ಭಾನುವಾರ, ಜೂನ್ 13, 2021
26 °C

ಆಯಾಗಳ ಅನಿರ್ದಿಷ್ಟ ಅಹೋ ರಾತ್ರಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಮೂವರು ಆಯಾಗಳನ್ನು ಕಳೆದ ಮೂರು ವರ್ಷಗಳಿಂದ ವಿನಾ ಕಾರಣ ಕೆಲಸದಿಂದ ತೆಗೆದು ಹಾಕಿರುವದನ್ನು ರದ್ದು ಪಡಿಸಿ ಅವರ ಮಾಸಿಕ ಗೌರವ ಧನವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಆಯಾಗಳ ಸಂಘ ನೇತೃತ್ವದಲ್ಲಿ ವಿವಿಧ ತಾಲ್ಲೂಕುಗಳ ಆಯಾಗಳು ಪ್ರತಿಭಟನೆ ನಡೆಸಿದರು.ವಿಜಾಪುರ ಜಿಲ್ಲೆಯ ಸಿಂದಗಿ–ಇಂಡಿ, ಬಸವನ­ಬಾಗೇವಾಡಿ, ಮುದ್ದೇಬಿಹಾಳ ತಾಲ್ಲೂಕುಗಳ ಆಯಾಗಳು ನಗರದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಬುಧವಾರ ಅನಿರ್ದಿಷ್ಟ ಅವಧಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.ಈ ಸಂದರ್ಭದಲ್ಲಿ ಆಯಾಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಮಹೇಶಕುಮಾರ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಪ್ರಮುಖರಾದ ಭೀಮಶಿ ಕಲಾದಗಿ, ಅಣ್ಣಾರಾಯ ಈಳಗೇರ ಮತ್ತು  ಜನವಾದಿ ಮಹಿಳಾ ಸಂಘದ ಸುರೇಖಾ ರಜಪೂತ ಮಾತನಾಡಿದರು.ಕಳೆದ 30 ವರ್ಷಗಳಿಂದಲೂ ಕೇವಲ 20 ರೂಪಾಯಿ ಗೌರವಧನದಲ್ಲಿ ಆಯಾ ಸೇವೆಗೆ ಸೇರಿದ ಕಲಕೇರಿ ಸರ್ಕಾರಿ ಹಿರಯ ಪ್ರಾಥಮಿಕ ಶಾಲೆಯ ಆಯಾ ದಿಲ್ ಶಾದಬೀ ಖಾದರಬೀ, ವಣಕಿಹಾಳ ಗ್ರಾಮದ ಸರ್ಕಾರಿ ಶಾಲೆಯ ಆಯಾ ಎಸ್.ಎಸ್. ಹಡಪದ ಮತ್ತು ಯಂಕಂಚಿ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ ಅಂಜನಾದೇವಿ ಹರಿಜನ ಈ ಮೂವರನ್ನು ಈ ಹಿಂದಿನ ಬಿಇಒ ಶ್ರೀಶೈಲ ಬಿರಾದಾರ, ಬಿ.ಆರ್.ಸಿ ಎನ್.ಬಿ. ಬಳ್ಳಾರಿ ಉದ್ದೇಶಪೂರ್ವಕವಾಗಿ ಅವರನ್ನು ಸೇವೆಯಿಂದ ಬಿಡುಗಡೆ ಮಾಡಿರುವುದು ನಿಜಕ್ಕೂ ಅನ್ಯಾಯ.ವಿಜಾಪುರ ಜಿಲ್ಲೆಯ ಇನ್ನುಳಿದ ತಾಲ್ಲೂಕಿನಲ್ಲಿರುವ ಆಯಾಗಳ ಸೇವೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಆದೇಶದಂತೆ ಮುಂದುವರೆಸಿದ್ದಾರೆ. ಆದರೆ ಸಿಂದಗಿ ತಾಲ್ಲೂಕಿನ ಬಿಇಒ ಬಿರಾದಾರ ಮಾತ್ರ ಈ ರೀತಿ ಅನ್ಯಾಯ ಮಾಡಿದ್ದಾರೆ. ಇದಕ್ಕೂ ಖಂಡನೀಯವಾದುದು.ಮೂವರನ್ನು ತಕ್ಷಣವೇ ಸೇವೆಗೆ ಹಾಜರು­ಪಡಿಸಿಕೊಂಡು ಅವರ ಮೂರು ವರ್ಷದ ಮಾಸಿಕ ಗೌರವ ಧನವನ್ನು ಬಿಡುಗಡೆ ಮಾಡ­ದಿದ್ದರೆ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.ಸತ್ಯಾಗ್ರಹದಲ್ಲಿ ಅಂಜನಾದೇವಿ ಹರಿಜನ, ಸಾವಿತ್ರಿ ಹಡಪದ, ಖಾದರಬಿ ಉಸ್ತಾದ, ಶಾಂತಾಬಾಯಿ ತಡಲಗಿ, ಭೌರಮ್ಮ ಪೂಜಾರಿ, ಸರೂಬಾಯಿ ಬಲಗೂರ, ಸುಂದರಾಬಾಯಿ ತಳವಾರ, ಮಲ್ಲಮ್ಮ ಶಿವೂಣಗಿ, ತಾರಾಬಾಯಿ ಕೋರವಾರ, ಗೋಮಲಾಬಾಯಿ ಚವ್ಹಾಣ, ಶಾಂತಾಬಾಯಿ ಚವ್ಹಾಣ, ನಿಂಗವ್ವ ಮೋರಟಗಿ, ಬಂಗಾರೆವ್ವ ಬಿಸನಾಳ, ದೇವಕಿ ಗಬಸಾವಳಗಿ, ಅಮ್ಮವ್ವ ಹಿರೇಕುರುಬರ, ಅಂಬವ್ವ ಕುಂಬಾರ, ಪದ್ಮಾ, ಶೈಲಜಾ ಸ್ಥಾವರಮಠ, ಮಧುಮತಿ ಕಟ್ಟಿಮನಿ ಮುಂತಾದವರು ಪಾಲ್ಗೊಂಡಿದ್ದರು.ಬಿಇಒ ಎಸ್.ಎ. ಮುಜಾವರ ಮನವಿ ಪತ್ರ ಸ್ವೀಕರಿಸಿ ಕ್ರಮಕ್ಕಾಗಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.