ಶನಿವಾರ, ಜನವರಿ 18, 2020
20 °C

ಆಫ್ರಿಕಾ ‘ಗಾಂಧಿ’ ಅಸ್ತಂಗತ

ಪ್ರಜಾವಾಣಿ ವಾರ್ತೆ / ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೋಧಿವೃಕ್ಷ, ರಾಮಶಿಲೆ, ಗೀತಾ­ಚಾರ್ಯ, ಅನ್ ಟು ದಿಸ್ ಲಾಸ್ಟ್- ಇದಾವುದರ ಒಡ­ನಾಟವೂ ನೆಲ್ಸನ್ ಮಂಡೇಲಾ ಅವರಿಗೆ ಇರಲಿಲ್ಲ. ಅವರಿಗೆ  ಇದ್ದುದು ಒಂದೇ-, ಹುಟ್ಟಿನಿಂದ ಜೊತೆ­ಯಾದ ವರ್ಣಭೇದ ನೀತಿಯ ನೆರಳು. ‘ದಕ್ಷಿಣ ಆಫ್ರಿಕಾದಲ್ಲಿ ಹುಟ್ಟುವ ಪ್ರತಿ ಕಪ್ಪು ಮಗುವೂ ಹುಟ್ಟಿನಿಂದಲೇ ರಾಜಕೀಯ ಪ್ರಜ್ಞೆ ಹೊಂದಿರುತ್ತದೆ.

ಅದು ಪ್ರತಿ ಕರಿಯನಿಗೆ ಅನಿ­ವಾರ್ಯ’ ಎಂದು ಮಂಡೇಲಾ ಅವರೊಮ್ಮೆ ಉದ್ಗರಿಸಿದ್ದರು. ಕರಿಯನಾಗಿ ಹುಟ್ಟುವ ಶಿಶು, ಕರಿಯರ ನಡುವೆಯೇ ಬೆಳೆದು, ಅವರಿಗಿರುವ ಎಲ್ಲ ಸವಲತ್ತುಗಳನ್ನು ಅನುಭವಿಸುತ್ತದೆ. ಆದರೆ, ಇದಕ್ಕೆ ಪರ್ಯಾಯವಾಗಿ ಬಿಳಿಯರ ಜಗತ್ತು ಇನ್ನೊಂದಿ­ರು­ತ್ತದೆ. ಈ ತರತಮದ ತಿಳಿವಳಿಕೆಯೊಂದಿಗೇ ಜನಿಸುವ ದಕ್ಷಿಣ ಆಫ್ರಿಕಾದ ಕಪ್ಪು ಮಕ್ಕಳಲ್ಲಿ ಮಂಡೇಲಾ ಕೂಡ (ಜನನ: ಜುಲೈ ೧೮, ೧೯೧೮) ಒಬ್ಬರು. ಆದರೆ, ಮುಂದಿನ ಪೀಳಿಗೆಯ ಮಕ್ಕಳು ‘ಸ್ವಾತಂತ್ರ್ಯದ ಪರಿಸರ’ದಲ್ಲಿ ಜನ್ಮತಾಳಬೇಕು ಎನ್ನುವ ಹಂಬಲವೇ ಮಂಡೇಲಾ ಅವರ ಹೋರಾಟದ ದಾರಿಯನ್ನು ರೂಪಿಸಿತು.ದಕ್ಷಿಣ ಆಫ್ರಿಕಾ ಸಮಾಜದಲ್ಲಿನ ವೈರುಧ್ಯವು ಮಂಡೇಲಾ ಅವರ ಹೆಸರಿನಲ್ಲೂ ಇದೆ. ಮಂಡೇಲಾ ಜೊತೆಗೆ ಅಂಟಿಕೊಂಡ ‘ನೆಲ್ಸನ್’ ಬಿಳಿಯ ಪ್ರಭುತ್ವದ ಕೊಡುಗೆ. ರೋಲಿಹ್ಲಾಹ್ಲಾ ಮಂಡೇಲಾ ಎನ್ನುವುದು ಅವರ ಪೂರ್ಣ ಹೆಸರು. ಮನೆತನವನ್ನು ಸೂಚಿ­ಸುವ ರೋಲಿಹ್ಲಾಹ್ಲಾ ಎನ್ನುವ ಪದಕ್ಕೆ ‘ತೊಂದರೆ ಕೊಡುವವನು’ ಎನ್ನುವ ಅರ್ಥವೂ ಇದೆ. ಬೇಕಿದ್ದರೆ ತುಂಟ ಎನ್ನಬಹುದು. ಈ ತುಂಟ ಮಗುವಿನ ಹೆಸರಿನೊಂದಿಗೆ ಶಾಲೆಯಲ್ಲಿ ತಳುಕು ಹಾಕಿಕೊಂಡ ಹೆಸರು ನೆಲ್ಸನ್.

ಡಿ. 15ಕ್ಕೆ ಅಂತ್ಯಕ್ರಿಯೆ

ಜೋಹಾನ್ಸ್‌ಬರ್ಗ್‌ (ಪಿಟಿಐ): ದಕ್ಷಿಣ ಆಫ್ರಿಕಾ­­ವನ್ನು ವರ್ಣಭೇದ ನೀತಿಯಿಂದ ಮುಕ್ತ­ಗೊಳಿ­ಸಿದ, ಇಡೀ ಜಗತ್ತಿಗೆ ‘ಜೀವನ ಮೌಲ್ಯ’ಗಳ ಪ್ರತೀಕವಾಗಿದ್ದ,  ದಕ್ಷಿಣ ಆಫ್ರಿಕಾದ ಮೊತ್ತ­ಮೊದಲ ಕಪ್ಪು ವರ್ಣೀಯ ಅಧ್ಯಕ್ಷ, ‘ಭಾರತ ರತ್ನ’ ಹಾಗೂ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ನೆಲ್ಸನ್‌ ಮಂಡೇಲಾ ಶುಕ್ರವಾರ ನಸುಕಿನಲ್ಲಿ  ಕೊನೆಯುಸಿರೆಳೆದರು.ಮೇರು ನಾಯಕನ ಅಗಲಿಕೆಗೆ ಕಂಬನಿ ಮಿಡಿ­ದಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೊಬ್‌ ಜುಮಾ, ಡಿ.15ರಂದು ಸಕಲ ಸರ್ಕಾರಿ ಗೌರವ­ಗಳೊಂದಿಗೆ ಅಂತ್ಯಸಂಸ್ಕಾರ ನಡೆಸ­ಲಾಗು­ವುದು ಎಂದು ಪ್ರಕಟಿಸಿದ್ದಾರೆ.

ಈ ರೂಪಾಂತರಕ್ಕೆ ಮೊದಲು ರೋಲಿಹ್ಲಾಹ್ಲಾ ಕುಟುಂಬದ ಬಗ್ಗೆ ಹೇಳಬೇಕು. ಮಂಡೇಲಾ ಅವರ ತಂದೆ ಬಹುಪತ್ನಿವಲ್ಲಭ. ಮೂರನೇ ಹೆಂಡತಿಯ ಮುದ್ದಿನ ಮಗ ರೋಲಿಹ್ಲಾಹ್ಲಾ. ತಾಯಿ ಮತ್ತು ಮಗ,  ಕುನು ಎನ್ನುವ ಊರಿನಲ್ಲಿದ್ದರು.

ಯಾವ ಮಡದಿ ನೆನಪಾಗುತ್ತಾಳೋ ಅಲ್ಲಿಗೆ ಅಪ್ಪನ ನೆಲೆ ಬದಲಾಗುತ್ತಿತ್ತು. ಜಾನುವಾರುಗಳನ್ನು ಮೇಯಿ­ಸುತ್ತ, ಮನೆಗಿಂತಲೂ ಬಯಲಿನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ ಮಗನಿಗೆ ಮೂಗುದಾರ ಹಾಕಲೆಂದು ಅಮ್ಮ ಏಳರ ವಯಸ್ಸಿನ ಮಗನನ್ನು ಶಾಲೆಗೆ ಸೇರಿಸಿದಳು.

ಆವರೆಗೆ ಮಂಡೇಲಾ ಅವರ ಮನೆ­ಯಲ್ಲಿ ಯಾರೂ ಶಾಲೆಯ ಮೆಟ್ಟಿಲು ಹತ್ತಿರಲಿಲ್ಲ. ರೂಢಿಯನ್ನು ಮುರಿದು ಶಾಲೆಯ ಅಂಗಳ ತುಳಿದ ಬಾಲಕನಿಗೆ ಶಿಕ್ಷಕಿ ಕೊಟ್ಟ ಹೊಸ ಹೆಸರು- ನೆಲ್ಸನ್. ಪ್ರತಿಯೊಬ್ಬ ಕರಿಯ ವಿದ್ಯಾರ್ಥಿಗೂ ಇಂಗ್ಲಿಷ್ ಹೆಸರುಗಳನ್ನು ನೀಡು­ತ್ತಿದ್ದುದು ಆಗ ದಕ್ಷಿಣ ಆಫ್ರಿಕಾದಲ್ಲಿನ ವಾಡಿಕೆ.

 ನೆಲ್ಸನ್ ಒಂಬತ್ತು ವರ್ಷದ ಹುಡುಗ­ನಾಗಿ­ದ್ದಾಗ, ಹೆಂಡತಿ ಮಕ್ಕಳ ನೆನಪಿಸಿಕೊಂಡು ಕುನುವಿಗೆ ಬಂದ ಅಪ್ಪ ಕಾಯಿಲೆ ಬಿದ್ದು ತೀರಿಹೋದ. ಅಪ್ಪ ತನ್ನ ಪಾಲಿಗೆ ಅಪೂರ್ಣ ಕನಸಿನಂತೆ ಉಳಿದರೂ, ಆತನೊಳಗೆ ಅವ್ಯಕ್ತ ರೂಪ­ದಲ್ಲಿದ್ದ ಬಂಡು­ಕೋರ-­ತನ ಹಾಗೂ ನೇರವಂತಿಕೆ ಬಾಲಕನನ್ನು ಪ್ರಭಾವಿ­ಸಿದ್ದವು.

ಒಂಟಿ ಹೆಣ್ಣಿನ ಕಣ್ಣಳತೆಯಲ್ಲಿ ಮಗ ದಡ ಸೇರುವುದು ಕಷ್ಟವೆಂದು ಆ ತಾಯಿಗೆ ಅನ್ನಿಸಿರ­ಬೇಕು. ಮಗನನ್ನು ಕರೆದುಕೊಂಡು ಎಂಖೆಕೆಝ್ವನಿ ಪ್ರಾಂತ್ಯಕ್ಕೆ ಬಂದಳು. ಅದು ತೆಂಬುಲ್ಯಾಂಡ್‌ನ ರಾಜ­ಧಾನಿ. ತೆಂಬು ಜನರ ರಾಜ ಪ್ರತಿನಿಧಿ ಜೊಗಿನ್ತ­ಬಾ ಡಾಲಿನ್‌ಡ್ಯಾಬೊ ಆಶ್ರಯ ಮಂಡೇಲಾಗೆ ದೊರೆಯಿತು. ಜೊಗಿನ್ತಬಾ ದಂಪತಿಗೆ ಅಪ್ಪನಿಲ್ಲದ ಹುಡುಗನ ಬಗ್ಗೆ ವಿಶೇಷ ಪ್ರೀತಿ. ಅವರು ‘ಟಟೋಂಖುಲು’ ಎಂದು ಮುದ್ದಿನ ಕೂಸನ್ನು ಕರೆಯುತ್ತಿದ್ದರು. ‘ಟಟೋಂಖುಲು’ ಎಂದರೆ ತಾತ ಎಂದರ್ಥ. ಗಂಭೀರವಾಗಿ ಇರು­ವಾಗ ಬಾಲಕ ಮಂಡೇಲಾ ಮುದುಕನಂತೆ ಕಾಣುತ್ತಿದ್ದರಂತೆ.ಶಾಲೆಗೆ ಹೋಗುವುದು, ಕುರಿ ಕಾಯುವುದು, ಊಳುವುದು, ಕವಣೆ­ಯಿಂದ ಹಕ್ಕಿಗಳನ್ನು ಹೊಡೆ­ಯು­ವುದು, ಅವಕಾಶ ದೊರೆತಾಗ ಕುದುರೆ ಸವಾರಿ... ಇವು ಅವರ ದಿನಚರಿ­ಯಾಗಿತ್ತು.  ಎಂಖೆಕೆ­­ಝ್ವನಿಯಲ್ಲಿ ಮಂಡೇಲಾ ವ್ಯಕ್ತಿತ್ವ ಕ್ರಮೇಣ ಗರಿಗಟ್ಟಕೊಳ್ಳತೊಡಗಿತು. ದೊಣ್ಣೆ ವರಸೆಯಲ್ಲಿ ಪರಿಣತನಾಗುವುದೇ ಬದುಕಿನ ಗುರಿ ಎಂದು­ಕೊಂಡಿದ್ದ ಬಾಲಕನಿಗೆ, ಅದರಾಚೆಗಿನ ದೊಡ್ಡ ಜಗ­ತ್ತೊಂದು ತೆರೆದುಕೊಂಡಿತು.

ಮಾತು ಕಳೆದು­ಕೊಂಡ ಸಮುದಾಯಕ್ಕೆ ಬಾಯಿ ಆಗಬೇಕು, ತನ್ನ ಜನರ ವಿಮೋಚನೆಗಾಗಿ ಏನಾದರೂ ಮಾಡ­ಬೇಕು ಅನ್ನಿಸಿತು. ತಾರುಣ್ಯದ ಹುರುಪಿನ ದಿನಗಳ­ಲ್ಲೊಮ್ಮೆ ಜೋಹಾನ್ಸ್‌ಬರ್ಗ್‌ಗೆ ಓಡಿಹೋದ ಮಂಡೇಲಾ, ಅಲ್ಲಿನ ಗಣಿ ಕೆಲಸದಲ್ಲಿ ಮೈಯ ಕಪ್ಪನ್ನು ಮತ್ತಷ್ಟು ಗಾಢ­ವಾಗಿಸಿಕೊಂಡರು. ಬಂಡವಾಳಶಾಹಿಯ ಪ್ರತ್ಯಕ್ಷ ದರ್ಶನ ಅವರಿಗಾದುದು ಅಲ್ಲಿಯೇ.

ಕಾಲೇಜು ದಿನಗಳು ಮಂಡೇಲಾ ಅವರೊಳಗಣ ಹೋರಾಟಗಾರ, ನಾಯಕ ಹೊರಹೊಮ್ಮಲು ಅವಕಾಶ ಕಲ್ಪಿಸಿದವು. ಫೋರ್ಟ್‌ಹೇರ್‌ನಲ್ಲಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಅವರು ಬಿ.ಎ ಪದವಿಗಾಗಿ ಅಭ್ಯಾಸ ನಡೆಸಿದರು. ಆದರೆ, ವಿದ್ಯಾರ್ಥಿ ಚಳವಳಿಗಳಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ಕಾಲೇಜಿನಿಂದ ಹೊರದಬ್ಬಿಸಿಕೊಂಡರು. ನಂತರ ಯೂನಿವರ್ಸಿಟಿ ಆಫ್ ದಕ್ಷಿಣ ಆಫ್ರಿಕಾದಿಂದ ಪದವಿ ಪಡೆದರು.

ಕಾನೂನು ಪದವಿ ಪಡೆಯಲು ವಿಟ್‌ವಾರ್ಸ್‌ಯಾಂಡ್‌ ವಿಶ್ವ­ವಿದ್ಯಾಲ­ಯಕ್ಕೆ ಸೇರ್ಪಡೆಯಾದರೂ ದಡ್ಡ ವಿದ್ಯಾರ್ಥಿ ಎಂದು ಹೆಸರು ಹೊತ್ತು, ಪದವಿ ಪಡೆಯದೆಯೇ ೧೯೪೮ರಲ್ಲಿ ವಿಶ್ವವಿದ್ಯಾಲಯದಿಂದ ಹೊರಬಿದ್ದರು. ಅದಾದ ನಲವತ್ತೊಂದು ವರ್ಷಗಳ ಬಳಿಕ ಕಾನೂನು ಪದವಿಯ ಅವರ ಕನಸು ನನಸಾಯಿತು. ಜೈಲಿನಲ್ಲೇ ಕಲಿಕೆ ಮುಂದುವರಿಸಿದ್ದ ಅವರು, ಜೈಲು­ವಾಸದ ತಮ್ಮ ಕೊನೆಯ ತಿಂಗಳುಗಳಲ್ಲಿ ಕಾನೂನು ಪದವಿ ಪಡೆದರು.ಜೈಲಿನಲ್ಲಿ ಇದ್ದಾಗ ಕಾನೂನು ಪದವಿ ಪಡೆಯುವ ಮೊದಲೇ ಕಾನೂನು ವಿಷಯದಲ್ಲಿ ಎರಡು ವರ್ಷಗಳ ಡಿಪ್ಲೊಮ  ಪೂರೈಸಿದ್ದರು. ಈ ಡಿಪ್ಲೊಮ ಹಾಗೂ ಪದವಿಯ ಅರ್ಹತೆಯ ಮೇರೆಗೆ ಅವರು ವಕೀಲನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ೧೯೫೨ರಲ್ಲಿ ಮಂಡೇಲಾ ಮತ್ತು ಅಲಿವರ್ ತಾಂಬೊ ಕಾನೂನು ಸಂಸ್ಥೆಯೊಂದನ್ನು ಸ್ಥಾಪಿಸಿ­ದರು. ಇದು ದಕ್ಷಿಣ ಆಫ್ರಿಕಾದಲ್ಲಿ ಕಪ್ಪು ವರ್ಣೀಯರು ಸ್ಥಾಪಿಸಿದ ಮೊಟ್ಟ ಮೊದಲ ಕಾನೂನು ಸಂಸ್ಥೆ. ೧೯೪೪ರಲ್ಲಿ ‘ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್’ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಮಂಡೇಲಾ ಅವರ ಸಕ್ರಿಯ ರಾಜಕಾರಣ ಶುರುವಾಯಿತು.ಸಶಸ್ತ್ರ ಹೋರಾಟಕ್ಕೆ ಒತ್ತಾಸೆ:

ಸರ್ಕಾರದೊಂದಿಗಿನ ಸಂಘರ್ಷದಲ್ಲಿ ಮಂಡೇಲಾ ಭೂಗತರಾಗಿ ಸಶಸ್ತ್ರ ಹೋರಾಟಕ್ಕೆ ಒತ್ತಾಸೆ ನೀಡಿದರು. ರಹಸ್ಯವಾಗಿ ದೇಶವನ್ನು ತೊರೆದ ಹಾಗೂ ಕಾರ್ಮಿಕರ ಮುಷ್ಕರಕ್ಕೆ ಚಿತಾವಣೆ ನಡೆಸಿದ ಆರೋಪದಲ್ಲಿ ಅವರಿಗೆ ಐದು ವರ್ಷಗಳ ಜೈಲಾಯಿತು. ೧೯೬೩ರಲ್ಲಿ ಆರಂಭವಾದ ‘ರಿವೋನಿಯಾ ವಿಚಾರಣೆ’ಯಲ್ಲಿ ಶಿಕ್ಷೆಯನ್ನು ಜೀವಿತಾವಧಿಗೆ ವಿಸ್ತರಿಸಲಾ­ಯಿತು. ವಿಚಾರಣೆಯ ಕೊನೆಯಲ್ಲಿ (೧೯೬೪) ಮಂಡೇಲಾ ಆಡಿದ ಮಾತುಗಳು ‘ಸ್ಪೀಚ್ ಫ್ರಂ ದಿ ಡಾಕ್’ ಎಂದೇ ಪ್ರಸಿದ್ಧವಾಗಿವೆ.‘ನಾನು ಬಿಳಿಯರ ದಬ್ಬಾಳಿಕೆ  ವಿರೋಧಿಸುತ್ತೇನೆ. ಶ್ರೀಮಂತ ಕರಿಯರ ದಬ್ಬಾಳಿಕೆಯ ವಿರುದ್ಧವೂ ಹೋರಾಡು­ತ್ತೇನೆ. ಎಲ್ಲ ವ್ಯಕ್ತಿಗಳಿಗೂ ಸಮಾನ ಅವಕಾಶ ಇರುವ ಹಾಗೂ ಶಾಂತಿ-ಸೌಹಾರ್ದತೆ ನೆಲೆಯಾಗಿರುವ ಮುಕ್ತ ಸಮಾಜ ನನ್ನ ಕನಸಾಗಿದೆ. ಈ ಆದರ್ಶ ಸಮಾಜದ ಸಾಕ್ಷಾತ್ಕಾರಕ್ಕಾಗಿ ನನ್ನ ಹೋರಾಟ. ಅಗತ್ಯವಾದರೆ ಬಲಿದಾನಕ್ಕೂ ನಾನು ಸಿದ್ಧ’.ಪ್ರಿಟೋರಿಯಾ ಜೈಲಿನಲ್ಲಿ  ಮಂಡೇಲಾ ಕಠಿಣ ಶಿಕ್ಷೆ ಅನುಭವಿಸ­ಬೇಕಾಯಿತು. ಅಲ್ಲಿ ಕಲ್ಲು ಒಡೆದರು. ಕಪ್ಪು ವರ್ಣದ ಕೈದಿಗಳಿಗೆ ನೀಡುವ ಕಡಿಮೆ ಪ್ರಮಾಣದ ಆಹಾರ  ಉಂಡರು. ಪ್ರಿಟೋರಿಯಾದಿಂದ ರಾಬಿನ್ ಐಲ್ಯಾಂಡ್ ಕಾರಾಗೃಹಕ್ಕೆ ಮಂಡೇಲಾ ಅವರನ್ನು ಸ್ಥಳಾಂತರಿ­ಸಲಾಯಿತು. ಸೆರೆಯಲ್ಲಿದ್ದರೂ ದಕ್ಷಿಣ ಆಫ್ರಿಕಾದ ಸಾಮಾಜಿಕ-, ರಾಜಕೀಯ ವಲಯಗಳಲ್ಲಿ ಅವರ ಪ್ರಭಾವ ತೀವ್ರ­ವಾಗಿತ್ತು. ವರ್ಣಭೇದ ನೀತಿ ವಿರುದ್ಧ ರೂಪುಗೊಂಡ ಹೋರಾಟದ ಲಕ್ಷಾಂತರ ಯುವನದಿಗಳಿಗೆ ಮಂಡೇಲಾ ಜೀವಜಲ­ವಾಗಿದ್ದರು. ರಾಬಿನ್ ಐಲ್ಯಾಂಡ್ ಜೈಲು ‘ಮಂಡೇಲಾ ಯೂನಿವರ್ಸಿಟಿ’ ಎಂದೇ ಜನರ ಮಧ್ಯೆ ಹೆಸರು ಪಡೆದಿತ್ತು.ಮಂಡೇಲಾ ಸೆರೆಯಲ್ಲಿದ್ದಾಗಲೇ ಅವರ ತಾಯಿ ತೀರಿಕೊಂಡರು. ಹಿರಿಯ ಮಗ ಅಪಘಾತದಲ್ಲಿ ಮೃತಪಟ್ಟ. ೧೯೮೫ರಲ್ಲಿ ಅವರು ಪ್ರಾಸ್ಟೇಟ್ ಶಸ್ತ್ರಕ್ರಿಯೆಗೆ ಒಳಗಾದರು. ೧೯೮೮ ರಲ್ಲಿ ಕ್ಷಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದರು. ಹೀಗೆ ಸಾವು ನೋವುಗಳಿಂದ ದೇಹ ಮನಸ್ಸು ಜರ್ಝರಗೊಂಡರೂ, ಇನ್ನೊಂದೆಡೆ ಜೈಲುವಾಸ ಅವರ ವ್ಯಕ್ತಿತ್ವ ಮಾಗಲು ಕಾರಣವಾಯಿತು. ಸ್ವಾತಂತ್ರ್ಯದ ಹಂಬಲವೂ ಬದುಕಿನ ಪ್ರೀತಿಯೂ ಒಂದರೊಳಗೊಂದು ಬೆರೆತವು.‘ಸ್ವಾತಂತ್ರ್ಯದ ಕಡೆಗಿನ ನಡಿಗೆ ಸುಲಭ­ವಾದುದಲ್ಲ. ನಮ್ಮಲ್ಲಿ ಅನೇಕರು ತಮ್ಮ ಹಂಬಲದ ಉತ್ತುಂಗವನ್ನು ತಲುಪುವ ಪ್ರಯತ್ನದಲ್ಲಿ ಅನೇಕ ಸಲ ಸಾವಿನ ಕಣಿವೆಯ ನೆರಳನ್ನು ದಾಟಬೇಕಾ­ಗುತ್ತದೆ’ ಎನ್ನುವ ಅರಿವು ಮಂಡೇಲಾ ಅವರದಾಗಿತ್ತು. ಅಂತರರಾಷ್ಟ್ರೀಯ ಒತ್ತಡ ಹೆಚ್ಚಾದಾಗ ಮಂಡೇಲಾ ಅವರನ್ನು ಬಿಡುಗಡೆ ಮಾಡುವುದು ದಕ್ಷಿಣ ಆಫ್ರಿಕಾ ಸರ್ಕಾರಕ್ಕೆ ಅನಿವಾರ್ಯ­ವಾಯಿತು. ೨೭ ವರ್ಷಗಳ ಸೆರೆವಾಸದ ನಂತರ ೧೯೯೦ರ ಫೆಬ್ರುವರಿ ೧೧ರಂದು ಅವರು ಜೈಲಿನಿಂದ ಹೊರಬಂದರು. ದಕ್ಷಿಣ ಆಫ್ರಿಕಾದ ಕರಿಯರು, ಜನಸಾಮಾನ್ಯರ ಊರುಕೇರಿಗಳಲ್ಲಿ ಸೂರ್ಯ ಸುಳಿದಂತಾಯಿತು.ಸಕ್ರಿಯ ರಾಜಕಾರಣಕ್ಕೆ ಮರಳಿದ ಮಂಡೇಲಾ ೧೯೯೧ ರಲ್ಲಿ ‘ಎಎನ್‌ಸಿ’ ಅಧ್ಯಕ್ಷರಾಗಿ ಆಯ್ಕೆಯಾದರು. ೧೯೯೩ ರಲ್ಲಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯಿತು. ೧೯೯೪ ರಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಚುನಾಯಿತ­ರಾದರು. ವರ್ಣಭೇದ ನೀತಿ ಕೊನೆ­ಗಾಣಿಸುವುದರೊಂದಿಗೆ ಜೀವತಳೆದ ಪ್ರಜಾಪ್ರಭುತ್ವ ಸರ್ಕಾರದ ಮೊದಲ ಅಧ್ಯಕ್ಷ ಎನ್ನುವ ಹಿರಿಮೆ ಅವರದು. ಒಂದು ಅವಧಿಯ ಅಧಿಕಾರದ ನಂತರ ೧೯೯೯ ರಲ್ಲಿ ಅಧಿಕಾರದಿಂದ ಕೆಳಗಿಳಿದ ಮಂಡೇಲಾ, ತಮ್ಮ ಹೆಸರಿನ ಮಕ್ಕಳ ನಿಧಿ ಹಾಗೂ ಫೌಂಡೇಷನ್‌ಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.ವೈವಾಹಿಕ ಬದುಕಿನ ಏಳುಬೀಳು

ರಾಜಕಾರಣದಂತೆಯೇ ಮಂಡೇಲಾ ಅವರ ವೈಯಕ್ತಿಕ ಬದುಕು ಕೂಡ ಏಳುಬೀಳುಗಳಿಂದ ಕೂಡಿತ್ತು. ಅವರಿಗೆ ಮೂರು ಮದುವೆಗಳು. ಮೊದಲನೇ ಪತ್ನಿ ಎವೆಲಿನ್ ಮೇಸ್. ಈ ದಂಪತಿಗೆ ಎರಡು ಗಂಡು, ಇಬ್ಬರು ಹೆಣ್ಣುಮಕ್ಕಳು. ೧೯೫೮ರಲ್ಲಿ ಇವರ ಮದುವೆ ಮುರಿದುಬಿತ್ತು.

ರಾಜಕಾರಣದ ಒತ್ತಡಗಳ ನಡುವೆ ಮನೆಯ ಕಡೆ ಗಮನಹರಿಸದೆ ಹೋದ ಗಂಡನನ್ನು ಸಹಿಸಿಕೊಳ್ಳುವುದು ಮೇಸ್‌ಗೆ ಕಷ್ಟವಾಗಿತ್ತು. ರಾಜಕೀಯ ತಾಟಸ್ಥ್ಯ ತಾಳುವಂತೆ ಗಂಡನನ್ನು ಒತ್ತಾಯಿಸಿ ನಿರಾಶರಾಗಿದ್ದರು. ಸೋಡಾಚೀಟಿ ಅನಿವಾರ್ಯವಾಯಿತು.

ವಿನ್ನಿ ಮಡಿಕಿಝೆಲ ಮಂಡೇಲಾರ ಎರಡನೇ ಪತ್ನಿ. ಇವರಿಗೆ ಇಬ್ಬರು ಹೆಣ್ಣುಮಕ್ಕಳು. ೧೯೯೬ ರಲ್ಲಿ ಈ ಮದುವೆಯೂ ಮುರಿದುಬಿತ್ತು. ಮಂಡೇಲಾ ಮೂರನೇ ಮದುವೆಯಾದುದು ತಮ್ಮ ಎಂಬತ್ತನೇ ವಯಸ್ಸಿನಲ್ಲಿ. ಕಾಲೇಜು ಸಮಯದಲ್ಲಿ ಆಟೋಟ­ಗಳಲ್ಲಿ ಆಸಕ್ತಿಯಿತ್ತು. ತೋಟಗಾರಿಕೆ ಅವರ ಇನ್ನೊಂದು ಆಸಕ್ತಿ. ಮಂಡೇಲಾ ಸೌಂದರ್ಯಪ್ರಿಯರು ಕೂಡ. ಅವರು ತೊಡುತ್ತಿದ್ದ, ಚಿತ್ರಗಳಿಂದ ಅಲಂಕೃತವಾದ ‘ಮಡಿಬಾ ಅಂಗಿ’ಗಳು ಫ್ಯಾಷನ್ ಜಗತ್ತಿನ ಗಮನಸೆಳೆದಿದ್ದವು.ಟೀಕೆಗಳಿಗೆ ಹೊರತಲ್ಲ

ನೈತಿಕ ನೆಲೆಗಟ್ಟಿನ ರಾಜಕಾರಣಕ್ಕೆ ಹೆಸರಾದರೂ ಮಂಡೇಲಾ ಟೀಕೆಗಳಿಂದ ಹೊರತಾಗಿರಲಿಲ್ಲ. ಅವರನ್ನು ಭಯೋತ್ಪಾದಕ ಎಂದೂ ಕರೆದವ­ರಿದ್ದಾರೆ. ಕಮ್ಯುನಿಸ್ಟರ ಬಗ್ಗೆ ಅವರದು ಅತಿ ಪ್ರೀತಿ ಎಂದು ಕೊಂಕು ನುಡಿದವರೂ ಇದ್ದಾರೆ. ‘ಮಗುವಿಗೆ ಪ್ರೀತಿ, ನಗು, ಶಾಂತಿ ಬೇಕು’ ಎಂದು ಹೇಳಿದ್ದ ಮಂಡೇಲಾ ಅವರು, ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದೇಶದಲ್ಲಿನ ಎಚ್‌ಐವಿ ಸೋಂಕಿನ ತೀವ್ರತೆಯನ್ನು ತಹಬಂದಿಗೆ ತರಲು ವಿಫಲರಾದರು ಎಂದು ಷರಾ ಬರೆದವರೂ ಇದ್ದಾರೆ.

‘ಲಾಂಗ್ ವಾಕ್ ಟು ಫ್ರೀಡಂ’ ಆತ್ಮಕಥನದಲ್ಲಿ, ಕೆಲವು ಹಿಂಸಾಕೃತ್ಯಗಳಲ್ಲಿ ವಿನ್ನಿ ಅವರ ಪಾತ್ರದ ಬಗ್ಗೆ ಮಂಡೇಲಾ ಮುಕ್ತವಾಗಿ ಬರೆಯಲಿಲ್ಲ ಎಂದು ಶಂಕಿಸಿದವರೂ ಇದ್ದಾರೆ. ಇದೆಲ್ಲದರ ನಡುವೆ ‘ರಾಷ್ಟ್ರಪಿತ’ ಎನ್ನುವ ಕೊಂಡಾಟವೂ ಅವರಿಗೆ ಸಂದಿದೆ. ‘ನಾನು ಅವತಾರ ಪುರುಷನಲ್ಲ. ಸಾಧಾರಣ ಮನುಷ್ಯನಾಗಿದ್ದ ನನ್ನನ್ನು ಕೆಲವು ಅಸಾಧಾರಣ ಸಂದರ್ಭಗಳು ನಾಯಕನಾಗಿ ರೂಪಿಸಿದವು’ ಎನ್ನುವ ವಿನಯದ ಸ್ವಭಾವ ಅವರದಾಗಿತ್ತು.

‘ಉತ್ತಮವಾದ ತಲೆ ಹಾಗೂ ಹೃದಯಗಳ ಸಂಗಮ ಸದಾಕಾಲ ದುರ್ಲಭ’ ಎನ್ನುತ್ತಿದ್ದ ಅವರೇ ಸ್ವತಃ ಅಂಥದೊಂದು  ಗಮವಾಗಿದ್ದರು. ಮಾನವೀಯತೆಯ ರೂಪಕಗಳಾಗಿ ಕೆಲವು ವ್ಯಕ್ತಿಗಳು ಚರಿತ್ರೆ ಹಾಗೂ ಜನಮಾನಸದಲ್ಲಿ ಉಳಿಯುತ್ತಾರೆ. ಕಾಲದೇಶಗಳನ್ನು ಮೀರಿದ ಅಂಥ ರೂಪಕಗಳ ಸಾಲಿಗೆ ನೆಲ್ಸನ್ ರೋಲಿಹ್ಲಾಹ್ಲಾ ಮಂಡೇಲಾ ಅವರೂ ಸೇರಿದ್ದಾರೆ.

ಪ್ರತಿಕ್ರಿಯಿಸಿ (+)