ಆಭರಣ ವ್ಯಾಪಾರಿ ಕೊಲೆ: ಆರೋಪಿಗಳ ಬಂಧನ

7

ಆಭರಣ ವ್ಯಾಪಾರಿ ಕೊಲೆ: ಆರೋಪಿಗಳ ಬಂಧನ

Published:
Updated:

ಬೆಂಗಳೂರು: ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದ ಆಂಧ್ರಪ್ರದೇಶದ ವಿಶಾಖಪಟ್ಟಣದ ಆಭರಣ ವ್ಯಾಪಾರಿ ಮನೋಜ್ ಕುಮಾರ್ ಗ್ರಂಥಿ (42) ಅವರ ಶವ ಮೂಡಿಗೆರೆ ಸಮೀಪದ ಕೊಟ್ಟಿಗೆಹಾರದ ಬಳಿ ಚಾರ್ಮಾಡಿ ಘಾಟ್‌ನಲ್ಲಿ (ಸೋಮನಕಾಡು) ಪತ್ತೆಯಾಗಿದ್ದು, ಅವರನ್ನು ಕೊಲೆ ಮಾಡಿ ಮೂರು ಕೋಟಿ ರೂಪಾಯಿ ಮೌಲ್ಯದ ಆಭರಣ ದೋಚಿದ್ದ ಮೂರು ಮಂದಿ ಆರೋಪಿಗಳನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಕಾರ್ ಝೋನ್ ರೆಂಟ್ ಸಂಸ್ಥೆಯ ಕಾರು ಚಾಲಕ ಹಾಸನದ ಅರಕಲಗೂಡಿನ ಕೆ.ವಿ. ರವಿಕುಮಾರ್ (26), ಆತನ ಸ್ನೇಹಿತ ಗುಬ್ಬಿ ತಾಲ್ಲೂಕಿನ ಮಣಕುಪ್ಪೆಯ ಶಿವಕುಮಾರ್ (26) ಮತ್ತು ಕೃಷ್ಣೇಗೌಡ(28) ಬಂಧಿತರು.

ಕೊಟ್ಟಿಗೆಹಾರದ ಬಳಿ ಎಸೆದಿದ್ದ ಶವ ಮತ್ತು ಆರೋಪಿಗಳು ದೋಚಿದ್ದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

`ಮನೋಜ್ ವಿಶಾಖಪಟ್ಟಣದಲ್ಲಿರುವ ವೈಭವ್ ಜ್ಯುವೆಲರ್ಸ್‌ನ ಮಾಲೀಕ. ಅಂಗಡಿಯ ಜಾಹೀರಾತು ಸಿದ್ಧಪಡಿಸಲು ನಿರ್ಧರಿಸಿದ್ದ ಅವರು ಪುರಾತನ ಕಾಲದ ಮಾದರಿಯ ಆಭರಣಗಳನ್ನು ಸಂಗ್ರಹಿಸುತ್ತಿದ್ದರು. ಆ ಆಭರಣವನ್ನು ಜಾಹೀರಾತು ರೂಪದರ್ಶಿಯರಿಗೆ ತೊಡಿಸಿ ಜಾಹೀರಾತು ತಯಾರಿಸುವುದು ಅವರ ಉದ್ದೇಶವಾಗಿತ್ತು. ಅದಕ್ಕಾಗಿ ಅವರು ಮೊದಲು ರಾಜಸ್ತಾನಕ್ಕೆ ಹೋಗಿದ್ದರು. ಅಲ್ಲಿ ಆಭರಣಗಳನ್ನು ಖರೀದಿಸಿ ಅವುಗಳನ್ನು ಮೂರು ಲೆದರ್ ಚೀಲಗಳಲ್ಲಿ ಇಟ್ಟುಕೊಂಡು ಹೈದರಾಬಾದ್ ಮೂಲಕ ಫೆ.6ರಂದು ಬೆಂಗಳೂರಿಗೆ ಬಂದಿದ್ದರು~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಬೆಂಗಳೂರಿಗೆ ಬಂದ ಅವರು ಕಾರ್ ಝೋನ್ ರೆಂಟ್ ಸಂಸ್ಥೆಯ ವಾಹನವನ್ನು ಬಾಡಿಗೆಗೆ ಪಡೆದರು. ಆ ವಾಹನವನ್ನು ರವಿಕುಮಾರ್ ಚಾಲನೆ ಮಾಡುತ್ತಿದ್ದ. ನಗರಕ್ಕೆ ಬಂದ ಅವರು ವಿವಿಧ ಆಭರಣ ಅಂಗಡಿಗಳಿಗೆ ಭೇಟಿ ನೀಡಿದ್ದರು. ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಆಭರಣ ಪ್ರದರ್ಶನಕ್ಕೂ ಭೇಟಿ ನೀಡಿ ಕೆಲ ಒಡವೆಗಳನ್ನು ಖರೀದಿಸಿದ್ದರು. ಮೂರು ಚೀಲಗಳಲ್ಲಿ ಆಭರಣವಿದ್ದುದನ್ನು ರವಿಕುಮಾರ್ ನೋಡಿಕೊಂಡಿದ್ದ. ಮನೋಜ್ ಅವರನ್ನು ಕೊಲೆ ಮಾಡಿ ಆಭರಣ ದೋಚಲು ಆತನೇ ಸಂಚು ರೂಪಿಸಿದ~ ಎಂದು ಅವರು ಮಾಹಿತಿ ನೀಡಿದರು.`ಆರೋಪಿಗಳಾದ ಶಿವಕುಮಾರ್ ಮತ್ತು ಕೃಷ್ಣೇಗೌಡ ಇಬ್ಬರೂ ಕಾರ್ ಝೋನ್ ರೆಂಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಸಂಪರ್ಕಿಸಿದ ರವಿಕುಮಾರ್, ಮನೋಜ್ ಅವರ ಬಳಿ ಆಭರಣ ಇರುವ ವಿಷಯ ತಿಳಿಸಿದ. ಆಭರಣ ದೋಚಿದರೆ ಸುಖಮಯ ಜೀವನ ನಡೆಸಬಹುದು ಎಂಬುದಾಗಿ ಕೊಲೆ ಮಾಡಲು ಮೂವರು ನಿರ್ಧರಿಸಿದ್ದರು. ಸಂಜೆಯವರೆಗೂ ನಗರದಲ್ಲೆಲ್ಲ ಓಡಾಡಿದ ಮನೋಜ್ ರಾತ್ರಿ ಹೋಟೆಲ್‌ಗೆ ಡ್ರಾಪ್ ಪಡೆದಿದ್ದಾರೆ. ಡ್ರಾಪ್ ಮಾಡಿದ ರವಿಕುಮಾರ್ ನಾಳೆಯೂ ನಾನೇ ಬರುವುದಾಗಿ ತಿಳಿಸಿದ್ದಾನೆ. ಇದಕ್ಕೆ ಅವರು ಒಪ್ಪಿಕೊಂಡಿದ್ದಾರೆ~ ಎಂದು ಈಶಾನ್ಯ ವಿಭಾಗದ ಡಿಸಿಪಿ ಬಿ.ಆರ್. ರವಿಕಾಂತೇಗೌಡ ಹೇಳಿದರು.`ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫೆ.7ರಂದು ಬೆಳಿಗ್ಗೆ ಆರು ಗಂಟೆಗೆ ಹೊರಡಬೇಕಿದ್ದ ವಿಮಾನದಲ್ಲಿ ಮನೋಜ್ ಮುಂಬೈಗೆ ಪ್ರಯಾಣಿಸಬೇಕಿತ್ತು. ನಗರದಲ್ಲಿ ಸಹ ಆಭರಣ ಅಂಗಡಿ ತೆರೆಯಲು ಯೋಚಿಸಿದ್ದ ಮನೋಜ್ ಅವರು ಜಯನಗರದ `ಟಿ~ ಬ್ಲಾಕ್‌ನಲ್ಲಿ ನಿವೇಶನವೊಂದನ್ನು ನೋಡಲು ನಿರ್ಧರಿಸಿದ್ದರು. ಅದರಂತೆ ಅವರು ನಸುಕಿನ 4.15ಕ್ಕೆ ಕಾರಿನಲ್ಲಿ ಜಯನಗರಕ್ಕೆ ಹೋಗಿ ನಿವೇಶನ ನೋಡಿದ್ದರು~ ಎಂದು ಅವರು ತಿಳಿಸಿದರು.`ಪೂರ್ವ ನಿರ್ಧಾರಿತ ಸಂಚಿನಂತೆ ಕೃಷ್ಣೇಗೌಡ ಮತ್ತು ಶಿವಕುಮಾರ್ ಇನ್ನೊಂದು ಕಾರಿನಲ್ಲಿ ಬಂದು ಬಿಡಿಎ ಜಂಕ್ಷನ್ ಬಳಿ ಕಾಯುತ್ತ ನಿಂತಿದ್ದರು. ಬಿಡಿಎ ಜಂಕ್ಷನ್ ಬಳಿ ಬಂದ ತಕ್ಷಣ ವಾಹನ ನಿಲ್ಲಿಸಿದ ರವಿಕುಮಾರ್ ಗೇರ್‌ನಲ್ಲಿ ಸಮಸ್ಯೆ ಇದೆ ಎಂದು ನಾಟಕವಾಡಿದ್ದಾನೆ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಇಬ್ಬರೂ ದುಷ್ಕರ್ಮಿಗಳು ಬಂದು ಕಾರು ಹತ್ತಿಕೊಂಡಿದ್ದಾರೆ. ಆ ನಂತರ ರವಿಕುಮಾರ್ ಸಹ ಕಾರಿನಲ್ಲಿ ಕುಳಿತಿದ್ದಾನೆ. ಶೇಷಾದ್ರಿಪುರದ ಸಮಾನಾಂತರ ರಸ್ತೆ ಕಡೆ ಅವರು ಹೋಗಿದ್ದಾರೆ. ಚಾಕುವಿನಿಂದ ಮನೋಜ್ ಅವರನ್ನು ಬೆದರಿಸಿದ ದುಷ್ಕರ್ಮಿಗಳು ಸೀಟಿನಿಂದ ಕೆಳಗೆ ಕೂರುವಂತೆ ಬೆದರಿಸಿದ್ದಾರೆ. ಆ ನಂತರ ಅವರು ಬಾಯಿಗೆ ಬಟ್ಟೆ ತುರುಕಿ, ಟವೆಲ್ ಮತ್ತು ನೈಲಾನ್ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ~ ಎಂದು ರವಿಕಾಂತೇಗೌಡ ಮಾಹಿತಿ ನೀಡಿದರು.`ಕೊಲೆ ಮಾಡಿದ ನಂತರ ಮತ್ತೆ ಬಿಡಿಎ ಜಂಕ್ಷನ್ ಬಳಿ ಬಂದು ಅಲ್ಲಿ ನಿಲ್ಲಿಸಿದ್ದ ವಾಹನವನ್ನು ತೆಗೆದುಕೊಂಡು ಹೆಬ್ಬಾಳ ಮೇಲು ಸೇತುವೆ ಬಳಿ ಹೋಗಿ ಅಲ್ಲಿ ಶವವನ್ನು ರವಿಕುಮಾರ್ ಕಾರಿನಿಂದ ವರ್ಗಾಯಿಸಿಕೊಂಡಿದ್ದಾರೆ. ರವಿಕುಮಾರ್ ತನ್ನ ಪಾಡಿಗೆ ತಾನು ಹೋಗಿದ್ದಾನೆ. ನಾಗಮಂಗಲದ ಮಲ್ಲೇನಹಳ್ಳಿಯಲ್ಲಿ ಶಿವಕುಮಾರನ ಅತ್ತೆ ಮನೆ ಇದೆ. ಅಲ್ಲಿಗೆ ಹೋದ ಶಿವಕುಮಾರ್ ಮತ್ತು ಕೃಷ್ಣೇಗೌಡ ಆಭರಣವನ್ನು ಆ ಮನೆಯಲ್ಲಿ ಇಟ್ಟಿದ್ದಾರೆ. ಆ ನಂತರ ಚಾರ್ಮಾಡಿ ಘಾಟ್‌ಗೆ ಹೋಗಿ ಅಲ್ಲಿ ಶವ ಎಸೆದು ಬಂದಿದ್ದಾರೆ~ ಎಂದರು.`ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರವಿಕುಮಾರ್, ಮನೋಜ್ ಅವರನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿರುವುದಾಗಿ ನಂಬಿಸುವ ಸಲುವಾಗಿ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿ ಎಂಟ್ರಿ ಹಾಕಿಸಿದ್ದ. ಅಲ್ಲಿಂದ ಕಚೇರಿಗೆ ತೆರಳಿದ್ದ~ ಎಂದು ಅವರು ತಿಳಿಸಿದರು.ಮುಂಬೈಗೆ ಬರಲೇ ಇಲ್ಲ: ಪೂರ್ವ ಯೋಜಿತ ಕಾರ್ಯಕ್ರಮದಂತೆ ಮನೋಜ್ ಅವರು 7.30ರ ಸುಮಾರಿಗೆ ಮುಂಬೈಗೆ ತಲುಪಬೇಕಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಅವರನ್ನು ಬರ ಮಾಡಿಕೊಳ್ಳಲು ಕಾಯುತ್ತಿದ್ದ. ಆದರೆ ಅವರು ಬಾರದಿದ್ದಾಗ ಆತ ಮನೋಜ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದಾನೆ. ಆದರೆ ಫೋನ್ ಸ್ವಿಚ್ ಆಫ್ ಆಗಿದ್ದರಿಂದ. ಈ ವಿಷಯವನ್ನು ಅವರ ಮನೆಯವರಿಗೆ ತಿಳಿಸಿದ್ದಾನೆ~ ಎಂದರು.`ಕೊಲೆಯಾಗಿರಬಹುದು ಎಂಬ ಬಗ್ಗೆ ಅನುಮಾನವೂ ಅವರಿಗೆ ಬಂದಿಲ್ಲ. ಬಹುಶಃ ತಡವಾಗಿ ಬರಬಹುದು ಎಂದುಕೊಂಡಿದ್ದಾರೆ. ಆಭರಣಗಳಿದ್ದ ಮನೋಜ್ ಅವರನ್ನು ಸೀಮಾ ಸುಂಕದ ಅಧಿಕಾರಿಗಳು ಅಥವಾ ಪೊಲೀಸರು ಹಿಡಿದುಕೊಂಡಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲ ಪ್ರಯತ್ನಗಳೂ ಮುಗಿದ ನಂತರ ಅವರು ಕಾಣೆಯಾಗಿರುವ ಬಗ್ಗೆ ದೂರು ನೀಡಿದರು~ ಎಂದು ರವಿಕಾಂತೇಗೌಡ ಹೇಳಿದರು.`ಕಾರು ಚಾಲಕ ರವಿಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ನಾವು ಕೇಳುತ್ತಿದ್ದ ಪ್ರಶ್ನೆಗಳಿಗೆ ಆತ ಉತ್ತರ ಕೊಟ್ಟ. ಆದರೆ ಕೆಲ ಉತ್ತರಗಳ ಮಧ್ಯೆ ಲಿಂಕ್ ಇಲ್ಲದಿರುವುದನ್ನು ಗಮಿಸಿದೆವು. ಆತನ ಮೇಲೆಯೇ ಅನುಮಾನ ಬಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಲಾರಂಭಿಸಿದಾಗ ಆತ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ. ಶವವನ್ನು ಚಾರ್ಮಾಡಿ ಘಾಟ್‌ನಲ್ಲಿ ಎಸೆದು ಬಂದಿರುವುದಾಗಿಯೂ ಹೇಳಿದ. ಉಳಿದ ಇಬ್ಬರು ಆರೋಪಿಗಳು ತಮ್ಮ ಮೊಬೈಲ್ ಸಂಖ್ಯೆ ಬದಲಾಯಿಸಿಕೊಂಡು ಬೆಂಗಳೂರಿನ ಗಾಂಧಿನಗರದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಆ ಬಗ್ಗೆ ಮಾಹಿತಿ ಸಿಕ್ಕ ನಂತರ ಅವರನ್ನೂ ಬಂಧಿಸಲಾಯಿತು~ ಎಂದು ಅವರು ಹೇಳಿದರು.ರವಿಕಾಂತೇಗೌಡ ಅವರ ನೇತೃತ್ವದಲ್ಲಿ ಎಸಿಪಿ ಚಂದ್ರಕಾಂತ್, ಇನ್‌ಸ್ಪೆಕ್ಟರ್‌ಗಳಾದ ಅಶೋಕನ್, ಬಾಳೇಗೌಡ, ಮಾಲತೇಶ್, ತಿಪ್ಪೇಸ್ವಾಮಿ, ಪುನೀತ್ ಕುಮಾರ್ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಕಾನ್‌ಸ್ಟೇಬಲ್ ಗೋವಿಂದರಾಜು, ಕೊಡಿಗೇಹಳ್ಳಿ ಠಾಣೆಯ ಕಾನ್‌ಸ್ಟೇಬಲ್ ಬಾಬು ಅವರ ತಂಡ ಶ್ಲಾಘನೀಯ ಕೆಲಸ ಮಾಡಿದೆ ಎಂದು ಮಿರ್ಜಿ ಪ್ರಶಂಸಿಸಿದರು.

 

ಮನೋಜ್‌ಗೆ ನಿರ್ಲಕ್ಷ್ಯ ಮುಳುವಾಯಿತೇ?

ಬೆಂಗಳೂರು: ಕಾರು ಚಾಲಕ ರವಿಕುಮಾರ್‌ನ ಕೆಟ್ಟ ಕುತೂಹಲ ಮತ್ತು ಆಭರಣ ವ್ಯಾಪಾರಿ ಮನೋಜ್ ಕುಮಾರ್ ಗ್ರಂಥಿ ತೋರಿದ ನಿರ್ಲಕ್ಷ್ಯವೇ ಅವರ ದುರಂತ ಅಂತ್ಯಕ್ಕೆ ಕಾರಣವಾಯಿತೇ? ಮನೋಜ್ ಅವರು ಆಭರಣ ಖರೀದಿಸಲು ನಗರಕ್ಕೆ ಬಂದಿದ್ದು ಆ ನಂತರ ನಡೆದ ಘಟನೆಗಳನ್ನು ಅವಲೋಕಿಸಿದರೆ ಇದು ನಿಜ ಎನಿಸುತ್ತದೆ.ವೈಭವ್ ಜ್ಯುವೆಲರ್ಸ್‌ನ ಮಾಲೀಕರಾದ ಮನೋಜ್ ಅವರು ಮಹತ್ವಾಕಾಂಕ್ಷಿಯಾಗಿದ್ದರು. ಇಪ್ಪತ್ತು ವರ್ಷಗಳ ಹಿಂದೆ ಆಭರಣ ಅಂಗಡಿ ಆರಂಭಿಸಿದ್ದ ಅವರು ಉದ್ಯಮಿಯಾಗಿ ಖ್ಯಾತಿ ಗಳಿಸಿದ್ದರು. ಅಂಗಡಿಯನ್ನು ಕಾರ್ಪೋರೇಟ್ ಸಂಸ್ಥೆಯಾಗಿ ಬೆಳೆಸಿದ್ದರು. ರೂಪದರ್ಶಿಯರಿಗೆ ಪುರಾತನ ಮಾದರಿ ಆಭರಣ ತೊಡಿಸಿ ಅದ್ಭುತ ಎನಿಸುವ ಜಾಹೀರಾತು ತಯಾರಿಸುವುದು ಅವರ ಉದ್ದೇಶವಾಗಿತ್ತು. ಅದಕ್ಕಾಗಿಯೇ ಅವರು ರಾಜಸ್ತಾನದಲ್ಲಿ ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಆಭರಣವನ್ನು ಖರೀದಿಸಿದ್ದರು.ಹೈದರಾಬಾದ್ ಮೂಲಕವೇ ಬೆಂಗಳೂರಿಗೆ ಬಂದ ಅವರು ಖರೀದಿಸಿದ್ದ ಆಭರಣಗಳನ್ನು ವಿಶಾಖಪಟ್ಟಣದಲ್ಲಿ ಇಟ್ಟು ಬರಬಹುದಿತ್ತು. ಹಾಗೆ ಮಾಡಿದ್ದರೆ ಬಹುಶಃ ಅವರು ಕೊಲೆಯಾಗುತ್ತಿರಲಿಲ್ಲ. ಆದರೆ ಅವರು ಮೂರು ಚೀಲಗಳಲ್ಲಿ ಆಭರಣಗಳನ್ನು ನಗರಕ್ಕೆ ತಂದಿದ್ದರು. ಬೆಂಗಳೂರಿಗೆ ಬಂದ ನಂತರವಾದರೂ ಅವರು ನೇರವಾಗಿ ಹೋಟೆಲ್‌ಗೆ ಹೋಗಿ ಅಲ್ಲಿ ಆಭರಣಗಳನ್ನು ಇಟ್ಟು, ಆ ನಂತರ ಇನ್ನಷ್ಟು ಆಭರಣಗಳಿಗೆ ಹುಡುಕಾಟ ನಡೆಸಬಹುದಿತ್ತು. ಆದರೆ ಅವರು ಆಭರಣಗಳೊಂದಿಗೇ ನಗರದ ವಿವಿಧ ಆಭರಣ ಅಂಗಡಿಗಳಿಗೆ ಭೇಟಿ ನೀಡಿದರು. ಯಾವುದೇ ಅಂಗಡಿಗೆ ಹೋಗುವಾಗ ಅವರು ಮೂರು ಚೀಲಗಳನ್ನು ಕಾರಿನಲ್ಲಿಯೇ ಬಿಡುತ್ತಿದ್ದರು. ಚರ್ಮದ ಕೈಚೀಲಗಳಿಗೆ ಬೀಗವೂ ಇರಲಿಲ್ಲ.`ಚೀಲಗಳಲ್ಲಿ ಮುಖ್ಯವಾದ ದಾಖಲೆ ಪತ್ರಗಳಿವೆ. ಆದ್ದರಿಂದ ಅವುಗಳನ್ನು ಹುಷಾರಾಗಿ ನೋಡಿಕೋ~ ಎಂದು ಅವರ ಎರಡು ಮೂರು ಬಾರಿ ಹೇಳಿದ್ದರು. ಮನೋಜ್ ಅವರು ವಾಹನದಿಂದ ಇಳಿದು ಹೋದ ನಂತರ ಕುತೂಹಲ ತಾಳಲಾರದೆ ಆತ ಕಾರಿನ ಹಿಂದೆ ಇದ್ದ ಚೀಲಗಳನ್ನು ತೆರೆದು ನೋಡಿದಾಗ ಆಭರಣಗಳಿದ್ದದ್ದು ಗೊತ್ತಾಯಿತು. ಹೆಚ್ಚಿನ ಪ್ರಮಾಣದಲ್ಲಿದ್ದ ಆಭರಣಗಳನ್ನು ನೋಡಿದಾಗಲೇ ಆತನಿಗೆ ಕೊಲೆ ಮಾಡುವ ಆಲೋಚನೆ ಬಂದಿದ್ದು.ಆ ನಂತರವೇ ಆತ ಸ್ನೇಹಿತರನ್ನು ಸಂಪರ್ಕಿಸಿ ಎಲ್ಲ ವಿಷಯ ಹೇಳಿ ಸಂಚು ರೂಪಿಸಿದ್ದು.ಸಹಿ ಹಾಕದಿದ್ದರೆ ಕೊಲೆಯಾಗುತ್ತಿರಲಿಲ್ಲ: ಮನೋಜ್ ಅವರು ಹಂತಕರಿಂದ ಬಚಾವ್ ಆಗಲು ಇನ್ನೂ ಒಂದು ಅವಕಾಶವಿತ್ತು. ಯಾವುದೇ ಸಂಸ್ಥೆಯ ವಾಹನವನ್ನು ಬಾಡಿಗೆಗೆ ಪಡೆದರೆ ಚಾಲಕನಿಗೆ `ಟ್ರಿಪ್ ಶೀಟ್~ ನೀಡಲಾಗುತ್ತದೆ. ಎಲ್ಲಿಂದ ಎಲ್ಲಿಗೆ ಪ್ರಯಾಣಿಸಲಾಗಿದೆ ಎಂದು ನಮೂದಿಸಿ ವಾಹನ ಬಾಡಿಗೆ ಪಡೆದ ವ್ಯಕ್ತಿಯಿಂದ ಆ ಶೀಟ್‌ಗೆ ಸಹಿ ಹಾಕಿಸಿಕೊಳ್ಳಬೇಕು. ಟ್ರಿಪ್ ಶೀಟ್‌ಗೆ ಸಹಿ ಹಾಕಿಸಿಕೊಳ್ಳುವುದು ಕಡ್ಡಾಯ. ಕೊಲೆ ಮಾಡಲು ನಿರ್ಧರಿಸಿದ್ದ ರವಿಕುಮಾರ್‌ಗೆ, ಟ್ರಿಪ್ ಶೀಟ್‌ಗೆ ಸಹಿ ಹಾಕಿಸಿಕೊಳ್ಳದಿದ್ದರೆ ಸಂಸ್ಥೆಯವರಿಗೆ ಅನುಮಾನ ಬರುತ್ತದೆ. ಆ ದಾಖಲೆ ಪೊಲೀಸರಿಗೆ ಸಿಕ್ಕರೆ ಸಿಕ್ಕಿಬೀಳುತ್ತೇನೆ ಎಂಬ ಸ್ಪಷ್ಟವಾದ ಕಲ್ಪನೆ ಇತ್ತು.ಮನೋಜ್ ಅವರು ಉಳಿದುಕೊಂಡಿದ್ದ ಹೋಟೆಲ್‌ಗೆ ಫೆ.7ರಂದು ನಸುಕಿನ 4.15ಕ್ಕೆ ಬಂದ ಆರೋಪಿ ರವಿಕುಮಾರ್ ಪ್ರಯಾಣದ ಕೊನೆಯ ಪ್ರದೇಶ (ಫೈನಲ್ ಡೆಸ್ಟಿನೇಶನ್, ವಿಮಾನ ನಿಲ್ದಾಣ) ತಲುಪುವ ಮುನ್ನವೇ ಟ್ರಿಪ್‌ಶೀಟ್‌ಗೆ ಸಹಿ ಹಾಕುವಂತೆ ಕೇಳಿದ್ದಾನೆ. ವಿಮಾನ ನಿಲ್ದಾಣ ತಲುಪಿದ ನಂತರ ಸಹಿ ಹಾಕುವುದಾಗಿ ಅವರು ಹೇಳಿದ್ದಾರೆ. ಆ ನಂತರ ಜಯನಗರದ `ಟಿ~ ಬ್ಲಾಕ್‌ಗೆ ಹೋಗಿ ನಿವೇಶನ ನೋಡಿದ ನಂತರ ಮನೋಜ್ ಅವರಿಗೆ ಮತ್ತೆ ಟ್ರಿಪ್ ಶೀಟ್ ನೀಡಿದ ಆರೋಪಿ `ಸಹಿ ಹಾಕಿ ಸಾರ್ ನಿಲ್ದಾಣಕ್ಕೆ ಹೋದ ನಂತರ ಆತುರದಲ್ಲಿ ನೀವು ಸಹಿ ಹಾಕುವುದನ್ನು ಮರೆತು ಬಿಡಬಹುದು~ ಎಂದಿದ್ದಾನೆ.

 

ಆಗ ಒಂದು ಸಣ್ಣ ಅನುಮಾನ ಮನೋಜ್ ಅವರಿಗೆ ಬಂದಿದ್ದರೆ ಪರಿಸ್ಥಿತಿ ಬೇರೆಯೇ ಆಗುವ ಸಾಧ್ಯತೆ ಇತ್ತು. ಚಾಲಕನ ಮಾತು ನಂಬಿದ ಅವರು ಸಹಿ ಹಾಕಿದ್ದಾರೆ. ಅಲ್ಲಿಗೆ ವಿಮಾನ ನಿಲ್ದಾಣಕ್ಕೆ ಮನೋಜ್ ಅವರನ್ನು ಡ್ರಾಪ್ ಮಾಡಿರುವುದು ದಾಖಲೆಯಲ್ಲಿ ಖಚಿತವಾಗಿದೆ. ಸಂಚನ್ನು ಜಾರಿಗೊಳಿಸಲು ಅದು ಇನ್ನಷ್ಟು ಪ್ರೇರಣೆ ನೀಡಿದೆ.ವಿಮಾನ ನಿಲ್ದಾಣದ ದಾರಿ ಮಧ್ಯೆ ಬಿಡಿಎ ಜಂಕ್ಷನ್‌ನಲ್ಲಿ ವಾಹನ ನಿಲ್ಲಿಸಿ ಗಿಯರ್‌ನಲ್ಲಿ ದೋಷ ಇದೆ ಎಂದು ನಾಟಕವಾಡಿದ ನಂತರ ಉಳಿದ ಆರೋಪಿಗಳು ವಾಹನದಲ್ಲಿ ಹತ್ತಿಕೊಂಡು ಚಾಕುವಿನಿಂದ ಬೆದರಿಸಿದ್ದಾರೆ. ಪ್ರಾಣಾಪಾಯದ ಸೂಚನೆ ಅರಿತ ಅವರು `ಆಭರಣ ತೆಗೆದುಕೊಂಡು ನನ್ನನ್ನು ಬಿಟ್ಟು ಬಿಡಿ, ಸಾಯಿಸಬೇಡಿ~ ಎಂದು ಬೇಡಿಕೊಂಡಿದ್ದಾರೆ. ಆದರೆ ಇದಕ್ಕೆ ರವಿಕುಮಾರ್ ಒಪ್ಪಿಲ್ಲ. ಕಾರು ಬಾಡಿಗೆ ಪಡೆದಿರುವ ದಾಖಲೆ ಇದೆ. ಮನೋಜ್ ನನ್ನನ್ನು ಎರಡು ದಿನಗಳಿಂದ ನೋಡಿದ್ದಾರೆ ಅವರನ್ನು ಬಿಟ್ಟರೆ ಪೊಲೀಸರಿಗೆ ಹಿಡಿದು ಕೊಡುತ್ತಾರೆ ಎಂದು ಹತೈಗೈಯ್ದಿದ್ದಾರೆ.ಮೊಬೈಲ್‌ನಿಂದ ಪತ್ತೆ, ಹಂತಕರಿಗೆ ಗೊತ್ತಿತ್ತು: `ಆರೋಪಿಗಳಾದ ರವಿಕುಮಾರ್, ಕೃಷ್ಣೇಗೌಡ ಮತ್ತು ಶಿವಕುಮಾರ್ ಬಡ ಕುಟುಂಬದಿಂದ ಬಂದವರು. ಮೋಜಿನ ಜೀವನಕ್ಕೆ ಹೊಂದಿಕೊಂಡಿದ್ದ ಅವರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಪೊಲೀಸರು ಯಾವುದೇ ಪ್ರಕರಣವನ್ನು ಆರೋಪಿಗಳ ಮೊಬೈಲ್ ಮೂಲಕ ಪತ್ತೆ ಹಚ್ಚುತ್ತಾರೆ ಎಂದು ತಿಳಿದುಕೊಂಡಿದ್ದರು. ಕೊಲೆಯಾದ ನಂತರ ಆ ಮೂರೂ ಮಂದಿ ಮೊಬೈಲ್ ಬಳಕೆಯನ್ನೇ ಬಿಟ್ಟಿದ್ದರು~ ಎಂದು ಈಶಾನ್ಯ ವಿಭಾಗದ ಡಿಸಿಪಿ ಬಿ.ಆರ್. ರವಿಕಾಂತೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

ಮಲ್ಲಿಕಾ ಎಂಬುವರನ್ನು ವಿವಾಹವಾಗಿದ್ದ ಮನೋಜ್ ಅವರಿಗೆ ಮೂರು ಮಂದಿ ಹೆಣ್ಣು ಮಕ್ಕಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry