ಶುಕ್ರವಾರ, ಮಾರ್ಚ್ 5, 2021
21 °C

ಆಮ್ನೆಸ್ಟಿ ಸಹಯೋಗದ 'ಬ್ರೋಕನ್‌ ಫ್ಯಾಮಿಲೀಸ್‌' ಕಾರ್ಯಕ್ರಮದಲ್ಲಿ ನಡೆದದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಮ್ನೆಸ್ಟಿ ಸಹಯೋಗದ 'ಬ್ರೋಕನ್‌ ಫ್ಯಾಮಿಲೀಸ್‌' ಕಾರ್ಯಕ್ರಮದಲ್ಲಿ ನಡೆದದ್ದೇನು?

ಬೆಂಗಳೂರು: ನಗರದ ಮಿಲ್ಲರ್ಸ್‌ ರಸ್ತೆಯ ಥಿಯಾಲಾಜಿಕಲ್‌ ಕಾಲೇಜ್‌ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬ್ರೋಕನ್‌ ಫ್ಯಾಮಿಲೀಸ್‌’ ಕಾರ್ಯಕ್ರಮದಲ್ಲಿ ಗುಂಪೊಂದರ ಸದಸ್ಯರು ಸೇನೆ ವಿರುದ್ಧ ಘೋಷಣೆ ಕೂಗಿದ್ದರು ಎಂಬ ಆರೋಪ, ವಿವಾದ ಮತ್ತು ಪ್ರತಿಭಟನೆಗಳ ಸುದ್ದಿಗಳ ನಡುವೆ ನಿಜವಾಗಿಯೂ ಅಂದು ಅಲ್ಲಿ ನಡೆದಿದ್ದು ಏನು? ಎಂಬುದರ ಬಗ್ಗೆ  ಫೋಟೋ ಜರ್ನಲಿಸ್ಟ್ ಹರಿ ಅದಿವಾರೇಕರ್ ತಮ್ಮ ಅನುಭವವನ್ನು ಸ್ಕ್ರಾಲ್ ಡಾಟ್ ಇನ್ ಜತೆ ಹಂಚಿಕೊಂಡಿದ್ದಾರೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಚರ್ಚಿಸಲು ಈ ಕಾರ್ಯಕ್ರಮ ಸಂಘಟಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ  ಕಾಶ್ಮೀರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬದ ಸದಸ್ಯರು ಭಾಗಿಯಾಗಿ ತಮ್ಮ ಯಾತನೆಗಳನ್ನು ಹಂಚಿ ಕಣ್ಣೀರಾಗಿದ್ದರು. ಆದರೆ ಕಾರ್ಯಕ್ರಮದಲ್ಲಿ ಭಾರತ ವಿರೋಧಿ ಘೋಷಣೆ ಕೂಗಲಾಗಿದೆ, ಸೇನೆಯ ವಿರುದ್ಧ ಮಾತನಾಡಲಾಗಿದೆ ಎಂದು ಎಬಿವಿಪಿ ಪ್ರತಿಭಟನೆ ನಡೆಸಿದ್ದು ಮಾತ್ರವಲ್ಲದೆ ಆಮ್ನೆಸ್ಟಿ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿದೆ.ಹರಿ ಅದಿವರೇಕರ್ ಈ ಕಾರ್ಯಕ್ರಮದ ಫೋಟೋ ತೆಗೆಯುವ ಸಲುವಾಗಿ ಅಲ್ಲಿ ಹಾಜರಿದ್ದರು. ಆ ದಿನ ಅಲ್ಲಿ ಏನಾಯಿತು? ಎಂಬುದರ ಬಗ್ಗೆ ಹರಿ ಹೇಳಿದ್ದು ಹೀಗೆ...

ಎಲ್ಲ ಕಾರ್ಯಕ್ರಮಗಳಂತೆ ಈ ಕಾರ್ಯಕ್ರಮವು ಆರಂಭವಾಯಿತು. ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದ ಭಾಷಣದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಮಾತುಗಳ ವಿಡಿಯೊವನ್ನು ತೋರಿಸಲಾಯಿತು. ಕಾಶ್ಮೀರದಲ್ಲಿ ನಾಪತ್ತೆಯಾದ ಮತ್ತು ಸಾವಿಗೀಡಾದ ಅಮಾಯಕ ವ್ಯಕ್ತಿಗಳ ಕುಟುಂಬಗಳನ್ನು ಈ ಕಾರ್ಯಕ್ರಮಕ್ಕೆ ಆಮಂತ್ರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಂಖ್ಯೆ ಜಾಸ್ತಿಯೇ ಇತ್ತು. ಕಿಕ್ಕಿರಿದ ಸಭಾಂಗಣದಲ್ಲಿ ಕಾಶ್ಮೀರದಲ್ಲಿ ತಮ್ಮ ಒಡ ಹುಟ್ಟಿದವರನ್ನು, ಆಪ್ತರನ್ನು ಕಳೆದುಕೊಂಡ ದುಃಖತಪ್ತರಾದ ಕುಟುಂಬವೂ ಹಾಜರಾಗಿದ್ದು, ಅಲ್ಲಿ ನೋಡಿದ ವಿಡಿಯೊ ದೃಶ್ಯಗಳ ಮನಕಲುಕುವಂತಿತ್ತು.ಆ ಹೊತ್ತಿಗೆ ಅಲಿ ಮೊಹಮ್ಮದ್ ಶಾ ಎಂಬವರು ಮಾತನಾಡಲು ಎದ್ದು ನಿಂತರು, 2002ರಲ್ಲಿ ಶಾ ತಮ್ಮ ಮಗನನ್ನು ಕಳೆದು ಕೊಂಡಿದ್ದರು. ಕಾವ್ಯಾತ್ಮಕವಾಗಿಯೂ, ತತ್ವಚಿಂತನೆಯಿಂದಲೂ ಕೂಡಿದ ಮಾತುಗಳಾಗಿತ್ತು ಅವರದ್ದು. ನಿರರ್ಗಳವಾದ ಅವರ ಮಾತುಗಳು ಮನಸ್ಸಿಗೆ ನಾಟುವಂತಿತ್ತು. ಮಾತನಾಡುತ್ತಾ ಅವರು ಕಣ್ಣೀರಾದರು, ಸಭಿಕರ ಕಣ್ಣಂಚೂ ಒದ್ದೆಯಾಯಿತು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲವೊಂದು ಮಂದಿ 'ಕಾಶ್ಮೀರಿ ಪಂಡಿತ್' ಎಂದು ಬರೆದಿದ್ದ ಟಿ ಶರ್ಟ್‍ಗಳನ್ನು ಧರಿಸಿದ್ದರು. ಕಾರ್ಯಕ್ರಮ ಶಾಂತಿಯುತವಾಗಿಯೇ ಮುಂದುವರಿದಿತ್ತು. ಆಗ ಕಾಶ್ಮೀರದ ಯುವಕರ ತಂಡವೊಂದು ಕಿರುನಾಟಕವನ್ನು ಪ್ರದರ್ಶಿಸಿತು. ನನಗೆ ಕಶ್ಮೀರಿ ಭಾಷೆ ಅರ್ಥವಾಗುವುದಿಲ್ಲ. ಆದರೆ ಅವರ ಆಂಗಿಕ ಅಭಿನಯದಿಂದ ನಾನು ಆ ನಾಟಕವನ್ನು ಗ್ರಹಿಸಿಕೊಂಡೆ.ನಾಟಕ ಆರಂಭವಾಗುವುದು ಹೀಗೆ ..''ಸಂತುಷ್ಟ ಕುಟುಂಬವೊಂದು ಜತೆಯಾಗಿ ಕುಳಿತು ಹರಟುತ್ತಿದೆ. ಆಗ ದಿಢೀರನೆ ನುಗ್ಗಿದ ಭದ್ರತಾ ಸಿಬಂದಿಯೊಬ್ಬರು ಆ ಕುಟುಂಬದ ವ್ಯಕ್ತಿಯೊಬ್ಬನನ್ನು ಎಳೆದೊಯ್ದು ಆತನಿಗೆ ಚಿತ್ರ ಹಿಂಸೆ ಕೊಡುತ್ತದೆ. ಈ ವ್ಯಕ್ತಿಯ ಅಪ್ಪ ಅಮ್ಮ ತನ್ನ ಮಗನಿಗಾಗಿ ಹುಡುಕುತ್ತಾ ಅಲೆಯುತ್ತಾರೆ. ಕೊನೆಗೆ ಅವರಿಗೆ ತನ್ನ ಮಗನ ಮೃತ ದೇಹ ಸಿಗುತ್ತದೆ''. ಆ ಕ್ಷಣದ ನೋವು, ಹತಾಶೆ, ದಿಗ್ಬ್ರಮೆ ಮತ್ತು ಸಂಕಟವನ್ನು ತೆರೆಯ ಮೇಲೆ ತೋರಿಸಲಾಗಿತ್ತು.ವೇದಿಕೆಯ ಮೇಲೆ ಪತ್ರಕರ್ತರಾದ ಸೀಮಾ ಮುಸ್ತಫಾ ಬೆಂಗಳೂರು ಕಾಶ್ಮೀರಿ ಪಂಡಿತ್  ಅಸೋಸಿಯೇಷನ್ ನ ಅಧ್ಯಕ್ಷ ಆರ್ ಕೆ ಮಟ್ಟೂ, 2010 ರಲ್ಲಿ ನಡೆದ ಮಾಚಿಲ್ ನಕಲಿ ಎನ್‍ಕೌಂಟರ್ ನಲ್ಲಿ ಹತ್ಯೆಗೇಡಾದ ಶಹಜಾದ್ ಅಹ್ಮದ್ ಖಾನ್ ಅವರ ಅಮ್ಮನೂ ಇದ್ದರು.

ನಾವು ಈ ಕಾರ್ಯಕ್ರಮಕ್ಕೆ ರಾಜಕೀಯ ಬಣ್ಣ ನೀಡಲು ಇಷ್ಟಪಡುವುದಿಲ್ಲ. ಕಾಶ್ಮೀರದಲ್ಲಿ ನಾವು ನಮ್ಮ ಕುಟುಂಬಗಳನ್ನು ಕಳೆದುಕೊಂಡ ನೋವನ್ನು ಹೇಳಲು ಇಲ್ಲಿ ಬಂದಿದ್ದೇವೆ ಎಂದು ಅವರು ಹೇಳಿದರು.ಈ ನಡುವೆ ಮಟ್ಟೂ ಅವರು ದುಃಖತಪ್ತರಾದ ಕಾಶ್ಮೀರಿ ಕುಟುಂಬದವರ ಬಗ್ಗೆ ಮರುಗಿ, ಜಗತ್ತಿನಲ್ಲಿ ಅತೀ ಶಿಸ್ತು ಹೊಂದಿದ ಸೇನೆ ಭಾರತೀಯ ಸೇನೆ ಎಂದು ಹೇಳಿದರು. ಅವರು ಈ ಮಾತುಗಳನ್ನಾಡುತ್ತಿದ್ದಂತೆ ಸಭಿಕರಲ್ಲಿ ಕೆಲವರು ಹೌದು ಎಂದು ದನಿಗೂಡಿಸಿದ್ದರೆ, ಕೆಲವೊಬ್ಬರು ಈ ಮಾತಿಗೆ ಆಕ್ಷೇಪ ವ್ಯಕ್ತ ಪಡಿಸಿದರು.ಇಲ್ಲಿ ಯಾರೂ ಸೇನೆಯ ವಿರುದ್ಧವಾಗಿ ಘೋಷಣೆ ಕೂಗಲಿಲ್ಲ. ಬದಲಾಗಿ ಮಟ್ಟೂ ಅವರ ಮಾತಿಗೆ ಸಹಮತ ತೋರಿಸಲು ಒಪ್ಪಲಿಲ್ಲ ಅಷ್ಟೇ. ಆ ಹೊತ್ತಿಗೆ ಎದ್ದು ನಿಂತ ಕಶ್ಮೀರಿ ಪಂಡಿತರೊಬ್ಬರು ಎದ್ದು ನಿಂತು ಮಟ್ಟೂ ಮಾತಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಗುಂಪನ್ನು ಉಗ್ರವಾದಿಗಳು ಎಂದರು. ಅವರ್ಯಾಕೆ ಹಾಗೆ ಹೇಳಿದರು? ಅವರು ಹಾಗೆ ಹೇಳಲು ಕಾರಣವೇನು? ಎಂಬುದು ನನಗರ್ಥವಾಗಲಿಲ್ಲ.

ಆಗ ಆ ಗುಂಪು ನೀವು ಯಾಕೆ ಈ ರೀತಿ ಹೇಳಿದಿರಿ? ಸ್ಪಷ್ಟನೆ ಕೊಡಿ ಎಂದು ದನಿಯೇರಿಸಿದರು. ದನಿ ಏರುತ್ತಲೇ ಹೋದಾಗ  ಆಮ್ನೆಸ್ಟಿಯ ಕಾರ್ಯಕರ್ತರು ಎಲ್ಲರನ್ನೂ ಸಮಾಧಾನ ಮಾಡಲು ಯತ್ನಿಸುತ್ತಿದ್ದರು. ಅಲ್ಲಿದ್ದ ಕಾಶ್ಮೀರದ ಯುವಕರು ಕೂಡಾ ಪರಿಸ್ಥಿತಿಯನ್ನು ಶಾಂತವಾಗಿರಿಸಲು ಹರ ಸಾಹಸ ಪಡುತ್ತಿತ್ತು. ಅಲ್ಲಿ ಇನ್ನೇನು ಮಾತಿಗೆ ಮಾತು ಬೆಳೆದು ಜಗಳವೇ ಆಗಿ ಬಿಡುತ್ತದೆ ಎಂಬ ಪರಿಸ್ಥಿತಿಯುಂಟಾದಾಗಲೂ ಕಾಶ್ಮೀರಿ ಹುಡುಗರು ಮಧ್ಯಪ್ರವೇಶಿಸಿ ಎಲ್ಲರನ್ನೂ ಸಮಾಧಾನ ಮಾಡಿದರು.ಆದಾಗ್ಯೂ, ಕಾಶ್ಮೀರಿ ಪಂಡಿತರು ಶಾಂತವಾಗಲು ಒಪ್ಪದೇ ಇದ್ದಾಗ, ಮಟ್ಟೂ ಅವರು ಆ ಪಂಡಿತರ ಜತೆ ಮಾತನಾಡಿ ಮನವೊಲಿಸಿ , ಕಾರ್ಯಕ್ರಮ ಮುಂದುವರಿಸಲು ಅನುವು ಮಾಡಿ ಎಂದು ಒತ್ತಾಯಿಸಬೇಕಾಗಿ ಬಂತು.

ಸಂವಾದದ ನಂತರ ರೌಷನ್ ಇಲ್ಲಾಹಿ ( ಎಂಸಿ ಕಾಶ್ ಎಂದೇ ಸುಪರಿಚಿತರಾಗಿರುವ ಕಾಶ್ಮೀರದ ರ್ಯಾಪ್  ಗಾಯಕ ಮತ್ತು ಎಂಸಿ)  ವೇದಿಕೆಗೆ ಏರಿದರು. ಅವರು ಒಂದು ಹಾಡನ್ನು ಹಾಡಿ ಅದು ಮುಗಿಯುವ ಹೊತ್ತಿಗೆ ಪೊಲೀಸರು ನುಗ್ಗಿ ಬಿಟ್ಟರು.ಈಗಾಗಲೇ ರಾತ್ರಿ 8.30 ಆಗಿದೆ. ಇಷ್ಟೊತ್ತಿಗೆ ಕಾರ್ಯಕ್ರಮ ಮುಗಿಯಬೇಕಿತ್ತು. ಕಾರ್ಯಕ್ರಮವನ್ನು ಮುಕ್ತಾಯ ಮಾಡಿ ಎಂದು ಪೊಲೀಸರು ಆಯೋಜಕರಿಗೆ ಆದೇಶಿಸಿದರು. ಕಾಶ್ ಅವರ ಹಾಡು ಮುಗಿದ ಕೂಡಲೇ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಗುವುದು ಎಂದು ಆಯೋಜಕರು ಹೇಳಿದರು.  ಇದರಿಂದ ಕೋಪಗೊಂಡ ಕಾಶ್, ಸಿಟ್ಟಿನಿಂದಲೇ ವೇದಿಕೆಯಿಂದಿಳಿದು ಹೋದರು.ಸಭಿಕರ ಗುಂಪಿನಲ್ಲಿದ್ದ ಕೆಲವು ಕಾಶ್ಮೀರಿ ಯುವಕರು ಮುಷ್ಠಿ ಮೇಲೆತ್ತಿ ಆಜಾದಿ ಎಂದು ಘೋಷಣೆ  ಕೂಗಿದಾಗ, ಆಯೋಜಕರು ಅವರನ್ನೂ ಸಮಾಧಾನ ಮಾಡಿದರು.ನಾನು ಈ ಕಾರ್ಯಕ್ರಮದ ಫೋಟೋ ತೆಗೆಯಲು ಹೋಗಿದ್ದೆನಾದರೂ, ನನ್ನ ಅಮ್ಮನೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಆ ಕಾರ್ಯಕ್ರಮದಲ್ಲಿ ಅಹಿತಕರವಾದ ಘಟನೆಗಳೇನೂ ನಡೆದಿಲ್ಲ.ಹೊರಗೆ ಎಬಿವಿಪಿ ಕಾರ್ಯಕರ್ತರು ಜಮಾಯಿಸಿದ್ದು, ಜಗಳಕ್ಕೆ ನಿಂತವರಂತಿದ್ದರು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಪೊಲೀಸರು ಸಭಿಕರನ್ನು 30 -40 ಜನರ ಗುಂಪುಗಳನ್ನಾಗಿ ಮಾಡಿ ಸಭಾಂಗಣದಿಂದ ಸುರಕ್ಷಿತವಾಗಿ ಹೊರಗೆ ಕಳಿಸಿದ್ದರು.

ನಾನು ಸಭಾಂಗಣದಿಂದ ಹೊರ ಬರುವ ಹೊತ್ತಿಗೆ ಎಬಿವಿಪಿ ಕಾರ್ಯಕರ್ತರು ಅಲ್ಲಿಂದ ಹೊರಟು ಹೋಗಿದ್ದರು. ಆ ಕಾರ್ಯಕ್ರಮದಲ್ಲಿ ಅಹಿತಕರ ಅನ್ನುವಂಥಾ ಘಟನೆಗಳೇನೂ ನಡೆದೇ ಇಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.