ಬುಧವಾರ, ಮೇ 18, 2022
28 °C

ಆಯುರ್ವೇದವನ್ನು ಶಂಕಿಸುವುದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆರೋಗ್ಯಕ್ಕೆ ಅಪಾಯ ತರಬಲ್ಲ ಆಯುರ್ವೇದ’  (ಅಭಿಮತ ಫೆ. 10) ನಾಗೇಶ್ ಹೆಗಡೆ ಅವರ ಅಂಕಣ ಬರಹ ಚರ್ಚೆಗೆ ಗ್ರಾಸವಾಗಿದೆ. ಆಯುರ್ವೇದ ಔಷಧಿಗಳನ್ನು ಸ್ಥೂಲವಾಗಿ ಕಾಷ್ಟೌಷಧ ಮತ್ತು ರಸೌಷಧ ಎಂದು ಎರಡು ವಿಭಾಗ ಮಾಡಬಹುದು. ಕಾಷ್ಟೌಷಧಗಳಿಂದ ಆಸವ, ಅರಿಷ್ಠ, ಗೃಥ, ಲೇಹ್ಯ ಇತ್ಯಾದಿಗಳನ್ನು ಮೂಲಿಕೆಗಳ ನಿಗದಿತ ಅನುಪಾತ, ಶಾಸ್ತ್ರನಿರ್ದಿಷ್ಟ ಕ್ರಮದಲ್ಲಿ ಬಳಸಿ ತಯಾರಿಸಿದರೆ ಮೂಲಿಕೆಗಳಲ್ಲಿ ವಿಷಾಂಶ ಇರಲಾರದು.

ಇನ್ನು ಮತ್ತೊಂದು ವಿಧ ರಸೌಷಧಿಗಳಲ್ಲಿ ಸೀಸ, ಪಾದರಸ ಮತ್ತು ಆರ್ಸೆನಿಕ್‌ಗಳನ್ನು ಆಯುರ್ವೇದವು ಬಳಸುತ್ತಿದ್ದು ಆಧುನಿಕ ವಿಜ್ಞಾನದ ಪ್ರಕಾರ ಅದು ವಿಷ ಎಂದು ಪ್ರತಿಪಾದಿಸಿದ್ದಾರೆ. ಆಯುರ್ವೇದ ಶಾಸ್ತ್ರಕಾರರು ರಸೌಷಧಿಗಳನ್ನು ಶೋಧನೆ ಮಾಡುವ ಕ್ರಮಗಳನ್ನು ಹೇಳಿದ್ದಾರೆ. ಅವುಗಳ ವಿಷಾಂಶಗಳನ್ನು ಸಂಪೂರ್ಣ ನಿವಾರಿಸಿಯೇ  ಔಷಧವಾಗಿ ಬಳಸಬೇಕು ಎಂದು ಶಾಸ್ತ್ರಕಾರರು ಆಧುನಿಕ ವಿಜ್ಞಾನ ಬೆಳಕಿಗೆ ಬರುವ ಮೊದಲೇ ಎಚ್ಚರಿಸಿದ್ದಾರೆ.

ಕತ್ತಲು ಹೋಗದೆ ಬೆಳಕು ಬರಲಾರದು, ಅಸತ್ಯ ಇದ್ದರೆ ತಾನೆ ಸತ್ಯಕ್ಕೆ ಬೆಲೆ. ಹಾಗೆಯೇ ವಿಷಭರಿತ ಔಷಧಗಳ ವಿಷ ತೆಗೆದರೆ ಅದು ಅಮೃತವಾದೀತು. ಅತಿಯಾದರೆ ಅಮೃತವೂ ವಿಷವಂತೆ! ಶುದ್ಧೀಕರಣ ಪ್ರಕ್ರಿಯೆ ಮುಗಿದ ಮೇಲೂ ಕೂಡಾ ಒಬ್ಬರಿಗೆ ಒಗ್ಗಿದ ಔಷಧವೊಂದು ಮತ್ತೊಬ್ಬರಿಗೆ ಒಗ್ಗಲಾರದು. ಉದಾ: ಪಿತ್ತ ಪ್ರಕೃತಿಯವರಿಗೆ ಪಿತ್ತ ಪ್ರಕೋಪಿತ ಸ್ಥಿತಿಯಲ್ಲಿ ಬೆಳ್ಳುಳ್ಳಿಯಂತಹ ಔಷಧದಿಂದಲೂ ಅಪಾಯವಾದೀತು. ಅದೇ ಬೆಳ್ಳುಳ್ಳಿ ಮತ್ತೊಬ್ಬರಿಗೆ ದಿವ್ಯೌಷಧವಾದೀತು. ಅದಕ್ಕಾಗಿ ಆಯುರ್ವೇದ ದೇಶ, ಕಾಲ, ವಯ, ಲಿಂಗ, ದೋಷ, ದೂಷ್ಯ, ಪ್ರಕೃತಿ ಇತ್ಯಾದಿಗಳನ್ನು  ನೋಡಿ ಚಿಕಿತ್ಸಿಸಬೇಕೆಂದಿದೆ.

ಇನ್ನು ಏಡ್ಸ್‌ನಂತಹ ಈಚಿನ ರೋಗಗಳಿಗೂ ಔಷಧ ಇದೆ ಎಂದು ಉತ್ಪ್ರೇಕ್ಷಿತ ಪ್ರಚಾರ ಮಾಡಲಾಗುತ್ತಿದೆ ಎನ್ನುವುದರಲ್ಲಿ ಸ್ವಲ್ಪ ಸತ್ಯಾಂಶವಿದೆ. ಜಾಹೀರಾತಿನಿಂದ ಹಣಮಾಡುವವರನ್ನು ಗಮನದಲ್ಲಿಟ್ಟುಕೊಂಡು ಬರೆದದ್ದು ಸತ್ಯವಾದರೂ ಏಡ್ಸ್ ರೋಗ ಹೊಸದಲ್ಲ.   ಏಡ್ಸ್ ಎಂಬ ಹೆಸರು ಮಾತ್ರ ಹೊಸದು. ನೂರಾರು ವರ್ಷಗಳ ಹಿಂದೆ ಬರೆದಿರುವ ಆಯುರ್ವೇದ ಗ್ರಂಥದಲ್ಲಿ 28 ಜನ ಮಡದಿಯರಿದ್ದ ಚಂದ್ರನೆಂಬ ವ್ಯಕ್ತಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಏಡ್ಸ್ ರೋಗ ಬಂದ ಉಲ್ಲೇಖವಿದೆ !

ಸರಿಯಾದ ಸಲಕರಣೆಯಿಲ್ಲದೆ ಸಂಸ್ಕರಣೆಯನ್ನೂ ಮಾಡದೆ ತಯಾರಿಸಲಾದ ಔಷಧಗಳಿಂದ ಅಪಾಯ ಆಗಬಹುದೆಂಬ ಅವರ ಪ್ರತಿಪಾದನೆಯಲ್ಲಿ ಅರ್ಥವಿದೆ. ಗುಣಮಟ್ಟರಹಿತ ಆಯುರ್ವೇದ ಔಷಧಗಳಿಗೆ ಕಡಿವಾಣ ಖಂಡಿತ ಬೀಳತಕ್ಕದ್ದು. ಹಾಗಂತ ಉದ್ಯಮಿಗಳ ವ್ಯಾಪಾರೀಕರಣವನ್ನು ದೃಷ್ಟಿಯಲ್ಲಿರಿಸಿಕೊಂಡು ಋಷಿ ಪ್ರಣೀತವಾದ ಆಯುರ್ವೇದವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ತರವೇ? ಹೆಗಡೆಯವರ ಯಾವತ್ತೂ ಲೇಖನಗಳಲ್ಲಿ  ಕಂಡುಬರುವ ಉತ್ತಮ ವೈಚಾರಿಕತೆ ಇದರಲ್ಲಿ ಕಂಡುಬರದಿರುವುದು ವಿಷಾದನೀಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.