ಆಮೆಗತಿಯಲ್ಲಿ ಹಾಲಹಳ್ಳಿ ಬ್ಯಾರೇಜ್ ಕಾಮಗಾರಿ!

7

ಆಮೆಗತಿಯಲ್ಲಿ ಹಾಲಹಳ್ಳಿ ಬ್ಯಾರೇಜ್ ಕಾಮಗಾರಿ!

Published:
Updated:
ಆಮೆಗತಿಯಲ್ಲಿ ಹಾಲಹಳ್ಳಿ ಬ್ಯಾರೇಜ್ ಕಾಮಗಾರಿ!

ಔರಾದ್: ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮಾಂಜ್ರಾ ನದಿಗೆ ಅಡ್ಡಲಾಗಿ ತಾಲ್ಲೂಕಿನ ಹಾಲಹಳ್ಳಿ ಬಳಿಯ ಬ್ರಿಜ್ ಕಮ್ ಬ್ಯಾರೇಜ್ ಕಾಮಗಾರಿ ನಿಧಾನವಾಗಿ ನಡೆಯುತ್ತಿರುವುದಕ್ಕೆ ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಮಗಾರಿ ವಿಳಂಬಕ್ಕೆ ರೈತರು ಅಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕ ಪ್ರಭು ಚವ್ಹಾಣ ಅವರು ಈಚೆಗೆ ಬ್ಯಾರೇಜ್ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸುಮಾರು 50 ಕೋಟಿ ವೆಚ್ಚದ ಕಾಮಗಾರಿ 2007ರಲ್ಲಿ ಆರಂಭವಾಗಿ 2010 ರೊಳಗಾಗಿ ಮುಗಿಯಬೇಕು. ಆದರೆ ಇನ್ನು ಅರ್ಧದಷ್ಟು ಕಾಮಗಾರಿಯೂ ಮುಗಿದಿಲ್ಲ ಎಂದು ಶಾಸಕರು ಅಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಕ್ರಿಷ್ಣಾ ಭಾಗ್ಯ ಜಲ ನಿಗಮದ ಉಸ್ತುವಾರಿಯಲ್ಲಿ ಬಿಜಾಪುರ ಮೂಲದ ಗುತ್ತಿಗೆದಾರರೊಬ್ಬರು ಈ ಬ್ಯಾರೇಜ್ ಕಾಮಗಾರಿ ಮಾಡುತ್ತಿದ್ದಾರೆ.

 

ಇಲ್ಲಿಯ ತನಕ ನದಿಯಲ್ಲಿ ನೀರಿನ ಪ್ರವಾಹ ಜಾಸ್ತಿ ಇರುವುದರಿಂದ ಕಾಮಗಾರಿ ಸ್ವಲ್ಪ ನಿಧಾನಗತಿಯಿಂದ ನಡೆದಿದೆ. ಇನ್ನು ಮುಂದೆ ಕಾಮಗಾರಿ ನಿರಂತರವಾಗಿ ನಡೆಸಿ ಮುಂದಿನ 8-10 ತಿಂಗಳಲ್ಲಿ ಬ್ರಿಜ್ ಕಮ್ ಬ್ಯಾರೇಜ್ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಲ್ಲಿದ್ದ ಎಂಜಿನಿಯರ್‌ರೊಬ್ಬರು ಶಾಸಕರಿಗೆ ಭರವಸೆ ನೀಡಿದರು.ನೀರಿನ ಕಾಮಗಾರಿಗೆ ಅಡ್ಡಿ: ಔರಾದ್ ಪಟ್ಟಣಕ್ಕೆ ಮಾಂಜ್ರಾ ನದಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದೆ. ಆದರೆ ಹಾಲಹಳ್ಳಿ ಬ್ಯಾರೇಜ್ ಕಾಮಗಾರಿ ಪೂರ್ಣಗೊಂಡರೆ ಮಾತ್ರ ಔರಾದ್ ನೀರಿನ ಯೋಜನೆಗೆ ಫಲ ಸಿಗುತ್ತದೆ ಎಂಬುದು ಅಧಿಕಾರಿಗಳು ಹೇಳುತ್ತಾರೆ.

 

ಶಾಸಕರ ಅಸಮಾಧಾನ: ಸಾಕಷ್ಟು ಪ್ರಯತ್ನದ ನಂತರ ಔರಾದ್ ಪಟ್ಟಣದ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ಸಿಕ್ಕಿದೆ. ಬ್ಯಾರೇಜ್ ಕಾಮಗಾರಿ ವಿಳಂಬವಾದರೆ ರೈತರಿಗೂ ತೊಂದರೆ ನೀರಿನ ಯೋಜನೆಗೂ ಹಿನ್ನಡೆಯಾಗುತ್ತದೆ ಎಂದು ಶಾಸಕ ಪ್ರಭು ಚವ್ಹಾಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಾವು ಮುಖ್ಯಮಂತ್ರಿ ಮತ್ತು ಜಲ ಸಂಪನ್ಮೂಲ ಸಚಿವರನ್ನು ಭೇಟಿ ಹಾಲಹಳ್ಳಿ ಬ್ಯಾರೇಜ್ ಕಾಮಗಾರಿ ಆದಷ್ಟು ಬೇಗನೆ ಮುಗಿಸುವಂತೆ ಮನವಿ ಮಾಡಿಕೊಳ್ಳಲಾಗುವುದು. ಕಾಮಗಾರಿ ವಿಳಂಬಕ್ಕೆ ಕಾರಣರಾದ ಸಂಬಂಧಿತರ ವಿರುದ್ಧ ಕ್ರಮಕ್ಕೂ ದೂರು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

 

ಮಾಂಜ್ರಾ ನದಿ ದಂಡೆ ಮೇಲಿರುವ ತಾಲ್ಲೂಕಿನ ಹಾಲಹಳ್ಳಿ, ಸಂಗಮ, ಆಳಂದ, ಖೇಡ್, ಬಳತ, ಬೀರಿ (ಬಿ) ಗ್ರಾಮಗಳ ರೈತರಿಗೆ ಹಾಲಹಳ್ಳಿ ಬ್ರಿಜ್ ಕಮ್ ಬ್ಯಾರೇಜ್‌ನಿಂದ ತುಂಬ ಉಪಯೋಗವಾಗಲಿದೆ. ಸುಮಾರು 3366 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಅಷ್ಟೆ ಅಲ್ಲದೆ ಔರಾದ್ ಪಟ್ಟಣ ಹಾಗೂ ಸುತ್ತಲಿನ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮತ್ತು ಭಾಲ್ಕಿ-ಔರಾದ್ ನಡುವಿನ ಅಂತರ ಕಡಿಮೆಯಾಗಿ ಎರಡೂ ತಾಲ್ಲೂಕಿನ ಜನರಿಗೆ ಇದರ ಲಾಭ ಸಿಗಲಿದೆ. ಆದರೆ ಕಾಮಗಾರಿ ನಿಧಾನಗತಿಯಿಂದ ನಡೆಯುತ್ತಿರುವುದಕ್ಕೆ ಬ್ಯಾರೇಜ್ ಸುತ್ತಲಿನ ಗ್ರಾಮಗಳ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry