ಶನಿವಾರ, ಜೂಲೈ 11, 2020
28 °C

ಆಮ್ಲ ಮಳೆ: ಚೀನಾದ 258 ನಗರ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್ (ಪಿಟಿಐ): ಕಲ್ಲಿದ್ದಲನ್ನು ವಿಶ್ವದಲ್ಲೇ ಅತಿ ಹೆಚ್ಚು ಬಳಸುವ ಚೀನಾ ತನ್ನ ತ್ವರಿತ ಗತಿಯ ಬೆಳವಣಿಗೆಗಾಗಿ ಈಗ ಬೆಲೆ ತೆರುತ್ತಿದೆ. ಗಂಧಕದ ಡೈ ಆಕ್ಸೈಡ್ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೊರ ಹೊಮ್ಮುತ್ತಿದ್ದು ಇಲ್ಲಿನ 258 ನಗರಗಳಲ್ಲಿ ಆಮ್ಲ ಮಳೆ ಸುರಿದಿದೆ. ಇದರಿಂದ ಜನರ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ ಮತ್ತು ಕಟ್ಟಡಗಳಿಗೆ ಹಾನಿಯಾಗುತ್ತಿದೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳಿವೆ.

ಚೀನಾದಲ್ಲಿ ವಾಸವಿರಲು ಅಥವಾ ಭೇಟಿ ನೀಡಲು ಅತ್ಯುತ್ತಮ ಸ್ಥಳ ಎಂದು ಪರಿಗಣಿಸಲಾಗಿದ್ದ ಫ್ಯುಜಿಯನ್ ಪ್ರಾಂತ್ಯದ ಆಗ್ನೇಯ ಭಾಗದಲ್ಲಿರುವ ಕ್ಸಿಯಾಮೆನ್ ಈಗ ನಿರಂತರವಾಗಿ ಆಮ್ಲ ಮಳೆಯನ್ನು ಕಾಣುತ್ತಿದೆ. ಇಲ್ಲಿನ ಶತಮಾನದ ಕಟ್ಟಡಗಳು ಮತ್ತು ವಿಶ್ವದ ಬೃಹತ್ ಗಾತ್ರದ ಬುದ್ಧ ವಿಗ್ರಹಗಳು ಮಲಿನಗೊಂಡಿವೆ.

‘ಕ್ಸಿಯಾಮೆನ್‌ನಲ್ಲಿ 2010ರ ಮೊದಲರ್ಧ ಭಾಗದಲ್ಲಿ ಬಿದ್ದ ಮಳೆಯ ಪ್ರತಿ ಹನಿ ಕೂಡ ಆಮ್ಲೀಯ ಗುಣ ಹೊಂದಿದ್ದಾಗಿ ಅಧಿಕೃತ ಅಂಕಿಅಂಶಗಳೇ ಹೇಳುತ್ತವೆ’ ಎಂದು ಪರಿಸರ ನಿರ್ವಹಣೆಯ ಕೇಂದ್ರದ ಮುಖ್ಯ ಎಂಜಿನಿಯರ್ ಜುವಾಂಗ್ ಹೇಳುತ್ತಾರೆ.

‘ಕಟ್ಟಡಗಳು ಹಳದಿ ಬಣ್ಣಕ್ಕೆ ತಿರುಗಿ ಸವೆಯುತ್ತಿವೆ. ಈ ಮೂಲಕ ನಿಧಾನವಾಗಿ ಹಸಿರು ದ್ವೀಪವನ್ನು ಹಳದಿ ಬಣ್ಣಕ್ಕೆ ತಿರುಗಿಸುತ್ತಿವೆ. ಅಲ್ಲದೆ ನಗರ ಆಕರ್ಷಣೆ ಕಳೆದುಕೊಳ್ಳುವಂತೆ ಮಾಡುತ್ತಿದೆ’ ಎಂದು ಅವರು ದಿನಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

‘ಚೀನಾದ ನೈರುತ್ಯ ಭಾಗದಲ್ಲಿನ ಸಾವಿರ ವರ್ಷಗಳಿಗೂ ಹಿಂದಿನ ಬೃಹದಾಕಾರದ ಬುದ್ಧ ಪ್ರತಿಮೆ ಮೇಲೂ ಇದು ಪರಿಣಾಮ ಬೀರಿದೆ. ಪ್ರತಿಮೆಯ ಮೂಗು ಕಪ್ಪು ಬಣ್ಣಕ್ಕೆ ತಿರುಗಿದ್ದು, ಗುಂಗುರು ಕೂದಲು ತಲೆಯಿಂದ ಕೆಳಕ್ಕೆ ಬಿದ್ದಿದೆ. ದೇಹದ ಕೆಂಪು ಬಣ್ಣವೂ ಕಳಾಹೀನವಾಗಿದೆ’ ಎಂದು ಪತ್ರಿಕೆ  ಹೇಳಿದೆ.

71 ಮೀಟರ್ ಎತ್ತರವಿರುವ ಮತ್ತು 28 ಮೀಟರ್ ಅಗಲದ ಪ್ರತಿಮೆಯು ಪ್ರವಾಹ, ಭೂಕಂಪದ ಪ್ರಕೋಪಗಳನ್ನೂ ಸಹಿಸಿಕೊಂಡಿತ್ತು. ಆದರೆ ಈಗ ಅದು ಮನುಷ್ಯನ ದುರಾಸೆಯಿಂದ ಉದ್ಭವಿಸಿರುವ ಬೆದರಿಕೆಯಿಂದ ಗಂಡಾಂತರಕ್ಕೆ ಸಿಲುಕಿದೆ ಎಂದು ತಿಳಿಸಿದೆ.

ಚೀನಾದ ಪರಿಸರ ಸಂರಕ್ಷಣೆಯ ಸಚಿವಾಲಯ ಪ್ರಕಟಿಸಿರುವ ಇತ್ತೀಚಿನ ವಾರ್ಷಿಕ ಗುಣಮಟ್ಟದ ವರದಿ ಪ್ರಕಾರ ಕ್ಸಿಯಾಮೆನ್ ಮಾತ್ರವಲ್ಲದೆ, 2009ರಲ್ಲಿ 258 ನಗರಗಳಲ್ಲಿ ಆಮ್ಲ ಮಳೆ ಸುರಿದ ದಾಖಲಾಗಿದೆ. 

 ಆಮ್ಲ ಮಳೆಯಿಂದಾಗಿ ವಾಸ್ತವವಾಗಿ ಹೆಚ್ಚು ಪ್ರದೇಶಗಳು ತೊಂದರೆಗೆ ಒಳಗಾಗುತ್ತಿವೆ. ಹಲವು ಕಡೆ ಆಮ್ಲೀಯ ಗುಣ ಹೆಚ್ಚಿರುವುದು ಈಗಾಗಲೇ ವರದಿಯಾಗಿದೆ ಎಂದು ಇಲ್ಲಿನ ವಿಶ್ವವಿದ್ಯಾಲಯದ ಅಧ್ಯಯನವೊಂದು ಕೂಡ ಹೇಳಿದೆ.

ದಹಿಸಿದ ಕಲ್ಲಿದ್ದಲು ಮತ್ತು ಇಂಧನಗಳ ಪಳೆಯುಳಿಕೆಯ ಉಪ ಉತ್ಪನ್ನ ಆಮ್ಲ ಮಳೆ. ವರ್ಷಕ್ಕೆ ಸುಮಾರು 300 ಕೋಟಿ ಟನ್‌ಗಳಷ್ಟು ಕಲ್ಲಿದ್ದಲನ್ನು ಉರಿಸುವ ಚೀನಾ, ಆಮ್ಲ ಮಳೆ ಸುರಿಯುವ ಮೂರನೇ ಅತಿದೊಡ್ಡ ಪ್ರದೇಶವಾಗಿದೆ. ಯುರೋಪ್ ಮತ್ತು ಉತ್ತರ ಅಮೆರಿಕ ಮೊದಲ ಎರಡು ಸ್ಥಾನಗಳಲ್ಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.