ಮಂಗಳವಾರ, ನವೆಂಬರ್ 19, 2019
28 °C
ಚಳ್ಳಕೆರೆ: ಟಿಕೆಟ್ ಹಂಚಿಕೆ, ಸೋಲು-ಗೆಲುವಿನ ಲೆಕ್ಕಾಚಾರ

`ಆಯಿಲ್ ಸಿಟಿ'ಯಲ್ಲಿ ಕಾವೇರುತ್ತಿದೆ ರಾಜಕೀಯ

Published:
Updated:

ಚಳ್ಳಕೆರೆ: ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ತಾಲ್ಲೂಕು, ರಾಜ್ಯದ ಅತಿಕಡಿಮೆ ಮಳೆ ಬೀಳುವ ಪ್ರದೇಶ, ಎಣ್ಣೆನಗರಿ, ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಚಳ್ಳಕೆರೆಯಲ್ಲಿ ಈಗಾಗಲೇ 2013ನೇ ಸಾಲಿನ ವಿಧಾನಸಭಾ ಚುನಾವಣೆ ಬಿಸಿಲು ಏರಿದಂತೆ ದಿನದಿಂದ ದಿನಕ್ಕೆ ಕಾವು ಏರುತ್ತಲೇ ಇದೆ.ಏನಾದರೂ ಮಾಡಿ ಅಧಿಕಾರ ಹಿಡಿಯಲೇ ಬೇಕು ಎಂಬ ಪ್ರತಿಷ್ಠೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಬೆವರಿಳಿಸುವಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿದೆ.ಕಳೆದ ಎರಡು ಮೂರು ವರ್ಷಗಳಿಂದ ಕಾಲಕ್ಕೆ ಸರಿಯಾಗಿ ಮಳೆ ಆಗದೇ ಜಮೀನುಗಳೆಲ್ಲಾ ಬೀಳು ಬಿದ್ದಿರುವುದರಿಂದ ಜೀವನ ನಿರ್ವಹಣೆಗಾಗಿ ಹಳ್ಳಿ ಜನರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಮಾಡಿದ ಸಾಲಕ್ಕೆ ಬಡ್ಡಿ ಏರುತ್ತಲೇ ಇರುವುದರಿಂದ ರೈತವರ್ಗ ಮುಗಿಲ ಕಡೆಗೆ ಜೋತು ಮುಖ ಮಾಡಿ ಕುಳಿತಿದೆ.ಯಾವುದೇ, ನೀರಾವರಿ ಯೋಜನೆಗಳೂ ಇಲ್ಲದ ಈ ತಾಲ್ಲೂಕಿನಲ್ಲಿ ನೀರಾವರಿ ಜಮೀನುಗಳಲ್ಲಿ ಅಂತರ್ಜಲ ಕುಸಿತಗೊಂಡು ನೀರಿನ ಪ್ರಮಾಣವೂ ಕಡಿಮೆ ಆಗಿದೆ. ವ್ಯವಸಾಯ ಒಂದೇ ಜೀವನಕ್ಕೆ ಆಸರೆ ಆಗಿದ್ದು, ಉದ್ಯೋಗಕ್ಕಾಗಿ ಯುವಕರು ಅಲೆಯುವಂತಾಗಿದೆ. ಕಳೆದ ಬಾರಿ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಕ್ಷೇತ್ರ ಜನತೆ ಸಮಸ್ಯೆಗಳ ಸುಳಿಯಲ್ಲಿ ಬದುಕು ಸವೆಸುತ್ತಿದ್ದಾರೆ. ಇದೀಗ ಮತದಾರ ಮತ್ತೊಂದು ಅವಧಿಗೆ ಕ್ಷೇತ್ರದಿಂದ ದಂಡನಾಯಕನನ್ನು ಆರಿಸಿ ಕಳಿಸಲು ಚುನಾವಣೆಯನ್ನು ಎದುರು ನೋಡುವಂತಾಗಿದೆ.ಆಂಧ್ರಪ್ರದೇಶದ ಗಡಿಭಾಗದ ಹಳ್ಳಿಗಳೂ ಸೇರಿದಂತೆ ಅನೇಕ ಹಳ್ಳಿಗಳು ಇಂದಿಗೂ ಮೂಲಸೌಲಭ್ಯಗಳಿಂದ ವಂಚಿತವಾಗಿವೆ. 2008ರ ಕ್ಷೇತ್ರ ಮರುವಿಂಗಡಣೆಯ ನಂತರ ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿಸಲ್ಪಟ್ಟಿರುವುದರಿಂದ ಕ್ಷೇತ್ರದ ವ್ಯಾಪ್ತಿ ತುಸು ಹೆಚ್ಚಾಗಲು ಕಾರಣವಾಗಿದೆ.ಒಂದುಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿದ್ದ ಚಳ್ಳಕೆರೆ ಕ್ಷೇತ್ರಕ್ಕೆ ತನ್ನದೇ ಆದ ಮಹತ್ವ ಇದೆ. ಪಟ್ಟಣದಲ್ಲಿ ನೂರಾರು ಆಯಿಲ್‌ಮಿಲ್‌ಗಳು ಇದ್ದ ಕಾರಣ ಅದನ್ನು ಎಣ್ಣೆ ನಗರಿ ಎಂತಲೂ ಕರೆಯುತ್ತಿದ್ದರು. ಇದೀಗ ಎಲ್ಲಾ ಆಯಿಲ್ ಮಿಲ್‌ಗಳು ಮುಚ್ಚಿ ಹೋಗಿದ್ದರೂ ಚಳ್ಳಕೆರೆ ಎಂದರೆ `ಆಯಿಲ್ ಸಿಟಿ' ಎಂದೇ ಇಂದಿಗೂ ಕರೆಯುತ್ತಿದ್ದಾರೆ.ಇಂತಹ ಪ್ರತಿಷ್ಠಿತ ಕ್ಷೇತ್ರದಲ್ಲಿ 1957ರಲ್ಲಿ ಭಾರತೀಯಾ ರಾಷ್ಟ್ರೀಯ ಕಾಂಗ್ರೆಸ್‌ನ ಎ. ಭೀಮಾನಾಯಕ ಹಾಗೂ ಟಿ. ಹನುಮಂತಯ್ಯ ಎಂಬುವರು ಆರಿಸಿ ಹೋಗಿದ್ದರು. 1962ರಲ್ಲಿ ಪ್ರಜಾ ಸೋಷಿಯಲಿಸ್ಟ್‌ನ ಬಿ.ಎಲ್. ಗೌಡ, 1967ರಲ್ಲಿ ಕಾಂಗ್ರೆಸ್‌ನಿಂದ ಇದೇ ಬಿ.ಎಲ್. ಗೌಡ ಜಯ ಸಾಧಿಸುವ ಮೂಲಕ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು.1972ರಲ್ಲಿ ಕಾಂಗ್ರೆಸ್‌ನಿಂದ ಹಿರಿಯೂರು ಮೂಲದ ವಿ. ಮಸಿಯಪ್ಪ ಹಾಗೂ 1978ರಲ್ಲಿ ಎನ್. ಜಯಣ್ಣ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಇದಾದ ನಂತರ 80ರ ದಶಕದಲ್ಲಿ ಜೆಪಿ ನೇತೃತ್ವದಲ್ಲಿ ಪ್ರಾರಂಭವಾದ ಜನತಾ ಪಕ್ಷ, ಕಾಂಗ್ರೆಸ್ ವಿರೋಧಿ ಅಲೆಯನ್ನು ಎಬ್ಬಿಸಿತ್ತು. ಈ ಅಲೆ ಚಳ್ಳಕೆರೆ ಕ್ಷೇತ್ರದಲ್ಲಿ 1983ರಲ್ಲಿ ಜನತಾ ಪಕ್ಷದಿಂದ ಎಚ್.ಸಿ. ಶಿವಶಂಕರಪ್ಪ ಎಂಬುವರನ್ನು ವಿಧಾನಸಭೆಗೆ ಆರಿಸಿ ಕಳಿಸುವಂತೆ ಮಾಡಿತ್ತು. 1985ರಲ್ಲಿ ಇದೇ ಜನತಾ ಪಕ್ಷದಿಂದ ತಿಪ್ಪೇಸ್ವಾಮಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.1989ರಲ್ಲಿ ಮತ್ತೆ ಕಾಂಗ್ರೆಸ್‌ನ ಭದ್ರಕೋಟೆ ಉಳಿಸಿಕೊಳ್ಳುವಲ್ಲಿ ಎನ್. ಜಯಣ್ಣ ಸಫಲರಾಗಿದ್ದರು. ಇದರಿಂದಾಗಿ ಎರಡನೇ ಬಾರಿಗೆ ಜಯಣ್ಣ ಶಾಸಕರಾಗುವಂತೆ ಮಾಡಿತ್ತು. ನಂತರ, 1994ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಜನತಾ ದಳದಿಂದ ತಿಪ್ಪೇಸ್ವಾಮಿ ಎರಡನೇ ಬಾರಿಗೆ ಆಯ್ಕೆ ಆಗಿ ಎಚ್.ಡಿ. ದೇವೇಗೌಡ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿಯೂ ಕೆಲಸ ಮಾಡಿದ್ದರು.1999ರಲ್ಲಿ ಕ್ಷೇತ್ರ ಬಿಜೆಪಿ ತೆಕ್ಕೆಗೆ ಉರುಳಿತ್ತು. ಜಿ. ಬಸವರಾಜ್ ಮಂಡೀಮಠ್ ಅವರು ಶಾಸಕರಾಗಿ ಆಯ್ಕೆ ಆಗುವ ಮೂಲಕ ಕಾಂಗ್ರೆಸ್ ಮತ್ತು ಜನತಾ ಪಕ್ಷಗಳ ಅಭ್ಯರ್ಥಿಗಳನ್ನೇ ನೋಡುತ್ತಿದ್ದ ಕ್ಷೇತ್ರದ ಮತದಾರ ಬದಲಾವಣೆಯ ಕಡೆಗೆ ನೋಟ ಬೀರಿದ್ದಾನೆ ಎಂಬ ಸಂದೇಶ ರವಾನಿಸಿತ್ತು. 2004ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮಾಜಿ ಶಾಸಕ ಎನ್. ಜಯಣ್ಣ ಅವರ ಸಹೋದರ ಪುತ್ರ ಡಿ. ಸುಧಾಕರ್ ಕಾಂಗ್ರೆಸ್‌ನಿಂದ ಆರಿಸಿ ಪ್ರಥಮ ಭಾರಿಗೆ ಶಾಸಕರಾಗಿದ್ದರು.2008ರಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್‌ನಿಂದ ಬಿಜೆಪಿಗೆ ಸೇರಿದ್ದ ಮಾಜಿ ಮಂತ್ರಿ ತಿಪ್ಪೇಸ್ವಾಮಿ ಕಾಂಗ್ರೆಸ್‌ನ ಅಭ್ಯರ್ಥಿ ಚಿತ್ರನಟ ಶಶಿಕುಮಾರ್ ವಿರುದ್ಧ ಕೇವಲ 250 ಮತಗಳ ಅಂತರದಿಂದ ಜಯಗಳಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಿಜೆಪಿ ಸರ್ಕಾರದಲ್ಲಿ ಮಂತ್ರಿಸ್ಥಾನ ಚಳ್ಳಕೆರೆಗೆ ಸಿಗಬಹುದು ಅಂದುಕೊಂಡ ಕ್ಷೇತ್ರದ ಮತದಾರನಿಗೆ ಕೊನೆಗೂ ನಿರಾಸೆ ಮೂಡಿಸಿತ್ತು.ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡಿದ್ದ ಶಾಸಕ ತಿಪ್ಪೇಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ಅವಧಿ ಮುನ್ನವೇ ರಾಜೀನಾಮೆ ನೀಡಿದ್ದರು. ಆ ಮೂಲಕ ಸರ್ಕಾರದ ಕೊನೆಯ ಅಧಿವೇಶನದಲ್ಲಿ ಚಳ್ಳಕೆರೆ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರತಿನಿಧಿಯ ಗೈರು ಎದ್ದು ಕಾಣಿಸುವಂತೆ ಮಾಡಿತ್ತು.ಇದೀಗ ತಮ್ಮ ಪುತ್ರ ಕೆ.ಟಿ. ಕುಮಾರಸ್ವಾಮಿ ಅವರನ್ನು ಕರ್ನಾಟಕ ಜನತಾ ಪಕ್ಷದ ವತಿಯಿಂದ ಸ್ಪರ್ಧೆಗೆ ಇಳಿಸಲು ಆಗಲೇ ತಯಾರಿ ನಡೆಸಿದ್ದಾರೆ. ಜಾತಿವಾರು ಮುಖಂಡರನ್ನು ಗ್ರಾಮೀಣ ಪ್ರದೇಶಗಳ ಕಡೆಗೆ ಪ್ರಚಾರಕ್ಕೂ ಕಳಿಸುವ ಮೂಲಕ ಪುತ್ರನ ರಾಜಕೀಯ ಭವಿಷ್ಯಕ್ಕೆ ಜಾತಿ ಸಮೀಕರಣದ ಮೂಲಕ ಪ್ರಚಾರ ಕೈಗೊಂಡಿದ್ದಾರೆ.ಇನ್ನು ಕಾಂಗ್ರೆಸ್‌ನಿಂದ ಪ್ರಮುಖ ಆಕಾಂಕ್ಷಿಯಾಗಿ ಟಿ. ರಘುಮೂರ್ತಿ ಮುಂಚೂಣಿಯಲ್ಲಿದ್ದಾರೆ. ಇನ್ನು ಜೆಡಿಎಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿ ಗಣನೀಯ ಮತಗಳನ್ನು ಸೆಳೆದಿದ್ದ ಯುವ ನಾಯಕ ಪಿ. ತಿಪ್ಪೇಸ್ವಾಮಿ ಅವರಿಗೆ ಎಚ್.ಡಿ. ಕುಮಾರಸ್ವಾಮಿ ಅವರ ಕೃಪಾಕಟಾಕ್ಷ ಇದೆ ಎನ್ನಲಾಗಿದೆ.ಇನ್ನು ಬಿಜೆಪಿಯಿಂದ ಸ್ಪರ್ಧಿಸಲು ಅಭ್ಯರ್ಥಿಗಳು ಇದ್ದರೂ ಪಕ್ಷ ಅಧಿಕೃತವಾಗಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಿಲ್ಲ. ಉಳಿದಂತೆ ಬಿಎಸ್‌ಆರ್ ಕಾಂಗ್ರೆಸ್ ಎಲ್. ನಾಗರಾಜು ಎಂಬುವರ ಹೆಸರು ಪ್ರಕಟಿಸಿದೆ. 6 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಕ್ಷೇತ್ರದಿಂದ ವಿಧಾನ ಸಭೆಗೆ ಆರಿಸಿ ಹೋಗಿದ್ದಾರೆ. ಉಳಿದಂತೆ 1 ಬಾರಿ ಪ್ರಜಾ ಸೋಷಿಯಲಿಸ್ಟ್ ಪಕ್ಷ, 2 ಜನತಾ ಪಕ್ಷ, 1 ಬಾರಿ ಜೆಡಿಎಸ್ ಹಾಗೂ 2 ಬಾರಿ ಬಿಜೆಪಿ ಅಭ್ಯರ್ಥಿಗಳು ಗೆದ್ದು ಹೋಗಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿ ತನ್ನ ವೈಯಕ್ತಿಕ ವರ್ಚಸ್ಸು, ಪಕ್ಷದ ಜನಪ್ರಿಯತೆಯನ್ನು ಬಳಸಿಕೊಂಡು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಾನೆ ಎಂಬುದನ್ನು ಮತದಾರ ಕಾತರದಿಂದ ಎದುರು ನೋಡುತ್ತಿದ್ದಾನೆ.

ಪ್ರತಿಕ್ರಿಯಿಸಿ (+)