ಆಯುಕ್ತರ ಎತ್ತಂಗಡಿಗೆ ನಿರ್ಣಯ

7

ಆಯುಕ್ತರ ಎತ್ತಂಗಡಿಗೆ ನಿರ್ಣಯ

Published:
Updated:

ಕೆಜಿಎಫ್: ರಾಬರ್ಟಸನ್‌ಪೇಟೆ ನಗರಸಭೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಆರ್.ಎಸ್.ಯರ್ರಪ್ಪ ಅವರನ್ನು ವರ್ಗಾವಣೆ ಮಾಡಿ, ಬೇರೆ ಆಯುಕ್ತರನ್ನು ನೇಮಿಸಬೇಕೆಂದು ಸೋಮವಾರ ನಡೆದ ನಗರಸಭೆಯ ತುರ್ತು ಸಭೆಯಲ್ಲಿ ಬಹುಮತದ ನಿರ್ಧಾರ ತೆಗೆದುಕೊಳ್ಳಲಾಯಿತು.  ತುರ್ತು ಸಭೆ ಕರೆದ ಉದ್ದೇಶವನ್ನು  ಸದಸ್ಯರಿಗೆ ವಿವರಿಸಿದ ಅಧ್ಯಕ್ಷ ದಯಾನಂದ, ಆಯುಕ್ತ ಯರ್ರಪ್ಪ ಅವರು ನಾಲ್ಕು ಬಾರಿ ಇಲ್ಲಿಂದ ವರ್ಗಾವಣೆಯಾಗಿದ್ದಾರೆ. ಎರಡು ಬಾರಿ ಅಮಾನತ್ತಿಗೆ ಒಳಗಾಗಿದ್ದಾರೆ. ಹೀಗಿದ್ದರೂ ಪುನಃ ಪ್ರಭಾವ ಬೀರಿ ಆಯುಕ್ತರಾಗಿ ಬಂದಿದ್ದಾರೆ. ಅವರನ್ನು ಒಪ್ಪಿಕೊಳ್ಳಬೇಕೆ ಅಥವಾ ತಿರಸ್ಕರಿಸಬೇಕೆ ಎಂಬುದನ್ನು ಸಭೆ ನಿರ್ಣಯಿಸಬೇಕು ಎಂದರು.ಉಪಾಧ್ಯಕ್ಷ ಎಂ.ಭಕ್ತವತ್ಸಲಂ ಮಾತನಾಡಿ, ಆಯುಕ್ತರು ಈ ಹಿಂದೆ ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಅಕ್ರಮಗಳನ್ನು ಎಸಗಿದ್ದಾರೆ. ಅವರ ಕರ್ತವ್ಯಲೋಪದಿಂದಾಗಿ ಐಡಿಎಸ್‌ಎಂಟಿ ಯೋಜನೆಯ ಮೂರು ಕೋಟಿ ರೂಪಾಯಿ ಹಣ ವಾಪಸ್ ಹೋಯಿತು. ಪರಿಶಿಷ್ಟರಿಗೆ ಮೀಸಲಾದ ಹಣವನ್ನು ಸಮರ್ಪಕವಾಗಿ ಉಪಯೋಗಿಸಿಲ್ಲ. ಇವರನ್ನು ಬಿಟ್ಟು ಬೇರೆ ಯಾರನ್ನಾದರೂ ಆಯುಕ್ತರನ್ನಾಗಿ ನೇಮಕ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಬೇಕು ಎಂದರು.ಒಂದು ದಿನವೂ ನಗರದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡದ ಇಂತಹ ಆಯುಕ್ತರನ್ನು ತನ್ನ 15 ವರ್ಷಗಳ ಅವಧಿಯಲ್ಲಿ ಕಂಡೇ ಇಲ್ಲ ಎಂದು ಹಿರಿಯ ಸದಸ್ಯ ಕುಮಾರ್ ಟೀಕಿಸಿದರು.ಹಿಂದೆ ಅವರು ಆಯುಕ್ತರಾಗಿದ್ದಾಗ ಲಂಚ ಕೊಟ್ಟು ಅಭ್ಯಾಸ ಮಾಡಲಾಗಿದೆ. ಈಗ ಬೇಡ ಎಂದರೆ ಹೇಗೆ ಎಂದು ಬಿಜೆಪಿ ಸದಸ್ಯ ಶಿವಣ್ಣ ಲೇವಡಿ ಮಾಡಿದರು. ಸದಸ್ಯರಾದ ಸಾಮರಾಜ್, ಬ್ಯಾಂಡ್‌ಲೈನ್ ಕುಮಾರ್, ಮಂಜುಳಾ, ಪಳನಿ, ವಿಜಯ, ಸುಮ, ಉಮೇಶ್, ರಮೇಶ್ ಮಾತನಾಡಿ ಯರ್ರಪ್ಪ ಅವರ ನೇಮಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಆರ್‌ಪಿಐನ ತಂಗತಾಯಿ ಮಾತ್ರ ಆಯುಕ್ತರ ಪರವಾಗಿ ನಿಂತರು. ಶಿವಕುಮಾರ್ ನಿರ್ಲಿಪ್ತರಾಗಿದ್ದರು. ನಂತರ ನಡೆದ ಅಭಿಪ್ರಾಯ ಸಂಗ್ರಹದಲ್ಲಿ ಆಯುಕ್ತರ ವಿರುದ್ಧ 32 ಸದಸ್ಯರು ಮತ್ತು ಪರವಾಗಿ ಒಬ್ಬರು ಮತ ಚಲಾಯಿಸಿದರು.ಆಯುಕ್ತರ ಹಾಜರಾತಿ: ಶನಿವಾರ ನಗರಸಭೆಯ ಆಯುಕ್ತರಾಗಿ ವರ್ಗಾವಣೆಯಾಗಿ ಬಂದ ಯರ್ರಪ್ಪ ಸೋಮವಾರ ಕಚೇರಿಗೆ ಆಗಮಿಸಿದರು. ಆಯುಕ್ತರ ಕೊಠಡಿಯು ಬೀಗ ಹಾಕಿದ್ದ ಕಾರಣ, ಕಚೇರಿಯ ಒಂದು ಕೊಠಡಿಯಲ್ಲಿ ಕುಳಿತಿದ್ದರು. ನಂತರ ಅವರಿಗೆ ತುರ್ತು ಸಭೆಯಲ್ಲಿ ನಡೆದ ನಡವಳಿಕೆಯ ಪ್ರತಿಯನ್ನು ನೀಡಲಾಯಿತು. ಪ್ರತಿಯನ್ನು ತೆಗೆದುಕೊಂಡ ಅವರು ನಗರಸಭೆಯಿಂದ ವಾಪಸ್ ತೆರಳಿದರು.ಬಿಜೆಪಿ ವಿರೋಧ: ನಗರಸಭೆ ಆಯುಕ್ತರನ್ನಾಗಿ ಸರ್ಕಾರ ನೇಮಕ ಮಾಡಿ ತಪ್ಪು ಎಸಗಿರುವುದು ಪಕ್ಷದ ಗಮನಕ್ಕೆ ಬಂದಿದೆ. ತಪ್ಪನ್ನು ಸರಿಪಡಿಸಿಕೊಳ್ಳುವ ಭರವಸೆಯನ್ನು ಪಕ್ಷದ ವರಿಷ್ಠರು ನೀಡಿದ್ದು, ಯರ್ರಪ್ಪ ಅವರ ವರ್ಗಾವಣೆ ರದ್ದು ಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ವಕ್ತಾರ ರವಿಕುಮಾರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry