ಆಫ್ ರೋಡ್ ರೋಮಾಂಚನ

7
ಕಾಡು ರಸ್ತೆಯಲ್ಲಿ ಕಾರೋಡಿಸಿ

ಆಫ್ ರೋಡ್ ರೋಮಾಂಚನ

Published:
Updated:
ಆಫ್ ರೋಡ್ ರೋಮಾಂಚನ

ಒತ್ತಾದ ಮರಗಳ ಮಧ್ಯೆ ಇರುವ ಕಿರಿದಾದ ಜಾಗದಲ್ಲಿ ದೊಡ್ಡ ಎಸ್‌ಯುವಿ ಓಡಿಸುವುದು ದೊಡ್ಡ ಸವಾಲು. ಇದನ್ನು ಹೇಗೋ ಸಂಭಾಳಿಸಿದರೆ ಕಲ್ಲು, ಕೊರಕಲುಗಳ ಮಧ್ಯೆ ನುಗ್ಗಿ ಮುಂದಕ್ಕೆ ಸಾಗಬೇಕಿರುವ ಮತ್ತೊಂದು ಸಮಸ್ಯೆ. ಕೆಳಗೆ ನೆಲ ಇದೆಯೋ ಅಥವಾ ಅಲ್ಲಿರುವುದು ಕೊರಕಲೋ ಎಂಬುದು ಕಾಣುವುದೇ ಇಲ್ಲ. ಹಾಗೆಂದು ಅಂದಾಜಿನಲ್ಲಿ ಸ್ಟೀರಿಂಗ್ ತಿರುಗಿಸಿದರೆ ಗಾಡಿಯ ಆರೋಗ್ಯಕ್ಕೂ ಚಾಲಕನ ಜೀವಕ್ಕೂ ಅಪಾಯ ತಾನೆ. ಒಟ್ಟಿನಲ್ಲಿ ರಸ್ತೆಯೇ ಇಲ್ಲದಿರುವಲ್ಲಿ ಕಾರು ಓಡಿಸುವ ಸಾಹಸ ಇಲ್ಲಿನದ್ದು. ಇಷ್ಟಕ್ಕೂ ಹೀಗೇಕೆ ಕಾರು ಓಡಿಸಬೇಕು ಎಂದು ಕೇಳಿದರೆ ಎಸ್‌ಯುವಿಗಳ ಭಾರತೀಯ ಉತ್ಪಾದಕ ಟಾಟಾ ಮೋಟಾರ್ಸ್ ಹೇಳುತ್ತದೆ `ಇದು ಆಫ್ ರೋಡ್ ಇವೆಂಟ್'.ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಕೊರಕಲು ಜಾಗವಿದು. ಇಲ್ಲಿ ಟಾಟಾ ಮೋಟಾರ್ಸ್ ಬಿಡಾರ ಹೂಡಿತ್ತು. ದೇಶದ ವಿವಿಧ ಭಾಗಗಳ ಸಾಹಸ ಪ್ರವೃತ್ತಿಯ 28 ಕಾರು ಮಾಲೀಕರು ಈ ಸಾಹಸದಲ್ಲಿ ಭಾಗವಹಿಸಿದ್ದರು. ಸಾಹಸ ಎಂದರೆ ಅಂತಿಂಥ ಸಾಹಸವೇನಲ್ಲ. ಇದಕ್ಕೂ ಮೊದಲು ಕೇವಲ ನಗರದ ರಸ್ತೆಗಳಲ್ಲಿ ಕಾರು ಚಾಲನೆ ಮಾಡಿದ್ದವರಿಗೆ ಇದ್ದಕ್ಕಿದ್ದಂತೆ ಈ ಸಾಹಸ ಮಾಡಲು ಬಿಟ್ಟರೆ ಕಕ್ಕಾಬಿಕ್ಕಿಯೇ ಆಗಿ ಬಿಟ್ಟಾರು. ಇದೇ ರೀತಿಯ ಪರಿಸ್ಥಿತಿಯನ್ನು ಅನೇಕರು ಇಲ್ಲಿ ಅನುಭವಿಸಬೇಕಾಯಿತು. ನೆಟ್ಟಗೆ ನಡೆಯಲಿಕ್ಕೇ ಕಷ್ಟವಾದ ಜಾಗಗಳಲ್ಲಿ ಕಾರು ಬಿಡಬೇಕು ಎಂದರೆ ಏನಾಗಬೇಡ?

ಟಾಟಾ ಸಂಸ್ಥೆ ಎಸ್‌ಯುವಿ (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಗಳನ್ನು ತಯಾರಿಸಿ ಸುಮ್ಮನೆ ಕುಳಿತುಬಿಡುವುದಿಲ್ಲ. ಎಸ್‌ಯುವಿ ಎಂದರೇನು ಎಂದು ತೋರಿಸಿಕೊಡುತ್ತದೆ. ಎಸ್‌ಯುವಿಯ ನಿಜ ಸ್ವರೂಪವನ್ನು, ಅದರ ಕ್ಷೇತ್ರದ ಆಳ- ಅಗಲಗಳನ್ನು ತೋರಿಸಿಕೊಡುತ್ತದೆ.ಟಾಟಾ ಸಂಸ್ಥೆಯ ಕೊಂಚ ಹಳೆಯದಾದ, ಆದರೂ ಉತ್ತಮ ಎಸ್‌ಯುವಿ ಎಂಬ ಹೆಸರನ್ನು ಹೊಂದಿರುವ ಸುಮೋ, ಇಂದಿಗೂ ಅತ್ಯುತ್ತಮ ಎಸ್‌ಯುವಿ ಸ್ಥಾನವನ್ನು ಉಳಿಸಿಕೊಂಡಿರುವ ಟಾಟಾ ಸಫಾರಿ, ಇತ್ತೀಚೆಗಷ್ಟೇ ಬಿಡುಗಡೆಯಾದ ಟಾಟಾ ಆರಿಯಾ, ಪಕ್ಕಾ ಆಫ್ ರೋಡ್‌ಗೆಂದೇ (ಕಚ್ಚಾ ರಸ್ತೆ)  ನಿರ್ಮಾಣಗೊಂಡಿರುವ ಟಾಟಾ ಝೆನಾನ್ ಎಕ್ಸ್‌ಟಿ ವಾಹನಗಳನ್ನು ಕೊಂಡಿರುವ ಲಕ್ಷಾಂತರ ಬಳಕೆಗಾರರು ಇಂದು ಇದ್ದಾರೆ. ಆದರೆ ಅವನ್ನು ನಿಜಕ್ಕೂ ಆಫ್ ರೋಡ್‌ಗೆಂದೇ ಬಳಸುವವರು ಎಷ್ಟು ಮಂದಿ ಇದ್ದಾರೆ? ಮಲೆನಾಡು ಪ್ರದೇಶಗಳಲ್ಲಿ ಬಳಸುವ ಅನೇಕ ಮಂದಿ ಇದ್ದರೂ, ಅವರು ಕ್ರೀಡಾ ದೃಷ್ಟಿಯಿಂದ ಬಳಸುವುದು ಅತ್ಯಂತ ಕಡಿಮೆಯೇ. ಕೆಲವೇ ಕೆಲವು ಮಂದಿ ಮಾತ್ರ ರ‌್ಯಾಲಿಗಳಲ್ಲಿ ಭಾಗವಹಿಸುತ್ತಾರೆ. ಜಿಲ್ಲಾ ಮಟ್ಟದಿಂದ, ರಾಷ್ಟ್ರಮಟ್ಟದವರೆಗೂ ರ‌್ಯಾಲಿಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡವರೂ ಇದ್ದಾರೆ.ಆದರೆ ಇನ್ನೂ ಕೆಲವು ಮಂದಿ ಇದ್ದಾರೆ. ಇವರ ಬಗ್ಗೆ ಯಾರಿಗೂ ಸರಿಯಾಗಿ ತಿಳಿದೇ ಇಲ್ಲ. ಇವರು ಆಫ್ ರೋಡ್ ಸವಾರರು. ಯಾರಿವರು ಆಫ್ ರೋಡ್ ಚಾಲಕರು ಎಂದು ತಿಳಿದುಕೊಳ್ಳುವ ಮುನ್ನ ಆಫ್ ರೋಡ್ ಚಾಲನೆ ಎಂದರೇನು ಎಂದು ತಿಳಿದುಕೊಳ್ಳಬೇಕಾಗುತ್ತದೆ. ಇದು ಭಾರತದಲ್ಲಿ ಕೊಂಚ ಅಪರಿಚಿತವೇ ಆದ ಕ್ರೀಡೆ. ಇದನ್ನು ಕ್ರೀಡೆ ಎನ್ನಬಹುದು ಎನ್ನುವ ಮಟ್ಟದ ಸ್ವರೂಪವೂ ಇದಕ್ಕಿನ್ನೂ ಭಾರತದಲ್ಲಿ ಬೆಳೆದಿಲ್ಲ. ಏಕೆಂದರೆ ಆಫ್ ರೋಡ್ ಚಾಲನೆಯನ್ನು ಕ್ರೀಡೆ ಎಂದು ಪರಿಗಣಿಸಿ ಸ್ಪರ್ಧೆಗಳನ್ನು ನಡೆಸುವ ಪರಿಸ್ಥಿತಿಯೇ ಭಾರತದಲ್ಲಿ ಇಲ್ಲ.ಆಫ್ ರೋಡ್ ಸವಾರಿ ಎಂಬುದಕ್ಕೆ ಅತಿ ದೊಡ್ಡ ವ್ಯಾಖ್ಯಾನವೇನೂ ಇಲ್ಲ. ಯಾವುದೇ ವಾಹನವನ್ನು ರಸ್ತೆಯಿಂದ ಹೊರ ನಡೆಸಿ ಕಚ್ಚಾ ರಸ್ತೆಯಲ್ಲಿ ಚಾಲನೆ ಮಾಡುವುದಷ್ಟೇ. ಆದರೆ ಇಲ್ಲೊಂದು ವ್ಯತ್ಯಾಸವಿದೆ. ಕಚ್ಚಾ ರಸ್ತೆ ಎಂದರೆ, ಇಲ್ಲಿ ಅಕ್ಷರಶಃ ರಸ್ತೆ ಕಾಣುವುದೇ ಇಲ್ಲ. ಏಕೆಂದರೆ ಇಲ್ಲಿ ರಸ್ತೆಯೇ ಇರುವುದಿಲ್ಲ. ಮೊದಲೇ ನಿಗದಿಪಡಿಸಿದ, ಧ್ವಜಗಳಿಂದ ಗುರುತಿಸಲ್ಪಟ್ಟ ಮಾರ್ಗದಲ್ಲಿ ವಾಹನ ಚಾಲನೆ ಮಾಡಬೇಕು.ಸಾಮಾನ್ಯವಾಗಿ ಮರಗಳ ತೋಪಿನ ನಡುವೆ, ಬಂಡೆ ಕಲ್ಲುಗಳ ನಡುವೆ, ಕೊರಕಲುಗಳ ನಡುವೆ ಜಾಗ ಮಾಡಿಕೊಂಡು ಹುಷಾರಾಗಿ ವಾಹನ ಚಾಲನೆ ಮಾಡಬೇಕು. ವಾಹನ ಕಾರು ಆದರೂ ಸೈ, ಬೈಕ್ ಆದರೂ ಸೈ. ಸುಮಾರು 80 ಡಿಗ್ರಿ ಇಳಿಜಾರಿನ, ಸಡಿಲ ಮಣ್ಣಿನ ಮಾರ್ಗಗಳನ್ನು ಇಳಿಸಬೇಕು ಅಥವಾ ಹತ್ತಬೇಕು. ಮರಳಿನ ನಡುವೆ ಚಕ್ರಗಳು ಹೂತುಹೋಗದ ಹಾಗೆ ನಿಯಂತ್ರಿಸಬೇಕು. ಕೆಸರಿನ ನಡುವೆ ನೇರವಾಗಿ ಗುರಿಮುಟ್ಟಬೇಕು. ಇದನ್ನು ಓದಲು ಸುಲಭವೇ ಆದರೂ, ಚಾಲನೆಗೆ ಅತಿ ಕಷ್ಟವಾದ ವಿಧಾನವಿದು. ಇಂತಹ ವಿಧಾನವನ್ನು ಪ್ರಸಿದ್ಧಗೊಳಿಸಲು ಟಾಟಾ ಮುಂದಾಗಿರುವುದು ಮಾತ್ರ ಅಚ್ಚರಿಯೇ ಸರಿ. ಅದರಲ್ಲೂ ಕರ್ನಾಟಕದಲ್ಲೇ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಫ್ ರೋಡ್ ಟ್ರಯಲ್ ಏರ್ಪಡಿಸಿ ಮೆಚ್ಚುಗೆಗೆ ಪಾತ್ರವಾಗಿದೆ.ಏಕೆಂದರೆ ಈವರೆಗೆ ಟಾಟಾ ಮೋಟಾರ್ಸ್ ಸುಮಾರು 13 ಆಫ್ ರೋಡ್ ವಾಹನ ಚಾಲನೆ (ಟ್ರಯಲ್) ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈವರೆಗೆ ಚಂಡೀಘಡ, ಲೂದಿಯಾನಾ, ನವದೆಹಲಿ,ಜೋದ್‌ಪುರ್, ಡೆಹ್ರಾಡೂನ್, ಕಾನ್ಪುರ, ಲಖನೌ, ಲೊನಾವಾಲಾ, ಗೋವಾ, ಕೊಚಿ, ಚೆನ್ನೈ, ಹೈದರಾಬಾದ್‌ಗಳಲ್ಲಿ ಮಾತ್ರ ಈ ಕಾರ್ಯಕ್ರಮಗಳು ನಡೆದಿದ್ದವು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆದು, ಕನ್ನಡಿಗರೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದರು. ಒಟ್ಟು 28 ಭಾಗಿಗಳ ಪೈಕಿ ಕರ್ನಾಟಕದಿಂದಲೇ 12 ಮಂದಿ ಇದ್ದದ್ದು ಉತ್ಸಾಹ ಇಮ್ಮಡಿಸಿತ್ತು. ಆಯೋಜಕರ ಪೈಕಿಯೂ ಕನ್ನಡಿಗರೇ ಇದ್ದ ಕಾರಣ, ಇದೊಂದು ರೀತಿ ಕನ್ನಡದ ಕಚ್ಚಾ ರಸ್ತೆ ಚಾಲನೆಯೇ ಆಗಿತ್ತು.

ಬಗೆ ಬಗೆಯ ರಸ್ತೆಗಳು

ಬನ್ನೇರುಘಟ್ಟ ಬಳಿಯ ಆಫ್ ರೋಡ್ ಟ್ರಯಲ್‌ನಲ್ಲಿ 6 ವಿಧದ ಕಚ್ಚಾ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಮೊದಲನೆಯದು `ಕ್ರಿಸ್‌ಕ್ರಾಸ್'. ಅಂದರೆ ಮರಗಳ ನಡುವೆ ಚಾಲನೆ. ಎಸ್‌ಯುವಿಗಳ ಗಾತ್ರ ಸಾಮಾನ್ಯವಾಗಿ ದೊಡ್ಡದಾಗಿರುವ ಕಾರಣ ನುಗ್ಗಿಸಿ ಕಾರು ಚಾಲನೆ ಮಾಡುವ ಕೆಲಸ ತುಸು ಕಷ್ಟವೇ. ಎರಡನೇ ಹಂತ `ರಾಕ್ ಬೆಡ್'. ಹೆಸರೇ ಹೇಳುವಂತೆ ಇದು ಕಲ್ಲಿನ ಹಾಸಿಗೆಯಂಥ ರಸ್ತೆ! ಬಂಡೆ ಕಲ್ಲುಗಳ ಮಧ್ಯೆ ದಾರಿ ನೋಡಿಕೊಂಡು ಕಾರು ಚಾಲನೆ ಮಾಡಬೇಕು. ಕಾರು ಚಾಲನೆಯಲ್ಲಿ ವ್ಹೀಲ್ ಗೇಜ್ (ಚಕ್ರಗಳ ಸ್ಥಾನ) ಮಾಡುವುದೇ ಸವಾಲು.ಅಂದರೆ ಬೈಕ್‌ನಲ್ಲಿ ಕಾಣುವಂತೆ ಚಕ್ರಗಳು ಚಾಲಕನಿಗೆ ಕಾಣುವುದಿಲ್ಲ. ಹಾಗಾಗಿ ಅಂದಾಜಿನಲ್ಲೇ ಚಾಲನೆ ಮಾಡಬೇಕು.  ಹಾಗಾಗಿ ಬಂಡೆ ಕಲ್ಲುಗಳು ನೆಲದ ಮೇಲಿದ್ದು, ಅವುಗಳ ಮೇಲೆ ಚಕ್ರ ಬಿಟ್ಟರೆ ಕಾರು ಮುಂದಕ್ಕೆ ಹೋಗುವುದೇ ಇಲ್ಲ. ಜತೆಗೆ ಬಂಡೆಗಲ್ಲುಗಳ ನಡುವೆ ಸುಮಾರು ನಾಲ್ಕೈದು ಅಡಿಗಳ ಕೊರಕಲೂ ಇದ್ದು, ಅಲ್ಲೇನಾದರೂ ಚಕ್ರ ಸಿಲುಕಿಕೊಂಡಿತೆಂದರೆ ಅಲ್ಲಿಗೆ ಚಾಲನೆ ಮುಗಿದಂತೆ. ಈ ಸವಾಲಿನಲ್ಲಿ ಯಾರೂ ಸೋಲದೇ ಗೆದ್ದುಬಿಟ್ಟಿದ್ದೇ ಆಶ್ವರ್ಯ.`ಡೌನ್‌ಹಿಲ್' ಎಂಬ ವಿಧಾನದಲ್ಲೇ 2 ಉಪ ವಿಭಜನೆ. ಅಂದರೆ ಆಳವಾದ ರಸ್ತೆಗೆ ಕಾರನ್ನು ಇಳಿಸುವುದು. ಮತ್ತೊಂದು ಡೌನ್‌ಹಿಲ್ ಎಕ್ಸ್‌ಸ್ಟ್ರೀಮ್. ಅಂದರೆ ಅತಿಯಾದ ಆಳಕ್ಕೆ ಕಾರು ಇಳಿಸುವುದು. ಮತ್ತೊಂದು ಅಪ್‌ಹಿಲ್. ಆಳವಾದ ಜಾಗಕ್ಕೆ ಕಾರು ಬಿಟ್ಟಿದ್ದಕ್ಕೆ ವಿರುದ್ಧವಾಗಿ ಎತ್ತರದ ಪ್ರದೇಶಕ್ಕೆ ಕಾರು ಹತ್ತಿಸುವುದು. ಈ ಹಂತದಲ್ಲಿ ಮಾತ್ರ ಟಾಟಾ ಆರಿಯಾ ಸೋತುಹೋಯಿತು. ಟಾಟಾದ ಇತರ ಎಸ್‌ಯುವಿಗಳಿಗೆ ಹೋಲಿಸಿದಲ್ಲಿ ಆರಿಯಾದ ಗ್ರೌಂಡ್ ಕ್ಲಿಯರೆನ್ಸ್ (ನೆಲದಿಂದ ವಾಹನದ ದೇಹದ ಎತ್ತರ) ಕಡಿಮೆ.ಅಂದರೆ 185 ಎಂ.ಎಂ. ಅದೇ ಟಾಟಾ ಕ್ಸೆನಾನ್ 200 ಎಂ.ಎಂ., ಸಫಾರಿ 205 ಎಂಎಂ ಎತ್ತರ ಹೊಂದಿವೆ. ಟಾಟಾ ಸುಮೋ ಗ್ರ್ಯಾಂಡ್ ಕೇವಲ 180 ಎಂ.ಎಂ . ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದರೂ, ಅದರ ಬಂಪರ್‌ಗಳು ಎತ್ತರದಲ್ಲಿವೆ. ಆದರೆ ಆರಿಯಾದ ಬಂಪರ್‌ಗಳು ಕೆಳಭಾಗದಲ್ಲಿದ್ದು, ಆಳವಾದ ಕೊರಕಲಿಗೆ ಇಳಿದ ಬಂಪರ್ ಕಿತ್ತುಬಂದಿತು. ಹಿಂಭಾಗದ ಬಂಪರ್ ಒಡೆದು ಹೋಯಿತು. ಕೊನೆಯ ಹಂತವೇ `ಸ್ಲಷ್'. ಇದು ಮರಳು ಹಾಗೂ ಕೆಸರು ಮಿಶ್ರಿತ ನೆಲದಲ್ಲಿ ಕಾರು ಚಾಲನೆ. ಇದು ಅಷ್ಟೇನೂ ಕಷ್ಟದಲ್ಲ. ಅಪಾಯವೂ ಇಲ್ಲ. ಹೆಚ್ಚೆಂದರೆ ಕಾರು ಹೂತು ಹೋಗಬಹುದಷ್ಟೇ. ಆದರೆ ಟಾಟಾ ಫುಲ್ ಥ್ರಾಟಲ್‌ನಲ್ಲಿ ಕೇವಲ 500 ಮೀಟರ್‌ಗೂ ಕಡಿಮೆ ಸ್ಲಷ್ ಟ್ರ್ಯಾಕ್ ಹಾಕಿದ್ದ ಕಾರಣ, ಯಾವುದೇ ಸಮಸ್ಯೆ ಇಲ್ಲದೇ ಕಾರಗಳು ಗೆದ್ದುಬಿಟ್ಟವು.ಟಾಟಾ ಮೋಟಾರ್ಸ್ ಜತೆ ಕೈಗೂಡಿಸಿದ್ದ ಕಾಗರ್ ಮೋಟಾರ್‌ಸ್ಪೋರ್ಟ್ ಸದ್ಯದಲ್ಲೇ ಇನ್ನೂ 8 ಆಫ್ ರೋಡ್ ಟ್ರಯಲ್‌ಗಳನ್ನು ಹಮ್ಮಿಕೊಳ್ಳಲಿದೆ. ಇದರಲ್ಲೂ ಟಾಟಾದ ಕಾರುಗಳೇ ಬಳಕೆಯಾಗಲಿವೆ. ಕರ್ನಾಟಕದಲ್ಲೇ ಎರಡು ಟ್ರಯಲ್‌ಗಳು ನಡೆಯಲಿವೆ. ಚಿಕ್ಕಮಗಳೂರು, ಕೊಡಗುಗಳ ಸುಂದರ ಪರಿಸರದ ನಡುವೆ ಟ್ರಯಲ್ ನಡೆಸಲು ಉದ್ದೇಶಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry