ಮಂಗಳವಾರ, ನವೆಂಬರ್ 12, 2019
28 °C
ವಾಸಪ್ಪ ಬಿ. ಬಡಿಗೇರಗೆ `ಜನಪದ ವೈದ್ಯ ಸಿರಿ' ಪ್ರಶಸ್ತಿ ಪ್ರದಾನ

`ಆಯುರ್ವೇದ ಸಂಸ್ಕೃತಿಯ ಪ್ರತೀಕ'

Published:
Updated:

ಉಡುಪಿ: `ಆಯುರ್ವೇದ ಕೇವಲ ವೈದ್ಯಕೀಯ ಪದ್ಧತಿಯಲ್ಲ ಅದು ನಮ್ಮ ಸಂಸ್ಕೃತಿಯ ಪ್ರತೀಕ. ಆಯುರ್ವೇದದಲ್ಲಿ ವಿಫುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಳ್ಳಬೇಕು' ಎಂದು ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶ್ರೀನಿವಾಸ ಬನ್ನಿಗೋಳ್ ಹೇಳಿದರು.ಉಡುಪಿಯ ಕುತ್ಪಾಡಿಯಲ್ಲಿ ಮಂಗಳವಾರ ನಡೆದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಕಾಲೇಜು ದಿನಾಚರಣೆ ಮತ್ತು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ವಾಸಪ್ಪ ಬಿ. ಬಡಿಗೇರ ಅವರಿಗೆ ರಾಜ್ಯಮಟ್ಟದ `ಜನಪದ ವೈದ್ಯ ಸಿರಿ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಆಯುರ್ವೇದ ಕೋರ್ಸ್ ಮುಗಿದ ನಂತರ ವಿದ್ಯಾರ್ಥಿಗಳು ಖಾಸಗಿಯಾಗಿ ವೃತ್ತಿಯನ್ನು ಆರಂಭಿಸಬಹುದು. ಉನ್ನತ ವ್ಯಾಸಂಗವನ್ನೂ ಕೈಗೊಳ್ಳಬಹುದು. ಅಲ್ಪಾವಧಿಯ ಕೋರ್ಸ್‌ಗಳನ್ನು ಪೂರೈಸಬಹುದು. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಮಾಡಿದ ಸಂಶೋಧನೆಗಳನ್ನು ವಿದ್ಯಾರ್ಥಿಗಳು ದಾಖಲೆ ರೂಪದಲ್ಲಿ ಇಟ್ಟುಕೊಳ್ಳಬೇಕು. ಪುಸ್ತಕಗಳನ್ನು ಪ್ರಕಟಿಸಬೇಕು ಮತ್ತು ಪತ್ರಿಕೆಗಳಲ್ಲಿ ಲೇಖನ ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.`ಕೇವಲ ಅಧ್ಯಾಪಕರಾಗುವ ಉದ್ದೇಶದಿಂದ ಮಾತ್ರ ಆಯುರ್ವೇದ ಸ್ನಾತಕೋತ್ತರ ಪದವಿ ಮಾಡಬೇಡಿ. ಪ್ರಾಕ್ಟೀಸ್ ಮಾಡುವ ಉದ್ದೇಶದಿಂದ ಕಲಿಯಿರಿ' ಎಂದು ಅವರು ಹೇಳಿದರು.ಆಯುರ್ವೇದಕ್ಕೆ ಸಿಗಬೇಕಾದಷ್ಟು ಪ್ರಾಶಸ್ತ್ಯ ಸಿಗುತ್ತಿಲ್ಲ. ಕಾಯಿಲೆಗಳು ಬರದಂತೆ ತಡೆಯುವುದು  ಆಯುರ್ವೇದದ ಮೂಲ ಉದ್ದೇಶ. ಆದರೆ ಅದಕ್ಕೆ ಅಷ್ಟು ಪ್ರಾಮುಖ್ಯ ಸಿಗುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಗುಣಮಟ್ಟಕ್ಕೆ ಅನುಗುಣವಾಗಿ ಆಯುರ್ವೇದ ಪರಿಷ್ಕರಣೆ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.ವಾಸಪ್ಪ ಬಿ. ಬಡಿಗೇರ ಅವರಿಗೆ ರಾಜ್ಯಮಟ್ಟದ ಜನಪದ ವೈದ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, `ಆಯುರ್ವೇದ ಸಂಜೀವಿನಿ ಇದ್ದಂತೆ. ಅದು ಜನರ ಜೀವ ಉಳಿಸುತ್ತದೆ. ನಾವು- ನೀವು ಎಲ್ಲರೂ ಸೇರಿ ಈ ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಮಾಡೋಣ' ಎಂದರು.ರ‌್ಯಾಂಕ್ ಪಡೆದ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಸದಾಶಿವ ರಾವ್, ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಯು.ಎನ್. ಪ್ರಸಾದ್, ಉಪ ಪ್ರಾಂಶುಪಾಲ ಡಾ. ಕೆ.ಆರ್. ರಾಮಚಂದ್ರ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಡಾ. ಬಿ.ಆರ್. ದೊಡ್ಡಮನಿ, ವಿದ್ಯಾರ್ಥಿ ಪರಿಷತ್‌ನ ಅಧ್ಯಕ್ಷ ಡಾ. ನಾಗರಾಜ್ ಜಿ ಭಟ್, ಪ್ರಧಾನ ಕಾರ್ಯದರ್ಶಿ ಸೈಯದ್ ಆರ್. ತಬಿಶ್ ಉಪಸ್ಥಿತರಿದ್ದರು. ಅರ್ಪಿತ ವಾರಿಯರ್ ನಿರೂಪಣೆ ಮಾಡಿದರು.

ಪ್ರತಿಕ್ರಿಯಿಸಿ (+)