ಬುಧವಾರ, ಏಪ್ರಿಲ್ 14, 2021
23 °C

`ಆಮ್ ಆದ್ಮಿ' ಬಿಮಾ ಯೋಜನೆ ಸೌಲಭ್ಯ

.ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಆಮ್ ಆದ್ಮಿ ಬಿಮಾ  ಯೋಜನೆ  2008 ರ ಮಾರ್ಚ್ 31 ರಿಂದ ರಾಜ್ಯದಾದ್ಯಂತ ಜಾರಿಗೆ ಬಂದಿದ್ದು, ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಭೂರಹಿತ ಕುಟುಂಬಗಳ 18 ರಿಂದ 59 ವರ್ಷದ ವಯೋಮಿತಿ ಒಳಗಿರುವ ಕುಟುಂಬದ ಮುಖ್ಯಸ್ಥರು, ಪೋಷಕರು ಸೌಲಭ್ಯ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ತಿಳಿಸಿದ್ದಾರೆ.ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಭೂರಹಿತ ಕುಟುಂಬದ ಮುಖ್ಯಸ್ಥ ಪೋಷಕರ ಮರಣದ ಸಂದರ್ಭದಲ್ಲಿ, ಅಂಗವಿಕಲರಾದ  ಸಂದರ್ಭದಲ್ಲಿ ಆರ್ಥಿಕ ನೆರವು ಒದಗಿಸಲಾಗುತ್ತದೆ. ಈ ಯೋಜನೆಯಡಿ ಕೇಂದ್ರ ಸರ್ಕಾರ ರೂ.100 ಮತ್ತು ರಾಜ್ಯ ಸರ್ಕಾರ ರೂ. 100 ರಂತೆ ವಿಮಾ ಕಂತನ್ನು ಭಾರತೀಯ ಜೀವ ವಿಮಾ ಸಂಸ್ಥೆಗೆ ಭರಿಸುತ್ತದೆ. ಈ ಯೋಜನೆಯಿಂದ ಫಲಾನುಭವಿಗಳು ಲಾಭ ಪಡೆಯಬಹುದು. ನೈಸರ್ಗಿಕ ಸಾವು ಸಂಭವಿಸಿದಲ್ಲಿ ರೂ. 30ಸಾವಿರ ವಿಮೆದಾರನ ಕುಟುಂಬದ ನಾಮ ನಿರ್ದೇಶಿತರಿಗೆ ನೀಡಲಾಗುತ್ತದೆ. ಅಪಘಾತದಿಂದ ಮೃತಪಟ್ಟಲ್ಲಿ ರೂ. 75ಸಾವಿರ, ಶಾಶ್ವತ ಅಂಗವಿಕಲತೆಗೆ ಒಳಗಾದಲ್ಲಿ ರೂ.75 ಸಾವಿರ, ಭಾಗಶಃ ಅಂಗವಿಲತೆ ಉಂಟಾದಲ್ಲಿ ರೂ. 37ಸಾವಿರ ನೀಡಲಾಗುತ್ತದೆ.ವಿದ್ಯಾರ್ಥಿ ವೇತನ: 9 ರಿಂದ 12 ನೇ ತರಗತಿವರೆಗೆ ಶಿಕ್ಷಣ ಪಡೆಯುತ್ತಿರುವ ಪ್ರತಿ ವಿದ್ಯಾರ್ಥಿಗಳಿಗೆ ತಿಂಗಳಿಗೆ  ರೂ. 100 ರಂತೆ ವಿದ್ಯಾರ್ಥಿವೇತನ (ಇಬ್ಬರು ಮಕ್ಕಳಿಗೆ ಸೀಮಿತ) ಸಹ ನೀಡಲಾಗುತ್ತದೆ. ಅರ್ಹ ಫಲಾನುಭವಿಗಳು ಸಂಬಂಧಪಟ್ಟ ತಾಲ್ಲೂಕು ಕಚೇರಿಯಲ್ಲಿ ಜನನ ಪ್ರಮಾಣ ಪತ್ರ ಅಥವಾ ಚುನಾವಣೆ ಗುರುತಿನ ಚೀಟಿ, ಪಡಿತರ ಚೀಟಿ, ವಯಸ್ಸಿನ ಬಗ್ಗೆ ವೈದ್ಯಕೀಯ ದೃಢೀಕರಣ ಪತ್ರ, ಭೂರಹಿತ ಕೃಷಿ ಕಾರ್ಮಿಕರು ದೃಢೀಕರಣ ಪತ್ರ, ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳಿಗೆ ಸಂಬಂಧಪಟ್ಟ ತಾಲ್ಲೂಕು ಕಚೇರಿಯಲ್ಲಿ ನೀಡಿರುವ  ಬಿಪಿಎಲ್ ಕಾರ್ಡ್,  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೀಡಿರುವ ಜಾಬ್ ಕಾರ್ಡ್ ದಾಖಲೆ ಅರ್ಜಿಯೊಂದಿಗೆ ಸಲ್ಲಿಸಬೇಕು.ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿಗಳ ಸತ್ಯಾಸತ್ಯತೆ ವಿಚಾರಣೆ ನಡೆಸುವ ಅಧಿಕಾರಿಗಳಾಗಿದ್ದು, ತಹಸೀಲ್ದಾರರು ಈ ಯೋಜನೆಯಡಿ ಮಂಜೂರಾತಿ ಅಧಿಕಾರಿಗಳಾಗಿದ್ದಾರೆ. ಉದ್ದೇಶಿತ ಫಲಾನುಭವಿಗಳಿಗೆ ಈ ಯೋಜನೆಯಡಿ ಸವಲತ್ತು ಮಂಜೂರಾದಲ್ಲಿ ತಂತ್ರಾಂಶದ ಮೂಲಕವೇ ವಿಮಾ ಬಾಂಡ್ ಮುದ್ರಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.