ಆಫ್ಘಾನಿಸ್ತಾನದ ಹೊಸ ಶತ್ರು: ಹಸಿವು, ಅಪೌಷ್ಟಿಕತೆ

7

ಆಫ್ಘಾನಿಸ್ತಾನದ ಹೊಸ ಶತ್ರು: ಹಸಿವು, ಅಪೌಷ್ಟಿಕತೆ

Published:
Updated:

ಯುದ್ಧದ  ಸ್ಥಿತಿಯಿಂದ ಕ್ರಮೇಣ  ಹೊರಬರು­ತ್ತಿ­­ರುವ ಆಫ್ಘಾನಿಸ್ತಾನ ಈಗ ಹಸಿವು ಮತ್ತು ಅಪೌಷ್ಟಿಕತೆಯ ವಿರುದ್ಧ ಸಮರ ಸಾರುವ ಪರಿಸ್ಥಿತಿ ಎದುರಿಸುತ್ತಿದೆ. ನಗುನಗುತ್ತಾ ಆಟವಾಡಿ­ಕೊಂಡಿರ­ಬೇಕಿದ್ದ ಚಿಕ್ಕ ಕಂದಮ್ಮಗಳು, ಶಾಲೆ­ಯಲ್ಲಿ ಓದಬೇಕಿದ್ದ ಸಣ್ಣ ವಯಸ್ಸಿನ ಮಕ್ಕಳು ತೀವ್ರ ಹಸಿವು ಮತ್ತು ಅಪೌಷ್ಟಿ­ಕತೆಯಿಂದಾಗಿ ನರಳುತ್ತಿವೆ.  ಆರೋಗ್ಯ ಪೂರ್ಣರಾಗಿ ಮೈ– ಕೈತುಂಬಿಕೊಂಡಿ­ರ­ಬೇಕಿದ್ದ ಮಕ್ಕಳು ಬಡಕಲಾಗಿ ಆಸ್ಪತ್ರೆಯ ಹಾಸಿಗೆಗಳ ಮೇಲೆ ನೂರಾರು ಸಂಖ್ಯೆ­ಯಲ್ಲಿ ಮರಣಶಯ್ಯೆಯಲ್ಲಿರು­ವುದು ಕಳವಳಕಾರಿ ಬೆಳವಣಿಗೆ .ಗಲಭೆ ಪೀಡಿತ ಹೆಲ್ಮಂಡ್ ಪ್ರಾಂತ್ಯದ ರಾಜಧಾನಿ ಲಕ್ಷರ್‌ ಗಾ ಪಟ್ಟಣದ (ಲಕ್ಷರ್‌ ಗಾ ನಗರಕ್ಕೆ ಬೋಸ್ತ್‌ ಎಂಬ ಐತಿಹಾಸಿಕ ಹೆಸರೂ ಇದೆ) ‘ಬೋಸ್ತ್‌ ಆಸ್ಪತ್ರೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಗಣ­ನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ.  ದೇಶ­ದಲ್ಲಿ ಅಪೌಷ್ಟಿಕತೆಯಿಂದ ಬಳಲು­ತ್ತಿರುವ ಮಕ್ಕಳ ಪ್ರಮಾಣದಲ್ಲಿ ಶೇ 50ರಷ್ಟು ಏರಿಕೆ ಆಗಿದೆ ಎಂದು ವಿಶ್ವ­ಸಂಸ್ಥೆಯ ಅಂಕಿಅಂಶಗಳು ಹೇಳುತ್ತವೆ. ಬಹುಕಾಲ ಕಾಡಿದ ಯುದ್ಧ ದೇಶದ ಕೃಷಿ ಮತ್ತು ಇತರ ಆದಾಯ ಮೂಲಗ­ಳನ್ನು ನಾಶ ಮಾಡಿದೆ. ಇದರೊಂದಿಗೆ ಬಡತನ, ಶಿಕ್ಷಣದ ಕೊರತೆಯೂ ಮಕ್ಕ­ಳಲ್ಲಿ ಹಸಿವು ಮತ್ತು ಅಪೌಷ್ಟಿಕತೆಗೆ ಕಾರಣವಾಗಿದೆ.‘2001ರಲ್ಲಿ ಮಕ್ಕಳು ತೀವ್ರ ಅಪೌ­ಷ್ಟಿ­ಕತೆಯಿಂದ ಬಳಲುತ್ತಿದ್ದರು. ಆದರೆ, ಈಗಿನ ಸನ್ನಿವೇಶವು ಅಂದಿನ ಪರಿಸ್ಥಿತಿ­ಗಿಂತಲೂ ಭಯಾನಕವಾಗಿದೆ’ ಎಂದು ಕಾಬೂಲ್‌ನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಅಪೌಷ್ಟಿಕ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಸೈಫುಲ್ಲಾ ಅಬಾಸಿನ್‌ ಆತಂಕದಿಂದ ಹೇಳುತ್ತಾರೆ.ಆಫ್ಘನ್‌ ಅಭಿವೃದ್ಧಿಗೆ ಅಂತರ ರಾಷ್ಟ್ರೀಯ ಸಮುದಾಯ  ಟೊಂಕ ಕಟ್ಟಿ ನಿಂತಿದೆ; ನೂರಾರು ಕೋಟಿ ಡಾಲರ್‌­ಗಳ ನೆರವನ್ನೂ ನೀಡುತ್ತಿದೆ. ಆದರೆ, ಮಕ್ಕಳ ಆರೋಗ್ಯದಲ್ಲಿ ಸುಧಾ­ರಣೆ ಬದಲಿಗೆ  ಮತ್ತಷ್ಟು ಬಿಗಡಾಯಿಸುತ್ತಿದೆ. ಪೌಷ್ಟಿಕ ಆಹಾರ ಮತ್ತು ಆರೋಗ್ಯ ಪೂರ್ಣ ಜೀವನದ ಬಗ್ಗೆ ಜಾಗೃತಿ ಮೂಡಿ­ಸುವ ಪ್ರಯತ್ನಗಳು ಸಾಗಿದ್ದರೂ ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿ­ಯಾಗಿರುವ ಬಹುತೇಕ ಆಫ್ಘನ್‌ ತಾಯಂದಿರಿಗೆ ಇದರ ಮಾಹಿತಿ ಸಮರ್ಪಕವಾಗಿ ತಲುಪುತ್ತಿಲ್ಲ. ಅಪೌಷ್ಟಿಕತೆ ಹೋಗಲಾಡಿಸಲು ಕೈಗೊಂಡಿರುವ ಚಿಕಿತ್ಸಾ ವಿಧಾನಗಳು, ಲಸಿಕೆ ಹಾಕುವ ಕಾರ್ಯಕ್ರಮ, ಪೌಷ್ಟಿಕ ಆಹಾರ ವಿತರಣೆಗೆ ರಾಜಕೀಯ ಆತಂಕ­ಗಳು ಅಥವಾ ಹಿಂಸಾಚಾರಗಳು ಅವ­ಕಾಶ ನೀಡುತ್ತಿಲ್ಲ. ಜೊತೆಗೆ ಸಾಗಣೆಯ ತೊಡಕುಗಳೂ ಈ ಕಾರ್ಯಕ್ಕೆ ಅಡ್ಡ­ಗಾಲು ಹಾಕಿವೆ.ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ನೆರವು ಸಮರ್ಪಕವಾಗಿ ವಿತರಣೆ ಆಗಿ­ದ್ದರೆ ತಿಂಗಳಿಗೆ 200ಕ್ಕೂ ಹೆಚ್ಚು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದಾಗಿ ಬೋಸ್ತ್‌ ಆಸ್ಪತ್ರೆಗೆ ದಾಖಲಾಗುತ್ತಿರ­ಲಿಲ್ಲ. ಬೋಸ್ತ್ ಆಸ್ಪತ್ರೆಯಲ್ಲಿ ಅಪೌಷ್ಟಿಕತೆ­ಯಿಂದ ಬಳಲುತ್ತಿರುವ ಮಕ್ಕಳ ಸ್ಥಿತಿ ದಾರುಣವಾಗಿದೆ.  ಯುವ ವಯಸ್ಸಿನ ತಾಯಿ ಬೀಬಿ ಶೆರಿನಾ ಅವರು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವಾರ್ಡ್‌ನ ಕಂಬಕ್ಕೆ ಒರಗಿ ಕಣ್ಣೀರು ಹಾಕುತ್ತಿದ್ದಾರೆ. ಆಕೆಯ ಮೂರು ತಿಂಗಳ ಮಗು ಅಹ್ಮದ್‌, ತನಗಿಂತ ಒಂದೂವರೆ ವರ್ಷ ಹಿರಿಯ­ನಾದ ಮೊಹಮ್ಮದ್‌ಗಿಂತ ಹೆಚ್ಚು ತೂಕದಿಂದ ಕೂಡಿದ್ದು, ಬಲಿಷ್ಠನಾ­ಗಿಯೂ ಇದ್ದಾನೆ. ಬಡಕಲು ಶರೀರದ ಮೊಹ­ಮ್ಮದ್‌ನ ತೂಕ ಕೇವಲ 10 ಪೌಂಡ್‌ನಷ್ಟಿದೆ.ಮೊಹಮ್ಮದ್‌ನ ಪಕ್ಕದ ಹಾಸಿಗೆಯ ಲ್ಲಿರುವ ಒಂದು ವರ್ಷವೂ ತುಂಬಿರದ ಹೆಣ್ಣು ಮಗು ಫಾತಿಮಾಳಿಗೆ ಅಪೌಷ್ಟಿ­ಕತೆಯಿಂದಾಗಿ ಹೃದ್ರೋಗ ಸಮಸ್ಯೆ ತಲೆದೋರಿದೆ. ಆಕೆಯ ತಂದೆ ಹಣ ಹೊಂದಿಸಿಕೊಂಡು ಕಾಬೂಲ್‌ನ ಆಸ್ಪ­ತ್ರೆಗೆ  ಕರೆದೊಯ್ದು ಶಸ್ತ್ರಚಿಕಿತ್ಸೆ ಮಾಡಿಸ­ದಿದ್ದರೆ ಫಾತಿಮಾ ಕಣ್ಮುಚ್ಚು­ವುದು ಖಚಿತ ಎಂದು ಆಸ್ಪತ್ರೆಯಲ್ಲಿ ಸ್ವಯಂ ಸೇವಕರಾಗಿರುವ ವೈದ್ಯರು ಮತ್ತು ಅಧಿಕಾರಿಗಳು ಹತಾಶೆಯಿಂದ ನುಡಿಯುತ್ತಾರೆ. ಪೌಷ್ಟಿಕ ಆಹಾರದ ಕೊರತೆ­ಯಿಂದಾಗಿ ಎರಡು ವರ್ಷದ ಅಹ್ಮದ್‌ ವಾಲಿಯ ಎಂಬ ಮಗುವಿನ ತಲೆ­ಗೂದಲು ಕಿತ್ತಳೆ ಬಣ್ಣಕ್ಕೆ ತಿರುಗಿದೆ. ಸೊಂಟ ಬಾಗಿದ್ದು, ಕೈಕಾಲುಗಳು ಮುದುರಿಕೊಂಡಿವೆ.ಎಂಟು ತಿಂಗಳ ಮಗು ಸಮಿಯುಲ್ಲಾ ಅಪೌಷ್ಟಿಕತೆಯಿಂದ ಅಪರೂಪಕ್ಕೆ ಉಂಟಾ­ಗುವಂತಹ ದೇಹ ಸವೆತದ ಕಾಯಿಲೆಯಂದ ಬಳುತ್ತಿದ್ದಾನೆ. ಈತನ ಚರ್ಮ ವಯಸ್ಸಾದವರ ಚರ್ಮದಂತೆ ಸುಕ್ಕುಗ­ಟ್ಟಿದೆ. ಚರ್ಮವು ಅಳ್ಳಕವಾಗಿ ಜೋತಾಡುತ್ತದೆ.ಬೋಸ್ತ್ ಆಸ್ಪತ್ರೆಯಲ್ಲಿ ಅಪೌಷ್ಟಿಕತೆ­ಯಿಂದ ಬಳಲುತ್ತಿರುವ 40ರಿಂದ 50 ಮಕ್ಕಳಿಗೆ ಪ್ರತಿದಿನ ಚಿಕಿತ್ಸೆ ನೀಡಲಾ­ಗುತ್ತಿದೆ.

ಕಿಷ್ಕಿಂಧೆಯಂತಿರುವ ಆಸ್ಪತ್ರೆ­ಯಲ್ಲಿ ಒಂದೇ ಹಾಸಿಗೆಯಲ್ಲಿ ಎರಡು ಮಕ್ಕಳನ್ನು ಮಲಗಿಸಿ ಚಿಕಿತ್ಸೆ ನೀಡಲಾ­ಗುತ್ತಿದೆ. ಹೊರ ರೋಗಿಗಳ ವಿಭಾಗ­ದಲ್ಲಿ 300ಕ್ಕೂ ಹೆಚ್ಚು ಮಕ್ಕಳು ದಿನಾ ಅಪೌಷ್ಟಿಕತೆಗೆ ಚಿಕಿತ್ಸೆ ಪಡೆದು­ಕೊಳ್ಳುತ್ತಿದ್ದಾರೆ.ಇಲ್ಲಿನ  ಸಿಬ್ಬಂದಿ ಹಗಲು ರಾತ್ರಿ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದರೂ ತಿಂಗಳಿಗೆ ಏಳೆಂಟು ಮಕ್ಕಳು ಸಾವನ್ನಪ್ಪುತ್ತಿದ್ದಾರೆ.

ಮಕ್ಕಳ ಅಪೌಷ್ಟಿಕತೆ ನಿವಾರಣೆ ಯತ್ನವನ್ನು ವಿಶ್ವಸಂಸ್ಥೆಯ ಮಕ್ಕಳ ಹಣಕಾಸು ನಿಧಿ (ಯೂನಿಸೆಫ್‌) ಮತ್ತು ಆಫ್ಘಾನಿಸ್ತಾನದ ಸಾರ್ವಜನಿಕ ಆರೋಗ್ಯ ಇಲಾಖೆಯು ತುರ್ತು ಸೇವೆ ಎಂದು ಘೋಷಿಸಿವೆ.ಕಳೆದ ವರ್ಷ ಜನವರಿಯಲ್ಲಿ ಯೂನಿ­ಸೆಫ್‌ ಮತ್ತು ಆಫ್ಘನ್‌ ಸರ್ಕಾರ ಜಂಟಿ­ಯಾಗಿ ನಡೆಸಿದ ಸಮೀಕ್ಷೆಯಲ್ಲಿ ದೇಶ­ದಾದ್ಯಂತ 13 ಸಾವಿರಕ್ಕೂ ಹೆಚ್ಚು ಕುಟುಂಬಗಳಲ್ಲಿನ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರ ಪ್ರಮಾಣ ಶೇ 10ಕ್ಕಿಂತಲೂ ಹೆಚ್ಚಾಗಿದೆ ಎಂಬ ಆತಂಕಕಾರಿ ಅಂಕಿ­ಅಂಶಗಳು ದೊರಕಿವೆ.‘ಆದರೆ, ಈ ಸಮೀಕ್ಷೆ ನಡೆಸಿದವರ ಕಾರ್ಯ­ವನ್ನು ಯೂನಿಸೆಫ್‌ ಅನುಮಾನಿಸಿದ್ದು, ಹೊಸದಾಗಿ ಸಮೀಕ್ಷೆ ನಡೆಸಲು ದೊಡ್ಡ ಮೊತ್ತದ ನೆರವನ್ನು ನೀಡಿತು. ಹೊಸ­ದಾಗಿ ನಡೆದ ಅಧ್ಯಯನವು ಕಳೆದ ನವೆಂಬರ್‌ಗೆ ಮುಕ್ತಾಯವಾಗಿದ್ದು, ಇದರ ಅಂಕಿಅಂಶಗಳನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ’ ಎಂದು ಆಫ್ಘಾನಿ­ಸ್ತಾನ ಆರೋಗ್ಯ ಸಚಿವಾಲಯದ ಪೌಷ್ಟಿ­ಕಾಂಶ ವಿಭಾಗದ ಮುಖ್ಯಸ್ಥ ಡಾ.­ಬಷೀರ್‌ ಅಹ್ಮದ್‌ ಹಮೀದ್‌ ಹೇಳಿದ್ದಾರೆ.‘ಹೊಸದಾಗಿ ನಡೆದ ಸಮೀಕ್ಷೆಯ ಅಂಕಿಅಂಶಗಳನ್ನು ಕರಾರುವಾಕ್ಕಾಗಿ ವಿಶ್ಲೇಷಿಸುವ ಸವಾಲು ಎದುರಾಗಿದೆ. ಹೊಸ ಸಮೀಕ್ಷೆಯಲ್ಲಿ ದೀರ್ಘ ಕಾಲದ ಕಾಯಿಲೆಗಳಿಗೆ ಕಾರಣವಾಗುವಂತಹ ಅಪೌಷ್ಟಿಕತೆಯಿಂದ ಶೇ 50ರಷ್ಟು ಮಕ್ಕಳು ಬಳಲುತ್ತಿದ್ದಾರೆ ಎನ್ನುವಂತಹ ಅಂಶ ದೊರಕುವ ಸಾಧ್ಯತೆ ಇದೆ’ ಎಂದು ಅವರು ಕಳವಳ ವ್ಯಕ್ತಪಡಿಸುತ್ತಾರೆ.ವಿಶ್ವದ ಇತರೆಡೆಯಲ್ಲಿ ಅಪೌಷ್ಟಿಕತೆಗೆ  ಆಹಾರ ಸಾಮಗ್ರಿ ಶೇಖರಣೆಯ ಅಭಾವ ಇಲ್ಲವೇ ಬೆಳೆ ಹಾನಿ ಕಾರಣ­ವಾಗಿದ್ದರೆ ಇಲ್ಲಿ ಅವೆರಡರ ಜೊತೆಗೆ ಪೋಷಕರಲ್ಲಿನ ಅರಿವಿನ ಕೊರತೆ ಮತ್ತು ಬಡತನವೂ ಕಾರಣವಾಗಿದೆ. ಅಪೌಷ್ಟಿ­ಕತೆ­ಯಿಂದ ಬಳಲುತ್ತಿರುವ ಮಕ್ಕಳ ಪೋಷಕರು ಸಕಾಲದಲ್ಲಿ ಔಷಧೋಪ­ಚಾರ ನೀಡದಿರುವುದು ಅಪೌಷ್ಟಿಕತೆ ಉಲ್ಬಣಿಸಲು  ಕಾರಣವಾಗಿದೆ.ಆಫ್ಘನ್‌ನಲ್ಲಿ ಕುಟುಂಬವೊಂದರ ಆದಾಯವನ್ನು ಪರಿಗಣಿಸಿ ಒಂದು ಕುಟುಂಬಕ್ಕೆ ಪ್ರತಿನಿತ್ಯ 2,100 ಕ್ಯಾಲರಿ­ಯಷ್ಟು ಪ್ರಮಾಣದ ಆಹಾರ ನೀಡಲು ಸಾಧ್ಯ ಎಂದು ಅಂದಾಜಿಸಲಾಗಿದೆ. ಆದರೆ, ವಾಸ್ತವದಲ್ಲಿ ಶೇ 36ರಷ್ಟು ಕುಟುಂಬಗಳು ಇದಕ್ಕಿಂತ  ಹೆಚ್ಚಿನ ಪ್ರಮಾ­ಣದಲ್ಲಿ ಆಹಾರ ಪಡೆಯ­ಬೇಕಾದ ಸ್ಥಿತಿಯಲ್ಲಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.ಆಫ್ಘನ್‌ನ ಮಕ್ಕಳಿಗೆ ಪೋಷಕಾಂಶ ಯುಕ್ತ ಆಹಾರವನ್ನು ನೀಡಲು ಯೂನಿ­ಸೆಫ್‌ ತನ್ನ ಆಹಾರ ವಿತರಣೆಯನ್ನು ಹೆಚ್ಚಿಸಿದೆ. ಆದರೆ, ಈ ಆಹಾರ ಸಮ­ರ್ಪಕವಾಗಿ ವಿತರಣೆ ಆಗುತ್ತಿಲ್ಲ. ವಿತರಣೆ­ಯಲ್ಲಿ ಹಲವು ಸಮಸ್ಯೆಗಳು ಕಾಡುತ್ತಿವೆ ಎಂದು ಯೂನಿಸೆಫ್‌ನ ಈ ಕಾರ್ಯ­ಕ್ರಮದ ಉಸ್ತುವಾರಿಯ ಜವಾಬ್ದಾರಿ ಹೊತ್ತಿರುವ ಡಾ. ಹುಸೇನ್‌ ಅಭಿ­ಪ್ರಾಯ­ಪಡುತ್ತಾರೆ.ಈ ವಿಶೇಷ ಆಹಾರಗಳು ಫ್ರಾನ್ಸ್ ಮತ್ತು ನಾರ್ವೆಗಳಲ್ಲಿ ಸಿದ್ಧಗೊಳ್ಳುತ್ತವೆ. ಆದರೆ, ನ್ಯಾಟೊ ಮತ್ತು ಪಾಕಿಸ್ತಾನಗಳ ನಡುವೆ ಉಂಟಾಗಿರುವ ವೈಮನಸ್ಯ ಮತ್ತು ಇರಾನ್‌ ಮೇಲೆ ಹೇರಿರುವ ನಿರ್ಬಂಧಗಳಿಂದಾಗಿ ಈ ಆಹಾರಗಳನ್ನು ಹೊತ್ತುತರುವ ಹಡುಗುಗಳ ಸಂಚಾರಕ್ಕೆ ತೊಡಕಾಗಿದೆ. ಹಡಗುಗಳಲ್ಲಿ ಬಂದ ಆಹಾರಗಳನ್ನು ಪಾಕಿಸ್ತಾನ ಮತ್ತು ಇರಾನಿನ ರೇವು ಪಟ್ಟಣಗಳಲ್ಲಿ ಇಳಿಸಿ ಅಲ್ಲಿಂದ ಆಫ್ಘನ್‌ಗೆ ತರಬೇಕು ಆದರೆ, ಇದು ಸುಗಮವಾಗಿ ಆಗುತ್ತಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry