸಬ್ಜಿವಾಲಾಗಳ ಜೊತೆ ನಾನು ಈ ಭಾಷೆ ಬಳಸಬಲ್ಲೆ. ಆದರೆ ಸಭೆಗಳಲ್ಲಿ , ಟಿವಿ ಕಾರ್ಯಕ್ರಮಗಳಲ್ಲಿ  ಸಾಧ್ಯವಿಲ್ಲ.ಛಾಯಾಚಿತ್ರಗ್ರಾಹಕಿಯಾಗಿ ಕರ್ನಾಟಕದಲ್ಲಿ ನಿಮ್ಮನ್ನು ಆಕರ್ಷಿಸಿದ ಸಂಗತಿಗಳಾವುವು?

ಕಳೆದ ರಾತ್ರಿ ನಿಮ್ಮ ಭಾಗದ ನೃತ್ಯದ ಸಂಸ್ಕೃತಿಯನ್ನು ವೀಕ್ಷಿಸುವ ಅವಕಾಶ ನಮಗೆ ಕೆಲವೇ ಮಂದಿಗೆ ಸಿಕ್ಕಿತ್ತು. ನನಗೆ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲೂ ಅವಕಾಶವಾಯಿತು. ನೃತ್ಯ ವೀಕ್ಷಿಸುತ್ತಿದ್ದಾಗ ಕಾಣದ ಭಾವಗಳು ನನ್ನ ಚಿತ್ರಗಳಲ್ಲಿ ವ್ಯಕ್ತವಾಗಿದ್ದವು. ನೃತ್ಯ ನೋಡುವಾಗ ಅವನ್ನು ಗಮನಿಸುವುದು ಅಸಾಧ್ಯ. ಏಕೆಂದರೆ ನಾಟ್ಯದ ಲಯ ಗಮನಿಸುತ್ತಿರುತ್ತೀರಿ. ಸಂಗೀತ ಕೇಳಿಸಿಕೊಳ್ಳುತ್ತಿರುತ್ತೀರಿ. ಇನ್ನು ಬೆಳಿಗ್ಗೆ ಲಾಲ್‌ಬಾಗ್‌ಗೆ ಹೋಗುವುದು, ಆ ತೋಟದ ಸೌಂದರ್ಯ ವೀಕ್ಷಿಸುವುದೇ  ಮತ್ತೊಂದು ಚೆಂದದ ಅನುಭವ. ನಾನು ಜೆನಿಫರ್ (ಚೆನ್ನೈ ಅಮೆರಿಕ ದೂತಾವಾಸ ಕಚೇರಿಯ ಕಾನ್ಸುಲ್ ಜನರಲ್) ಮೈಸೂರಿಗೆ ಮತ್ತೆ ಹೋಗುವ ವಿಚಾರ ಮಾತನಾಡುತ್ತಿದ್ದೇವೆ.ನೀವು  ಈ ಹಿಂದೆ ಕೋಲ್ಕತ್ತಾ ಹಾಗೂ ದೆಹಲಿಗಳಲ್ಲಿ ಕಾರ್ಯ ನಿರ್ವಹಿಸಿದವರು. ಈಗ ಹದಿನೈದಕ್ಕೂ ಹೆಚ್ಚಿನ ವರ್ಷಗಳ ನಂತರ ಆಗಿನ ಭಾರತಕ್ಕೂ ಈಗಿನ ಭಾರತಕ್ಕೂ ಏನು ಬದಲಾವಣೆಗಳನ್ನು ಕಾಣುತ್ತಿದ್ದೀರಿ?

ಭಾರಿ ಬದಲಾವಣೆಗಳಾಗಿವೆ. ವಿಶೇಷವಾಗಿ ವಿಶ್ವದ ಇತರ ಭಾಗಗಳಿಗೆ  ಭಾರತದ ಸಂಪರ್ಕದಲ್ಲಿ ನಾಟಕೀಯ ಬದಲಾವಣೆಗಳಾಗಿವೆ. ನೇಪಾಳಕ್ಕೆ ಹೋಗುವ ಹಾದಿಯಲ್ಲಿ 1980ರಲ್ಲಿ ನಾನು ಭಾರತಕ್ಕೆ ಬಂದಿದ್ದೆ. ಆಗ ಟೆಲಿಫೋನ್ ಸಂಪರ್ಕ ಎಷ್ಟೊಂದು ಕಷ್ಟವಿತ್ತು. ಕರೆಗೆ ಬುಕ್ ಮಾಡಿ ಕಾಯುವ ಸ್ಥಿತಿ. ಆದರೆ ಈಗ  ಕುಟುಂಬಗಳು ಟೆಲಿಫೋನ್, ಇ ಮೇಲ್,  ಸ್ಕೈಪ್ ಮೂಲಕ ಪರಸ್ಪರ ಸಂಪರ್ಕದಲ್ಲಿರುವುದು ಸಾಧ್ಯವಾಗಿದೆ.ನನ್ನ ಬಳಿ ಅಂಕಿಅಂಶಗಳಿಲ್ಲ. ಆದರೆ ವಿಶ್ವದಲ್ಲೇ ಅತಿ ಹೆಚ್ಚು ಸ್ಕೈಪ್ ಬಳಕೆದಾರರ ದೇಶವಾಗಿದೆ ಭಾರತ. ಸಂಪರ್ಕ ಎನ್ನುವುದು ತಂದಿರುವ ಬದಲಾವಣೆ ಮಹತ್ತರವಾದುದು. ನಂತರದ್ದು ವಿಮಾನ ಸಂಪರ್ಕಗಳು. ನಾನು ಈಗ ಮಧ್ಯದಲ್ಲೆಲ್ಲೂ ಇಳಿಯದೆ  ನೇರವಾಗಿ  ಭಾರತಕ್ಕೆ ಬರುವುದು ಸಾಧ್ಯವಾಗಿದೆ.  ಇದರಿಂದ ಜನರಿಗೆ ಬಹಳ ಅನುಕೂಲವಾಗಿದೆ. ಜನರ ಆರ್ಥಿಕ ಸಂಪತ್ತಿನ ಬಗೆಗೂ ನನಗೆ ಅಚ್ಚರಿಯಾಗುತ್ತದೆ.  1995ರ ನಂತರದ ವರ್ಷಗಳಲ್ಲಿ  ಆಗಿರುವ ಬದಲಾವಣೆಗಳು ನಗರಗಳಲ್ಲಿ ಸಂಚರಿಸುವಾಗ ಕಣ್ಣಿಗೇ ಹೊಡೆಯುತ್ತದೆ. ಸಂಚಾರ ದಟ್ಟಣೆ ಅನುಭವಕ್ಕೆ ಬರುತ್ತದೆ. ಅದು ಸಮಸ್ಯೆ ಎನಿಸಿದರೂ, ಹೆಚ್ಚಿನ ಜನರು ಕಾರುಗಳಲ್ಲಿ ಓಡಾಡುವುದು ಸಾಧ್ಯವಾಗಿರುವುದನ್ನು ತೋರಿಸುತ್ತದೆ. ರಸ್ತೆಗಳಿಂದ `ಅಂಬಾಸಿಡರ್~ ನಾಪತ್ತೆಯಾಗಿದೆ.ಬಿಸಿನೆಸ್ ಮೀಟಿಂಗ್‌ಗಳಲ್ಲಿ ಅನೇಕ ಮಹಿಳೆಯರ ಹಾಜರಿ ಎದ್ದು ಕಾಣುತ್ತದೆ. ಅವರಲ್ಲಿ ಅನೇಕ ಮಂದಿ ಸೀನಿಯರ್ ಎಕ್ಸಿಕ್ಯುಟಿವ್‌ಗಳು. ಬಿಸಿನೆಸ್ ಸೂಟ್ ತೊಟ್ಟವರು ಕಾಣಸಿಗುತ್ತಾರೆ. ಪಾಶ್ಚಿಮಾತ್ಯ ಪ್ರಭಾವ ಗಣನೀಯವಾಗಿ ಹೆಚ್ಚಾಗಿರುವುದು ಗೋಚರವಾಗುತ್ತದೆ. ವೇಷಭೂಷಣಗಳು ಬದಲಾಗಿವೆ. ಆದರೆ ಮೌಲ್ಯಗಳನ್ನಾಧರಿಸಿದ ನಮ್ಮ ಬಾಂಧವ್ಯದಲ್ಲಿ ಬದಲಾವಣೆಗಳಾಗಿಲ್ಲ ಎಂಬುದೂ ಮುಖ್ಯ.  ಇಂಗ್ಲಿಷ್‌ನಲ್ಲಿ ಮಾತಾಡುವ ಜನರ ಸಾಮರ್ಥ್ಯ ಹೆಚ್ಚಾಗಿದೆ. ವಿಶ್ವದಲ್ಲಿ ಭಾರತದ ಪಾಲ್ಗೊಳ್ಳುವಿಕೆ ಗಣನೀಯವಾಗಿ ಹೆಚ್ಚಾಗಿದೆ. ಜಿ- 20, ರಿಯೊ- 20 ಸಮಾವೇಶಗಳು ಹಾಗೂ ಅಂತರರಾಷ್ಟ್ರೀಯ ಮಾತುಕತೆಗಳಲ್ಲಿ ಭಾರತದ ನಾಯಕತ್ವ ಹಿರಿದಾಗುತ್ತಿದೆ. ಇವನ್ನು ಬಲಗೊಳಿಸುವತ್ತ ಹಾಗೂ ವಿಶ್ವದಲ್ಲಿ ಶಾಂತಿ ಕಾಪಾಡುವಿಕೆಗೆ ಇದನ್ನು ಬಳಸಿಕೊಳ್ಳುವ ಪ್ರಯತ್ನಗಳಾಗಬೇಕು. ನಮ್ಮ ಆರ್ಥಿಕತೆ ವ್ಯವಸ್ಥೆಗಳು ಈಗ ವಿಶ್ವದ ಆರ್ಥಿಕತೆಗೆ ಜೋಡಣೆಯಾಗಿವೆ. ನಮ್ಮ  ನೀತಿಗಳು ಬೇರೆ ಇರಬಹುದು, ದೇಶಿ ಆದ್ಯತೆಗಳು ಭಿನ್ನವಾಗಿರಬಹುದು. ಆದರೆ ಆರ್ಥಿಕ ಹಿತಾಸಕ್ತಿ, ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ  ವಿಶ್ವದ ಆರ್ಥಿಕತೆಯಲ್ಲಿ ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯದ ಕಾರಣಗಳಿಂದಾಗಿ ನಾವು ಒಂದುಗೂಡುವಿಕೆಯ ಮಾತುಗಳನ್ನೂ ಆಡುತ್ತೇವೆ. 1995ರ ನಂತರದಲ್ಲಾಗಿರುವ ಬೃಹತ್ ಬದಲಾವಣೆ ಇದು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ  ಭಾರತಕ್ಕೆ ಕಾಯಂ ಸ್ಥಾನಕ್ಕೆ ಅಮೆರಿಕದ ಬೆಂಬಲ - ಇವೆಲ್ಲಾ ಭಾರಿ ಬದಲಾವಣೆಗಳ ಸಂಕೇತ.1990ರ ದಶಕದಲ್ಲಿ ನೀವು ಇಲ್ಲಿ ಇದ್ದ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಅಧಿಕಾರೇತರ ಮಟ್ಟದಲ್ಲಿ ಒಂದು ಬಗೆಯ ಪ್ರತಿರೋಧದ ಭಾವನೆ ಇತ್ತು.  ಆ ಪ್ರತಿಕೂಲ ವಿಮರ್ಶೆಗಳ ನೆಲೆಗಳ್ಲ್ಲಲೇ ಸಿಟಿಬಿಟಿ (ಸಮಗ್ರ ಅಣು ಪರೀಕ್ಷೆ ನಿಷೇಧ ಒಪ್ಪಂದ), ಎನ್‌ಪಿಟಿ (ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ)  ಕುರಿತ ವಾಗ್ವಾದಗಳು ನಡೆದಿದ್ದವು.  ಈಗ ಆ ಪ್ರತಿರೋಧದ ಭಾವದಿಂದ ಪಾಲುದಾರಿಕೆಯ ಸಹಭಾಗಿತ್ವದೆಡೆ ಸಾಗುವ ನಿಟ್ಟಿನಲ್ಲಿ ಯಾವ ಅಂಶಗಳು ಮುಖ್ಯವಾಗುತ್ತವೆ? ಎರಡು ಮೂರು ವರ್ಷಗಳ ಹಿಂದೆ  ಅಣು ಒಪ್ಪಂದದ ನಂತರ ಪಾಲುದಾರಿಕೆಯ ರಂಗದಲ್ಲಿ ಹೆಚ್ಚೇನೂ ಬೆಳವಣಿಗೆ ಕಂಡು ಬರುತ್ತಿಲ್ಲ ಎಂಬ ಭಾವನೆ ಇದೆ. ನಿಮ್ಮ ಅವಧಿಯಲ್ಲಿ ದ್ವಿಪಕ್ಷೀಯ ಸಂಬಂಧದಲ್ಲಿ ಏನು ಬೆಳವಣಿಗೆಗಳಾಗುತ್ತವೆ ಎಂಬುದನ್ನು ನಿರೀಕ್ಷಿಸುವಿರಿ?

 
ಪ್ರಶ್ನೆಯ ಮೊದಲ ಭಾಗಕ್ಕೆ ಉತ್ತರಿಸುವುದಾದರೆ ಯಾವುದೆ ಪ್ರತಿರೋಧಗಳಿರಲಿಲ್ಲ. ಇದ್ದದ್ದು ಒಂದಷ್ಟು ಭಿನ್ನಾಭಿಪ್ರಾಯಗಳು.  ನಮ್ಮ ಬಾಂಧವ್ಯದ ಮೂಲ ದ್ರವ್ಯ ಜನರ- ಜನರ ನಡುವಿನ ಬಾಂಧವ್ಯ. ಇಲ್ಲಿನ ವಿದ್ಯಾರ್ಥಿಗಳು ಅಮೆರಿಕಕ್ಕೆ ಹೋಗುತ್ತಿದ್ದಾರೆ. ಅಮೆರಿಕದಲ್ಲಿ ಭಾರತೀಯ ಸಮುದಾಯ ಬೆಳೆಯುತ್ತಿದೆ.  ಭಾರತ - ಅಮೆರಿಕ ದ್ವಿಪಕ್ಷೀಯ ಬಾಂಧವ್ಯ `23 ಸಂವಾದಗಳ~  ಮೂಲಕ  ವಿಸ್ತೃತಗೊಂಡಿದೆ.   ಬಾಂಧವ್ಯ ಹೇಗೆ ವೃದ್ಧಿಯಾಗಬೇಕೆಂಬುದನ್ನು ನಾನು ಮೂರು ನೆಲೆಗಳಲ್ಲಿ ನೋಡುತ್ತೇನೆ. ಮೊದಲನೆಯದು ವ್ಯಾಪಾರ ಹಾಗೂ ಆರ್ಥಿಕ ಬಾಂಧವ್ಯದ ಹೆಚ್ಚಳ. ಪ್ರವಾಸೋದ್ಯಮ ಎರಡೂ ರಾಷ್ಟ್ರಗಳಿಗೆ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ಒಬಾಮಾ ಸ್ಪಷ್ಟ ಯೋಜನೆ ಹೊಂದಿದ್ದಾರೆ. ಶೈಕ್ಷಣಿಕ ವಲಯದಲ್ಲಿ  ಉಭಯ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳದ ಮೂಲಕ ಆರ್ಥಿಕತೆಗೆ ನೆರವಾಗುವ ಕ್ರಮ ಇತ್ಯಾದಿ,

ಎರಡನೆಯದು ಜಾಗತಿಕ ರಂಗದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವುದು ಹೇಗೆ ಎಂಬುದು. ಜಿ 20, ಹವಾಮಾನ ಬದಲಾವಣೆ ಮಾತುಕತೆ ಇತ್ಯಾದಿಗಳಲ್ಲಿನ ಸಹಕಾರ .ಮೂರನೆಯದು ರಕ್ಷಣೆಯ ಕ್ಷೇತ್ರ. 1995ರ ನಂತರ ಬಹಳಷ್ಟು ಬದಲಾವಣೆಗಳನ್ನು ಕಂಡಿರುವ ಕ್ಷೇತ್ರ ಇದು. ಭಯೋತ್ಪಾದನೆಯಿಂದ ಉಭಯ ರಾಷ್ಟ್ರಗಳೂ ನಲುಗಿವೆ. ಹೀಗಾಗಿ ಭಯೋತ್ಪಾದನೆ ವಿರೋಧಿ ನೆಲೆಯಲ್ಲಿ ರಕ್ಷಣಾ ಸಹಕಾರ. ಮಿಲಿಟರಿ ಸಹಕಾರ, ರಕ್ಷಣಾ ಪರಿಕರಗಳ ಮಾರಾಟ, ಉಭಯ ದೇಶಗಳ ಜಂಟಿ ಸಮರಾಭ್ಯಾಸಗಳು,  ಭಯೋತ್ಪಾದನೆ ವಿರುದ್ಧದ ಮಾಹಿತಿ ವಿನಿಮಯಗಳ ಸಹಕಾರ ಹೆಚ್ಚಾಗಿಸುವುದು. ಈ ಮೂರೂ ಕ್ಷೇತ್ರಗಳನ್ನು ಒಟ್ಟಾಗಿ ಪರಿಭಾವಿಸಿದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ  ದೊಡ್ಡದಾದ ಕಾರ್ಯಸೂಚಿ ಇದೆ ಎಂದೇ ಹೇಳಬೇಕಾಗುತ್ತದೆ.ಭಾರತ - ಅಮೆರಿಕ ಬಾಂಧವ್ಯದಲ್ಲಿ ಪಾಕಿಸ್ತಾನ ಯಾವಾಗಲೂ ಮುಖ್ಯ ವಿಷಯವಾಗಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಭಾರತ -ಅಮೆರಿಕ ಮಾತುಗಳಲ್ಲಿ ಪಾಕಿಸ್ತಾನವನ್ನು ಹೊರಗಿಡಲಾಗುತ್ತಿದೆ ಎಂಬ ಅಂಶವನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತೀರಿ?

ನಮ್ಮ ದ್ವಿಪಕ್ಷೀಯ ಬಾಂಧವ್ಯಗಳು ನಮಗೆ ಬೆಂಬಲವಾಗಿರುವ ವಿಷಯಗಳನ್ನು ಆಧರಿಸಿರುತ್ತವೆ. ಮೂರನೇ ರಾಷ್ಟ್ರವೊಂದನ್ನು ಇಲ್ಲಿ  ಪ್ರಸ್ತಾಪಿಸಬೇಕಿಲ್ಲ. ಹಾಗೆ ಹೇಳಬೇಕೆಂದರೆ ಬಹಳಷ್ಟು  ಮೂರನೇ ರಾಷ್ಟ್ರಗಳ ಬಗ್ಗೆ ಪ್ರಸ್ತಾಪಿಸಬೇಕಾಗುತ್ತದೆ.2014ರೊಳಗೆ  ಆಫ್ಘಾನಿಸ್ತಾನದಿಂದ ಅಮೆರಿಕ ಸೇನೆ  ವಾಪಸಾಗಬೇಕಿದೆ. ಅಲ್ಲಿ ಪರಿಸ್ಥಿತಿ ಸ್ಥಿರವಾಗಿಲ್ಲವೆಂದು ಭಾರತ ಭಾವಿಸುತ್ತದೆ. ಅಲ್ಲಿ ಭಾರತದ ಪಾತ್ರ ಯಾವುದಾಗಿರಬೇಕೆಂದು ಅಮೆರಿಕ ಬಯಸುತ್ತದೆ?

ಆಫ್ಘಾನಿಸ್ತಾನದಲ್ಲಿ ಭದ್ರತಾ ಪಡೆಗಳಿಗೆ  ತರಬೇತಿ ಕಾರ್ಯಕ್ರಮಗಳಿಗೆ ಗಮನ ನೀಡುವುದು ಮುಂದುವರಿಯಲಿದೆ. ಆರ್ಥಿಕ ನೆಲೆ ಗಟ್ಟಿಯಾಗಲು ಆಫ್ಘಾನಿಸ್ತಾನದಲ್ಲಿರುವ ಉದ್ಯಮಗಳು ಮುಂದುವರಿಯುವುದು  ಅಗತ್ಯ. ಮೂಲ ಸೌಕರ್ಯಗಳನ್ನು ಸೃಷ್ಟಿಸುವಲ್ಲಿ ಭಾರತದ ಸಾಮರ್ಥ್ಯದ ಬಳಕೆ ಮುಂದುವರಿಯಬೇಕು. ಆಫ್ಘಾನಿಸ್ತಾನದಲ್ಲಿ ರಿಂಗ್ ರೋಡ್  ನಿರ್ಮಾಣಕ್ಕೆ ಭಾರತದ ನೆರವು ಮರೆಯಲಾಗದು. ಅಮೆರಿಕವೂ ಆರ್ಥಿಕ ನೆರವು ನೀಡುವುದನ್ನು ಮುಂದುವರಿಸುತ್ತದೆ. ಆಫ್ಘಾನಿಸ್ತಾನದಲ್ಲಿ ಪ್ರಜಾಸತ್ತೆಯ ಆರಂಭಕ್ಕೆ ವಿವಿಧ ಸಂಘಟನೆಗಳ ಮೂಲಕ  ನೆರವು ನೀಡುವುದು ಮುಖ್ಯವಾಗುತ್ತದೆ. ನಾಗರಿಕ ಸಮಾಜ ಸೃಷ್ಟಿಸಲು ಭಾರತ ನೆರವಾಗಬಹುದು.ಭಾರತದ `ಸಾಫ್ಟ್ ಪವರ್~ (ಸೌಮ್ಯ ಶಕ್ತಿ) ಕುರಿತು ಬಹಳಷ್ಟು ಮಾತನಾಡುತ್ತೇವೆ. ಬಹುಶಃ  ಇದರ ಪ್ರಭಾವದ ಬಳಕೆಗೆ  ಆಫ್ಘಾನಿಸ್ತಾನ ಮತ್ತೊಂದು ಸೂಕ್ತ ನೆಲೆ. ಕಾಬೂಲ್‌ನಲ್ಲಿ ನಿಮ್ಮ ಟೆಲಿವಿಷನ್ ಕಾರ್ಯಕ್ರಮಗಳು ಬಿತ್ತರವಾಗುತ್ತವೆ. ನಿಮ್ಮೆಲ್ಲಾ ವೃತ್ತಪತ್ರಿಕೆಗಳೂ ಅಲ್ಲಿವೆ. ಆ `ಸಾಫ್ಟ್ ಪವರ್~  (ಸೇನೆಯ ಬದಲಿಗೆ ಆಹಾರ, ಸಂಸ್ಕೃತಿ, ತಂತ್ರಜ್ಞಾನ ಮುಂತಾದ ಆಕರ್ಷಣೆಗಳ ಮೂಲಕ ಒಂದು ರಾಷ್ಟ್ರದ ಜನರ ಮನಸ್ಸು, ಹೃದಯಗಳ ಮೇಲೆ ಬೀರುವಂತಹ ಪ್ರಭಾವ. ಹಾರ್ವರ್ಡ್‌ನ  ಜೋಸೆಫ್ ನೈ ಪ್ರತಿಪಾದಿಸಿದ ಪರಿಕಲ್ಪನೆ ಇದು) ಕಡಿಮೆಯದೇನಲ್ಲ. ಪ್ರಜಾಸತ್ತಾತ್ಮಕ ವಿಚಾರಗಳ ಮೇಲೆ ಭಾರತ ನಡೆಸುತ್ತಿರುವಂತಹ ಚರ್ಚೆಗಳು ಕಾಬೂಲ್‌ನಲ್ಲಿನ ಚರ್ಚೆಗಳಿಗೂ ದಾರಿ ದೀಪವಾಗಬಹುದು.ಅಮೆರಿಕಕ್ಕೆ ಹೋಗುವ ವೃತ್ತಿಪರರಿಗೆ ವೀಸಾ ಸಮಸ್ಯೆಯ ಗೋಳು  ಮುಗಿದಿಲ್ಲ...

 
ವೀಸಾಗೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ.  ವೀಸಾ ವಿಚಾರಗಳ ಕುರಿತ   ನಮ್ಮ ಕೆಲಸ ಮುಂದುವರಿಯಲಿದೆ. ಶೀಘ್ರ ವಿಲೇವಾರಿಗಳಿಗಾಗಿ ಸಾಕಷ್ಟು ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ.  ವೀಸಾ ಅರ್ಜಿಗಳ ನಿರಾಕರಣೆಗೆ ಮುಖ್ಯ ಕಾರಣ ಸರಿಯಾದ ದಾಖಲೆಗಳನ್ನು ತರದಿರುವುದು ಅಥವಾ ಅಮೆರಿಕಕ್ಕೆಹೋಗಲು ಸರಿಯಾದ ಕಾರಣ ನೀಡದಿರುವುದು. ಆದರೆ  6,60,000 ಭಾರತೀಯರು ಕಳೆದ ವರ್ಷ ಅಮೆರಿಕಕ್ಕೆ ಹೋಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry