ಆಯೋಗದ ಎದುರು ಮೋದಿ ಹಾಜರಿ ಕೋರಿದ ಅರ್ಜಿ ವಜಾ

7

ಆಯೋಗದ ಎದುರು ಮೋದಿ ಹಾಜರಿ ಕೋರಿದ ಅರ್ಜಿ ವಜಾ

Published:
Updated:

ಅಹಮದಾಬಾದ್(ಪಿಟಿಐ): ಗೋಧ್ರಾ ಘಟನೆ ನಂತರದ ಕೋಮು ಗಲಭೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ನಾನಾವತಿ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಸಮನ್ಸ್ ಜಾರಿ ಮಾಡಬೇಕು ಎಂದು ಕೋರಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಬುಧವಾರ ವಜಾ ಮಾಡಿದೆ. ಜನ ಸಂಘರ್ಷ ಮಂಚ್ (ಜೆಎಸ್‌ಎಂ) ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಾಮೂರ್ತಿಗಳಾದ ಅಕಿಲ್ ಖುರೇಷಿ ಮತ್ತು ಸೋನಿಯಾ ಗೋಕಾನಿ ಅಭಿಪ್ರಾಯ    ಪಟ್ಟಿದ್ದಾರೆ. ಗಲಭೆ ಕುರಿತಂತೆ ವಿಚಾರಣೆ ನಡೆಸುತ್ತಿರುವ ಆಯೋಗಕ್ಕೂ ವಿವೇಚಾನಾ ಅಧಿಕಾರವಿದೆ. ಸಾಕ್ಷ್ಯಾಗಳಿಗೆ ಸಮನ್ಸ್ ಜಾರಿ ಮಾಡುವುದು ಅಥವಾ ಬಿಡುವುದು ಆಯೋಗದ ಇಚ್ಛೆಗೆ ಬಿಟ್ಟ ವಿಚಾರ ಎಂದಿದ್ದಾರೆ.ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಜೆಎಸ್‌ಎಂ ಪರ ವಕೀಲ ಮುಕುಲ್ ಸಿನ್ಹಾ ಹೇಳಿದ್ದಾರೆ.ಸರ್ಕಾರದ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕಮಲ್ ತ್ರಿವೇದಿ, ತನಿಖೆಗಾಗಿ ರಚಿಸಲಾಗುವ ಆಯೋಗಗಳ ನಿಯಮಾವಳಿ ಪ್ರಕಾರ ಆಯೋಗವು ಯಾರಿಗೆ ಸಮನ್ಸ್ ಜಾರಿ ಮಾಡಬೇಕು ಅಥವಾ ಬಿಡಬೇಕು ಎಂಬ ಬಗ್ಗೆ 3ನೇ ವ್ಯಕ್ತಿಗಳು ಪ್ರಶ್ನಿಸುವಂತಿಲ್ಲ. ಹಾಗಾಗಿ ಯಾರಿಗೆ ಸಮನ್ಸ್ ಜಾರಿ ಮಾಡಬೇಕೆನ್ನುವುದು ಆಯೋಗದ ಇಚ್ಛೆಗೆ ಬಿಟ್ಟವಿಚಾರ ಎಂದು ಜೆಎಸ್‌ಎಂ ಅರ್ಜಿಗೆ ವಿರೋಧ ವ್ಯಕ್ತಪಡಿಸಿದರು.ಬಿಜೆಪಿ ಸಂತಸ: ಜೆಎಸ್‌ಎಂ ಅರ್ಜಿವಜಾ ಮಾಡಿದ ಹೈಕೋರ್ಟ್ ಕ್ರಮವನ್ನು ಗುಜರಾತ್ ಬಿಜೆಪಿ ಮುಖಂಡ ದೇವಾಂಗ್ ನಾನಾವತಿ ಹೇಳಿದ್ದಾರೆ. ವಿವಾದ ಮಾಡಲಾಗಿದೆ: ಹೈಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್, ರಾಜಕೀಯ, ಕಾನೂನು ವಿಚಾರಗಳನ್ನು ಒಟ್ಟಿಗೆ ಸೇರಿಸಿ ವಿವಾದ ಮಾಡಲಾಗಿದೆ. ಇದನ್ನು ನ್ಯಾಯಾಲಯದಲ್ಲಿ ಅಥವಾ ರಾಜಕೀಯವಾಗಿ ಪರಿಹರಿಸಿಕೊಳ್ಳುವುದು ಒಳಿತು ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry