ಆಮೆವೇಗದ ಕಾಮಗಾರಿ

7

ಆಮೆವೇಗದ ಕಾಮಗಾರಿ

Published:
Updated:

ಗುಲ್ಬರ್ಗ: 2011-12ನೇ ಸಾಲಿನ ಬಜೆಟ್‌ಗೆ ಕ್ಷಣಗಣನೆ ಶುರುವಾಗಿದೆ. ಹೊಸ ಕಾಮಗಾರಿ, ಯೋಜನೆಗಳ ಘೋಷಣೆಗಳನ್ನು ರಾಜ್ಯದ ಜನತೆ ಕಾತರದಿಂದ ಎದುರು ನೋಡುತ್ತಿದ್ದಾರೆ. ಆದರೆ ಗುಲ್ಬರ್ಗ ಜನತೆಯದ್ದು ಅದೇ ಹಾಡು-ಅದೇ ಪಾಡು. ಘೋಷಣೆಗೆ ‘ಕೋಟಿ ಅನುದಾನ’ ಕಾಮಗಾರಿಯಲ್ಲಿ ‘ಅದೇ ಅಧ್ವಾನ’!ನೂರು ಕೋಟಿ: ರಾಜ್ಯ ಸರ್ಕಾರದ 2009-10ನೇ ಸಾಲಿನ ಬಜೆಟ್‌ನಲ್ಲಿ ಗುಲ್ಬರ್ಗ ಮಹಾನಗರ ಪಾಲಿಕೆಯ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಘೋಷಣೆಯಾಗಿತ್ತು. ಹಿಂದುಳಿದ ಭಾಗದ ಅಭಿವೃದ್ಧಿಯ ಕನಸು ಚಿಗುರೊಡೆದಿತ್ತು. ಆದರೆ ಈ ಅನುದಾನದ  ಕಾರ್ಯ ಯೋಜನೆ ಸಿದ್ಧಗೊಳ್ಳುವಾಗ 2009ರ ಅಕ್ಟೋಬರ್ ಬಂದಿತ್ತು. ಈ ಕಾರ್ಯಯೋಜನೆಯಲ್ಲಿ ಶೇ 52ರಷ್ಟು ಹಣ ರಸ್ತೆ ಅಭಿವೃದ್ಧಿಗೆ ಮೀಸಲಿಡಲಾಗಿತ್ತು.

 

52.1 ಕೋಟಿ ರೂಪಾಯಿಯಲ್ಲಿ ನಗರದ ಎಸ್‌ವಿಪಿ ವೃತ್ತದಿಂದ ಎಂಎಸ್‌ಕೆ ಮಿಲ್, ಸಾಯಿ ಮಂದಿರದಿಂದ ರಾಷ್ಟ್ರಪತಿ ಚೌಕ್, ಜಗತ್ ವೃತ್ತದಿಂದ ಕಿರಣಾ ಬಜಾರ್ ಮೂಲಕ ಹುಮನಾಬಾದ್ ಬೇಸ್ ಮತ್ತು ರೈಲ್ವೆ ನಿಲ್ದಾಣದಿಂದ ಆಳಂದ ವರ್ತುಲ ರಸ್ತೆ ಸಂಪರ್ಕ ರಸ್ತೆಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ರಸ್ತೆಗಳನ್ನು ಸುಮಾರು 60 ಅಡಿ ಅಗಲವಾಗಿ ಅಭಿವೃದ್ಧಿಗೊಳಿಸಲು ಪ್ರತಿ ಕಿ.ಮೀ.ಗೆ 3.5ಕೋಟಿ ರೂಪಾಯಿ ಅಂದಾಜಿಸಲಾಗಿತ್ತು.ಮಾರಣ ಹೋಮ: ಈ ರಸ್ತೆಗಳಲ್ಲಿ 5.1 ಕಿ.ಮೀ. ಉದ್ದದ ವರ್ತುಲ ರಸ್ತೆಯ ಆಳಂದ ವೃತ್ತದಿಂದ ರೈಲ್ವೆ ನಿಲ್ದಾಣ ತನಕದ ರಸ್ತೆಯೂ ಒಂದು. 19 ಕೋಟಿ ರೂಪಾಯಿಯಲ್ಲಿ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್)ಕ್ಕೆ ಪಾಲಿಕೆ ವಹಿಸಿತು. ಕಾರ್ಯಯೋಜನೆ ಸಿದ್ಧಗೊಂಡ ವರ್ಷದ ಬಳಿಕ ರಸ್ತೆ ಬದಿಯ ಮರಗಳ ತೆರವು ಕಾರ್ಯಾಚರಣೆ 2010ರ ಅಕ್ಟೋಬರ್‌ನಲ್ಲಿ ನಡೆಯಿತು. ಅರ್ಧ ಶತಮಾನದ ಇತಿಹಾಸ ಹೇಳುತ್ತಿದ್ದ ಮರಗಳೂ ಅನಾಥರಂತೆ ಧರೆಗುರುಳಿತ್ತು. ಸಾಕಷ್ಟು ಮರಗಳನ್ನು ಉಳಿಸಿಕೊಂಡು ಅಭಿವೃದ್ಧಿ ಪಡಿಸಬೇಕು ಎಂಬ ಸಾರ್ವಜನಿಕ ಒತ್ತಡ ಕೇಳಿಬಂದರೂ ಮರಗಳ ಮಾರಣಹೋಮ ತರಾತುರಿಯಲ್ಲೇ ನಡೆದು ಹೋಯಿತು.ಈ ಬಗ್ಗೆ ‘ಪ್ರಜಾವಾಣಿ’ ಮಾತನಾಡಿಸಿದಾಗ ‘ರಸ್ತೆ ಬದಿಯಲ್ಲಿ ಕಡಿದ ಮರವೊಂದಕ್ಕೆ ಎರಡು ಗಿಡದಂತೆ ನೆಟ್ಟು ಪೋಷಿಸಲು ಅರಣ್ಯ ಇಲಾಖೆಗೆ ಗುತ್ತಿಗೆ ನೀಡಲಾಗಿದೆ. ಈಗಾಗಲೇ ಹಣವನ್ನೂ ಪಾವತಿಸಲಾಗಿದೆ. ಹೀಗಾಗಿ ರಸ್ತೆ ನಿರ್ಮಾಣಗೊಂಡ ಬಳಿಕ ಮತ್ತೆ ಮರಗಳು ಕಂಗೊಳಿಸಲಿವೆ’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಾಧವ್ ಹೇಳಿದ್ದಾರೆ.ಇನ್ನು 8 ತಿಂಗಳು: ಒಪ್ಪಂದದ ಪ್ರಕಾರ ಹತ್ತು ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಅದರಲ್ಲೂ ಎರಡು ತಿಂಗಳು ಕಳೆದು ಹೋಗಿವೆ. ವರ್ತುಲ ರಸ್ತೆಯಿಂದ ಶಹಾಬಜಾರ್ ನಾಕಾ ತನಕದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನು ರೈಲು ನಿಲ್ದಾಣ ತನಕ ಕಾಮಗಾರಿ ನಡೆಯಬೇಕಾಗಿದೆ. ಆದರೆ ಮರಗಳ ಮಾರಣಹೋಮದ ವೇಗ ಈಗ ಕಾಮಗಾರಿಯಲ್ಲಿ ಕಾಣುತ್ತಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಜನತೆ, ‘2012ರ ಬಜೆಟ್ ಸಂದರ್ಭವೂ ರಸ್ತೆ ಕಾಮಗಾರಿ ನಡೆಯುತ್ತಿದ್ದರೆ ಅಚ್ಚರಿ ಇಲ್ಲ’ ಎನ್ನುತ್ತಾರೆ.ಯಾವಾಗ ಪೂರ್ಣ?:  ಯೋಜನೆಯ ಉಸ್ತುವಾರಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಸಮಿತಿ ಇದೆ. ಅಂದಿನ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವಧಿಯಲ್ಲಿ ಒಂದು ಬಾರಿ ಸಭೆ ನಡೆದಿತ್ತು. ಕಾಮಗಾರಿ ವಿಳಂಬದ ಆರೋಪ, ಸ್ವತಃ ಮುಖ್ಯಮಂತ್ರಿಯಿಂದ ವೀಕ್ಷಣೆಯೂ ನಡೆಯಿತು. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಈ ನಡುವೆ ಉಸ್ತುವಾರಿಯಾಗಿ ಬಸವರಾಜ ಬೊಮ್ಮಾಯಿ ನಿಯುಕ್ತಿಗೊಂಡಿದ್ದಾರೆ. ಅಲ್ಲದೇ ಸರ್ಕಾರ ಎರಡನೇ ಬಾರಿಗೆ 100 ಕೋಟಿ ರೂಪಾಯಿ ಪ್ರಕಟಿಸಿದೆ. ಆದರೆ 2009ರ ಯೋಜನೆ 2011ರ ಬಜೆಟ್ ಹೊತ್ತಿಗೂ ಪೂರ್ಣಗೊಂಡಿಲ್ಲ. ರಸ್ತೆಗಳು ಮಾತ್ರವಲ್ಲದೇ ಇನ್ನಷ್ಟು ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ. ಉಸ್ತುವಾರಿ ಸಚಿವರೇ ಜನತೆಗೆ ಉತ್ತರಿಸಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry