ಶನಿವಾರ, ಅಕ್ಟೋಬರ್ 19, 2019
28 °C

ಆಯುರ್ವೇದ ಚಿಕಿತ್ಸೆಗೆ ಹೊಸ ಮೆರುಗು

Published:
Updated:
ಆಯುರ್ವೇದ ಚಿಕಿತ್ಸೆಗೆ ಹೊಸ ಮೆರುಗು

ಆಯುರ್ವೇದ ಸಂಶೋಧನೆ, ಚಿಕಿತ್ಸೆ ಮತ್ತು ಶಿಕ್ಷಣ ಒಂದೇ ಕಡೆ ಸಾಧ್ಯವಾಗುವಂಥ ಕೆಲಸವನ್ನು ಬೆಂಗಳೂರಿನ ಹೊರವಲಯದಲ್ಲಿರುವ ಐಎಐಎಂ ಆರೋಗ್ಯ ಕೇಂದ್ರ (ಐಎಚ್‌ಸಿ) ಮಾಡುತ್ತಿದೆ.ಯಲಹಂಕದಿಂದ ಸುಮಾರು ಆರೇಳು ಕಿಲೋಮೀಟರ್ ದೂರದಲ್ಲಿ ಮಾವಳ್ಳಿಪುರ ಮಾರ್ಗವಾಗಿ ಸಾಗುವ ಹೆಸರಘಟ್ಟ ರಸ್ತೆಯಲ್ಲಿ ಈ ಆರೋಗ್ಯ ಕೇಂದ್ರವಿದೆ. ವೈದ್ಯಕೀಯ ಚಟುವಟಿಕೆಗಳು, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಪ್ರಾಯೋಗಿಕ ಸಂಶೋಧನೆಗಳು, ವಿವಿಧ ಕ್ಷೇತ್ರಗಳ ಅಧ್ಯಯನ, ವಿನೂತನ ಶಿಕ್ಷಣ, ತರಬೇತಿ ಮತ್ತು ಸಮುದಾಯ ಸೇವೆ- ಎಲ್ಲವೂ ಒಂದೇ ಕಡೆ ನಡೆಯುತ್ತಿರುವುದು ವಿಶೇಷ.ಐಎಐಎಂ (ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಆಂಡ್ ಇಂಟಿಗ್ರೇಟಿವ್ ಮೆಡಿಸಿನ್) ಭಾರತೀಯ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಪುನರುಜ್ಜೀವನಕ್ಕಾಗಿ ಶ್ರಮಿಸುತ್ತಿದೆ. ನಗರ ಜೀವನದ ಜಂಜಡಗಳಿಂದ ದೂರದಲ್ಲಿರುವ ಈ ಸಂಸ್ಥೆ ಸುಮಾರು ಸಾವಿರ ಎಕರೆಗಳಷ್ಟು ವಿಶಾಲವಾದ ಸುಂದರ ಆವರಣ ಹೊಂದಿದ್ದು, 950ಕ್ಕೂ ಹೆಚ್ಚು ವೈದ್ಯಕೀಯ ಗುಣದ ಸಸ್ಯ ಪ್ರಬೇಧಗಳನ್ನು ಇಲ್ಲಿ ಬೆಳೆಸಲಾಗುತ್ತಿದೆ.ವೈದ್ಯಕೀಯ ಸಸ್ಯಗಳ ಕ್ಷೇತ್ರದಲ್ಲಿ ಮಾಡಿರುವ ಕೆಲಸವನ್ನು ಗುರುತಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಈ ಸಂಸ್ಥೆಯನ್ನು ವೈದ್ಯಕೀಯ ಸಸ್ಯಗಳ ಉತ್ಕೃಷ್ಟ ಸಂಸ್ಥೆ (ಸೆಂಟರ್ ಆಫ್ ಎಕ್ಸಲೆನ್ಸ್) ಎಂದು ಗುರುತಿಸಿದೆ. ಅದೇ ರೀತಿ ಆಯುರ್ವೇದ ಕ್ಷೇತ್ರದ ಸೇವೆಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಷ್ ವಿಭಾಗವೂ ಈ ಸಂಸ್ಥೆಯನ್ನು ಉತ್ಕೃಷ್ಟ ಕೇಂದ್ರವನ್ನಾಗಿ ಪರಿಗಣಿಸಿದೆ.ಐಎಐಎಂ, ಸ್ಥಳೀಯ ವಿವಿಧ ವೈದ್ಯ ಸಂಪ್ರದಾಯಗಳ ಪುನರುಜ್ಜೀನವಕ್ಕಾಗಿ ಇರುವ `ಫೌಂಡೇಷನ್ ಆಫ್ ರಿವೈಟಲೈಸೇಷನ್ ಆಫ್ ಲೋಕಲ್ ಹೆಲ್ತ್ ಟ್ರೆಡಿಷನ್ಸ್~ (ಎಫ್‌ಆರ್‌ಎಲ್‌ಎಚ್‌ಟಿ) ಸಂಸ್ಥೆಯ ಒಂದು ಭಾಗ. ಎಫ್‌ಎಲ್‌ಆರ್‌ಎಚ್‌ಟಿ ಸಂಸ್ಥೆಯನ್ನು ರಾಷ್ಟ್ರೀಯ ಜ್ಞಾನ ಆಯೋಗದ ಈಗಿನ ಅಧ್ಯಕ್ಷ ಸ್ಯಾಮ್ ಪಿಟ್ರೊಡಾ 1993ರಲ್ಲಿ ಸ್ಥಾಪಿಸಿದ್ದರು. ಸಂಸ್ಥೆಯ ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ 2008ರಲ್ಲಿ ಐಎಐಎಂ ಸಂಸ್ಥೆ ಸ್ಥಾಪಿಸಲಾಯಿತು. ನೂತನ ಶತಮಾನದಲ್ಲಿ ಆಯುರ್ವೇದ ವೈದ್ಯ ಪದ್ಧತಿಯನ್ನು ಪರಿಣಾಮಕಾರಿಯಾಗಿ ಮಾಡುವುದು ಸಂಸ್ಥೆಯ ಉದ್ದೇಶಗಳಲ್ಲಿ ಒಂದು.ಆಯುರ್ವೇದ ಕ್ಷೇತ್ರದಲ್ಲಿ ನಡೆಸಿದ ಸಂಶೋಧನೆಯನ್ನು ಜನಸಾಮಾನ್ಯರಿಗೆ ತಲುಪಿಸಲು ಐಎಐಎಂ ಸಾರ್ವಜನಿಕ ಆಸ್ಪತ್ರೆಯೊಂದನ್ನು (ಐಎಐಎಂ ಹೆಲ್ತ್ ಸೆಂಟರ್- ಐಎಚ್‌ಸಿ) ತೆರೆಯಲು ನಿರ್ಧರಿಸಿತು. ಆಗ ಸಂಸ್ಥೆಗೆ ನೆರವಾದದ್ದು ಟಾಟಾ ಪ್ರತಿಷ್ಠಾನ. `ಈ ವರ್ಷದ ಆದಿಯಲ್ಲಿ ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಇದನ್ನು ಉದ್ಘಾಟಿಸಿದ್ದರು.ಸಮಕಾಲೀನ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ, ಸುರಕ್ಷಿತ ಮತ್ತು ಕೈಗೆಟಕುವ ಬೆಲೆಯಲ್ಲಿ ನಮ್ಮ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಯ ಸೃಜನಶೀಲ ಚಿಕಿತ್ಸೆಗಳನ್ನು ಒದಗಿಸುವುದು ನಮ್ಮ ಉದ್ದೇಶ~ ಎನ್ನುತ್ತಾರೆ ಆಸ್ಪತ್ರೆಯ ನಿರ್ದೇಶಕ ಡಾ.ಜಿ.ಜಿ. ಗಂಗಾಧರನ್.ಐಎಚ್‌ಸಿ ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ. ಈ ಪೈಕಿ ಶೇಕಡ 25ರಷ್ಟು ಹಾಸಿಗೆಗಳನ್ನು ಬಡವರಿಗಾಗಿ ಮೀಸಲಿಡಲಾಗಿದೆ. ಬಿಪಿಎಲ್ ಕಾರ್ಡುದಾರರಿಗೆ ಚಿಕಿತ್ಸೆ ಸಂಪೂರ್ಣ ಉಚಿತ. ಆಧುನಿಕ ವೈದ್ಯಕೀಯ ಉಪಕರಣಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆ ನೀಡುವುದು ಈ ಆಸ್ಪತ್ರೆಯ ವೈಶಿಷ್ಟ್ಯ. ಹೊರರೋಗಿ ಚಿಕಿತ್ಸೆಯೂ ಲಭ್ಯ. ಸುಸಜ್ಜಿತ ಪ್ರಯೋಗಾಲಯವನ್ನೂ ಇದು ಹೊಂದಿದೆ.

 

ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲದೆ ನೆಫ್ರಾಲಜಿ, ಆಪ್ತೊಮಾಲಜಿ, ನ್ಯೂರಾಲಜಿಯಂತಹ ವಿಶೇಷ ಚಿಕಿತ್ಸಾ ಶಾಖೆಗಳೂ ಇಲ್ಲಿವೆ. ಮೂಳೆ ಮತ್ತು ನರಸಂಬಂಧಿ ಕಾಯಿಲೆಗಳಿಗೆ ಮರ್ಮ ಚಿಕಿತ್ಸೆ ಇಲ್ಲಿಯ ವೈಶಿಷ್ಟ್ಯ. ಆಯುರ್ವೇದ ಮತ್ತು ಕೇರಳ ವೈದ್ಯ ಪದ್ಧತಿಯಲ್ಲಿ ನಮೂದಿಸಲಾಗಿರುವ ಪಂಚಕರ್ಮ ಚಿಕಿತ್ಸೆಗಳನ್ನು ಇಲ್ಲಿ ನೀಡಲಾಗುತ್ತಿದೆ. ಇದರೊಂದಿಗೆ ಯೋಗ ಥೆರಪಿ, ಪಿಸಿಯೋ ಥೆರಪಿ, ಅಕ್ಯುಪಂಕ್ಚರ್ ಆರೈಕೆಗಳೂ ಸಿಗುತ್ತವೆ.ಶ್ರೀರಾಮನಹಳ್ಳಿಯಲ್ಲಿ ಐಎಚ್‌ಸಿಯ ವೈದ್ಯರು ಪ್ರತಿ ತಿಂಗಳ ಕೊನೆಯ ಶನಿವಾರ ವೈದ್ಯಕೀಯ ಶಿಬಿರವನ್ನೂ ನಡೆಸುತ್ತದೆ. ಬಡರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧಗಳನ್ನು ಒದಗಿಸಲಾಗುತ್ತಿದೆ.ವಿವರಗಳಿಗೆ 080- 2856 7000/ 3202 2857 ಇಲ್ಲಿ ಸಂಪರ್ಕಿಸಬಹುದು.       

Post Comments (+)