ಆಮಿಷಕ್ಕೆ ಗಣಿನಾಡಿನ ಮೇಲ್ಪಂಕ್ತಿ

7

ಆಮಿಷಕ್ಕೆ ಗಣಿನಾಡಿನ ಮೇಲ್ಪಂಕ್ತಿ

Published:
Updated:

ಚುನಾವಣಾ ಅಕ್ರಮಗಳಿಗೆ `ಮೇಲ್ಪಂಕ್ತಿ~ಯಾಗಿ ರೂಪುಗೊಂಡಿರುವ `ಗಣಿ ನಾಡು~ ಬಳ್ಳಾರಿ ಜಿಲ್ಲೆಯಲ್ಲಿ ಮತದಾರರನ್ನು ಓಲೈಸಲು, ಚುನಾವಣೆ ಘೋಷಣೆಯಾಗಿರಲೇ ಬೇಕು ಎಂಬ ನಿಯಮವೇನೂ ಇಲ್ಲ.

 

ಸಾಮೂಹಿಕ ವಿವಾಹಗಳು, ಕ್ರೀಡಾಕೂಟಗಳು, ಗಣೇಶೋತ್ಸವ, ನವರಾತ್ರಿ ಪುರಾಣ- ಪ್ರವಚನ, ಭಜನೆ, ನಾಟಕ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳಿಗೂ ಹಣಕಾಸಿನ ನೆರವು ನೀಡುತ್ತ, ಊಟದ ವ್ಯವಸ್ಥೆ ಮಾಡುತ್ತ, ಊರತುಂಬ ಬೃಹತ್ ಫ್ಲೆಕ್ಸ್ ಹಾಕಿಸಿಕೊಳ್ಳುತ್ತ ಗಮನವನ್ನು ಸೆಳೆಯುವ ಕೆಲಸಗಳು ಆರಂಭವಾಗಿವೆ.ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಶ್ರೀರಾಮುಲು ಗುಡಿ-ಗುಂಡಾರಗಳ ನಿರ್ಮಾಣಕ್ಕೂ, ಗೋಪುರ- ಕಲಶಗಳ ಪ್ರತಿಷ್ಠಾಪನೆಗೂ ಕೇಳಿದವರಿಗೆಲ್ಲ ಹಣ ನೀಡುತ್ತಿರುವುದು ಮೊದಲಿನಿಂದಲೂ ರೂಢಿಯಲ್ಲಿದೆ.ರೆಡ್ಡಿ ಸೋದರರ ಜತೆ ಸೇರಿ ಅವರು ನಡೆಸುತ್ತಿರುವ `ಸಾಮೂಹಿಕ ವಿವಾಹ`, ವರಲಕ್ಷ್ಮಿ ಪೂಜೆ ರಾಷ್ಟ್ರೀಯ ಸುದ್ದಿಯಾಗಿದೆ. ಹಗರಿ ಬೊಮ್ಮನಹಳ್ಳಿಯಲ್ಲಿ ಆಡಳಿತಾರೂಢ ಬಿಜೆಪಿ ಶಾಸಕ ನೇಮರಾಜ ನಾಯ್ಕ ಇತ್ತೀಚೆಗಷ್ಟೇ ನೂರಾರು ಶಿಕ್ಷಕರಿಗೆ ಊಟ ಹಾಕಿಸಿ, ಸನ್ಮಾನ ಮಾಡಿ ಕಳುಹಿಸಿದರು.`ಅವರಿಗಿಂತ ನಾನೇನು ಕಮ್ಮಿ~ ಎಂಬಂತೆ, ಸಿರುಗುಪ್ಪದಲ್ಲಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ತಾಲ್ಲೂಕಿನ ಶಿಕ್ಷಕರನ್ನೆಲ್ಲ ಗಾಂಧಿ ಜಯಂತಿ ದಿನದಂದು ಸಂವಾದಕ್ಕೆಂದು ಆಹ್ವಾನಿಸಿ, ಊಟ ಮಾಡಿಸಿ, ತಲಾ ರೂ 300 ಬೆಲೆ ಬಾಳುವ ಬ್ಯಾಗ್ ಕಾಣಿಕೆ ನೀಡಿ ಕಳುಹಿಸಿಕೊಟ್ಟರು.ಸಚಿವ ಆನಂದ್ ಸಿಂಗ್ ಹೊಸಪೇಟೆಯಲ್ಲಿ ರಂಜಾನ್ ವೇಳೆ ನಿತ್ಯ 300 ಕಿಲೋ ಮಟನ್ ಬಿರಿಯಾನಿಯನ್ನು ಮನೆಮನೆಗೆ ಹಂಚಿದರೆ, ಬಳ್ಳಾರಿಯಲ್ಲೂ ಕಾಂಗ್ರೆಸ್ ಸಂಸದ ಅನಿಲ್ ಲಾಡ್ ಹಿಂದೆ ಬೀಳಲಿಲ್ಲ. ಬಿಎಸ್‌ಆರ್ ಕಾಂಗ್ರೆಸ್  ವತಿಯಿಂದ ಪಾಲಿಕೆ ಸದಸ್ಯರೇ ಬಿರಿಯಾನಿ ಹಂಚುತ್ತ, ಸಿಕ್ಕ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ ಎಂಬುದನ್ನು ಸಾರಿ ಹೇಳಿದರು. ಬಿಸಿಲ ಬಳ್ಳಾರಿಯಲ್ಲಿ ನೀರಿನ ವಿಷಯದಲ್ಲೂ ರಾಜಕೀಯ.ಕಳೆದ ಬೇಸಿಗೆಯಲ್ಲಿ ಎದುರಾದ ಕುಡಿಯುವ ನೀರಿನ ತೀವ್ರ  ಸಮಸ್ಯೆಯನ್ನೇ ನೆಪವಾಗಿಸಿಕೊಂಡು ಬಿಎಸ್‌ಆರ್ ಮುಖಂಡರು ಸ್ವಂತ ಖರ್ಚಿನಿಂದ ಗಲ್ಲಿಗಲ್ಲಿಗಳಿಗೆ ನೀರಿನ ಟ್ಯಾಂಕರ್ ಕಳುಹಿಸುತ್ತಿದ್ದಾರೆ. ಜೆಡಿಎಸ್‌ನ ಸೂರ್ಯನಾರಾಯಣ ರೆಡ್ಡಿ ಇದನ್ನೇ ಅನುಸರಿಸುತ್ತಿದ್ದಾರೆ.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry