ಶುಕ್ರವಾರ, ಜುಲೈ 23, 2021
23 °C

ಆಫ್ರಿಕನ್ ವಿದ್ಯಾರ್ಥಿಗಳಿಗೆ ಭಾರತ ವಿವಿಗಳ ಪದವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಕಾರ್ (ಸೆನೆಗಲ್): ಆಫ್ರಿಕದ ವಿವಿಧ ರಾಷ್ಟ್ರಗಳ ಸುಮಾರು 4820 ವಿದ್ಯಾರ್ಥಿಗಳು ಭಾರತದ ಐದು ಉನ್ನತ ವಿಶ್ವವಿದ್ಯಾಲಯಗಳಲ್ಲಿ ಟೆಲಿ ಶಿಕ್ಷಣ ಸೇವೆಯ ಮೂಲಕ ವಿವಿಧ ಕೋರ್ಸ್‌ಗಳಲ್ಲಿ  ಉನ್ನತ ಶಿಕ್ಷಣವನ್ನು ಮುಂದುವರಿಸಿದ್ದಾರೆ.ಈಗಾಗಲೇ  26 ವಿದ್ಯಾರ್ಥಿಗಳು  ಈ ವಿಶ್ವವಿದ್ಯಾಲಯಗಳಿಂದ ಎಂಬಿಎ ಪದವಿಗಳನ್ನುಪಡೆದುಕೊಂಡಿದ್ದಾರೆ. ಸರ್ಟಿಫಿಕೇಟ್ ಕೋರ್ಸ್ (ಇಂಗ್ಲಿಷ್), ಪಿಜಿ ಡಿಪ್ಲೊಮಾ (ಐಟಿ),  ಬಿಎಸ್‌ಸಿ (ಐಟಿ), ಎಂಎಸ್‌ಸಿ (ಐಟಿ), ಬಿಬಿಎ, ಎಂಬಿಎ  ಸೇರಿದಂತೆ ವಿವಿಧ ವಿಷಯಗಳಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳಲು ಈ ಟೆಲಿಶಿಕ್ಷಣ ಸೇವೆ ಅವಕಾಶ ಕಲ್ಪಿಸಿದೆ.ಇಡೀ ಆಫ್ರಿಕವನ್ನು ಒಳಗೊಳ್ಳುವಂತಹ ಈ ‘ಪ್ಯಾನ್-ಆಫ್ರಿಕನ್ ಇ-ಜಾಲ’ ದ ಮುಖ್ಯ ಉದ್ದೇಶ, ಐದು ವರ್ಷಗಳ ಅವಧಿಯಲ್ಲಿ 10,000 ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಿ ಸಾಮರ್ಥ್ಯ ನಿರ್ಮಾಣಕ್ಕೆ ಆಫ್ರಿಕಾಗೆ ನೆರವಾಗುವುದು.  ರೂ  542 ಕೋಟಿ  ವೆಚ್ಚದ ಈ ಯೋಜನೆಯ ರೂವಾರಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ.ವಿದೇಶಾಂಗ ವ್ಯವಹಾರ ಸಚಿವಾಲಯದ ನೇತೃತ್ವದಲ್ಲಿ ಟಿಸಿಐಎಲ್ (ಟೆಲಿಕಮ್ಯುನಿಕೇಷನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್) ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ ಎಂದು ಸೆನೆಗಲ್‌ನ ಡಕಾರ್‌ನಲ್ಲಿ ಈ ಯೋಜನೆಗಾಗಿ ಸ್ಥಾಪಿಸಲಾಗಿರುವ ‘ಹಬ್ ಸ್ಟೇಷನ್’ಗೆ ಭೇಟಿ ನೀಡಿದ್ದ ಭಾರತದ ಮಾಧ್ಯಮ ತಂಡಕ್ಕೆ ದೆಹಲಿಯಲ್ಲಿರುವ ಡಾಟಾ ಸೆಂಟರ್‌ನಿಂದ ಟಿಸಿಐಎಲ್ ನಿರ್ದೇಶಕ (ತಾಂತ್ರಿಕ) ವಿಮಲ್ ವಾಕ್ಲೊ ವಿಡಿಯೊ ಸಂವಾದದಲ್ಲಿ ತಿಳಿಸಿದರು.ನಾರಾಯಣ ಹೃದಯಾಲಯ

ಟೆಲಿ ವೈದ್ಯಕೀಯ ಸೇವೆಯನ್ನೂ ಈ ಯೋಜನೆ ಅಡಿ ಒದಗಿಸಲಾಗುತ್ತಿದೆ.  ಇದರ ಅನ್ವಯ, ಬೆಂಗಳೂರಿನ ನಾರಾಯಣ ಹೃದಯಾಲಯ, ಹೆಲ್ತ್ ಕೇರ್ ಗ್ಲೋಬಲ್ ಸೇರಿದಂತೆ  12 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಆಫ್ರಿಕಾದ ಆಸ್ಪತ್ರೆಗಳಿಗೆ ನಿಯಮಿತವಾದ ವೈದ್ಯಕೀಯ ಸಲಹಾ ಸೇವೆಯನ್ನು ಆನ್‌ಲೈನ್ ಮೂಲಕ ಒದಗಿಸುತ್ತಿವೆ. ಸೆನೆಗಲ್‌ನ ಹುಡುಗನೊಬ್ಬನಿಗೆ ಮಿದುಳಿನ ಗಡ್ಡೆಯ ಶಸ್ತ್ರ ಕ್ರಿಯೆಯನ್ನು ನೊಯಿಡಾದ ಫೋರ್ಟಿಸ್ ಆಸ್ಪತ್ರೆಯ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಸ್ಥಳೀಯ ವೈದ್ಯರೇ ಯಶಸ್ವಿಯಾಗಿ ಇತ್ತೀಚೆಗೆ ನೆರವೇರಿಸಿದ್ದಾರೆ ಎಂದು ವಾಕ್ಲೊ ತಿಳಿಸಿದರು. 2009ರಲ್ಲಿ  ಈ ಯೋಜನೆ ಕಾರ್ಯಾರಂಭ ಮಾಡಿದ ನಂತರ ಈವರೆಗೆ ಒಟ್ಟು 311 ಟೆಲಿ ವೈದ್ಯಕೀಯ ಸಲಹಾ ಸಭೆಗಳನ್ನು ಭಾರತೀಯ ಹಾಗೂ ಆಫ್ರಿಕಾ ಆಸ್ಪತ್ರೆಗಳು ನಡೆಸಿವೆ.ಆಫ್ರಿಕಾದ ಒಟ್ಟು 53 ರಾಷ್ಟ್ರಗಳಲ್ಲಿ 47 ರಾಷ್ಟ್ರಗಳು ಈ ಯೋಜನೆಗೆ ಸೇರಿಕೊಂಡಿವೆ. ಈ ಯೋಜನೆ ಕಾರ್ಯಾರಂಭವಾಗಿ ಮೂರು ವರ್ಷಗಳು ಕಳೆದಿದ್ದು ಐದು ವರ್ಷಗಳ ಪೂರೈಕೆಯ ನಂತರ ನಿರ್ವಹಣೆಯನ್ನು ಆಫ್ರಿಕನ್ ಯೂನಿಯನ್‌ಗೆ ಹಸ್ತಾಂತರಿಸಲಾಗುತ್ತದೆ ಎಂದು ವಾಕ್ಲೊ ಹೇಳಿದರು.ಈ ಯೋಜನೆ ಅಡಿ ಅತಿ ಹೆಚ್ಚಿನ ವಿದ್ಯಾರ್ಥಿಗಳು ಓದುತ್ತಿರುವುದು ನೊಯಿಡಾದ ಅಮಿಟಿ ವಿಶ್ವವಿದ್ಯಾಲಯದಲ್ಲಿ. 3000 ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಡಿ ಇಲ್ಲಿ ನೊಂದಾವಣೆಗೊಂಡಿದ್ದಾರೆ. ದೆಹಲಿಯ ಇಗ್ನೊಗೆ 700  ಹಾಗೂ ಮದ್ರಾಸ್ ವಿಶ್ವವಿದ್ಯಾಲಯಕ್ಕೆ 340 ವಿದ್ಯಾರ್ಥಿಗಳು ನೋಂದಣಿಗೊಂಡಿದ್ದಾರೆ.ಉಳಿದ ವಿದ್ಯಾರ್ಥಿಗಳು ದೆಹಲಿ ವಿಶ್ವವಿದ್ಯಾಲಯ ಹಾಗೂ ಪಿಲನಿ ಯ ‘ಬಿಟ್ಸ್’ನಲ್ಲಿ ಕಲಿಯುತ್ತಿದ್ದಾರೆ. ನಿಯಮಿತವಾದ ಟೆಲಿ ಶಿಕ್ಷಣದ ತರಗತಿಗಳನ್ನು ಭಾರತದಿಂದ ನಡೆಸಲಾಗುತ್ತದೆ. ಈ ಯೋಜನೆಗೆ ಆಫ್ರಿಕಾದ ವಿದ್ಯಾರ್ಥಿಗಳು ಅಪಾರ ಆಸಕ್ತಿ ತೊರುತ್ತಿದ್ದಾರೆ ಎಂದು  ಸೆನೆಗಲ್‌ನಲ್ಲಿರುವ ಟಿಸಿಐಎಲ್ ಯೋಜನಾ ನಿರ್ದೇಶಕ ಜೆ ಎಲ್ ಕಚ್ರೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.