ಶನಿವಾರ, ಮೇ 15, 2021
24 °C

ಆಮೆ ವೇಗದಲ್ಲಿ ಬಸ್‌ನಿಲ್ದಾಣ ಕಾಮಗಾರಿ

ಪ್ರಜಾವಾಣಿ ವಾರ್ತೆ/ಎಚ್.ಎಸ್. ಅನಿಲ್ ಕುಮಾರ್ Updated:

ಅಕ್ಷರ ಗಾತ್ರ : | |

ಹಳೇಬೀಡು: ಇಲ್ಲಿಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ನೆಲಕ್ಕೆ ಕಾಂಕ್ರೀಟ್ ಹಾಕುವ ಕಾಮಗಾರಿ ವಿಳಂಬವಾಗಿರುವುದರಿಂದ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.ನಿಲ್ದಾಣದ ಮುಂಭಾಗದ ರಸ್ತೆಯಲ್ಲಿಯೇ ಬಸ್‌ಗಳು ನಿಲ್ಲುವುದರಿಂದ ಪ್ರಯಾಣಿಕರಿಗೆ ನೆರಳಿನ ಆಸರೆ ಇಲ್ಲದಂತಾಗಿದೆ. ಕುಳಿತುಕೊಳ್ಳಲು ಆಸನಗಳಿಲ್ಲದೆ ದೂಳು ಸೇವನೆ ಮಾಡುತ್ತ ರಸ್ತೆ ಬದಿಯಲ್ಲಿ ನಿಂತು ಬಸ್ ಕಾಯುವ ಪರಿಸ್ಥಿತಿ ಎದುರಾಗಿದೆ.

ರಸ್ತೆಯಲ್ಲಿಯೇ ಬಸ್ ನಿಲ್ಲುವುದಲ್ಲದೆ ಸಮೀಪದಲ್ಲಿ ಪ್ರವಾಸಿಗರ ವಾಹನ ನಿಲ್ದಾಣವಿದೆ. ಹೀಗಾಗಿ ಪ್ರಯಾಣಿಕರ ವಾಹನಗಳು ಇಲ್ಲಿ ಸಂಚರಿಸುತ್ತವೆ. ರಸ್ತೆಯ ಒಂದು ಬದಿಯಲ್ಲಿ ಆಟೊರಿಕ್ಷಾ ನಿಲ್ದಾಣವಿದ್ದರೆ ಮತ್ತೊಂದು ಬದಿಯಲ್ಲಿ ಮ್ಯಾಕ್ಸಿಕ್ಯಾಬ್ ನಿಲ್ದಾಣವಿದೆ. ಹೀಗಾಗಿ ಇಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್ ಆಗುತ್ತಿರುತ್ತಿದೆ. ಬಸ್ ಇಳಿಯಲು ಇಲ್ಲವೆ ಹತ್ತಲು ಪ್ರಯಾಣಿಕರು ನಿತ್ಯ ಬವಣೆ ಪಡಬೇಕಾಗಿದೆ.ಹೊಯ್ಸಳೇಶ್ವರ ದೇವಾಲಯದ ದಕ್ಷಿಣ ದಿಕ್ಕಿನಲ್ಲಿರುವ ತಾತ್ಕಾಲಿಕ ನಿಲ್ದಾಣ ಆರಂಭದಲ್ಲಿ ದೂಳುಮಯವಾಗುತ್ತಿತ್ತು. ಕಳೆದ ವಾರ ಮಳೆ ಬಿದ್ದಿರುವುದರಿಂದ ಕೆಸರು ಗದ್ದೆಯಾಗಿದೆ. ಕೆಸರಿನಲ್ಲಿ ಬಸ್ ಹೂತುಕೊಂಡು ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕರ ಸಹಾಯದಿಂದ ಬಸ್ ಹೊರತಂದ ಘಟನೆ ಸಹ ನಡೆದಿದೆ. ಹೀಗಾಗಿ ತಾತ್ಕಾಲಿಕ ನಿಲ್ದಾಣಕ್ಕೆ ಬಸ್ಸುಗಳು ಹೋಗುತ್ತಿಲ್ಲ. ನಿಲ್ದಾಣದ ಸಂಚಾರ ನಿಯಂತ್ರಕರು ರಸ್ತೆ ಬದಿಯಲ್ಲಿ ಕುಳಿತು ಪ್ರಯಾಣಿಕರಿಗೆ ಮಾಹಿತಿ ನೀಡುವಂತಾಗಿದೆ. `ಸ್ಥಳೀಯರು ಮಾತ್ರವಲ್ಲದೆ ದೂರದಿಂದ ಆಗಮಿಸಿದ ಪ್ರವಾಸಿಗರು ಹಳೇಬೀಡಿಗೆ ಆಗಮಿಸುತ್ತಾರೆ. ಪ್ರವಾಸಿ ತಾಣವಾದರೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಚುರುಕಿನಿಂದ ಕಾಮಗಾರಿ ನಡೆಸುತ್ತಿಲ್ಲ. ನಿಲ್ದಾಣ ಮುಂಭಾಗದಲ್ಲಿ ಅಪಘಾತ ಸಹ ಸಂಭವಿಸಿದೆ. ಕೂಡಲೇ ನಿಲ್ದಾಣಕ್ಕೆ ಬಸ್ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು' ಎನ್ನುತ್ತಾರೆ ರೈತ ಸಂಘದ ಕೆ.ಪಿ. ಕುಮಾರ್.ನಿಲ್ದಾಣಕ್ಕೆ ಪ್ರವೇಶವಿಲ್ಲದೆ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ನೋಡುತ್ತಿದ್ದೇವೆ. ಈ ಬಗ್ಗೆ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಶೀಘ್ರದಲ್ಲಿಯೇ ನಿಲ್ದಾಣಕ್ಕೆ ಬಸ್ ಪ್ರವೇಶ ಆರಂಭವಾಗಲಿದೆ ಎನ್ನುತ್ತಾರೆ ಸ್ಥಳೀಯ ಸಂಚಾರ ನಿಯಂತ್ರಕರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.