ಆಮೆ ವೇಗದಲ್ಲಿ ಕಾಮಗಾರಿ

7

ಆಮೆ ವೇಗದಲ್ಲಿ ಕಾಮಗಾರಿ

Published:
Updated:

ಮಹದೇವಪುರ: ಇಲ್ಲಿಗೆ ಸಮೀಪದ ಹೂಡಿ ಗ್ರಾಮ­ದಲ್ಲಿರುವ ರೈಲ್ವೆ ಗೇಟ್‌ಗೆ ಅಡ್ಡಲಾಗಿ ನಿರ್ಮಾಣ­ಗೊಳ್ಳುತ್ತಿರುವ ಮೇಲ್ಸೇತುವೆ (ಫ್ಲೈಓವರ್‌ ಬಿಡ್ಜ್) ಕಾಮಗಾರಿ ಮಂದಗತಿಯಿಂದ ಸಾಗುತ್ತಿದೆ. ಇದ­ರಿಂದಾಗಿ ರೈಲ್ವೆ ಗೇಟ್‌ ದಾಟಲು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.ಮಹದೇವಪುರ ಕ್ಷೇತ್ರಕ್ಕೂ ಮತ್ತು ಕೃಷ್ಣರಾಜಪುರಂ ಕ್ಷೇತ್ರಕ್ಕೂ ಹೂಡಿ ಮುಖ್ಯರಸ್ತೆ ಪ್ರಮುಖ ರಸ್ತೆಯಾ­ಗಿದೆ. ಈ ರಸ್ತೆಗೆ ಅಡ್ಡಲಾಗಿ ರೈಲ್ವೆ ಮಾರ್ಗವಿದ್ದು, ಈ ರೈಲ್ವೆ ಮಾರ್ಗಕ್ಕೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಾಣ­ಗೊಳ್ಳಬೇಕು ಎಂದು ಸ್ಥಳೀಯರು 15  ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದರು.ಈ ಹಿನ್ನೆಲೆಯಲ್ಲಿ ಬಿಬಿ­ಎಂಪಿ ರೈಲ್ವೆ ಇಲಾಖೆಯ ಸಹಯೋಗದಲ್ಲಿ ಕಳೆದ ವರ್ಷ ರೂ.19 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿ­ಸಿತ್ತು. ಆದರೆ, ಕಾಮಗಾರಿ ಮಂದಗತಿಯಿಂದ ಸಾಗು­ತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಸ್ತೆಯ ಮಧ್ಯದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ರಸ್ತೆಯ ಅಗಲ ಕಡಿಮೆ­ಯಾಗಿದ್ದು, ರಸ್ತೆಯ ಎರಡು ಕಡೆಗಳಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅಲ್ಲದೆ, ಕಾಮ­ಗಾರಿ ನಡೆಯುತ್ತಿರುವ ಸ್ಥಳದ ಎಡ ಬಲ ಭಾಗದಲ್ಲಿ ಸಾಕಷ್ಟು ಮನೆಗಳಿವೆ. ಸೇತುವೆಯ ನಿರ್ಮಾಣಕ್ಕೆ ಮಣ್ಣನ್ನು ತಂದು ಸುರಿಯುವುದರಿಂದ ಸಾಕಷ್ಟು ಪ್ರಮಾಣ­ದಲ್ಲಿ ದೂಳು ಉಂಟಾಗುತ್ತಿದೆ. ಇದು ಸುತ್ತ­ಮುತ್ತಲಿನ ನಿವಾಸಿಗಳ ನೆಮ್ಮದಿ ಹಾಳು ಮಾಡಿದೆ.‘ಲಾರಿಗಳ ಮೂಲಕ ಯಾವಾಗ ಕೆಂಪು ಮಣ್ಣನ್ನು ನಡು ರಸ್ತೆಗೆ ತಂದು ಸುರಿಯಲಾಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ. ರಸ್ತೆ ದೂಳುಮಯವಾಗಿದೆ. ಹೀಗಾಗಿ ಮನೆ ಬಾಗಿಲನ್ನು ಸದಾ ಮುಚ್ಚಿಕೊಂಡೇ ಇರಬೇಕಿದೆ’ ಎಂದು ಸ್ಥಳೀಯ ನಿವಾಸಿ ದೀಪಕ್‌ ನಾಯ್ಕ ಅಳಲು ತೋಡಿಕೊಂಡರು.‘ಈ ಕಾಮಗಾರಿ ಪ್ರಗತಿಯಲ್ಲಿದೆ. ಪಾಲಿಕೆಯಿಂದ ಭೂಸ್ವಾಧೀನ ಪ್ರಕ್ರಿಯೆ ಮಾತ್ರ ಬಾಕಿ ಉಳಿದಿದೆ. ಈ ಪ್ರಕ್ರಿಯೆ ಎರಡು ತಿಂಗಳಲ್ಲಿ ಮುಗಿಯಲಿದೆ. ಆಗ ಮೇಲ್ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸ­ಲಾ­ಗು­ವುದು’ ಎಂದು ಬಿಬಿಎಂಪಿಯ ರಸ್ತೆ ಮೂಲ­ಸೌಕರ್ಯ ವಿಭಾಗದ  ಕಾರ್ಯಪಾಲಕ ಎಂಜಿನಿಯರ್‌ ವಿಶ್ವನಾಥ್‌ ‘ಪ್ರಜಾವಾಣಿ’ ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry