ಆಭರಣಕ್ಕಾಗಿ ಮಹಿಳೆ ಕೊಲೆ

7

ಆಭರಣಕ್ಕಾಗಿ ಮಹಿಳೆ ಕೊಲೆ

Published:
Updated:
ಆಭರಣಕ್ಕಾಗಿ ಮಹಿಳೆ ಕೊಲೆ

ಬೆಂಗಳೂರು: ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯೊಡತಿಯ ಕತ್ತು ಕೊಯ್ದು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ ಮೂಡಲಪಾಳ್ಯ ಬಳಿಯ ಅನ್ನಪೂರ್ಣೇಶ್ವರಿನಗರದಲ್ಲಿ ಬುಧವಾರ ಹಾಡಹಗಲೇ ನಡೆದಿದೆ.

ಅನ್ನಪೂರ್ಣೇಶ್ವರಿನಗರ ನಾಲ್ಕನೇ ಅಡ್ಡರಸ್ತೆ ನಿವಾಸಿ ನಾಗರಾಜ್ ಎಂಬುವರ ಪತ್ನಿ ಸುವರ್ಣಮ್ಮ (31) ಕೊಲೆಯಾದವರು.ವಿದ್ಯುತ್ ಕಾಮಗಾರಿಗಳ ಗುತ್ತಿಗೆದಾರರಾದ ನಾಗರಾಜ್ ಕೆಲಸದ ನಿಮಿತ್ತ ಬೆಳಿಗ್ಗೆಯೇ ಹೊರಗೆ ಹೋಗಿದ್ದರು. ಅವರ ಮಗ ಯಶವಂತ್, ಕುಶಾಲನಗರದ ವಸತಿ ಶಾಲೆಯಲ್ಲಿ ಓದುತ್ತಿದ್ದಾನೆ. ಮಗಳು ನವ್ಯಶ್ರೀ ಘಟನೆ ನಡೆದಾಗ ಶಾಲೆಗೆ ಹೋಗಿದ್ದಳು. ಸುವರ್ಣಮ್ಮ ಒಬ್ಬರೇ ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಸುವರ್ಣಮ್ಮನ ಕತ್ತು ಮತ್ತು ಕಿವಿಯನ್ನು ಕೊಯ್ದು ಕೊಲೆ ಮಾಡಿದ್ದಾರೆ. ನಂತರ ಅವರ ಚಿನ್ನದ ಸರ ಮತ್ತು ಓಲೆಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ನಾಗರಬಾವಿಯಲ್ಲಿ ವಾಸವಾಗಿರುವ ಸುವರ್ಣಮ್ಮ ಅವರ ತಮ್ಮ ಸಾಫ್ಟ್‌ವೇರ್ ಎಂಜಿನಿಯರ್ ಮಂಜುನಾಥ್ ಅವರು ಆಗಾಗ್ಗೆ ಸಹೋದರಿಯ ಮನೆಗೆ ಬಂದು ಹೋಗುತ್ತಿದ್ದರು. ಅಂತೆಯೇ ಅವರು ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಹೋದರಿಯ ಮನೆಗೆ ಬಂದು ತಿಂಡಿ ತಿಂದು ಹೋಗಿದ್ದರು. ಆ ನಂತರ ಕೊಲೆ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. `ದುಷ್ಕರ್ಮಿಗಳಿಗೆ ಪ್ರತಿರೋಧ ತೋರಿರುವ ಸುವರ್ಣಮ್ಮ ನೆರವಿಗಾಗಿ ಕೂಗಿಕೊಂಡಿದ್ದಾರೆ. ಅವರ ಚೀರಾಟ ಕೇಳಿದ ನೆರೆಹೊರೆಯವರು ಮನೆಯ ಬಳಿ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್. ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.  `ನಾಗರಾಜ್ ಅವರ ಮನೆಯ ಅಲ್ಮೇರಾದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳಿದ್ದವು. ಆದರೆ, ಆ ಆಭರಣಗಳನ್ನು ದುಷ್ಕರ್ಮಿಗಳು ತೆಗೆದುಕೊಂಡು ಹೋಗಿಲ್ಲ. ಆರೋಪಿಗಳ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ~ ಎಂದು ಅವರು ಹೇಳಿದರು.ಶ್ವಾನದಳ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಸಿಬ್ಬಂದಿ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬ ಸದಸ್ಯರು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಅಪರಾಧ ವಿಭಾಗದ (ಪಶ್ಚಿಮ) ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ ಮತ್ತು ಡಿಸಿಪಿ ಸಿದ್ದರಾಮಪ್ಪ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry